ಗದಗ ಎಂದಾಕ್ಷಣ ಅಲ್ಲಿನ ವೀರನಾರಾಯಣನ ಗುಡಿ, ಕುಮಾರವ್ಯಾಸನ ಕರ್ನಾಟ ಭಾರತ ಕಥಾಮಂಜರಿ, ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ ಅವರ ಸಂಗೀತ, ಭೀಮಸೇನ ಜೋಶಿಯವರ ಹಿಂದೂಸ್ತಾನಿ ಗಾಯನದ ಝಲಕು ಕಿವಿಗಳನ್ನು ತುಂಬುತ್ತದೆ. ವೀರೇಶ್ವರ ಪುಣ್ಯಾಶ್ರಮ, ತೋಂಟದಾರ್ಯ ಮಠದ ವಿವಿಧ ದಾಸೋಹಗಳು, ಕಪ್ಪತಗುಡ್ಡದ ಗಾಳಿ ಗಿರಣಿಗಳು, ಮಾಗಡಿ ಕೆರೆ, ಪುಸ್ತಕ ಮುದ್ರಣಾಲಯಗಳು, ಆಲೂರು ವೆಂಕಟರಾಯರು, ಚೆನ್ನವೀರ ಕಣವಿಯವರ ಕಾವ್ಯ... ಹೀಗೆ ಹತ್ತು ಹಲವು ವ್ಯಕ್ತಿಗಳು, ಸ್ಥಳವೈವಿಧ್ಯ, ವೈಶಿಷ್ಟ್ಯಗಳು ಅನಾಯಾಸವಾಗಿ ನೆನಪಿಗೆ ಬರುತ್ತವೆ. ಮೌಲಿಕ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳ ಘಮ ಮೂಗಿಗೆ ಬಡಿಯುತ್ತದೆ. ಇಷ್ಟೆಲ್ಲ ಹಿರಿಮೆಗಳನ್ನು ತನ್ನದಾಗಿಸಿಕೊಂಡಿರುವ ಗದಗದ ಹಿರಿಮೆಗೆ ಇನ್ನೊಂದು ಗರಿ ಎಂಬಂತೆ ಈಗ ‘ವೀರೂ’ ಜೊತೆಯಾಗಿದ್ದಾನೆ.

ಇವನೊಬ್ಬ ವನ್ಯಪ್ರಾಣಿ. ಹುಟ್ಟಿದ ಕೆಲವೇ ವಾರಗಳಲ್ಲಿ ತಾಯಿಯ ಮಡಿಲಿನಿಂದ ದೂರವಾದ ಹುಲಿಮರಿ. ಎರಡು ತಿಂಗಳಿನಿಂದ ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ಇದ್ದಾನೆ. ಅಧಿಕಾರಿಗಳಿಂದ ಹಿಡಿದು ಎಲ್ಲ ಸಿಬ್ಬಂದಿಯ ಬಾಯಲ್ಲೂ ಇವನ ಬಗ್ಗೆಯೇ ಮಾತು, ಚರ್ಚೆ, ಚಿಂತನೆ. ಸದ್ಯಕ್ಕೆ ತಜ್ಞರ ಸಲಹೆಯಂತೆ ಹುಲಿಮರಿಗೆ ಆರೈಕೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ (ಜುಲೈ 29) ಈ ಹೊತ್ತಿನಲ್ಲಿ, ಅದರ ಮುಂದಿನ ವಾಸ್ತವ್ಯಕ್ಕೆ ಸಂಬಂಧಿಸಿದ ಯೋಜನೆ ಸಿದ್ಧವಾಗುತ್ತಿದೆ.

ಕಾಡಿನಲ್ಲಿ ಸುತ್ತಾಡುವಾಗ ಅಕಸ್ಮಾತ್ ದಾರಿತಪ್ಪಿ ತಾಯಿಯಿಂದ ದೂರವಾಗಿದ್ದ ವೀರೂ, ಅರಣ್ಯದ ಅಂಚಿನ ಮನೆಯೊಂದರ ಹಿತ್ತಲಿನಲ್ಲಿ ಸುಸ್ತಾಗಿ ಮಲಗಿ ಬಿಟ್ಟಿದ್ದ. ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಹಳಿಯಾಳ ವಿಭಾಗದ ವಿರ್ನೋಲಿ ವಲಯದಲ್ಲಿ ಏಪ್ರಿಲ್ 27ರಂದು ಗ್ರಾಮದ ಜನರ ಕಣ್ಣಿಗೆ ಬಿದ್ದಿದ್ದ. ಮರಿಯೊಂದೇ ಇರಲಾರದು, ಜೊತೆಗೆ ತಾಯಿ ತಂದೆಯೂ ಇರಬಹುದು ಎಂದು ಹುಷಾರಾಗಿ ಸುತ್ತಲೂ ಸರ್ವೇಕ್ಷಣೆ ನಡೆಸಿದ ಗ್ರಾಮಸ್ಥರು, ಸ್ವಲ್ಪ ಸಮಯದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವೀರೂನನ್ನು ರಕ್ಷಿಸಿ ಬೋನಿನಲ್ಲಿಟ್ಟು ಆಹಾರ ನೀಡಿದರು.

ನಿತ್ರಾಣಗೊಂಡಿದ್ದ ವೀರೂ ಮೊದಲಿಗೆ ಆಹಾರ ಸೇವಿಸಲಿಲ್ಲ. ಹೇಗಾದರೂ ಮಾಡಿ ಅದನ್ನು ತಾಯಿಯೊಂದಿಗೆ ಸೇರಿಸಬೇಕು ಎಂದು ಇಲಾಖೆಯವರು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಅಧಿಕಾರಿಗಳು ಹುಲಿಯನ್ನು ಕೂಡಲೇ ಮೃಗಾಲಯಕ್ಕೆ ಹಸ್ತಾಂತರಿಸಿದರು. ಮೃಗಾಲಯಕ್ಕೆ ಬಂದಾಗ ವೀರೂನ ತೂಕ ಬರೀ 13.5 ಕೆ.ಜಿ.ಯಷ್ಟಿತ್ತು. ಸಾಮಾನ್ಯವಾಗಿ ಆ ವಯಸ್ಸಿನ ಹುಲಿಗಳ ತೂಕ 20ರಿಂದ 22 ಕೆ.ಜಿ.ಯಷ್ಟಿರುತ್ತದೆ. ತಾಯಿಯಿಂದ ಬೇರ್ಪಟ್ಟ ಮೇಲೆ ಆಹಾರ, ನೀರು ಸಿಗದೇ ಉಪವಾಸ ಬಿದ್ದಿದ್ದರಿಂದ ಇದರ ತೂಕ ಕಡಿಮೆ ಇತ್ತು. ಈಗ ನಿಧಾನವಾಗಿ ಮೃಗಾಲಯದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ವೀರೂ ಪ್ರತಿದಿನ ಒಂದು ಕೆ.ಜಿ. ಚಿಕನ್ ಮತ್ತು ಒಂದು ಕೆ.ಜಿ. ಮಾಂಸ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾನೆ. ತೂಕ ಬರೋಬ್ಬರಿ 10 ಕೆ.ಜಿ.ಯಷ್ಟು ಹೆಚ್ಚಾಗಿದೆ. ವೀರೂನನ್ನು ಸರಿಯಾಗಿ ಆರೈಕೆ ಮಾಡಲು ಚಂದ್ರು ಎಂಬ ವಾಚರ್ನನ್ನು ನೇಮಿಸಲಾಗಿದೆ. ನೀಡುವ ಆಹಾರವನ್ನು ಹಟ ಮಾಡದೆ ತಿನ್ನುತ್ತಾನೆ. ಬೇರೆ ಯಾರಾದರೂ ಹತ್ತಿರ ಹೋಗಲು ಪ್ರಯತ್ನಿಸಿದರೆ ತೀಕ್ಷ್ಣವಾಗಿ ಗುರಾಯಿಸುವ ವೀರೂ ಆರೋಗ್ಯದಿಂದಿದ್ದಾನೆ.

ಬೇಟೆ ಮತ್ತು ವನ್ಯಜೀವನದ ವಿಧಿವಿಧಾನಗಳನ್ನು ಕಲಿಸಬೇಕಾಗಿದ್ದ ತಾಯಿಯಿಂದ ದೂರವಾಗಿರುವ ವೀರೂನನ್ನು ಹಿಂತಿರುಗಿ ಕಾಡಿಗೆ ಬಿಡುವುದು ಸಾಧ್ಯವೇ ಇಲ್ಲ. ‘ಹುಲಿತನ’ ಗಳಿಸಲಾರದೆ ಕಾಡಿನ ನೈಸರ್ಗಿಕ ವಾತಾವರಣದಲ್ಲಿ ಬದುಕುವುದು ಸುಲಭವಲ್ಲ. ಆದ್ದರಿಂದ ವೀರೂನ ಮುಂದಿನ ಜೀವನವು ಮೃಗಾಲಯದಲ್ಲಿಯೇ ನಡೆಯಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಮನುಷ್ಯರ ಸಂಪರ್ಕ ಆದಷ್ಟು ಕಡಿಮೆ ಇರುವಂತೆ ನೋಡಿಕೊಂಡು ಮೃಗೀಯ ಗುಣ ಕಡಿಮೆಯಾಗದಂತೆ ಮರಿಯನ್ನು ಹುಲಿಯ ರೀತಿಯಲ್ಲಿಯೇ ಬೆಳೆಸಲಾಗುತ್ತಿದೆ.

ವನ್ಯಪ್ರಾಣಿಗಳ ಜೀವನದಲ್ಲಿ ಮರಿಗಳು ತಾಯಿಯಿಂದ ಬೇರ್ಪಡುವುದು ಅಸಹಜವೇನೂ ಅಲ್ಲ. ತಾಯಿ ಹುಲಿಗೆ ಬೇಟೆ ಸಿಗದೆ ಮರಿಗಳಿಗೆ ಆಹಾರ ಒದಗಿಸಲಾಗದಿದ್ದಾಗ, ಸರಹದ್ದಿಗಾಗಿ ನಡೆಯುವ ಹೋರಾಟದಲ್ಲಿ ಸಾವನ್ನಪ್ಪಿದಾಗ, ಇಲ್ಲವೇ ಕಳ್ಳಬೇಟೆಗೆ ಬಲಿಯಾದಾಗ ಮರಿಗಳು ತಾಯಿಯಿಂದ ಬೇರ್ಪಡುತ್ತವೆ. ಅರಣ್ಯದಂಚಿನ ಮನೆಯಲ್ಲಿ ಸಿಗುವುದಕ್ಕೂ ಹದಿನೈದು ದಿನ ಮುಂಚೆ ಮರಿ ಮತ್ತು ತಾಯಿ ಹುಲಿ ಒಟ್ಟಿಗಿದ್ದದ್ದನ್ನು ಕಂಡಿದ್ದಾಗಿ ಬೈಕ್ ಸವಾರನೊಬ್ಬ ಹೇಳಿದ್ದ. ಅಕಸ್ಮಾತ್ ಬೇರ್ಪಟ್ಟಿದ್ದರೆ ತಾಯಿ ಹುಲಿಯು ಮರಿಯನ್ನು ಹುಡುಕುವ ಪ್ರಯತ್ನವನ್ನು ಖಂಡಿತ ಮಾಡುತ್ತಿತ್ತು. ಅಂಥ ಪ್ರಯತ್ನದ ಯಾವ ಕುರುಹೂ ಇಲ್ಲ ಎಂಬುದು ಅಧಿಕಾರಿಗಳು ಮತ್ತು ಅರಣ್ಯದ ಅಂಚಿನ ಜನರ ಮಾತು.

ಸಂಗ್ರಹಾಲಯದಲ್ಲಿ ವೀರೂ ಸದೃಢವಾಗಿ ಬೆಳೆಯುತ್ತಿದ್ದಾನೆ. ಆದರೆ ಬಂದವರನ್ನು ಮುಗ್ಧವಾಗಿ ನೋಡುವ ಅವನ ಕಣ್ಣುಗಳಲ್ಲಿ ‘ನನ್ನ ತಾಯಿ ಎಲ್ಲಿ’ ಎಂಬ ಪ್ರಶ್ನೆ ಮತ್ತು ‘ಹುಡುಕಿಕೊಡಿ’ ಎಂಬ ಬೇಡಿಕೆ ಇವೆಯೇನೋ ಎನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.