ವಿಮರ್ಶಕ ಗಿರಡ್ಡಿ ಗೋವಿಂದರಾಜ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಮಧ್ಯಮ ಮಾರ್ಗವೆಂದರೇನು, ಸಮಾಜದ ಸಮಸ್ಯೆಗಳಿಗೆ ಇವರ ಪರಿಹಾರವೇನು, ಸಿದ್ಧಾಂತವೇನು’ (ಪ್ರ.ವಾ., ಸಂಗತ, ನ. 24) ಎಂದು ಸುಶಿ ಕಾಡನಕುಪ್ಪೆ ಕೇಳಿದ್ದಾರೆ. ಅದಕ್ಕೆ ಉತ್ತರಿಸುತ್ತ ಪ್ರಸನ್ನ ಅವರು ತಮ್ಮ ಲೇಖನದ ಪ್ರಾರಂಭದಲ್ಲಿ ‘ಬುದ್ಧ ಮಧ್ಯಮಮಾರ್ಗ ಬೋಧಿಸಿದ’ ಎನ್ನುತ್ತ, ‘ಬುದ್ಧನೂ ಎಡಪಂಥೀಯನೇ’ ಎಂದು ಬರೆದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ (ಪ್ರ.ವಾ., ಚರ್ಚೆ, ನ. 25).

ಮೊದಲಿಗೆ, ಎಡ ಮತ್ತು ಬಲ ಪಂಥಗಳನ್ನು ಒಪ್ಪಿದಾಗ ಮಾತ್ರ ಮಧ್ಯಮಮಾರ್ಗ ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಭಾರತೀಯ ಚಿಂತನೆ ಅನಾದಿ ಕಾಲದಿಂದಲೂ ಸಮಗ್ರವಾದ ಪರ್ಯಾಯ ಧಾರೆಗಳಿಗೆ ಜನ್ಮ ನೀಡುತ್ತ ಬಂದಿದೆಯೇ ವಿನಾ ಎಡ-ಬಲ ಎಂದು ಪಾರ್ಶ್ವಿಕವಾಗಿ ಅಸಮಗ್ರವಾಗಿ ಎಂದೂ ವಿಭಜನೆಗೊಂಡಿರಲಿಲ್ಲ.

ಈ ಪರ್ಯಾಯಧಾರೆಯ ಕುರಿತೇ ಆನಂದವರ್ಧನ ‘ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ | ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ||’ (ಕೊನೆಮೊದಲಿರದ ಕಾವ್ಯಜಗತ್ತಿನಲ್ಲಿ ಕವಿಯೇ ಅಪರಬ್ರಹ್ಮನಾಗಿರುವನು. ಅವನಿಚ್ಛೆಯಂತೆ ಲೋಕ ಪರಿವರ್ತನೆಗೊಳ್ಳುತ್ತದೆ, ಅವನು ಸರ್ವಸ್ವತಂತ್ರ) ಎಂದಿದ್ದು ಮತ್ತು ಕುವೆಂಪು ‘ನೃಪತುಂಗನೇ ಚಕ್ರವರ್ತಿ, ಪಂಪನಿಲ್ಲಿ ಮುಖ್ಯಮಂತ್ರಿ | ರನ್ನ, ಜನ್ನ, ನಾಗವರ್ಮ ರಾಘವಾಂಕ ಹರಿಹರ || ಬಸವೇಶ್ವರ ಷಡಕ್ಷರ: ಸರಸ್ವತಿಯೇ ರಚಿಸಿದೊಂದು | ನಿತ್ಯ ಸಚಿವ ಮಂಡಲ ತನಗೆ ರುಚಿರ ಕುಂಡಲ ||’ ಎಂಬ ಸಾಲುಗಳನ್ನು ಹಾಡಿದ್ದು.

ಬುದ್ಧ, ಅಲ್ಲಮ, ಬಸವ, ಜೆ.ಕೃಷ್ಣಮೂರ್ತಿ ಮುಂತಾದ ಅನುಭಾವಿಗಳು ತಮ್ಮ ಕಾಲದ ಪ್ರತಿಷ್ಠಿತ ಶಕ್ತಿಗಳೊಂದಿಗೆ (ವೈದಿಕ, ಜೈನ, ಕಮ್ಯೂನಿಸಂ, ಸೈಕೊ ಅನಾಲಿಸಿಸ್ ಇತ್ಯಾದಿ...) ಇಂದಿನ ಎಡ–ಬಲ ಪಂಥೀಯರಂತೆ ದಾಯಾದಿ ಕಲಹಕ್ಕಿಳಿಯದೆ ಅವನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಪರ್ಯಾಯ ಪ್ರಸ್ಥಾನಗಳನ್ನು ಕಟ್ಟಿಕೊಟ್ಟಿದ್ದರು. ನಿಮ್ಮ ಬಳಿ ಅಧಿಕಾರವಿದೆ, ಅದು ನನಗೂ ಬೇಕು ಎಂಬ ಬೇಡಿಕೆಯೇ ಎಡಪಂಥದ ಹುಟ್ಟಿಗೆ ಕಾರಣವಾಗಿದೆ. ನಮ್ಮ ಅನುಭಾವಿಗಳು ಇಂತಹ ಬೇಡಿಕೆ, ಕಕ್ಕುಲತೆಗಳಿಗೆ ಎಂದೂ ಒಳಗಾದವರಲ್ಲ. ನಿಜವೇನೆಂದರೆ ಅವರು ತಮ್ಮ ಕಾಲದ ‘ಪ್ರತಿಷ್ಠಿತ ಶಕ್ತಿ’ಗಳಿಗೆ ಇಂದಿನವರಂತೆ ಕಿಲುಬು ಕಾಸಿನ ಬೆಲೆಯನ್ನೂ ನೀಡುತ್ತಿರಲಿಲ್ಲ.

ಆದರೆ ಸ್ವಾತಂತ್ರ್ಯಾನಂತರ ಅಡಿಗ, ಲಂಕೇಶ್, ಅನಂತಮೂರ್ತಿ, ತೇಜಸ್ವಿ ಮುಂತಾದವರು ಲೋಹಿಯಾವಾದದ ಪ್ರಭಾವದಿಂದ ಸಾಹಿತ್ಯ ರಚನೆ ಮಾಡಿದರಾದರೂ ತಮ್ಮ ಅನನ್ಯತೆಯನ್ನು ನಾಶ ಮಾಡಿಕೊಳ್ಳಲಿಲ್ಲ. ಲೇಖಕನಾದವನಿಗೆ ರಾಜಕೀಯ ಪ್ರಜ್ಞೆ ಅತ್ಯಗತ್ಯ ಎಂಬ ವಿಚಾರವನ್ನು ಅವರು ಒಪ್ಪಿದ್ದರಾದರೂ ಆ ವಿಚಾರ ಜಡ ಸಿದ್ಧಾಂತವಾಗಲು ಆಸ್ಪದ ನೀಡಿರಲಿಲ್ಲ. ‘ಎ.ಕೆ. ರಾಮಾನುಜನ್‌ಗೆ ರಾಜಕೀಯ ಪ್ರಜ್ಞೆಯೇ ಇರಲಿಲ್ಲ’ ಎಂದು ಬರೆದಿರುವ ಲಂಕೇಶರು ರಾಮಾನುಜನ್‌ರ ಪ್ರೌಢ ಪ್ರತಿಭೆ ಹಾಗೂ ವಿದ್ವತ್ತುಗಳನ್ನು ಸದಾ ಗೌರವಿಸುತ್ತಿದ್ದರು.

ತನ್ನ ನಂಬಿಕೆ ಸಿದ್ಧಾಂತವಾಗಬಾರದೆಂದೇ ಲಂಕೇಶ್ ರಾಜಕೀಯ ಬರವಣಿಗೆಗಳ ಮಧ್ಯೆಯೂ ಜೆನ್ ಹಾಯ್ಕುಗಳನ್ನು ಹೋಲುವ ನೀಲು ಪದ್ಯಗಳ ಮೂಲಕ ಕಾವ್ಯದ ಸೆಳೆತವನ್ನು ಉಳಿಸಿಕೊಂಡರು. ತೇಜಸ್ವಿ ಸಾಮಾಜಿಕವಾಗಿ ಕ್ರಿಯಾಶೀಲರಾಗಿ ಇದ್ದಾಗಲೂ ಪ್ರಕೃತಿಯ ವಿಸ್ಮಯಗಳಿಗೆ ಸದಾ ತೆರೆದುಕೊಂಡಿದ್ದರು, ಅನಂತಮೂರ್ತಿ ತಮ್ಮ ಸಾರ್ವಜನಿಕ ಚಿಂತನೆಯ ನಡುವೆಯೂ ಪೂರ್ವದ ಪಥಧರ್ಮಗಳನ್ನು, ಆಧ್ಯಾತ್ಮಿಕ ಹಸಿವನ್ನು ಮತ್ತೆ ಮತ್ತೆ ನೆನೆಯುತ್ತಿದ್ದರು.

ಹಾಗೆ ನೋಡಿದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಕುವೆಂಪು ಮತ್ತು ಬೇಂದ್ರೆ ತಟಸ್ಥ ನಿಲುವನ್ನೇ ಹೊಂದಿದ್ದರು. ತಮ್ಮ ಕಾರ್ಯಕ್ಷೇತ್ರದ ಮಿತಿಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದ ಅವರು ಕಲೆ, ಸಾಹಿತ್ಯ, ತತ್ವಶಾಸ್ತ್ರಗಳಾಚೆಗಿನ ಲೋಕದ ಚರ್ಚೆಗಳಲ್ಲಿ ದೇಶಾವರಿಯಾಗಿ ತೊಡಗುತ್ತಿರಲಿಲ್ಲ. ಸಾಹಿತಿಯಾದವನು ರಾಜಕೀಯ ಆಗುಹೋಗುಗಳಿಗೂ ಸ್ಪಂದಿಸಬೇಕು ಎಂಬ ಅಪೇಕ್ಷೆ, ಒಬ್ಬ ಅರ್ಥಶಾಸ್ತ್ರಜ್ಞ ಕಾವ್ಯಪ್ರಜ್ಞೆ ಅಥವಾ ಕಲಾಭಿರುಚಿಯನ್ನೂ ಹೊಂದಿರಬೇಕು ಎಂಬಷ್ಟೇ ಅಸಂಬದ್ಧವಾದ ಅಪೇಕ್ಷೆಯಾಗಿದೆ.

ಪಂಪ, ಬಸವರಿಂದ ಮೊದಲ್ಗೊಂಡು ಕುವೆಂಪು, ಬೇಂದ್ರೆಯವರೆಗೆ ಕನ್ನಡದ ಎಲ್ಲ ಪ್ರತಿಭೆಗಳೂ, ಇಂದಿನ ಎಡಪಂಥೀಯರಿಗಿಂತಲೂ ಹೆಚ್ಚು ಕೌಶಲಪೂರ್ಣವಾಗಿ, ಪ್ರಾಮಾಣಿಕವಾಗಿ, ಪ್ರಭುತ್ವದೊಂದಿಗೆ ಒಂದು ಅಂತರವನ್ನು ಕಾಪಾಡಿಕೊಂಡಿದ್ದರು. ಸಾಮಾಜಿಕ ಬದ್ಧತೆಯುಳ್ಳವರು ರಾಜಕೀಯ ಪ್ರಜ್ಞೆಯಲ್ಲದಿದ್ದರೂ ಕೊನೆಯ ಪಕ್ಷ ಈ ಪಾವಿತ್ರ್ಯ ಮತ್ತು ನಿರ್ಲಿಪ್ತತೆ ಉಳಿಸಿಕೊಂಡರೆ ಅಷ್ಟೇ ಸಾಕೆನಿಸುತ್ತದೆ.

ಪ್ರಭುತ್ವದಿಂದ ಸದಾ ದೂರವಿರಬೇಕು, ಅಂತರ ಕಾಯ್ದುಕೊಳ್ಳಬೇಕು ಎಂದೆಲ್ಲ ಉಪದೇಶಿಸುವ ಎಡಪಂಥೀಯ ನಾಯಕರು, ಇಂದು ಪ್ರಭುತ್ವದೊಂದಿಗೆ ಸಮಸ್ಯೆಯೇ ಇಲ್ಲದಂತೆ ರಾಜಿ ಮಾಡಿಕೊಳ್ಳುತ್ತಿರುವುದು, ಪ್ರಭುತ್ವ ನೀಡುವ ಸ್ಥಾನಮಾನಗಳಿಗಾಗಿ ಹಪಹಪಿಸುತ್ತಿರುವುದು ದುರದೃಷ್ಟಕರ. ‘ಮಧ್ಯಮಮಾರ್ಗಕ್ಕೆ ಅನಾಚಾರ, ಅಸಮಾನತೆ, ಜಾತೀಯತೆಯ ವಿರುದ್ಧ ಹೋರಾಡುವ ಶಕ್ತಿ ಇದೆಯೇ?’ ಎಂದು ಪ್ರಶ್ನಿಸುವ ಎಡಪಂಥೀಯರು ತಾವು ಅವುಗಳ ವಿರುದ್ಧ ಸತತವಾಗಿ ಏಳು ದಶಕಗಳ ಕಾಲ ಹೋರಾಟ ನಡೆಸಿಯೂ ಏಕೆ ವಿಫಲರಾದೆವು ಎಂದು ಕೇಳಿಕೊಳ್ಳುವುದಿಲ್ಲವಲ್ಲ!

ಇಂದು ಎಲ್ಲ ಎಡಪಂಥೀಯರೂ ‘ಬುದ್ಧಿಜೀವಿ’ ಎಂದು ಕರೆಸಿಕೊಳ್ಳಲು ಕಾರಣ ಇಲ್ಲದಿಲ್ಲ. ಕ್ರಿಯಾಶೀಲರಾಗದವರು ಮಾತ್ರ ಆ ಕೊರತೆ ನೀಗಿಸಿಕೊಳ್ಳಲು ಬೌದ್ಧಿಕ ನೆಲೆಯಲ್ಲಿ ಅಮೂರ್ತ ಚರ್ಚೆಗಳಲ್ಲಿ ತೊಡಗುವರು. ಇಲ್ಲದ ಶತ್ರುವನ್ನು ಇರುವಂತೆ ಭ್ರಮಿಸಿ ಹೌಹಾರುವರು. ಮಂದಿಯ ಮಧ್ಯದಿಂದ ದೂರ ಸರಿದು ವಿಶ್ವವಿದ್ಯಾಲಯ, ಅಕಾಡೆಮಿ ಮುಂತಾದ ಗವಿಗಹ್ವರಗಳಿಗೆ ಎಡತಾಗುವರು.

ಜೆ. ಕೃಷ್ಣಮೂರ್ತಿ ತಮ್ಮ ಒಂದು ಪ್ರವಚನದಲ್ಲಿ ‘See the false as false or the truth in the false’ (ಸುಳ್ಳನ್ನು ಸುಳ್ಳಿನಂತೆ ಕಾಣು, ಸುಳ್ಳಿನ ಸತ್ಯವನ್ನು ಮನಗಾಣು) ಎಂದು ಕರೆ ನೀಡಿರುವರು. ಸುಳ್ಳನ್ನು ಸುಳ್ಳೆಂದು ಕಂಡರೆ ಸಾಲದೇ? ಆದರೆ ಬುದ್ಧಿಜೀವಿಗಳಿಗೆ ಅದು ಸಾಲುವುದಿಲ್ಲ; ಪ್ರತಿಷ್ಠಿತ ಶಕ್ತಿಗಳೊಂದಿಗೆ ವಾದಿಸುವ ಉಮೇದು ಬೆಳೆಸಿಕೊಂಡ ಪಶ್ಚಿಮದ ಅಕಾಡೆಮಿಕ್ ಚಿಂತಕರು ಸುಳ್ಳನ್ನೇ ಸತ್ಯವೆಂದು ಬಗೆದು ‘ಸತ್ಯೋತ್ತರ ಸತ್ಯ’ದ ಹುಡುಕಾಟಕ್ಕೆ ಹೊರಡುವರು.

‘ಸತ್ಯ’ದ, ‘ಉತ್ತರೋತ್ತರ ಸತ್ಯ’ದ ವ್ಯಾಖ್ಯಾನ ಸರಣಿಯನ್ನು ಪೋಣಿಸ ಹೊರಡುವ ಅಕಾಡೆಮಿಕ್ ಚಿಂತನೆಗಳು ಬಹಳಷ್ಟು ಸಲ ಹುಲುಮಾನವರ ವಾಸ್ತವವನ್ನು ನೇರವಾಗಿ ಕಾಣಲಾರವು, ಅವರ ಬದುಕನ್ನು ರೂಪಿಸಿ ಕೊಡಲಾರವು. ಇಂದು ಎಡ ಮತ್ತು ಬಲ ಪಂಥಗಳೆರಡೂ ಪ್ರತಿಷ್ಠೆ, ಸ್ಥಾನಮಾನಗಳಿಗೆ ಸಮಾನವಾಗಿ ಹಾತೊರೆಯುತ್ತಿರುವ ಕಾರಣ ಶ್ರೀಸಾಮಾನ್ಯನ ಕಣ್ಣಿಗೆ ಅವೆರಡೂ ಒಂದೇ ರಕ್ತ ಹಂಚಿಕೊಂಡ ದಾಯಾದಿಗಳ ಹಾಗೆ ಕಾಣಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.