ಎಚ್. ಎಸ್. ಶಿವಪ್ರಕಾಶ ಅವರು `ಪ್ರಜಾವಾಣಿ'(ಮಾ.15)ಯಲ್ಲಿ ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಎಂಬ ವಿದ್ವಾಂಸರು ಇತ್ತೀಚೆಗೆ `ವಚನಕಾರರ ಜಾತಿ ವಿರೋಧಿ ನಿಲುವು' ಕುರಿತು ಬರೆದ ಲೇಖನಕ್ಕೆ ಸ್ಪಂದಿಸಿದ್ದು ಸಕಾಲಿಕ ಮತ್ತು ಸ್ವಾಗತಾರ್ಹ. ಉಭಯರು ವಚನಕಾರರ ಕುರಿತು ವ್ಯಕ್ತಪಡಿಸಿದ ಅನುಮಾನಗಳಿಗೆ ಮತ್ತು ಅವರು ತಲುಪಿದ ಹಸಿ ಹಸಿ ನಿರ್ಣಯಗಳಿಗೆ ಶಿವಪ್ರಕಾಶರು ಸೂಕ್ತವಾದ ತಾತ್ವಿಕ ಉತ್ತರ ನೀಡಿದ್ದಾರೆ. ಕೊನೆಯಲ್ಲಿ ಮಾತ್ರ ಡಂಕಿನ ಮತ್ತು ಅವರ ಸಂಶೋಧನಾ ತಂಡವು ವಚನಕಾರರ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಷರಾ ಬರೆದಿರುವುದು ಅಷ್ಟೇನು ಸಮಂಜಸವಲ್ಲ.

ಡಂಕಿನ್ ಅವರ ವಾದದಲ್ಲಿ ಯಾವುದೇ ಹೊಸ ಚಿಂತನೆಯಾಗಲಿ ಅಥವ ಆರೋಗ್ಯಪೂರ್ಣವಾದ ಚರ್ಚೆಗಾಗಲಿ ಅವಕಾಶವಿಲ್ಲ. ಏಕೆಂದರೆ ಡಂಕಿನ್ ಅವರು ಪೂರ್ವಗ್ರಹ ಪೀಡಿತ ನಿಲುವಿನೊಂದಿಗೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಅಸಂಬದ್ಧ ತರ್ಕವಾಗಿದೆ (ಕೃತಿ ಭಾರದಲ್ಲಿ ಜಾತಿವ್ಯವಸ್ಥೆ ಇದೆಯೇ ಪುಟ 103) ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ನಿಲುವಿಗೆ ಬರಲು ಬಳಸಿಕೊಂಡ ಸಂಶೋಧನ ಮಾದರಿಯೇ ಪ್ರಶ್ನಾರ್ಹವಾಗಿದೆ.

ಈವರೆಗೆ ಪ್ರಕಟವಾದ ಒಟ್ಟು 21788 ವಚನಗಳಲ್ಲಿ ಜಾತಿ ಅಥವಾ ಕುಲವೆಂಬ ಶಬ್ದ ಬಳಕೆಯಾದ ವಚನಗಳ ಸಂಖ್ಯೆ ಕೇವಲ 72 ಮಾತ್ರ. ಇದು ಶೇಕಡಾವಾರು 0.35ರಷ್ಟಾಗುತ್ತದೆ. ಆದ್ದರಿಂದ ಈ ವಿರಳ ಶಬ್ದ ಪ್ರಯೋಗವೇ ವಚನಕಾರರು ಜಾತಿ ವಿರೋಧಿ ಹೋರಾಟಗಾರರಾಗಿರಲಿಲ್ಲ. ಅಷ್ಟಕ್ಕೂ ವಚನಕಾರರು `ಜಾತಿವಿರೋಧಿ'ಗಳಾಗಿದ್ದರು ಎಂಬ ಅಭಿಪ್ರಾಯವು ಆಧುನಿಕ ಸಂದರ್ಭದಲ್ಲಿ ವೀರಶೈವರು ವಸಾಹತುಶಾಹಿ ಪಾಶ್ಚಾತ್ಯ ಚಿಂತಕರ ಪ್ರಭಾವದಿಂದಾಗಿ ಕಟ್ಟಿಕೊಂಡ ಪ್ರಮೇಯವಾಗಿದೆ ಎಂದು ವಾದಿಸುತ್ತಾರೆ.

ಶಬ್ದ ಬಳಕೆಯ ಲೆಕ್ಕ ಗಣಿಸುವುದನ್ನು ಬಿಟ್ಟರೆ ಡಂಕಿನ್ ಅವರು ಒಟ್ಟು ವಚನಗಳ ಜೀವಧ್ವನಿಯನ್ನಾಗಲಿ ವಚನಕಾರರ ಬದುಕಿನ ಸಂಘರ್ಷವನ್ನಾಗಲಿ ವಚನಕಾರರ ನಂತರ ಅವರ ಬದುಕು ಕುರಿತು ರಚನೆಯಾದ ಕಾವ್ಯ ಪುರಾಣಗಳು ಶಾಸನಗಳು ಜಾನಪದ ಸಾಹಿತ್ಯರಾಶಿ ಅನುಭಾವ ಪರಂಪರೆಯ ವೈವಿಧ್ಯಮಯ ಚಿಂತನಾ ಧಾರೆಯನ್ನಾಗಲಿ ಕೆಳ ಜಾತಿ ಕೆಳವರ್ಗದ ಸಾಂಸ್ಕೃತಿಕ ನಾಯಕರು ತಮ್ಮನ್ನು ವಚನಕಾರರೊಂದಿಗೆ ಸಮೀಕರಿಸಿಕೊಂಡು ಬರುತ್ತಿರುವ ಸಂಗತಿಯನ್ನಾಗಲಿ ಪರಾಮರ್ಶೆಗೆ ಒಳಪಡಿಸದೆ ದಿಢೀರ್ ನಿರ್ಣಯಕ್ಕೆ ಬರುತ್ತಾರೆ. ಇದು ಬಹುಮುಖಿ ನೆಲೆಯ ಸಂಶೋಧನಾ ಅಧ್ಯಯನದ ಶಿಸ್ತಿಗೆ ಅಪಚಾರ ಮಾಡಿದಂತಾಗಿದೆ.

ವಚನಗಳು ವಚನಕಾರರ ಬದುಕಿನ ಬಗೆಗಿನ ಮೂಲ ಸಾಮಗ್ರಿಯೇನೋ ಹೌದು. ಆದರೆ ಹನ್ನೆರಡನೆ ಶತಮಾನದ ವಚನಕಾರರ ಎಲ್ಲ ವಚನಗಳು ಲಭ್ಯವಾಗಿವೆಯಂತೇನೂ ಇಲ್ಲ. ಕೆಲವೊಂದು ವಚನಕಾರರ ಒಂದೊಂದು ವಚನಗಳು ಮಾತ್ರ ದೊರೆತಿರುವಲ್ಲಿಯೇ ಅವರ ಕಳೆದುಹೋಗಿರಬಹುದಾದ ವಚನಗಳತ್ತಲೂ ಕುತೂಹಲ ಮೂಡದೇ ಇರದು. ಹೀಗಾಗಿ ಮುಖ್ಯ ಪಠ್ಯಗಳೊಂದಿಗೆ ಪೂರಕ ಸಾಮಗ್ರಿಗಳು ಕೂಡ ಯಾವುದೇ ಒಂದು ನಿಲುವಿಗೆ ಬರಲು ಅಷ್ಟೇ ಮುಖ್ಯವಾಗುತ್ತವೆ. ಸಂಶೋಧನಾಧ್ಯಯನವು ಬಹುಮುಖಿ ನೆಲೆಯಲ್ಲಿ ವಿಸ್ತೃತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಯಾವುದೇ ಒಂದು ಮೂಲಸಾಮಗ್ರಿಯನ್ನಿಟ್ಟುಕೊಂಡು ನಿರ್ಣಯಕ್ಕೆ ಬರುವುದು ಸಲ್ಲ.

ಬಹಳ ಮುಖ್ಯವಾದ ಸಂಗತಿಯೆಂದರೆ ಭಾರತದಲ್ಲಿ ಜಾತಿವ್ಯವಸ್ಥೆಯು ಇರಲೇ ಇಲ್ಲ. ವಸಾಹತುಶಾಹಿ ಚಿಂತಕರು ಈ ದೇಶವನ್ನು ಒಡೆದು ಆಳಲೆಂದೇ ಉತ್ಪಾದಿಸಲಾದ ಸಂಗತಿಯಾಗಿದೆ ಎಂಬ ವಾದವನ್ನು ಹುಟ್ಟು ಹಾಕುತ್ತಿರುವ ಆಧುನಿಕೋತ್ತರ ಚಿಂತಕರ ಕಣ್ಣೋಟದ ಮೂಲಕ ವಚನಗಳ ಪ್ರವೇಶ ಮಾಡಿದುದರ ಫಲವಾಗಿ ಡಂಕಿನ್ ಅಂಥವರು ಇಂಥ ಅಪಸವ್ಯಗಳನ್ನು ಹುಟ್ಟು ಹಾಕುತ್ತಿದ್ದಾರೆ.

ಎರಡನೆಯದಾಗಿ ಆಧುನಿಕ ಕಾಲಘಟ್ಟದ ವೀರಶೈವರೆಂಬ ಉಗ್ರ ಬಸವವಾದಿಗಳ ವಿದ್ಯಮಾನಗಳನ್ನು ಗಮನಿಸಿ ವಚನಕಾರರನ್ನು ಗ್ರಹಿಸುವ ಒತ್ತಡಕ್ಕೆ ಒಳಗಾಗಿಯೂ ಡಂಕಿನನಂಥವರು ಇಂಥ ನಿಲುವಿಗೆ ಬಂದಂತಿದೆ. ಮೂರನೆಯದಾಗಿ ಜೇಡರ ದಾಸಿಮಯ್ಯನಿಂದ ಹಿಡಿದು 19ನೇ ಶತಮಾನದ ಒಟ್ಟು ವಚನಕಾರರನ್ನು ಒಂದೇ ಮಾನದಂಡದಡಿಯಲ್ಲಿ ಗ್ರಹಿಸಿ ವಚನಕಾರರು ಜಾತಿವ್ಯವಸ್ಥೆಯ ವಿರೋಧಿಗಳಾಗಿರಲಿಲ್ಲ ಎಂಬ ತೀರ ಬಾಲಿಶವೆನಿಸಬಹುದಾದ ಅಭಿಪ್ರಾಯಕ್ಕೆ ಬಂದಂತಾಗಿದೆ. ಯಾವ ಕಾಲಕ್ಕಾದರೂ ಸಾಂಸ್ಕೃತಿಕ ರಾಜಕಾರಣದ ಉಪಕರಣದಂತಿರುವ ಸಾಹಿತ್ಯವನ್ನು ಅದು ನಿರ್ದಿಷ್ಟ ಹೋರಾಟದ ಫಲವಾಗಿ ಮೂಡಿ ಬಂದ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದ ಮಾದರಿ ತುಂಬಾ ಸಂಕೀರ್ಣವೂ ಮತ್ತು ಬಹುಮುಖಿ ನೆಲೆಯದ್ದೂ ಆಗಿರಬೇಕಾಗುತ್ತದೆ.

ಸಾಹಿತ್ಯದ ಸಂಶೋಧನೆ ಸಾಮ್ರೋಜ್ಯಶಾಹಿ ಬಿಂಬಿತ ಉತ್ಪಾದಿತ ಅಭಿಪ್ರಾಯಗಳ ಲೆಕ್ಕಾಚಾರದಂತಲ್ಲ. ಹೀಗಾಗಿಯೇ ವಚನಕಾರರನ್ನು ಕುರಿತು ಡಂಕಿನ್ ಅವರು ತೀರ ಅಸಂಬದ್ಧ ನಿಲುವಿಗೆ ಬರುವುದರ ಮೂಲಕ ಅನಾರೋಗ್ಯಕರ ಮತ್ತು ಅನರ್ಥಕಾರಿ ವಿವಾದಗಳಿಗೆ ಎಡೆ ಮಾಡಿಕೊಟ್ಟಿರುತ್ತಾರೆ. ಹೀಗೆಂದು ವಚನಕಾರರು ಪ್ರಶ್ನಾತೀತರಂತಲ್ಲ. ಅವರು ಸಾರ್ವಕಾಲಿಕ ಬದುಕಿನ ಸಮಗ್ರ ಆಯಾಮಗಳನ್ನು ಕುರಿತು ಮಾತನಾಡಿದ್ದಾರೆ ಎಂದೂ ಅಲ್ಲ. ಜಾತಿವ್ಯವಸ್ಥೆಯ ಉತ್ಪಾದಿತ ಶೋಷಣೆ ಕುರಿತು ವಚನಕಾರರ ಪೂರ್ವದಲ್ಲಿ ಯಾರೂ ಪ್ರತಿಭಟಿಸಿರಲಿಲ್ಲ ಎಂದೂ ಅಲ್ಲ. ಹಾಗೆ ನೋಡಿದರೆ ಲೋಕಾಯತ ಬೌದ್ಧ ಜೈನ ಮುಂತಾದ ದಾರ್ಶನಿಕ ಧಾರೆಗಳು ವೈದಿಕ ವರ್ಣಾಶ್ರಮ ಜಾತಿವ್ಯವಸ್ಥೆ ಕುರಿತು ತಾತ್ವಿಕ ಸಂಘರ್ಷಕ್ಕೆ ಇಳಿದದ್ದು ಇದೆ. ಆದ್ದರಿಂದಲೇ ವಚನಕಾರರನ್ನು ಕುರಿತು ಈ ಹೊತ್ತು ಬಹುಮುಖಿ ನೆಲೆಯಲ್ಲಿ ಅಧ್ಯಯನಿಸಬೇಕಾದ ಜರೂರಿ ಇದ್ದೇ ಇದೆ.

ನಮ್ಮ ಕಾಲದ ವಾಗ್ವಾದಗಳೊಂದಿಗೆ ವಚನಕಾರರನ್ನು ಮುಖಾಮುಖಿಯಾಗಿಸಬೇಕಾದ ತುರ್ತು ಇದೆ. ಎಲ್ಲ ಬಗೆಯ ವಾಗ್ವಾದ ನಡೆಸಬಹುದಾದ ಬಹುದೊಡ್ಡ ಸ್ಪೇಸ್ ಅವಕಾಶ ವಚನಗಳಲ್ಲಿದೆ. ಜಾತಿ ವ್ಯವಸ್ಥೆಯನ್ನು ಕುರಿತು ಮೇಲ್ವರ್ಗದ ವಚನಕಾರರ ಗ್ರಹಿಕೆಗೂ ಕೆಳವರ್ಗದಿಂದ ಬಂದ ವಚನಕಾರರ ಗ್ರಹಿಕೆಗೂ ಸಕಾರಣವಾಗಿಯೇ ಭಿನ್ನತೆ ಇದೆ. ಅಂತೆಯೇ ಒಟ್ಟು ವಚನಕಾರರ ಆಶಯ, ಉದ್ದೇಶ, ದೃಷ್ಟಿ, ಧೋರಣೆ ದರ್ದುಗಳಲ್ಲಿ ಬಸವಯುಗದ ವಚನಕಾರರಿಗೂ ಬಸವೋತ್ತರ ಯುಗದ ವಚನಕಾರರಿಗೂ ತೀವ್ರ ಸೈದ್ಧಾಂತಿಕ ಭಿನ್ನತೆಗಳಿವೆ.

ಆಯಾ ಕಾಲಘಟ್ಟದ ಒತ್ತಡಗಳಿಗೆ ಈ ಯಾವುದನ್ನೂ ಪರಾಮರ್ಶಿಸದ ಡಂಕಿನ ಅವರು ಒಟ್ಟು ವಚನಕಾರರನ್ನು ಒಂದೇ ಮಾನದಂಡಗಳಡಿಯಲ್ಲಿ ಅಳೆಯ ಹೊರಟಿರುವುದು ತುಂಬ ಅಪಾಯಕಾರಿ ನಿಲುವು ಆಗಿದೆ. ಅವರು ನೀಡಿದ ವಚನಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು ಏಳು ಸಾವಿರದಷ್ಟು ವಚನಗಳು ಬಸವೋತ್ತರ ವಚನಕಾರರಿಂದ ವಚಿಸಲ್ಪಟ್ಟಿವೆ.

ಬಸವಯುಗದ ವಚನಕಾರರ ನಿಲುವಿಗೂ ಬಸವೋತ್ತರ ವಚನಕಾರರ ನಿಲುವಿಗೂ ಅಜಗಜಾಂತರ ವ್ಯವತ್ಯಾಸವಿದೆ ಎಂಬ ಕನಿಷ್ಠ ಪ್ರಜ್ಞೆಯೂ ಇವರಿಗಿದ್ದಂತಿಲ್ಲ. ಹಾಗೆ ನೋಡಿದರೆ ವಚನ ಚಳವಳಿಯು ನಿರ್ದಿಷ್ಟ ಕಾಲಘಟ್ಟಲ್ಲಿ ಸಂಭವಿಸಿದ ಘಟನೆ ಮಾತ್ರವಲ್ಲ. ಅದು ಜೇಡರ ದಾಸಿಮಯ್ಯಗಳ ಹಿಡಿದು ಬಸವಯುಗ, ಬಸವೋತ್ತರ ಯುಗ ಮತ್ತು ಈ ಕ್ಷಣದವರೆಗೂ ನಡೆದುಕೊಂಡು ಬರುತ್ತಿರುವ ಪ್ರಕ್ರಿಯಾತ್ಮಕ ಪರಂಪರೆಯಾಗಿದೆ.

ಈ ಪರಂಪರೆಯಲ್ಲಿ ಬಸವಾದಿ ಶರಣರ ಕಾಲಘಟ್ಟವು ತನ್ನ ಜಾತಿವಿರೋಧಿ ನಿಲುವಿನಿಂದಾಗಿಯೇ ಗಮನ ಸೆಳೆಯುತ್ತದೆ. ಇಲ್ಲಿ ಬಸವ ಅಕ್ಕಮಹಾದೇವಿ, ಚನ್ನಬಸವಣ್ಣರಂಥ ಒಬ್ಬಿಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಅಲಕ್ಷಿತ ತಳಸಮುದಾಯದ ಕಾಯಕಜೀವಿಗಳಾಗಿದ್ದರು. ಇವರು ತಮ್ಮ ಸೀಮಿತ ನೆಲೆಯಲ್ಲಿಯೇ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದಲ್ಲದೆ ಜಾತಿವ್ಯವಸ್ಥೆಯ ತಾಯಿ ಬೇರಾದ ಕರ್ಮಸಿದ್ಧಾಂತದ ವಿರುದ್ಧ ತಾತ್ವಿಕ ಸಂಘರ್ಷಕ್ಕಿಳಿದದ್ದು ಸಾವಿರಾರು ವಚನಗಳಲ್ಲಿ ನಿಚ್ಚಳವಾಗಿ ಕಾಣಿಸಿಕೊಂಡಿದೆ. ನೇರವಾಗಿ ಜಾತಿ ವಿರೋಧಿ ನಿಲುವು ಸಂಖ್ಯಾತ್ಮಕವಾಗಿ ಎಷ್ಟು ವಚನಗಳಲ್ಲಿ ಹೇಳಲ್ಪಟ್ಟಿದೆ ಎಂಬುದು ಮುಖ್ಯವಲ್ಲ. ಎಷ್ಟು ಪ್ರಖರವಾಗಿ ಈ ವಿಷಯ ಪ್ರಸ್ತಾಪಿಸಲ್ಪಟ್ಟಿದೆ ಎಂಬುದೇ ಮುಖ್ಯ.

ಭಾರತದಲ್ಲಿ ಜಾತಿವ್ಯವಸ್ಥೆ ಒಂದು ಸಂಪ್ರದಾಯ ಮಾತ್ರವಲ್ಲ. ಅದು ವೈದಿಕ ಧರ್ಮ ಬಿಂಬಿಸಿದ ತತ್ವಶಾಸ್ತ್ರವಾಗಿದೆ. ಈ ತತ್ವವನ್ನು ಸ್ಥಾಯಿಗೊಳಿಸಲೆಂದೇ ದೇವರು ಧರ್ಮ, ಪಾಪ-ಪುಣ್ಯ, ಸ್ವರ್ಗ-ನರಕ, ಪುನರ್ಜನ್ಮ, ಮುಂತಾದ ಪರಿಕಲ್ಪನೆಗಳನ್ನು ಹುಟ್ಟು ಹಾಕಲಾಗಿತ್ತು. ಈ ವ್ಯವಸ್ಥೆಯು ದೈವೀಕೃತವೆಂದು ನಂಬಿಸಲಿಕ್ಕಾಗಿಯೇ ವಿವಿಧ ಸಂಪ್ರದಾಯ ಆಚರಣೆ, ಆಹಾರ ಪದ್ಧತಿ, ಬಹುದೇವೋಪಾಸನೆ, ಜ್ಯೋತಿಷ, ಪಂಚಾಂಗ ವಿಧಿ ಲಿಖಿತ ಮೌಢ್ಯ ಕಂದಾಚಾರ ಇತ್ಯಾದಿ ಭಾವನಿಷ್ಠ ಪಲಕುಗಳನ್ನು ಗಟ್ಟಿಯಾಗಿಸಲಾಗಿತ್ತು. ಈ ಜಾತಿ ವ್ಯವಸ್ಥೆಯೊಂದಿಗೆ ವರ್ಗ,ವರ್ಣ,ಲಿಂಗ ತಾರತಮ್ಯಗಳು ತಳುಕು ಹಾಕಿಕೊಂಡಿವೆ. ಆದ್ದರಿಂದ ಈ ಎಲ್ಲವುಗಳ ವಿರುದ್ಧ ಮಾತಾಡುವುದು ಕೂಡ ಹನ್ನೆರಡನೆ ಶತಮಾನದ ವಚನಕಾರರಿಗೆ ಬಹುಮುಖ್ಯವಾಗಿತ್ತು.

ಜಾತಿ ವ್ಯವಸ್ಥೆಯು ಡಂಕಿನ್ ಅವರು ಗ್ರಹಿಸಿದಂತೆ ಕೇವಲ ನಂಬಿಕೆಯಾಗಿರಲಿಲ್ಲ. ಆ ವ್ಯವಸ್ಥೆಯಲ್ಲಿ ಸಿಕ್ಕು ಒದ್ದಾಡುತ್ತಿರುವವರ ವಾಸ್ತವಿಕ ಬದುಕಾಗಿತ್ತು. (ಬದುಕಾಗಿದೆ). ಅಂಥ ಬದುಕಿನ ಎಲ್ಲ ಆಯಾಮಗಳನ್ನು ಕುರಿತು ಮಾತಾಡುವುದು ಕೂಡ ಜಾತಿವಿನಾಶದ ಹೆಜ್ಜೆಗಳಾಗಿದ್ದವು. ಅಂತೆಯೇ ಬಸವಣ್ಣನಂಥವರಿಗೆ ತನ್ನನ್ನು ಹಾರುವ ಎಂದು ಗುರುತಿಸಿಕೊಳ್ಳುವುದು ಸಂಕಟದ ಸಂಗತಿಯಾಗಿತ್ತು. ಅಪ್ಪನು ನಮ್ಮ ಮಾದಾರ ಚನ್ನಯ್ಯ ಎಂದು ಕರೆದುಕೊಳ್ಳುವಲ್ಲಿ ಜಾತಿವ್ಯವಸ್ಥೆಯನ್ನು ಒಡೆಯುವ ಛಲವಿತ್ತು. ಅಲ್ಲಮನಾದರೂ ಅಜ್ಞಾನವೆಂಬ ತೊಟ್ಟಿಲೊಳಗೆ ಎಂಬ ವಚನದಲ್ಲಿ ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು ಪೋಷಿಸಿದ ವೇದಾದಿ ಶಾಸ್ತ್ರಗಳನ್ನು ಭಂಜಿಸುವ ಅನಿವಾರ್ಯತೆ ಇತ್ತು.

ಹೀಗಾಗಿ ಜಾತಿ ಎಂಬ ಶಬ್ದ ಬಳಸದೆಯೂ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ ಕರ್ಮಸಿದ್ಧಾಂತವನ್ನು ಹನ್ನೆರಡನೆಯ ಶತಮಾನದ ವಚನಕಾರರು ಉದ್ದಕ್ಕೂ ಖಂಡಿಸಿದ್ದು ಢಾಳಾಗಿದೆ. `ಸುಖ ಬಂದಡೆ ಪುಣ್ಯದ ಫಲವೆನ್ನೆ', `ದುಃಖ ಬಂದಡೆ ಪಾಪದ ಫಲವೆನ್ನೆ', `ಕಾಯದ ಕಳವಳಕ್ಕಂಜಿ ಕಾಯಯ' ಎಂಬ ಬಸವಣ್ಣನವರ ಅನೇಕ ವಚನಗಳು `ಬೇನೆ ಬಂದರೆ ಒರಲು, ಸಾವು ಬಂದರೆ ಸಾಯಿ' ಎಂಬ ಲದ್ದೆ ಸೋಮಣ್ಣನ ವಚನ, `ಕೋಳಿ ಕಿರಿಮೀನು ತಿಂಬುವವರ ಕುಲಜರೆಂಬುವರು' ದಲಿತ ವಚನಕಾರ್ತಿ ಕಾಳವ್ವೆಯ ವಚನಗಳು, ಸತ್ಯಕ್ಕ ಅಂಬಿಗರ ಚೌಡಯ್ಯ ಮುಂತಾದ ವಚನಕಾರರ ರಚನೆಗಳಲ್ಲಿ ಜಾತಿ ವಿರೋಧಿ ನಿಲುವು ಸ್ಥಾಯಿಯಾಗಿ ಅನುರಣಿಸುತ್ತಿರುವುದು ಶಬ್ದ ಸೋಂಕಿಗರಿಗೆ ಅರ್ಥವಾಗದು.

ಡಂಕಿನ್ ಮತ್ತು ಅವರ ತಂಡ ಸಾಮ್ರೋಜ್ಯಶಾಹಿ ಪರ ಆಧುನಿಕೋತ್ತರವಾದದ ಅಮಲಿನಿಂದ ಹೊರ ಬಂದು ಬಸವಯುಗದ ವಚನಗಳನ್ನು, ಅವರ ಕುರಿತು ರಚನೆಯಾದ ಸಾಮಗ್ರಿಗಳನ್ನು ಮುಕ್ತ ಮನಸಿನಿಂದ ಅಧ್ಯಯನಿಸುವುದಾದರೆ ವಚನಕಾರರ ನಿಲುವು ಸ್ಪಷ್ಟವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.