ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದಕ್ಕೆ ಇತ್ತೀಚೆಗೆ ಕಾರ್ಯನಿಮಿತ್ತ ಭೇಟಿ ನೀಡಿದ್ದೆ. ಅಲ್ಲಿನ ಕಾರಿಡಾರ್ನಲ್ಲಿ ಹಾಕಿದ್ದ ಕುರ್ಚಿಗಳ ಮೇಲೆ, ‘ಸಿಬ್ಬಂದಿ ಮತ್ತು ಪೋಷಕರಿಗೆ ಮಾತ್ರ’ ಎಂದು ಬರೆಯಲಾಗಿತ್ತು. ‘ಹೀಗೇಕೆ ಬರೆಯಲಾಗಿದೆ’ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರನ್ನು ವಿಚಾರಿಸಿದಾಗ, ‘ಅಲ್ಲಿ ವಿದ್ಯಾರ್ಥಿಗಳು ಕೂರಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ’ ಎಂದರು.

‘ಕುರ್ಚಿಗಳು ಖಾಲಿ ಇದ್ದಾಗ ವಿದ್ಯಾರ್ಥಿಗಳೂ ಕುಳಿತರೆ ಏನು ಸಮಸ್ಯೆ?’ ಎಂದು ಕೇಳಿದೆ. ‘ಮೊದಲು ಯಾರು ಬೇಕಿದ್ದರೂ ಕೂರಬಹುದಿತ್ತು. ಹೆಚ್ಚಾಗಿ ವಿದ್ಯಾರ್ಥಿಗಳೇ ಇಲ್ಲಿ ಕುಳಿತಿರುತ್ತಿದ್ದರು. ಆದರೆ ಕೆಲ ಅಧ್ಯಾಪಕರು, ನಾವು ಕಾರಿಡಾರ್ನಲ್ಲಿ ಓಡಾಡುವಾಗ ವಿದ್ಯಾರ್ಥಿಗಳು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾರೆ. ನಾವು ಬರುತ್ತಿರುವುದನ್ನು ಗಮನಿಸಿದರೂ ಹಾಗೆಯೇ ಕುಳಿತು ಧಿಮಾಕು ಪ್ರದರ್ಶಿಸುತ್ತಾರೆ ಅಂತ ದೂರು ನೀಡಿದ ನಂತರ ಅಲ್ಲಿಂದ ಕುರ್ಚಿಗಳನ್ನು ತೆಗೆಯಲಾಗಿತ್ತು. ಉಳಿದ ಸಿಬ್ಬಂದಿ, ಮೊದಲಿನಂತೆ ಕುರ್ಚಿಗಳನ್ನು ಹಾಕಿದ್ರೆ ನಮಗೂ ಅನುಕೂಲವಾಗುತ್ತೆ ಅಂತ ತಿಳಿಸಿದ ನಂತರ, ಸಿಬ್ಬಂದಿ ಮತ್ತು ಪೋಷಕರಿಗೆ ಮಾತ್ರ ಅಂತ ಬರೆದು ಕುರ್ಚಿಗಳನ್ನು ಹಾಕಲಾಗಿದೆ’ ಎಂದು ವಿವರಿಸಿದರು.

ತರಗತಿ ನಡೆಯುವ ಕೊಠಡಿಗೆ ಪ್ರವೇಶಿಸಿದ್ದನ್ನು ನೋಡಿಯೂ ನೋಡದ ಹಾಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಬೈದು ಬುದ್ಧಿವಾದ ಹೇಳುವ ಶಿಕ್ಷಕರನ್ನೇ ನಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ನೋಡಿಕೊಂಡು ಬೆಳೆದಿರುತ್ತೇವೆ. ಇದನ್ನು ಗುರು-ಹಿರಿಯರಿಗೆ ಗೌರವ ಕೊಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸುವ ಭಾಗವೆಂದೇ ಭಾವಿಸಿರುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ ಯೋಚಿಸುವ ಅಧ್ಯಾಪಕರೊಬ್ಬರು ಎಂಜಿನಿಯರಿಂಗ್ ಪದವಿ ಓದಿನ ವೇಳೆ ನಮಗೆ ಕೆಲವು ವಿಷಯಗಳನ್ನು ಬೋಧಿಸುತ್ತಿದ್ದರು. ಮೊದಲ ತರಗತಿಯಲ್ಲೇ ವಿದ್ಯಾರ್ಥಿಗಳು ತನ್ನ ಕ್ಲಾಸ್ನಲ್ಲಿ ಏನೆಲ್ಲ ಮಾಡಲು ಅನುಮತಿ ಇದೆ ಮತ್ತು ಯಾವುದನ್ನೆಲ್ಲ ಮಾಡುವಂತಿಲ್ಲ ಎಂಬುದನ್ನು ಅವರು ವಿವರಿಸುತ್ತಿದ್ದರು.

‘ನಾನು ತರಗತಿಗೆ ಬಂದ ಕೂಡಲೇ ನೀವೆಲ್ಲ ಎದ್ದು ನಿಲ್ಲುವ ಅಗತ್ಯವಿಲ್ಲ. ಒಂದು ವೇಳೆ ನನ್ನ ಮೇಲೆ ನಿಮಗೆ ಗೌರವವಿದ್ದರೆ ಅದನ್ನು ಎದ್ದು ನಿಲ್ಲುವ ಮೂಲಕ ತೋರಿಸಲು ಹೋಗಬೇಡಿ. ಗೌರವ ನಿಮ್ಮೊಳಗೇ ಇರಲಿ. ಗೌರವ ಇಲ್ಲದಿದ್ದರೂ ತೊಂದರೆ ಇಲ್ಲ. ಎದ್ದು ನಿಂತ ಮಾತ್ರಕ್ಕೆ ನಿಮ್ಮೊಳಗೆ ಅಸಲಿಗೂ ಇಲ್ಲದ ಗೌರವವನ್ನು ಸೂಚಿಸಿದಂತೆ ಆಗುವುದಿಲ್ಲ’ ಎಂದು ತಿಳಿಸಿದ್ದರು.

ತರಗತಿಗೆ ಶಿಕ್ಷಕರು ಬಂದ ಕೂಡಲೇ ಎದ್ದು ನಿಲ್ಲುವುದನ್ನು ರೂಢಿಸಿಕೊಂಡಿದ್ದ ನಾವು, ಈ ಅಧ್ಯಾಪಕರು ಬಂದಾಗಲೂ ಎದ್ದು ನಿಲ್ಲುತ್ತಿದ್ದೆವು. ಬೇಡವೆಂದು ಹೇಳಿದ ನಂತರವೂ ಎದ್ದು ನಿಲ್ಲುತ್ತಿದ್ದ ನಮ್ಮನ್ನು ನೋಡಿ, ‘ಕಾಲೇಜಲ್ಲಿ ಯಾವುದಾದರೂ ಸಭೆ-ಸಮಾರಂಭವಿದ್ದಾಗ ಪ್ರಾಂಶುಪಾಲರು ಹಾಗೂ ಗಣ್ಯರು ಬಂದ ಕೂಡಲೇ ಎಲ್ಲರೂ ಎದ್ದು ನಿಲ್ಲುವ ಮೂಲಕ ಗೌರವ ಸೂಚಿಸಲು ಮುಂದಾಗುತ್ತಾರೆ. ನನಗೆ ಹೀಗೆಲ್ಲ ಎದ್ದು ನಿಲ್ಲೋಕೆ ಹಿಂಸೆ ಅನ್ಸುತ್ತೆ. ಕೆಲವೊಮ್ಮೆ ಎಲ್ಲರೂ ಎದ್ದು ನಿಂತಿರುವಾಗ ನಾನೊಬ್ಬ ಮಾತ್ರ ಕುಳಿತರೆ ಸರಿಯಾಗಲ್ಲ ಅಂತ ಇಷ್ಟವಿಲ್ಲದಿದ್ದರೂ ಎದ್ದು ನಿಲ್ಲೋದಿದೆ. ನೀವು ಎದ್ದು ನಿಂತರೆ ನನಗೆ ಕಿರಿಕಿರಿ ಅನ್ಸುತ್ತೆ. ಇನ್ಮೇಲಾದ್ರೂ ನಿಮ್ಮ ಪಾಡಿಗೆ ನೀವು ಕುಳಿತಿರುವುದನ್ನು ಅಭ್ಯಾಸ ಮಾಡಿಕೊಳ್ಳಿ’ ಅಂತ ಹೇಳುತ್ತಿದ್ದರು.

ಎದ್ದು ನಿಂತು ಗೌರವ ಸೂಚಿಸುವ ಪರಿಪಾಟ ಕೆಲವೊಮ್ಮೆ ಯಾವ ಹಂತ ತಲುಪಿರುತ್ತದೆ ಎಂದರೆ, ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಲುವಾಗಿ ವೇದಿಕೆ ಮೇಲೆ ಉಪಸ್ಥಿತರಿರುವ ಗಣ್ಯರು ಎದ್ದು ನಿಂತರೆ, ಸಭಾಂಗಣದಲ್ಲಿ ನೆರೆದಿರುವ ಎಲ್ಲರೂ ಎದ್ದುನಿಲ್ಲತೊಡಗುತ್ತಾರೆ. ಹೀಗೆ ನಿಂತಾಗ ವೇದಿಕೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಬಹುತೇಕರಿಗೆ ಕಾಣದಿರುವ ಸನ್ನಿವೇಶ ನಿರ್ಮಾಣವಾಗುವುದೂ ಇದೆ.

ಗುರು-ಹಿರಿಯರಿಗೆ ಗೌರವ ನೀಡುವ ಗುಣ ಮಕ್ಕಳಲ್ಲಿ ಮೈಗೂಡಲಿ ಎನ್ನುವುದು ಪೋಷಕರು ಹಾಗೂ ಶಿಕ್ಷಕರ ಸದಾಶಯ. ಆದರೆ ಇದನ್ನು ಕಾರ್ಯಗತಗೊಳಿಸಲು ನಾವು ಆರಿಸಿಕೊಳ್ಳುವ ಸಾಂಕೇತಿಕ ವಿಧಾನಗಳು ಎಷ್ಟು ಪರಿಣಾಮಕಾರಿ ಎಂಬ ಕುರಿತು ಕೂಡ ಆಲೋಚಿಸಬೇಕಿದೆ. ಮಕ್ಕಳಿಗೆ ಎದ್ದು ನಿಂತು ಗೌರವ ಸೂಚಿಸುವುದನ್ನು ಕಲಿಸಲು ತೋರುವಷ್ಟೇ ಕಾಳಜಿಯನ್ನು, ಎದ್ದು ನಿಂತು ಪ್ರಶ್ನೆ ಕೇಳುವುದನ್ನು ಕಲಿಸಲೂ ತೋರುತ್ತಿದ್ದೇವೆಯೇ? ಉತ್ತರ ಬರೆಯುವುದನ್ನು ಹೇಳಿಕೊಡಲೇ ಹೆಚ್ಚು ಮುತುವರ್ಜಿ ತೋರುತ್ತಾ ಬಂದಿರುವ ನಮ್ಮ ಶೈಕ್ಷಣಿಕ ವ್ಯವಸ್ಥೆಗೆ, ಮಕ್ಕಳಿಗೆ ಪ್ರಶ್ನೆ ಕೇಳುವುದು ಏಕೆ ಮುಖ್ಯ ಮತ್ತು ಪ್ರಶ್ನೆಗಳನ್ನು ಹೇಗೆ ಕೇಳಬೇಕು ಎಂದು ಕಲಿಸುವುದೂ ಆದ್ಯತೆ ಆಗಿದೆಯೇ?

ವಿದ್ಯಾರ್ಥಿಗಳು ಎದ್ದು ನಿಂತು ಗೌರವ ಸೂಚಿಸುತ್ತಿಲ್ಲ ಎಂದು ಸಿಡಿಮಿಡಿಗೊಳ್ಳುವ ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮೈಗೂಡುತ್ತಿಲ್ಲ ಎಂದೂ ಅಸಮಾಧಾನಗೊಳ್ಳಬೇಕಲ್ಲವೇ?

ವಿದ್ಯಾರ್ಥಿಗಳು, ಯುವಜನರಲ್ಲಿ ಗುರು-ಹಿರಿಯರ ಕುರಿತು ಗೌರವ ಮೂಡಬೇಕಿರುವುದು ಅವರ ನಡೆ-ನುಡಿಗಳ ಕಾರಣಕ್ಕೇ ವಿನಾ ಭಯದಿಂದಲ್ಲ. ಎದ್ದು ನಿಲ್ಲುವಂತೆ ಮಾಡುವುದು ಬಹುತೇಕ ಸಂದರ್ಭಗಳಲ್ಲಿ ತೋರಿಕೆಯ ಗೌರವವಾಗಿರುವುದೇ ವಿನಾ ಅಂತರಾಳದಿಂದ ಹೊಮ್ಮುವ ಗೌರವವಾಗಿರುವುದಿಲ್ಲ.

ಯಾವ ಬಗೆಯ ಗೌರವಕ್ಕೆ ಭಾಜನರಾಗುವುದು ಆದ್ಯತೆಯಾಗುತ್ತಿದೆ ಎಂಬ ಕುರಿತೂ ಗುರು-ಹಿರಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.