‘ಏ ನ್ ಸ್ವಾಮಿ ಹೀಗಿದ್ದೀರಿ... ಎಷ್ಟು ದಿನವಾಯಿತು ಈ ಕಡೆ ಬಂದು’ ಎಂಬ ಕಂಚಿನ ಕಂಠ ದೂರವಾಣಿಯ ಮೂಲಕ ಮೊಳಗಿದರೆ ಅದು ಸುಬ್ಬಣ್ಣನವರ ಧ್ವನಿ ಎಂದೇ ಅರ್ಥ. ಒಂದು ಕಾಲದಲ್ಲಿ ಈ ದೂರವಾಣಿ ಕರೆಗಳು ನನ್ನ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಸುಬ್ಬಣ್ಣವರ ಮಾತು ಎಂದರೆ ಒಂದು ರೀತಿಯಲ್ಲಿ ಹಾಡೇ. ಅದು ಲಹರಿ ಹರಿದಂತೆ, ಮಧ್ಯೆ, ಮಧ್ಯೆ ಹಾಡುಗಳಂತೂ ತೀರಾ ಸಾಮಾನ್ಯ. ಒಂದು ಸಲವಂತೂ ಅವರು ಸರಿಸುಮಾರು ಒಂದು ಗಂಟೆಯ ಅಂತರಲ್ಲಿ ಆರು ಸಲ ಪೋನ್ ಮಾಡಿದ್ದರು. ಅವರ ಮನೆಯಿಂದ ನಮ್ಮ ಮನೆಗೆ ಬರೀ ಎರಡು ಕಿಲೋ ಮೀಟರ್ ಅಂತರ. ‘ಸರ್, ಹೇಳಿದ್ದರೆ ಮನೆಗೇ ಬರುತ್ತಿದ್ದೆ’ ಎಂದರೆ ‘ಅಯ್ಯೋ ಅನ್ನಿಸಿದ್ದನ್ನು ಆ ಕೂಡಲೇ ಹೇಳಬೇಕು, ನೀನು ಬರೋವರೆಗೆ ಕಾಯೋಕೆ ಆಗುತ್ತೇನಯ್ಯ’ ಎಂದಿದ್ದರು. ಅದು ಸುಬ್ಬಣ್ಣ.

ಸುಬ್ಬಣ್ಣನವರಿಗೆ ಪ್ರಿಯವಾದ ಎರಡು ನೆನಪುಗಳಿದ್ದವು. ಶ್ರೇಷ್ಠ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗನಾಗಿ (1979) ಪ್ರಶಸ್ತಿಯನ್ನು ಪಡೆದ ಸಂದರ್ಭ. ಮುಂದಿನ ಸಾಲಿನಲ್ಲಿಯೇ ಕೆ.ಎ.ಅಬ್ಬಾಸ್ ಕುಳಿತಿದ್ದರು. ಸುಬ್ಬಣ್ಣನವರು ಕಾಡು ಕುದುರೆ ಹಾಡಿದ ನಂತರ ವೇದಿಕೆಯ ಬಳಿ ಬಂದ ಅಬ್ಬಾಸ್. ‘Subbanna does this song signify dance of wild horse’ ಎಂದು ಕೇಳಿದ್ದರು. ಕನ್ನಡ ಗೊತ್ತಿಲ್ಲದ ಅಬ್ಬಾಸ್ ಅವರಿಗೆ ಹಾಡಿನ ಅಂತರಾಳ ತಿಳಿದಿದ್ದು ಕಂಬಾರರ ಸಾಹಿತ್ಯದ ಶಕ್ತಿಯಿಂದ ಎನ್ನುವುದು ಸುಬ್ಬಣ್ಣನವರ ನಂಬಿಕೆ, ಅದು ಸುಬ್ಬಣ್ಣನವರ ಹಾಡಿನ ಶಕ್ತಿ ಕೂಡ ಹೌದು.

ಸುಬ್ಬಣ್ಣನವರು ಮೈಸೂರಿನಲ್ಲಿ ಓದುತ್ತಿದ್ದ ಕಾಲಕ್ಕೆ ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಬಂದಿದ್ದರು (1959). ರಾಷ್ಟ್ರಗೀತೆಯನ್ನು ಸ್ಪಷ್ಟವಾಗಿ ಹಾಡುವವರು ಬೇಕು ಎನ್ನುವುದು ನೆಹರೂ ನಿರೀಕ್ಷೆ. ಆಗ ಅಲ್ಲಿಯೇ ಓದುತ್ತಿದ್ದ ಎಚ್.ಜಿ.ಸೋಮಶೇಖರ ರಾವ್ ಸುಬ್ಬಣ್ಣನವರ ಹೆಸರನ್ನು ಸೂಚಿಸಿದರು. ಬಾಡಿಗೆ ಜುಬ್ಬಾ, ವೇಸ್ಟ್ ಕೋಟ್ ಧರಿಸಿ ಸುಬ್ಬಣ್ಣನವರು ಹಾಡುತ್ತಿದ್ದರು. ಅವರು ಕಣ್ಣುಮುಚ್ಚಿ ಹಾಡುವುದು ರೂಢಿ (ಕೊನೆಯವರೆಗೂ ಅವರು ಹಾಡುತ್ತಿದ್ದ ರೀತಿಯೇ ಹಾಗೆ). ನೆಹರೂ ಬಂದಿದ್ದು ಸುಬ್ಬಣ್ಣನವರಿಗೆ ಗೊತ್ತಾಗಲೇ ಇಲ್ಲ. ತಮ್ಮ ಪಾಡಿಗೆ ತಾವು ಹಾಡುವುದನ್ನು ಮುಂದುವರೆಸಿದ್ದರು. ವ್ಯವಸ್ಥಾಪಕರು ಸೂಚಿಸಿದ್ದು ಸುಬ್ಬಣ್ಣನವರಿಗೆ ಗೊತ್ತಾಗಲೇ ಇಲ್ಲ. ಹಾಡುವುದನ್ನು ಮುಂದುವರಿಸಲಿ ಎಂದು ನೆಹರೂ ಅವರೇ ಸೂಚಿಸಿದರು. ಹಾಡು ಮುಗಿದು ನೆಹರೂ ಬೆನ್ನು ತಟ್ಟಿದಾಗಲೇ ಸುಬ್ಬಣ್ಣನವರು ಬಾಹ್ಯ ಪ್ರಪಂಚಕ್ಕೆ ಬಂದಿದ್ದು!

ಸಂಗೀತ ಸುಬ್ಬಣ್ಣನವರಿಗೆ ಮನೆತನದಿಂದಲೇ ಬಂದ ಆಸ್ತಿ. ಅವರ ತಾತ ಶಾಮಣ್ಣನವರೂ ಗಾಯಕರಾಗಿದ್ದವರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿಯನ್ನು ಪಡೆದು ಅದನ್ನು ತಮ್ಮ ಮುಂದಿನ ಪೀಳಿಗೆಗೆ ದಾಟಿಸಿದವರು. ಸುಬ್ಬಣ್ಣನವರು ತಮ್ಮ ಆರಂಭಿಕ ಸಂಗೀತ ಪಾಠ ಕಲಿತಿದ್ದು ತಾತನಿಂದಲೇ. ಇನ್ನು ಸುಬ್ಬಣ್ಣನವರ ತಾಯಿಯ ತಂದೆ ಕೃಷ್ಣ ಉಡುಪರಿಗೆ ಎರಡು ಹವ್ಯಾಸಗಳಿದ್ದವು. ಒಂದು ಹುಲಿ ಶಿಕಾರಿ, ಇನ್ನೊಂದು ಮೃದಂಗ ನುಡಿಸುವುದು. ಸುಬ್ಬಣ್ಣನವರ ತಂದೆ ಗಣೇಶ ರಾವ್ ಪುಸ್ತಕ ಪ್ರೇಮಿ, ಮಿತ ಭಾಷಿ, ಫಾರೆಸ್ಟ್ ಡಿಪಾರ್ಟಮೆಂಟ್ನಲ್ಲಿ ಸೂಪರಿಟೆಂಡೆಂಟ್ ಆಗಿದ್ದವರು. ತಾಯಿ ರಂಗನಾಯಕಮ್ಮ ಸಂಗೀತದಲ್ಲಿ ಆಸಕ್ತಿಯುಳ್ಳವರು, ಸಜ್ಜನಿಕೆಗೆ ಹೆಸರಾದವರು. ಸುಬ್ಬಣ್ಣನವರು ಹುಟ್ಟಿದ್ದು 1938ರ ಡಿಸೆಂಬರ್ 14ರಂದು.

ಸುಬ್ಬಣ್ಣನವರ ಸಂಗೀತದ ಆಸಕ್ತಿಗೆ ಇಂಬು ನೀಡಿದ್ದು ಬಾಲ್ಯದ ವಾತಾವರಣ. ವಿದ್ಯಾ ಗಣಪತಿ ಉತ್ಸವದಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳು ಅವರ ಸಂಗೀತಾಸಕ್ತಿಗೆ ಮೂಲವಾದವು. ಬಿ.ಕಾಂ ಓದಲು ಮೈಸೂರಿಗೆ ಬಂದ ಸುಬ್ಬಣ್ಣನವರು ಮೊದಲು ಹಾಡುತ್ತಿದ್ದು ಹಿಂದಿ ಹಾಡುಗಳನ್ನೇ. ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಅಶೋಕ್ ಕುಮಾರ್ ಎನ್ನುವ ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ತೀರಿಕೊಂಡಾಗ ಅವನ ನೆನಪಿಗೆ ಏರ್ಪಾಟಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು’ ಹಾಡಿ ಬೆಳ್ಳಿ ಕಪ್ ಪಡೆದುಕೊಂಡರು. ಆಗ ಮಿತ್ರರಾಗಿದ್ದ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ ಅವರು ಭಾವಗೀತೆ ಹಾಡುವಂತೆ ಒತ್ತಾಯಿಸಿದರು. ಅದು ಸುಬ್ಬಣ್ಣನವರ ಪಾಲಿಗೆ ಮಾತ್ರವಲ್ಲ, ಕನ್ನಡದ ಪಾಲಿಗೂ ದೊಡ್ಡ ತಿರುವಾಯಿತು.

ಸುಬ್ಬಣ್ಣನವರು ವಕೀಲರಾಗಿ ಶಿವಮೊಗ್ಗದಲ್ಲಿ ನೆಲೆ ನಿಂತರು. ಮನ ಮೆಚ್ಚಿದ ಶಾಂತ ಅವರ ಕೈಹಿಡಿದು ಸಂಸಾರಿಯೂ ಆದರು. ಆಕಾಶವಾಣಿಯಲ್ಲಿ ‘ಎ’ ಗ್ರೇಡ್ ಕಲಾವಿದರಾಗಿ ಹಾಡುತ್ತಿದ್ದರು. ಲಕ್ಷ್ಮಿನಾರಾಯಣ ಭಟ್ಟರ ಒತ್ತಾಸೆಯ ಮೇರೆಗೆ ‘ಕರಿಮಾಯಿ’ ಚಿತ್ರದಲ್ಲಿ ಹಾಡಿದರು. ಆಗ ಜಿ.ಸುಬ್ರಹ್ಮಣ್ಯ ಎಂದಿದ್ದ ಅವರ ಹೆಸರು ಗುರುತಾಗದೆ ಹಾಡು ಎಸ್.ಪಿ ಖಾತೆಗೆ ಸೇರಿ ಬಿಟ್ಟಿತ್ತು. ಮುಂದೆ ‘ಕಾಡು ಕುದುರೆ’ ಸಿನಿಮಾವನ್ನು ಕಂಬಾರರೇ ಮಾಡುವಾಗ ಶಿವಮೊಗ್ಗ ಸುಬ್ಬಣ್ಣ ಎನ್ನುವ ಮರು ನಾಮಕರಣವಾಯಿತು. ಈ ಹಾಡಿಗೆ ಶ್ರೇಷ್ಠ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಒಲಿಯಿತು.

‘ರಜತ ಕಮಲ’ ಬಂದರೂ ಚಿತ್ರರಂಗ ಸುಬ್ಬಣ್ಣನವರಿಗೆ ಒಲಿಯಲಿಲ್ಲ. ಬದಲಾಗಿ ಸುಗಮ ಸಂಗೀತ ಅವರಿಗೆ ಕಾಯುತ್ತಿತ್ತು. ಸಂತ ಶಿಶುನಾಳ ಶರೀಫರ ಮೊದಲ ಹತ್ತು ಗೀತೆಗಳ ಧ್ವನಿಸುರಳಿ ಬಂದಾಗ ಸುಬ್ಬಣ್ಣ, ‘ಕೋಡುಗನ ಕೋಳಿ’, ‘ಬಿದ್ದಿಯಬ್ಬೇ’,‘ಅಳ ಬೇಡ ತಂಗಿ’ ಗೀತೆಗಳನ್ನು ಹಾಡಿದರು. ಇಲ್ಲಿಂದ ಮುಂದೆ ಭಾವಗೀತೆಗಳಲ್ಲಿ ಅವರು ಹೊಸತನವನ್ನೇ ರೂಪಿಸಿದರು. ಬೆಂಗಳೂರಿಗೆ ಬಂದರು. ಗಟ್ಟಿಯಾಗಿ ನೆಲೆಯೂರಿದರು. ಸುಬ್ಬಣ್ಣನವರದು ಕವಿ ಮನೋಧರ್ಮ. ಕವಿತೆಯ ಅಂತರ್ಯವನ್ನು ಅರಿತು ಹಾಡು ಬಲ್ಲವರು ಅವರು. ಅದಕ್ಕೆ ಕುವೆಂಪು ಒಮ್ಮೆ ಹೇಳಿದರು, ‘ಎಲ್ಲರೂ ನನ್ನ ಗೀತೆಗಳನ್ನು ಹತ್ತಿಕೊಂಡು ಹೋಗುತ್ತಾರೆ. ಆದರೆ ಸುಬ್ಬಣ್ಣ ಮಾತ್ರ ಹೊತ್ತುಕೊಂಡು ಹೋಗುತ್ತಾರೆ’. ಅವರದು ಅಪರೂಪದ ಕಂಠ. ಮಂದ್ರದಿಂದ ತಾರಕದವರೆಗೆ ವಿಹರಿಸಬಲ್ಲ ಸ್ಥಾಯಿ ಧ್ವನಿ ವಿಶೇಷ.

ಶ್ರೇಷ್ಠ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗ (1979) ಎನ್ನುವ ಹೆಗ್ಗಳಿಕೆಯ ಸುಬ್ಬಣ್ಣನವರಿಗೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ (1985) ನೀಡಿ ಗೌರವಿಸಿದೆ. ಸುಗಮ ಸಂಗೀತಕ್ಕಾಗಿ ನೀಡುವ ಸಂತ ಶಿಶುನಾಳ ಪ್ರಶಸ್ತಿ (1999), ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2008) ಅವರಿಗೆ ಸಂದ ಗೌರವಗಳು.

ಹಾಡಿನಂತೆಯೇ ಬದುಕಿದ ಸುಬ್ಬಣ್ಣನವರು ಗಾನರೂಪಿಯಾಗಿ ನಮ್ಮನ್ನು ಅಗಲಿದ್ದು 2022ರ ಆಗಸ್ಟ್ 11ರಂದು.
ಸುಬ್ಬಣ್ಣನವರಿಗೆ ಮೊಮ್ಮಗಳು ಹುಟ್ಟಿದ ಸಂದರ್ಭ. ನಾನು, ನನ್ನ ಹೆಂಡತಿಯ ಜೊತೆ ಅವರ ಮನೆಗೆ ಹೋಗಿದ್ದೆ. ನನ್ನ ಹೆಂಡತಿ ಅವರ ಮನೆಗೆ ಬಂದಿದ್ದು ಅದೇ ಮೊದಲು. ಆಗ ಅತಿ ಹೆಚ್ಚು ಸಂಭ್ರಮಪಟ್ಟವರು ಸುಬ್ಬಣ್ಣನವರೇ. ಪೆಟ್ಟಿಗೆ ತೆಗೆದು ತಮಗೆ ಬಂದಿದ್ದ ರಜತ ಕಮಲವನ್ನು ನನ್ನ ಹೆಂಡತಿಗೆ ತೋರಿಸಿ ಚಿಕ್ಕ ಮಗುವಿನ ಹಾಗೆ ಸಂಭ್ರಮಿಸಿದ್ದರು.
ಚಿಕ್ಕ ಮಗು ಎಂದೆ ಅಲ್ಲವೆ? ಸುಬ್ಬಣ್ಣನವರು ಇದ್ದಿದ್ದೇ ಹಾಗೆ. ಅವರ ಹಾಡಿನಂತೆ ಸರಳ, ನಿರ್ಮಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.