ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಷರ ಬಲ್ಲೆವೆಂದು ಅಹಂಕಾರವೆಡೆಗೊಂಡವರನ್ನು ಪ್ರಶ್ನಿಸಬಾರದೇ?

Published : 8 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಯಾವುದೇ ಭಾಷೆಯಿರಲಿ, ಲೇಖಕರು ಎಂದಾಕ್ಷಣ ಅವರು ಪ್ರಶ್ನಾತೀತ­­ರಾಗಿರಬೇಕಾಗಿಲ್ಲ. ಅಕ್ಷರ ದಂದುಗ ತುಂಬ ಮೌಲಿಕ ಮತ್ತು ಸಾಂಸ್ಕೃತಿಕ­ವಾಗಿ ಅತ್ಯಂತ ಮಹತದ್ದು ಎಂಬುದ­ರಲ್ಲಿ ಎರಡು ಮಾತಿಲ್ಲ. ಅಕ್ಷರ­ಗಳ ಮೂಲಕ ಜೀವ­ನಾನುಭವವನ್ನು ಮತ್ತು ತನ್ಮೂಲಕ ಬದುಕಿನ ಅಗಾಧತೆ­ಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಕೈಂಕರ್ಯವು ಮಾನವರ ಅದ್ಭುತ ಆವಿಷ್ಕಾರ­ಗಳಲ್ಲಿ ಒಂದು.

ಆದರೆ ಅಕ್ಷರ ಬಲ್ಲವರು ಯಾವತ್ತೂ ಜೀವ­ಪರ ಜನಪರವಾಗಿಯೇ ಇರು­ತ್ತಾರೆ ಎಂದೇನಲ್ಲ. ಎಷ್ಟೋ ಸಲ ತಾವು ಕರಗತ ಮಾಡಿಕೊಂಡ ಅಕ್ಷರಗಳ ಮೂಲಕವೇ ಜನಾಂಗ­ದ್ವೇಷದ ಭಾವನೆ­ಗಳನ್ನು ಹರಡುವವರೂ ಇದ್ದಾರೆ. ಇಂಥವರಿಗೆ ಅಕ್ಷರ ಬೆಳಕಾಗುವ ಬದಲು ತಮಗಾಗದವರ ವಿರುದ್ಧ ಝಳಪಿಸುವ ಕತ್ತಿಯೂ ಆದದ್ದಿದೆ. ಇಂಥವರ ಸಾಲಿ­ನಲ್ಲಿ ನಿಶ್ಚಯವಾಗಿಯೂ ಎಸ್.ಎಲ್. ಭೈರಪ್ಪನಂಥ­ವರನ್ನು ಪರಿಗಣಿಸಲೇ ಬೇಕೆಂಬುದಕ್ಕೆ ಅವರ ‘ಕವಲು’, ‘ಆವರಣ’, ‘ಯಾನ’ ಇತ್ಯಾದಿ ಕಾದಂಬ­ರಿ­­ಗಳನ್ನು ಉದಾಹರಿಸಬಹುದು.

ಈ ಮಹಾನ್ ಲೇಖಕರು ತಮ್ಮ ಹಲವು ಕಾದಂಬರಿಗಳಲ್ಲಿ ಮನುಷ್ಯ ವಿರೋಧಿ, ಮಹಿಳಾ ವಿರೋಧಿ, ನಿಲುವು­ಗಳನ್ನು ಸ್ಥಾಯಿಗೊಳಿಸಲು ಪ್ರಜ್ಞಾ­ಪೂರ್ವಕ­ವಾಗಿ ಪ್ರಯತ್ನಿಸಿರುವುದು ಖಂಡನೀಯ. ಮಾನವೀಯತೆ ಉಳ್ಳ ನಾಗ­ರಿಕರು ಯಾರೂ ಈ ರೀತಿ ಬರೆ­ಯಲು ಸಾಧ್ಯವೇ ಇಲ್ಲ. ‘ಶ್ರೇಷ್ಠ’ರೆನಿ­ಸಿ­ಕೊಂಡು ಹೀಗೆಲ್ಲ ಬರೆಯುವ ಭೈರಪ್ಪ­ನಂಥವರನ್ನು ವಿಮರ್ಶೆಗೆ ಒಳಪಡಿಸಲೇ ಬಾರದೇ? ಸಾಮಾನ್ಯ ಪುರುಷರು, ಮಹಿಳೆ­­ಯರನ್ನು ಅವಾಚ್ಯ ಶಬ್ದಗಳಿಂದ ಬೈಯುವ ಮೂಲಕ, ಕೆಲವೊಮ್ಮೆ ದೈಹಿಕ ಹಲ್ಲೆ ಮಾಡುವ ಮೂಲಕ, ತಮ್ಮ ಅಸಹಾಯಕತೆಯನ್ನು ಮೆರೆದರೆ, ಭೈರಪ್ಪ­­­ನವ­­ರಂಥವರು ಅವರ ಮಹಿಳಾ ವಿರೋಧಿ ವ್ಯಸನಗಳನ್ನು ಪ್ರಮೇಯ ಗಳನ್ನಾಗಿ ಮಂಡಿಸುವ ಕುತಂತ್ರ ಮೆರೆಯು­­ತ್ತಿರುವುದಕ್ಕೆ ಮಹಿಳೆಯರು ಸುಮ್ಮನೆ ಕೂಡಬೇಕೇ? ಹಾಗೆ ನೋಡಿದರೆ ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಗೆ ಹೊಡೆಯುವ ಗಂಡಸರೂ ಇರುತ್ತಾರೆ. ಹಾಗೆಂದು ಅವರನ್ನು ಸಮರ್ಥಿಸಿ­ಕೊಳ್ಳ­ಬೇಕೇ? ಅಥವಾ ಕ್ಷಮಿಸಲು ಆಗುವುದೇ?

ಚಂದ್ರಕಾಂತ ಪೋಕಳೆ­ಯವರು ‘ಮಹಿಳೆಯ­ರಿಗೇಕೆ ಭೈರಪ್ಪ­ನವರ ಮೇಲೆ ಮುನಿಸು?’ ಎಂಬ ಶೀರ್ಷಿಕೆ­­­ಯನ್ನು ಇಟ್ಟುಕೊಂಡು ಮರಾಠಿಯಲ್ಲಿ ಭೈರಪ್ಪ­­ನವರನ್ನು ಶ್ರೇಷ್ಠ ಲೇಖಕರಷ್ಟೇ ಅಲ್ಲ ಮನುಷ್ಯರೆಂದು ಅಲ್ಲಿನವರು ಗೌರವಿಸಿ­­ದ್ದಾರೆ ಎಂದು ಬರೆದಿದ್ದಾರೆ. (ಸಂಗತ, ಪ್ರ.ವಾ. ಫೆ.5) ಅದೇ ಲೇಖ­ನ­­­ದಲ್ಲಿಯೇ ಮರಾಠಿ­ಯಲ್ಲಿ ಭೈರಪ್ಪ, ಕಾರ್ನಾಡ್, ಅನಂತ­ಮೂರ್ತಿ, ವೈದೇಹಿ, ಸುಧಾ ಮೂರ್ತಿ ಮುಂತಾದ ಕನ್ನಡ ಲೇಖಕರು ಮಾತ್ರ ಚರ್ಚೆಗೆ ಒಳ­ಗಾಗುತ್ತಾರೆ ಆದರೆ ‘ಕುಸುಮ ಬಾಲೆ’­ಯಂಥಹ ಅಪರೂಪ­ದ ಕಾದಂಬರಿ ರಚಿ­ಸಿದ ವಸ್ತುನಿಷ್ಠ ಕೃತಿಕಾರ ದೇವನೂರ ಮಹಾದೇವ ಅಷ್ಟಾಗಿ ಚರ್ಚೆಗೆ ಒಳ­ಗಾಗು­ವುದಿಲ್ಲ ಎಂಬು­ದನ್ನೂ ಅವರು ಗುರುತಿಸಿದ್ದಾರೆ. ಹಾಗಾ­ದರೆ ಮೇಲ್ಜಾ­ತಿಯ ಲೇಖಕರನ್ನು ಮಾತ್ರ ಅಪ್ಪಿ­ಕೊಂಡು ಗೌರವಿಸುವ ಜಾತಿವಾದಿ ಮನಸ್ಸು­ಗಳು ಮರಾಠಿಯಲ್ಲಿಯೂ ಹೇರಳ­ವಾಗಿ ಇವೆ ಎಂಬುದು ಇದರಿಂದ ವಿದಿತ­ವಾಗುತ್ತದೆ. ಈ ಜಾತಿವಾದಿ ಓದು­ಗರಿಗೆ ನಾಮದೇವ್ ಢಸಾಳ್, ಉತ್ತಮ್ ಕಾಂಬ್ಳೆ, ಶರಣಕುಮಾರ್ ಲಿಂಬಾಳೆ, ಲಕ್ಷ್ಮಣ ಗಾಯಕ್‌ವಾಡ್‌ರಂಥಹ ಮರಾಠಿ ಲೇಖಕರೂ  ದೂರವೇ ಇರಲಿಕ್ಕೆ ಸಾಕು.

ಆದ್ದರಿಂದ ಮರಾಠಿ­ಯ ಹಲವು ಓದುಗರು ಭೈರಪ್ಪ­ನಂಥವರನ್ನು ಒಪ್ಪಿ, ಅಪ್ಪಿಕೊಂಡರೆ ಶ್ರೇಷ್ಠರಾಗಿ ಬಿಡುವರೇ? ಶ್ರೇಷ್ಠತೆಯ ಮಾನ ದಂಡವೇನು? ಪ್ರಜಾಪ್ರಭುತ್ವದ ನೆಲೆ­ಗಳನ್ನು ದಿಕ್ಕು ತಪ್ಪಿಸುತ್ತಿರುವ ಈ ಹೊತ್ತಿನಲ್ಲಿ ಯಾವ ಓದುಗರು ಎಂಥಹ ಲೇಖಕ­ರನ್ನು ವೈಭವೀಕರಿಸುತ್ತಾರೆ, ಹೇಗೆ ವೈಭವೀಕರಿಸುತ್ತಾರೆ ಎಂಬುದರ ಹಿಂದೆ ಸನಾತನವಾದಿ ಸಾಂಸ್ಕೃತಿಕ ರಾಜ­ಕಾರಣ ಅಡಗಿರುತ್ತದೆ ಎಂಬ ತಥ್ಯವನ್ನು ಮನವರಿಕೆ ಮಾಡಿಕೊಳ್ಳಲು ಸಾಧ್ಯ­ವಾಗಬೇಕು. ಮಹಿಳಾ ವಿರೋಧಿ ಅಷ್ಟೇ ಅಲ್ಲ ಮಹಿಳೆಯರ ಬಗೆಗೆ ವಿಕೃತ ಮನ­ಸ್ಥಿತಿ­ಯನ್ನು ಹೊಂದಿರುವ ಭೈರಪ್ಪ­ನಂಥ­ವರು ತಮ್ಮ ಕೃತಿಗಳಲ್ಲಿ ಪಾತ್ರಗಳ ಮೂಲಕ ಆಡಿಸುವ ಮಾತು ಗಳು ಕೂಡ ಹೇಸಿಗೆ ತರಿಸುತ್ತವೆ. ಅವರ ‘ಯಾನ’ ಕಾದಂಬರಿಯಲ್ಲಿ ಬರುವ ಪಾತ್ರ­ವೊಂದು ‘ಮಹಿಳೆಯರು ಅತ್ಯಾ­ಚಾರ­­ವನ್ನು ಸುಖಿಸುತ್ತಾರೆ’ ಎಂದು ಹೇಳುತ್ತದೆ (ಪು.೧೨೯). ಖಳ­ನಾಯಕ ಪಾತ್ರಗಳು ಈ ಮಾತುಗಳನ್ನು ಹೇಳು­ತ್ತವೆ. ಆದರೆ ಖಳನಾಯಕ­ನಲ್ಲಿರುವ ವಿಕೃತಿ, ವಿಕಾರಗಳನ್ನು ಹೊಡೆದು ಹಾಕು­ವಂಥ ಜೀವಪರ ನೆಲೆ­ಯೊಂದು ಕೃತಿ­ಯಲ್ಲಿ ಇರಬೇಕಲ್ಲವೇ? ಹೀಗಿ­ರ­ದಿದ್ದರೆ ಖಳನಾಯಕನ ಮೂಲಕ ಮಹಿಳೆ­ಯರ ಬಗೆಗೆ ನಕಾರಾತ್ಮಕ ಭಾವಗಳನ್ನೇ ಸ್ಥಾಯಿ­ಗೊಳಿಸಿದಂತಾಗುವುದಿಲ್ಲವೇ? ಮಾನವ­ತಾ­­ವಾದಿಗಳಾಗಿ ಮಹಿಳಾ ಪರ ಚಿಂತನೆ ಮಾಡುವವರು ಹೀಗೆ ವಿಮರ್ಶಿ­ಸಿ­­ದಾಗಲೆಲ್ಲ ಇವರಿಗೆ ಕಾದಂಬರಿ ಅರ್ಥವೇ ಆಗಿಲ್ಲ ಎಂದು ಫರ್ಮಾನು ಹೊರಡಿಸುವ ವಿಮರ್ಶಕರ ಗುಂಪೊಂದು ಪ್ರತ್ಯಕ್ಷವಾಗುತ್ತದೆ. ಅದೇನೇ ಇರಲಿ ಭೈರಪ್ಪನವರ ಜನಪ್ರಿಯತೆ­­ಯೊಂದೇ ಅವರನ್ನು ನಾಗರಿಕರ­­ನ್ನಾಗಿರಿಸಲಾರದು. ಉತ್ತಮ ಲೇಖಕರೆನಿಸಿಕೊಳ್ಳಲು ಬರೆಯುವ ರೀತಿ­ಯೊಂದೇ ತಿಳಿದರೆ ಸಾಲದು, ನೀತಿಯೂ ಇರ­ಬೇಕು. ಸಕಲ ಜೀವಾತ್ಮರ ಬಗ್ಗೆ ಪ್ರೀತಿಯೂ ಇರಬೇಕು.

– ವಿಮಲಾ.ಕೆ.ಎಸ್, ಡಾ.ಮೀನಾಕ್ಷಿ ಬಾಳಿ, ಡಾ.ಪ್ರಭು ಖಾನಾಪುರೆ, ಆರ್.ಕೆ.ಹುಡಗಿ, ಡಾ.ಪದ್ಮಿನಿ ನಾಗರಾಜ್, ನೀಲಾ.ಕೆ. ಡಾ. ಆಶಾ­ದೇವಿ. ಎಂ.ಎಸ್. ಡಾ.ವಸುಂಧರಾ ಭೂಪತಿ, ಪ್ರೊ.ಎನ್.ವಿ.ಅಂಬಾಮಣಿ ಮೂರ್ತಿ, ನಾಗರತ್ನ ಚಂದ್ರಶೇಖರ್, ಶಾಕಿರಾ ಖಾನ್, ಟಿ.ಸುರೇಂದ್ರ ರಾವ್, ಗೌರಿ ಲಂಕೇಶ್, ಡಾ.ಕೆ.ಷರೀಫಾ, ಪ್ರಭಾ, ಡಾ.ಕಾಶೀನಾಥ ಅಂಬಲಗಿ, ಕೆ.ಎಸ್.ಲಕ್ಷ್ಮಿ, ವಿ.ಗೀತಾ, ವೆಂಕಟೇಶ ಪ್ರಸಾದ್

***************************************************************************

ಮಾನವೀಯ ನೆಲೆಯ ವಿಮರ್ಶೆ
ಹಿಂದುತ್ವದ, ಹಿಂದೂ ಧರ್ಮದ ಪರವಾದ ಪೂರ್ವಗ್ರಹಪೀಡಿತ ಚಿಂತನೆ­ಗಳ ಕುರಿತು ಎಸ್.ಎಲ್.ಭೈರಪ್ಪನವರ ‘ಅಂಚು’, ‘ಕವಲು’, ‘ಆವರಣ’, ‘ಯಾನ’ದಂಥ  ಕಾದಂಬರಿಗಳಲ್ಲಿ ಅಡಕಗೊಂಡಿರುವ  ಪ್ರತಿಪಾದನೆ, ಅನ್ಯ ಧರ್ಮದ ಕುರಿತಾದ ತೀವ್ರ ಅಸಹನೆ  ಮತ್ತು ತಿರಸ್ಕಾರ, ಸನಾತನ ಧರ್ಮದ ಅಮಾನವೀಯ  ತತ್ವಗಳು,ಆಧುನಿಕ ಮಹಿಳೆಯ ಕುರಿತಾದ ಸನಾತನ ಮನಸ್ಥಿತಿಯ ಚಿಂತನೆಗಳನ್ನು ಕುರಿತು ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟ­ಗಾರ್ತಿ, ಲೇಖಕಿಯರು ಪ್ರಬುದ್ಧವಾಗಿ,  ಮಾನವೀಯ ನೆಲೆಯಲ್ಲಿ ವಿಶ್ಲೀಷಿಸಿ­ದ್ದಾರೆ. 

ಒಬ್ಬ ಜನಪ್ರಿಯ ಲೇಖಕ   ಮಹಿಳೆ­ಯರ ಕುರಿತು ಜೀವವಿರೋಧಿ ಧೋರಣೆಯಲ್ಲಿ   ಹೇಗೆ ಬರೆಯಲು ಸಾಧ್ಯ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಇದನ್ನು ಜನಪ್ರಿಯತೆ ಎಂದು ಕರೆಯು­ವು­ದಾದರೆ ಅದು ಈ ನಾಡಿನ ದುರಂತ­­ವಷ್ಟೇ ಎಂದು ಭೈರಪ್ಪ
ನವರ ಜನಪ್ರಿಯತೆ ಕುರಿತಾದ ಮಿಥ್ ಅನ್ನು ಸಾರ್ವಜನಿಕ ಚರ್ಚೆಗೆ ಎಳೆದಿದ್ದಾರೆ.

ಕವಿ ಮಿಲ್ಟನ್ ಒಂದು ಕಡೆ ‘ಜನ­ಪ್ರಿಯತೆಯು ಪ್ರಾಣ ನಾಶಕ  ಭೂಮಿ ಮೇಲೆ ಬೆಳೆಯುವ ಗಿಡವಲ್ಲ’ ಎನ್ನು­ತ್ತಾನೆ. ಈ ಮಾತನ್ನು ಆಧರಿಸಿ, ಭೈರಪ್ಪ­ನವರ ಜನಪ್ರಿಯತೆ ‘ಪ್ರಾಣನಾಶಕ ಭೂಮಿಯ ಮೇಲೆ ಬೆಳೆದಂಥ ಗಿಡ’  ಎಂದೇ ವಿಶ್ಲೇಷಿಸಬೇಕಾಗುತ್ತದೆ.   ಅದನ್ನು  ನಮ್ಮ ಲೇಖಕಿಯರು ತಮ್ಮ ಸ್ಪಷ್ಟ ಮಾತುಗಳಲ್ಲಿ ವಿವರಿಸುತ್ತಾ ಇನ್ನೊಬ್ಬರ ಜೀವ,ಮತ್ತೊಬ್ಬರ ಬದು­ಕಿನ ಕುರಿತಾಗಿ ಒಬ್ಬ ಜನಪ್ರಿಯ ಲೇಖಕ ಇಷ್ಟೊಂದು ನಿರ್ಲಕ್ಷ್ಯದಿಂದ, ಸದಾ ದ್ವೇಷಿಸುವ ಮನಸ್ಥಿತಿಯಿಂದ ಬರೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ನಾವು ಏನನ್ನು ಆರಿಸಿಕೊಳ್ಳುತ್ತೇವೆಯೋ ಅದು ಸದಾಕಾಲವೂ ಉತ್ತಮ ತರದಾ­ಗಿರ  ಬೇಕಿರುತ್ತದೆ. ಈ ಉತ್ತಮತನವು ಎಲ್ಲಾ ಧರ್ಮ,ಜಾತಿಗಳ ಒಳಿತನ್ನು ಒಳಗೊಂಡಿರಬೇಕಾಗಿರುತ್ತದೆ.

ಆದರೆ ಜನಪ್ರಿಯ ಲೇಖಕ ಭೈರಪ್ಪ­ನವರ ಚಿಂತನೆಗಳಲ್ಲಿ ಈ ಒಳ­ಗೊಳ್ಳುವಿಕೆಯ ಧೋರಣೆಗಳ ಯಾವ ಲಕ್ಷಣಗಳೂ ಇಲ್ಲ. ಸತ್ಯದ ವಿವಿಧ ಮುಖಗಳನ್ನು ಗ್ರಹಿಸಬೇಕಾದ ಲೇಖಕ ಅದನ್ನು ನಿರಾಕರಿಸಿ ಸುಳ್ಳುಗಳನ್ನು ಕಾದಂಬರಿಗಳನ್ನಾಗಿಸಿದರೆ ಪ್ರಜ್ಞಾ ವಂತರು ತೀಕ್ಷ್ಣವಾಗಿ ಅದನ್ನು ವಿಮರ್ಶಿ­ಸಲೇ ಬೇಕಾಗುತ್ತದೆ. ಆದರೆ ಸುಳ್ಳುಗ­ಳಿಂದ ಸೃಷ್ಟಿಯಾಗುವ ಭೈರಪ್ಪನ­ವರಿಗಿರುವ ಈ ಜನಪ್ರಿಯತೆಯ ಮಾದರಿ, ಪೂರ್ವಗ್ರಹಗಳು ಹಾಗೂ ಸವಕಲು ವಾದಗಳನ್ನು ಮಾತ್ರ ಹುಟ್ಟು ಹಾಕಲು ಸಾಧ್ಯ.

ಆದರೆ ಈ ಎಲ್ಲಾ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಭೈರಪ್ಪನವರು ಅದು ಹೇಗೆ ಜನಪ್ರಿಯ, ಅದು ಹೇಗೆ ರಾಷ್ಟ್ರೀಯ ಮಟ್ಟದಲ್ಲಿ ಭೈರಪ್ಪನವರು ಪ್ರಸಿದ್ಧರಾಗಿದ್ದಾರೆ ಎಂದು ಚಂದ್ರಕಾಂತ ಪೋಕಳೆಯವರು ಬರೆದಿ­ರುವ ಧೋರಣೆ­­ಯನ್ನು ಒಪ್ಪಲು ಸಾಧ್ಯವಿಲ್ಲ.
ಎಲ್ಲಿಯೂ ಚರ್ಚೆಗೆ ಆಸ್ಪದ ಕೊಡದಂತೆ ನಿರರ್ಗಳ­ವಾಗಿ ವಿತಂಡ  ವಾದವನ್ನು ಮಂಡಿಸಿ­ರುವ ಪೋಕಳೆ­ಯವರ ಈ ಅಭಿ­ಪ್ರಾಯಗಳು ನಿಷ್ಠುರತೆ, ಪ್ರಾಮಾಣಿಕ­ತೆಯ ಕೊರತೆಯನ್ನು ಎದುರಿಸುತ್ತಿವೆ.
–ಬಿ.ಶ್ರೀಪಾದ ಭಟ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT