‘ಇಡೀ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿದೆ. ಎಡ ಮತ್ತು ಬಲಪಂಥೀಯ ವಿಚಾರಗಳ ಮಧ್ಯೆ ಬೇರೆ ಆಯ್ಕೆಯೇ ಇಲ್ಲವಾಗಿದೆ. ಒಂದೋ ಎಡಪಂಥೀಯ ವಿಚಾರಗಳನ್ನು ಒಪ್ಪಿಕೊಳ್ಳಬೇಕು. ಇಲ್ಲವೇ ಬಲಪಂಥೀಯ ವಿಚಾರಗಳನ್ನು ಅಪ್ಪಿಕೊಳ್ಳಬೇಕು. ಇಂತಹ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಶೋಭೆ ಅಲ್ಲ. ಈ ಸ್ಥಿತಿಯಲ್ಲಿ ಮಧ್ಯಮ ಮಾರ್ಗದ ಗುಂಪು ಹೆಚ್ಚು ಪ್ರಸ್ತುತವಾಗುತ್ತಿದೆ. ಎಡ ಮತ್ತು ಬಲಪಂಥೀಯ ವಿಚಾರಗಳನ್ನು ನಿಗ್ರಹಿಸುವ ಶಕ್ತಿ ಇರುವ ಮಧ್ಯಮ ಮಾರ್ಗದವರು ಮೈಕೊಡವಿ ನಿಲ್ಲಬೇಕು. ಹೆಚ್ಚು ಕ್ರಿಯಾಶೀಲರಾಗಬೇಕು’ ಎಂದು ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಆಳ್ವಾಸ್ ನುಡಿಸಿರಿಯ ಸಮಾರೋಪ ಭಾಷಣದಲ್ಲಿ ಹೇಳಿದ್ದಾರೆ (ಪ್ರ.ವಾ., ನ. 21).

ಮಧ್ಯಮ ಮಾರ್ಗಕ್ಕೆ ಎಡ ಮತ್ತು ಬಲಪಂಥೀಯ ವಿಚಾರಧಾರೆಗಳನ್ನು ನಿಗ್ರಹಿಸುವ ಶಕ್ತಿಯಿದೆ ಎಂದಾದರೆ, ಈ ಮಧ್ಯಮ ಮಾರ್ಗವೆಂದರೇನು? ದಲಿತರು, ದಮನಿತರು, ಮಹಿಳೆಯರ ಶೋಷಣೆಗೆ ಮಧ್ಯಮ ಮಾರ್ಗದ ಪರಿಹಾರವೇನು? ಸಮಾಜದಲ್ಲಿ ನಡೆಯುವ ಅನಾಚಾರ, ಅಸಮಾನತೆ, ಶೋಷಣೆ ಮತ್ತು ಬಂಡವಾಳಶಾಹಿಗಳ ಅಮಾನವೀಯ ನಡೆಗಳ ವಿರುದ್ಧ ಹೋರಾಡುವ ಶಕ್ತಿ ಮಧ್ಯಮ ಮಾರ್ಗಿಗಳಿಗಿದೆಯೇ? ಇದುವರೆಗೂ ಮಧ್ಯಮ ಮಾರ್ಗಿಗಳು ಸಮಾನತೆಯ ಪರವಾಗಿ ಮಾತನಾಡಿದ್ದಾರೆಯೇ? ಈ ಮಾರ್ಗಕ್ಕಿರುವ ನಿಖರವಾದ ಸಿದ್ಧಾಂತವೇನು? ಅಧ್ಯಯನ ಮಾಡಲು ಅದು ಎಲ್ಲಿ ಸಿಗುತ್ತದೆ?

ಪ್ರಭುತ್ವವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು ಬಲಪಂಥೀಯರ ಮಾರ್ಗ. ಬಲಪಂಥೀಯರ ತತ್ವ ಸಿದ್ಧಾಂತಗಳು ಅಮಾನವೀಯ ಮತ್ತು ಅವೈಜ್ಞಾನಿಕವಾಗಿದ್ದರೂ, ಈ ಮಾರ್ಗ ಅನುಸರಿಸುವ ಬಲಪಂಥೀಯರು ಅದಕ್ಕೆ ಬದ್ಧರಾಗಿರುತ್ತಾರೆ. ಅವರವರ ಧಾರ್ಮಿಕ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಅವು ಹೇಳುವ ಎಲ್ಲಾ ತತ್ವಗಳನ್ನು ಪರಿಪಾಲಿಸುವ ಕುರುಡು ನಂಬಿಕೆ ಇರುತ್ತದೆ. ಗಾಢವಾದ ಈ ಕುರುಡು ನಂಬಿಕೆಯೇ ಅವರ ಬದ್ಧತೆಯ ಲಕ್ಷಣ.

ಹಾಗಾಗಿಯೇ ಅವರು ಧರ್ಮದ ಹೆಸರಿನಲ್ಲಿ ಯಾವುದೇ ಅಮಾನುಷ ಕೃತ್ಯ ಎಸಗಲು ಹಿಂಜರಿಯುವುದಿಲ್ಲ. ಆದರೆ, ಪ್ರಭುತ್ವದ ರಕ್ಷಣೆಯಲ್ಲಿ ಸುಖವಾಗಿರಲು ಬಯಸುವ ಮಧ್ಯಮ ಮಾರ್ಗಿಗಳಿಗೆ ಬಲಪಂಥೀಯರಿಗೆ ಇರುವಂಥ ಸ್ಪಷ್ಟತೆ ಇದೆಯೇ? ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರನ್ನು ಬೀದಿಗೆಳೆದು ಕೊಲ್ಲುವುದು ಬಲಪಂಥೀಯ ವಿಚಾರಗಳ ಒಂದು ಅಭಿವ್ಯಕ್ತಿಯಷ್ಟೆ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಮಹಿಳೆಯರ ಅಭಿವ್ಯಕ್ತಿಯ ಮೇಲೆ ನಡೆಸುವ ದೌರ್ಜನ್ಯ, ಕೇಸರಿ ಶಾಲು, ಬುರ್ಖಾ ನಡುವಿನ ಅನಾರೋಗ್ಯಕರ ಪೈಪೋಟಿ, ಇತರ ಧರ್ಮೀಯರ ಸಾಮೂಹಿಕ ಕೊಲೆಗಳು ಮುಂತಾದ ಧಾರ್ಮಿಕ ಮೂಲಭೂತವಾದದ ನಡವಳಿಕೆಗಳನ್ನು ಖಡಾಖಂಡಿತವಾಗಿ ಧಿಕ್ಕರಿಸಲು ಮಧ್ಯಮ ಮಾರ್ಗಿಗಳಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಮಧ್ಯಮ ಮಾರ್ಗ ಯಾವುದನ್ನೂ ವಿರೋಧಿಸುವುದಿಲ್ಲ. ಹೆಚ್ಚು ಸಂದರ್ಭಗಳಲ್ಲಿ ಮೌನ ವಹಿಸುತ್ತದೆ.

ಯಾವುದೇ ವಿಷಯವನ್ನು ವಿರೋಧಿಸಲು ಸಾಧ್ಯವಾಗುವುದು ಆ ವಿಷಯದ ಬಗ್ಗೆ ಸ್ಪಷ್ಟ ಅರಿವು ಮತ್ತು ನಿಲುವು ಇದ್ದಾಗ. ಮಧ್ಯಮ ಮಾರ್ಗಿಗಳಿಗೆ ಕೆಲವು ಗೊಂದಲಗಳಿರುತ್ತವೆ: ಧರ್ಮದ ಹೆಸರಿನಲ್ಲಿ ನಡೆಯುವ ಘಟನೆಗಳು ಎಷ್ಟೇ ಅಮಾನವೀಯವಾಗಿರಲಿ ಅವು ಧಾರ್ಮಿಕ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ರಿಯಾಯಿತಿ ಪಡೆಯುತ್ತವೆ. ಧಾರ್ಮಿಕ ಮೂಢನಂಬಿಕೆಗಳು ಇಂದಿನ ವೈಜ್ಞಾನಿಕ ಯುಗದಲ್ಲೂ ಉಸಿರಾಡುತ್ತಿರುವುದೇ ಇದಕ್ಕೆ ಸಾಕ್ಷಿ.

21ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ಹೊಂದಿರುವ ನಾಗರಿಕ ದೇಶಗಳಲ್ಲಿ ಈಗ ಸ್ವಲ್ಪವಾದರೂ ಶಾಂತಿ ಸಾಮರಸ್ಯವಿರುವುದು ವಿಜ್ಞಾನ ಮತ್ತು ವೈಚಾರಿಕ ತಿಳಿವಳಿಕೆಯಿಂದಲೇ ಹೊರತು ಧರ್ಮದಿಂದಲ್ಲ. ಈ ವೈಚಾರಿಕ ಚಿಂತನೆಗೆ ಅವಕಾಶವಿರುವುದು ಎಡಪಂಥೀಯ ಮಾರ್ಗದಲ್ಲಿ. ಆದ್ದರಿಂದಲೇ ಈ ಮಾರ್ಗ ಕಾಲಕಾಲಕ್ಕೆ ತಕ್ಕಂತೆ ತನ್ನ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುತ್ತದೆ. ಇತ್ತ ಬಲಪಂಥೀಯರ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ತತ್ವಗಳಿಗೂ ನಿಷ್ಠೆ ತೋರದ, ಅತ್ತ ಎಡಪಂಥದ ಬೆನ್ನೆಲುಬುಗಳಾದ ವೈಜ್ಞಾನಿಕ- ವೈಚಾರಿಕ ತತ್ವಗಳಿಗೂ ನಿಷ್ಠೆ ತೋರದ ಮಧ್ಯಮ ಮಾರ್ಗಿಗಳ ನಿರಂತರವಾದ ಸೈದ್ಧಾಂತಿಕ ಅಸ್ಥಿರತೆಯ ಸ್ಥಿತಿ ವ್ಯಥೆ ಮೂಡಿಸುತ್ತದೆ.

ತನ್ನ ಅನುಕೂಲಕ್ಕೆ ತಕ್ಕಂತೆ ಸಿದ್ಧಾಂತಗಳಿಗೆ ವಾಲಿಕೊಳ್ಳುವ ಮಧ್ಯಮ ಮಾರ್ಗ ಒಂದು ಸಮಾಜದ ಸ್ಪಷ್ಟ ಅಭಿವ್ಯಕ್ತಿಯನ್ನು ಕೊಲ್ಲುತ್ತದೆ. ಆ ಮೂಲಕ ಸಮಾಜದ ನಾಗರಿಕ ಮನಸ್ಸಿನಲ್ಲಿ ಕ್ರಮೇಣವಾಗಿ ಅವೈಜ್ಞಾನಿಕ, ಅನಾಗರಿಕ, ಮತೀಯ ದ್ವೇಷದ ವಿಚಾರಗಳನ್ನು ತುಂಬುತ್ತದೆ. ಇದನ್ನು ಈಗಾಗಲೇ ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಪ್ರಭುತ್ವದ ಯಾವುದೇ ಶೋಷಣೆಯ ವಿರುದ್ಧ ಸಂವಿಧಾನಬದ್ಧ ದನಿ ಎತ್ತಿದರೂ ದೇಶದ್ರೋಹಿ ಎಂಬ ಹಣೆಪಟ್ಟಿ ಕ್ಷಣಾರ್ಧದಲ್ಲಿ ಸಿಗುತ್ತದೆ.

ಪ್ರಜಾಪ್ರಭುತ್ವದ ಮುಖ್ಯ ಲಕ್ಷಣವಾದ ಅಭಿವ್ಯಕ್ತಿ ಸ್ವಾತಂತ್ರ್ಯವೇ ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಅಗತ್ಯವಾಗಿ ಬೇಕಾಗಿರುವುದು ಅಡ್ಡಗೋಡೆಯ ಮೇಲೆ ದೀಪವಿಡುವ ಅವಕಾಶವಾದಿ ವಿಚಾರಗಳಲ್ಲ. ಪ್ರಭುತ್ವದ ಶೋಷಣೆಯ ವಿರುದ್ಧ ಹೋರಾಡುವ ಶಕ್ತಿ ಇರುವುದು ಎಡಪಂಥೀಯ ವಿಚಾರಗಳಿಗೆ ಮಾತ್ರ ಎಂಬುದನ್ನು ಮನಗಾಣಬೇಕಾಗಿದೆ. ಕಾರ್ಲ್ ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ ಇನ್ನಿತರರ ಸಿದ್ಧಾಂತಗಳೆಲ್ಲವೂ ಸಮಾನವಾಗಿ ಪ್ರಭುತ್ವದ ಶೋಷಣೆಯ ವಿರುದ್ಧ ದನಿ ಎತ್ತುವ ಶಕ್ತಿಯನ್ನು ಜನರಿಗೆ ನೀಡಿವೆ. ಸಮಾನತೆ ಮತ್ತು ಮಾನವೀಯತೆ ಉಳಿಯಬೇಕಾದರೆ; ಜಾತಿಪದ್ಧತಿ ಮತ್ತಿತರ ಅನಿಷ್ಟಗಳನ್ನು ಹೋಗಲಾಡಿಸಬೇಕಾದರೆ ನಮಗೆ ಉಳಿದಿರುವುದು ವೈಜ್ಞಾನಿಕ- ವೈಚಾರಿಕ ಚಿಂತನೆಗಳಿಗೆ ಅನುವು ಮಾಡಿಕೊಡುವ ಎಡಪಂಥೀಯ ಮಾರ್ಗ ಮಾತ್ರ.
- ಡಾ. ಸುಶಿ ಕಾಡನಕುಪ್ಪೆ

ಹೊಸ ಪಂಥಕ್ಕೆ ನಾಂದಿ
ನವ್ಯೋತ್ತರ ಸಾಹಿತ್ಯ ಪಂಥಗಳಾದ ದಲಿತ, ಬಂಡಾಯ, ಮಹಿಳಾ ಇತ್ಯಾದಿ ಆದಮೇಲೆ ಇನ್ನೇನು ಎಂಬುದು ಬಹುಮುಖ್ಯ ಪ್ರಶ್ನೆಯಾಗಿತ್ತು. ಯಾವುದೇ ಸಾಹಿತ್ಯ ಪಂಥದ ಹುಟ್ಟಿನ ಹಿಂದೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳಿರುತ್ತವೆ. ಇಂದಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬಿಕ್ಕಟ್ಟುಗಳು ಮತ್ತು ತಲ್ಲಣಗಳು ಯಾವುವು? ಅವುಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ನಮಗೆ ಬೇಕಾದ ಜೀವಪರವಾದ ಪಂಥ ಯಾವುದು ಎಂಬಂಥ ಮಹತ್ವದ ವಾಗ್ವಾದಗಳಿಗೆ ಆಳ್ವಾಸ್ ನುಡಿಸಿರಿ- 2016 ವೇದಿಕೆಯಾಯಿತು.

ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎನ್.ಸುಮಿತ್ರಾಬಾಯಿ ಅವರು ತಮ್ಮ ಆಶಯ ಭಾಷಣದಲ್ಲೇ ಇದರ ಸುಳಿವನ್ನು ನೀಡಿದರು. ‘... ಕವಿಗಿಂತಲೂ ಕಾವ್ಯ ಮುಖ್ಯ. ಕಲಾವಿದನಿಗಿಂತ ಅವನು ಸೃಷ್ಟಿಸಿದ ಕಲೆ ಮುಖ್ಯ. ಆದರೆ ಅಂತಹ ಮಾನಸಿಕ ಪರಿಪಕ್ವತೆಗೆ ಈಗಿರುವ ಅಡ್ಡಿಗಳೇನು? ವಿಚಾರ ಕ್ರಾಂತಿಗೆ ಆಹ್ವಾನ ನೀಡಿ ವಿಶ್ವಮಾನವ ತತ್ವವನ್ನು ಸಾರಿದ ಕುವೆಂಪು ಅಂತಹವರನ್ನು ‘ಒಕ್ಕಲಿಗರ ಆಸ್ತಿ’ಎಂದು ನೋಡುವುದು, ಬೇಂದ್ರೆಯವರಂತಹ ಸಾರ್ವಕಾಲಿಕ ದಾರ್ಶನಿಕ ಕವಿಯನ್ನು ‘ಬ್ರಾಹ್ಮಣ ಡಾನ್’ ಎಂದು ಭಾವಿಸುವುದು, ಹಾಗೆಯೇ ಕನಕದಾಸರನ್ನು ಕುರುಬರ ‘ಕುಲದ ಸಂತ’ನೆನ್ನುವುದು, ಕಾಳಿದಾಸ, ವ್ಯಾಸ, ವಾಲ್ಮೀಕಿ ಮೊದಲಾದವರನ್ನು ಕುರುಬರು, ಬೆಸ್ತರು, ಬೇಡರ ಕವಿಗಳೆಂದು ತಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳುವುದು ಮುಂತಾದ ವಿಲಕ್ಷಣ, ವಿಕೃತ ವ್ಯಕ್ತಿ ಆರಾಧನೆಯು ಪ್ರಜ್ಞೆಯ ಒಂದು ಅಸಮಗ್ರತೆಯನ್ನು ಸೂಚಿಸುವುದೇ ಹೊರತು ಆಯಾ ಜನಸಮುದಾಯಗಳ ಪ್ರಜ್ಞಾವಂತಿಕೆಯ ಲಕ್ಷಣವನ್ನಲ್ಲ’.

ಈ ಮಾತುಗಳು ಸಾಹಿತ್ಯ ಕ್ಷೇತ್ರದ ಇಂದಿನ ತಾತ್ವಿಕ ಬಿಕ್ಕಟ್ಟನ್ನು ಮತ್ತು ಸಾಮಾಜಿಕ ಅನಾರೋಗ್ಯಕರ ವಿಘಟನೆಯನ್ನು ತಿಳಿಸುತ್ತವೆ. ಎಡ ಮತ್ತು ಬಲ ಎಂಬ ಪಂಥೀಯವಾಗಿ ಧ್ರುವೀಕರಣಗೊಳ್ಳುವ ಬದಲು, ತಟಸ್ಥವಾದ ಮೂರನೆಯ ಹಾದಿಯೊಂದು ನಮಗೆ ಬೇಕು ಎಂದು ಅಧ್ಯಕ್ಷರ ಮಾತು ನಮಗೆ ತಿಳಿಸಿಕೊಡುತ್ತದೆ.
ಮೇಲಿನ ತಾತ್ವಿಕ ಚರ್ಚೆಯನ್ನು ಮುಂದುವರಿಸಿ ಅರ್ಥಪೂರ್ಣಗೊಳಿಸಿದವರು ಗಿರಡ್ಡಿ ಗೋವಿಂದರಾಜ ಅವರು.

‘... ಇವತ್ತು ಸಾಹಿತ್ಯ ವಲಯದಲ್ಲಿ ಅತೀ ಎಡ ಮತ್ತು ಅತೀ ಬಲ ಎಂಬ ಭಯೋತ್ಪಾದಕರಿಂದ ಸಾಹಿತ್ಯ, ಸಂಸ್ಕೃತಿಗೆ ಅಪಾಯ ಒದಗಿದೆ. ಇವತ್ತು ನಮಗೆ ಬೇಕಾಗಿರುವುದು ಮಧ್ಯಮ ಸುವರ್ಣ ಮಾರ್ಗ’ ಎಂದು ಹೇಳಿದರು. ಎಲ್ಲಾ ಸಾಹಿತಿಗಳು ಮತ್ತು ಸಮಾಜ ಚಿಂತಕರು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
- ಟಿ.ಎ.ಎನ್.ಖಂಡಿಗೆ, ಮೂಡುಬಿದಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.