ಕರ್ನಾಟಕ ರಾಜ್ಯೋತ್ಸವ ಮಾಸವಾಗಿರುವ ನವೆಂಬರ್ನಲ್ಲಿ ನಾಡು– ನುಡಿಯ ಕುರಿತಾಗಿ ಕನ್ನಡ ಡಿಂಡಿಮ, ನುಡಿಹಬ್ಬ, ನುಡಿತೇರು, ನುಡಿಜಾತ್ರೆ ಎಂದೆಲ್ಲಾ ವಿಶೇಷ ಕಾರ್ಯಕ್ರಮಗಳು, ಸಮಾರಂಭಗಳು ನಡೆಯುತ್ತಿವೆ. ಶಾಲೆ, ಕಾಲೇಜುಗಳು ಸೇರಿದಂತೆ ನಮ್ಮ ನಾಡು, ಹೊರನಾಡಿನ ಹಲವು ಸಂಘ–ಸಂಸ್ಥೆಗಳು, ಕನ್ನಡ ಕೂಟಗಳು, ಸಂಘಟನೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಭಾಷೆ, ಸಂಸ್ಕೃತಿಯ ಶ್ರೇಷ್ಠತೆ ಸಾರುತ್ತಾ ಸಂಭ್ರಮಿಸುತ್ತಿವೆ. ಎಲ್ಲವೂ ಕನ್ನಡಮಯವಾಗಿವೆ ಎಂದೆನ್ನಿಸುವ ಈ ಆಚರಣೆಗಳು ಹೆಮ್ಮೆ ತರುವಂತಿದ್ದರೂ ಮರುಕ್ಷಣದಲ್ಲೇ ಮೂಡುವ ವಿಷಾದ ಭಾವ ಹೃದಯವನ್ನು ಭಾರವಾಗಿಸುತ್ತದೆ.

ಹೌದು, ನಮ್ಮ ತಾಯ್ನುಡಿಯ ಸದ್ಯದ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಪಟ್ಟಣ ಹೋಗಲಿ ಹಳ್ಳಿ ಹಳ್ಳಿಯಲ್ಲೂ ಈ ಆತಂಕಕ್ಕೆ ಪುರಾವೆಗಳು ಕಣ್ಣಿಗೆ ರಾಚುತ್ತಿವೆ. ಪ್ರೌಢಶಾಲೆಯೊಂದರಲ್ಲಿ ಓದುತ್ತಿರುವ ಪರಿಚಯದ ಬಾಲಕನಿಗೆ ಕನ್ನಡ ದಿನಪತ್ರಿಕೆಯೊಂದರ ತಲೆಬರಹಗಳನ್ನು (ಹೆಡ್ಲೈನ್) ಓದಲು ಹೇಳಿದೆ. ಅಕ್ಷರಕ್ಕೆ ಅಕ್ಷರ ಜೋಡಿಸಿ ತುಂಬಾ ಕಷ್ಟಪಟ್ಟು ಓದಿದ. ಚೆನ್ನಾಗಿ ಕನ್ನಡ ಮಾತನಾಡುವ ಚುರುಕು ಬುದ್ಧಿಯ ಆ ಹಳ್ಳಿಹುಡುಗ ಓದಲು ಮಾತ್ರ ತುಂಬಾ ತಡವರಿಸಿದ. ಕಾರಣ, ಆತನನ್ನು ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್ ಮಾಧ್ಯಮಕ್ಕೆ ತಳ್ಳಿದ್ದ ಪೋಷಕರ ಇಂಗ್ಲಿಷ್ ಭ್ರಮೆ!

ಪೋಷಕರ ಅತಿಯಾದ ಇಂಗ್ಲಿಷ್ ವ್ಯಾಮೋಹ ಈಗ ವ್ಯಸನದ ರೂಪ ತಾಳಿದೆ. ಮಹಾನಗರಗಳು, ಪಟ್ಟಣಗಳನ್ನು ದಾಟಿ ಹಳ್ಳಿ ಹಳ್ಳಿಗೂ ಈ ಮಾಯೆ ಆವರಿಸಿದೆ. ಒಂದೊಳ್ಳೆ ನೌಕರಿ, ಸ್ಥಾನಮಾನ, ಗೌರವಕ್ಕೆಲ್ಲಾ ಇಂಗ್ಲಿಷೇ ಬುನಾದಿ ಎಂಬ ಮಿಥ್ಯೆಯೊಂದು ಗಾಢವಾಗಿ ಬೇರೂರಿದೆ. ಪರಿಣಾಮವಾಗಿ, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಸಣ್ಣಪುಟ್ಟ ಊರುಗಳಲ್ಲೂ ಹುಟ್ಟಿಕೊಂಡಿವೆ. ಹತ್ತಿರದಲ್ಲಿ ಇಲ್ಲದಿದ್ದರೂ ಪಟ್ಟಣದ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ವಾಹನ ಸೌಲಭ್ಯವಿದೆ. ಈ ಇಂಗ್ಲಿಷ್ ಹುಚ್ಚಿನ ಹೊಡೆತಕ್ಕೆ ಕನ್ನಡ ಶಾಲೆಗಳು ನೆಲಕಚ್ಚುತ್ತಿವೆ. ಮಕ್ಕಳು ಸರ್ಕಾರಿ ಶಾಲೆ ಅಥವಾ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆಂದರೆ ಅವರನ್ನು, ಅವರ ಪೋಷಕರನ್ನು ಕೀಳಾಗಿ ಕಾಣುವ ಮನಃಸ್ಥಿತಿಯಿದೆ!

ಮಕ್ಕಳು ತಮ್ಮ ಮಾತೃಭಾಷೆಯ ಮೂಲಕ ವಿವಿಧ ವಿಷಯಗಳನ್ನು ಸುಲಭವಾಗಿ ಗ್ರಹಿಸಬಲ್ಲರು. ಇದರಿಂದ ಅರಿವು, ಬುದ್ಧಿಮತ್ತೆ ಹೆಚ್ಚುತ್ತದೆ, ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲರು ಎಂಬ ವೈಜ್ಞಾನಿಕ ಸತ್ಯವನ್ನು ಮರೆಮಾಚಿ, ಉದ್ಯೋಗ ದೊರಕಿಸಿಕೊಡುವ ಸಾಮರ್ಥ್ಯ ಇಂಗ್ಲಿಷಿಗೆ ಮಾತ್ರ ಇದೆ ಎಂದು ವ್ಯವಸ್ಥಿತವಾಗಿ ನಂಬಿಸಲಾಗಿದೆ. ಪ್ರಾಥಮಿಕ ಹೋಗಲಿ, ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮಕ್ಕೆ ದೂಡಲ್ಪಡುವ ಮಕ್ಕಳಿಗೆ ಕನ್ನಡ ಎಂಬುದು ಉಪಯೋಗಕ್ಕೆ ಬಾರದ ಒಂದು ನುಡಿಯಷ್ಟೆ!

ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿ ಕಲಿತರೆ ಸಾಕು ಎಂಬ ಸತ್ಯ ಮಸುಕಾಗಿದೆ. ಅಗ್ರಪಂಕ್ತಿ
ಯಲ್ಲಿ ಇರಬೇಕಾದ ಮಾತೃಭಾಷೆಯನ್ನು ಎರಡು, ಮೂರನೆಯ ಭಾಷೆಯಾಗಿ ಕಾಟಾಚಾರಕ್ಕೆ ಮಾತ್ರ ಕಲಿಸಲಾಗುತ್ತಿದೆ. ಒಂದೆಡೆ, ಕನ್ನಡದ ಬೋಧನೆಯಲ್ಲಿ ನಿರ್ಲಕ್ಷ್ಯ ವಹಿಸುವ ಖಾಸಗಿ ಶಾಲೆಗಳು, ಮತ್ತೊಂದೆಡೆ, ಪೋಷಕರ ಅಸಡ್ಡೆ. ಪಾಲಕರಿಗೇ ಬೇಡವಾದ ಮೇಲೆ ಕನ್ನಡದಲ್ಲಿ ಓದಿರಿ, ಬರೆಯಿರಿ ಎಂದು ಮಕ್ಕಳಿಗೆ ಹೇಳುವವರಾದರೂ ಯಾರು? ಪರಿಣಾಮವಾಗಿ, ಮಕ್ಕಳು ಕನ್ನಡದ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿ
ಕೊಳ್ಳುತ್ತಿದ್ದಾರೆ. ಹಲವು ಸರ್ಕಾರಿ ಶಾಲೆಗಳೂ ಕನ್ನಡವನ್ನು ತಪ್ಪಿಲ್ಲದಂತೆ ಓದುವ, ಬರೆಯುವ ಕೌಶಲ ಕಲಿಸಲು ಸೋಲುತ್ತಿರುವುದು ದೊಡ್ಡ ದುರಂತವೇ ಸರಿ.

ಕನ್ನಡ ನುಡಿ ನಿಜಕ್ಕೂ ಸಂಕಷ್ಟದಲ್ಲಿದೆ. ಕನ್ನಡಕ್ಕೆ ಇಂಗ್ಲಿಷ್ ಬೆರೆಸಿ ಕಂಗ್ಲಿಷಲ್ಲಿ ಮಾತನಾಡುವ ಯುವ ಭಾಷಿಕರ ಸಂಖ್ಯೆಯೇನೋ ಇದೆ. ಆದರೆ ಹೆಚ್ಚು ಆತಂಕವಿರುವುದು ಕನ್ನಡ ಲಿಪಿಯ ಬಗ್ಗೆ. ಅದರಲ್ಲೂ ನಮ್ಮ ನವಪೀಳಿಗೆಗೆ ಕನ್ನಡದ ಬರಹವೆಂದರೆ ಅಪಥ್ಯ. ಈಗಂತೂ ಕೈಬರವಣಿಗೆಯೇ ನಿಷಿದ್ಧ ಎಂಬಂತಾಗಿದೆ. ಸಂವಹನವೆಂದರೆ ಮೊಬೈಲ್ ಫೋನ್,
ಕಂಪ್ಯೂಟರ್ಗಳಲ್ಲಿ ಟೈಪಿಸುವುದು ಅಷ್ಟೆ. ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನೇ ಹೆಚ್ಚು ಬಳಸುತ್ತಿರುವ ಯುವಪೀಳಿಗೆಗೆ ಎಲ್ಲವನ್ನೂ ಹ್ರಸ್ವಗೊಳಿಸುವ ಪ್ರವೃತ್ತಿ. ಕನ್ನಡದಲ್ಲೇ ಅಕ್ಷರಗಳನ್ನು ಮೂಡಿಸುವ ಅವಕಾಶ
ಇದ್ದರೂ ಇಂಗ್ಲಿಷಿಗೆ ಹೋಲಿಸಿದರೆ ಕಠಿಣ, ಸಮಯವೂ ಜಾಸ್ತಿ ಬೇಕು ಎಂಬ ದೂರು.

ತೀರಾ ಅನಿವಾರ್ಯವಿದ್ದಲ್ಲಿ ಕನ್ನಡವನ್ನೇ ಇಂಗ್ಲಿಷ್ ಅಕ್ಷರಗಳಲ್ಲಿ ಪಟಪಟನೆ ಬರೆಯುತ್ತಾರೆ. ಇದರಿಂದ ನಮ್ಮ ಲಿಪಿಗೆ ಕುತ್ತು ಎಂಬ ಚಿಂತೆಯಿಲ್ಲ. ಭಾಷೆ ಮೇಲಿನ ಅಭಿಮಾನಕ್ಕಿಂತ ಸಂವಹನವಷ್ಟೇ ಮುಖ್ಯ ಎಂಬ ಧೋರಣೆ. ಹಾಗಾಗಿ, ಕನ್ನಡ ಲಿಪಿಯ ಬಳಕೆ ಎಳೆಯರಲ್ಲಿ, ತರುಣ ಪೀಳಿಗೆಯಲ್ಲಿ ಆಘಾತಕಾರಿಯಾಗಿ ಕಡಿಮೆಯಾಗುತ್ತಿದೆ. ಲಿಪಿಗಳ ರಾಣಿ, ಸುಂದರ, ಸಮಗ್ರ, ವೈಜ್ಞಾನಿಕ ಎಂದೆಲ್ಲಾ ವರ್ಣಿತವಾಗಿರುವ ಬರಹರೂಪಿ ಕನ್ನಡ ಮರೆಗೆ ಸರಿಯುತ್ತಿದೆ.

ಹೌದು, ಅತಿವೇಗದ ಈ ಡಿಜಿಟಲ್ ಯುಗದಲ್ಲಿ ಕನ್ನಡ ಪಠ್ಯದ ಸರಳೀಕರಣ ತುರ್ತಾಗಿ ಆಗಬೇಕಿರುವ ಕಾರ್ಯ. ಸರ್ಕಾರಿ ಶಾಲೆಗಳಲ್ಲಷ್ಟೇ ಅಲ್ಲ ಖಾಸಗಿ ಶಾಲೆಗಳಲ್ಲೂ ಸಾಹಿತ್ಯಕ್ಕೆ ಒತ್ತಿಲ್ಲದ ಸುಲಭ ನುಡಿಗನ್ನಡದ ಪರಿಣಾಮಕಾರಿ ಬೋಧನೆ ಕಡ್ಡಾಯವಾಗಬೇಕಿದೆ. ಕನ್ನಡ ಮಾಧ್ಯಮಕ್ಕೆ ಉತ್ತೇಜನ, ಕನ್ನಡಕ್ಕೆ ಅಗ್ರಪಟ್ಟ, ಉದ್ಯೋಗದಲ್ಲಿ ಆದ್ಯತೆ ನೀಡುವ ನೀತಿ ರೂಪಿಸಬೇಕಿದೆ. ಇಲ್ಲದಿದ್ದರೆ ಕನ್ನಡದಲ್ಲಿ ಓದಲು, ಬರೆಯಲು ಬಾರದ, ಕಂಗ್ಲಿಷಷ್ಟೇ ಮಾತನಾಡುವ ಭಾಷಾಭಿಮಾನವಿಲ್ಲದ ಕನ್ನಡಿಗರ ನವಸಂಕುಲವೊಂದು ಸೃಷ್ಟಿಯಾಗುವುದು ನಿಶ್ಚಿತ. ಈ ಆತಂಕ ನಿಜವಾಗದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.