‘ಪ್ರಜಾವಾಣಿ’ ಅಂತ ಅಂದ ತಕ್ಷಣ ಅಥವಾ ಅದರ ಲಾಂಛನ ಶೀರ್ಷಿಕೆ ನೋಡಿದ ತಕ್ಷಣ, ಅದೊಂದು ವಿಶಾಲ, ವಿಕಾಸಮುಖಿ ವಿಚಾರಶಾಲೆಯಾಗಿಯೇ ಮನಸ್ಸಿಗೆ ಬರುತ್ತದೆ. ಎಂದೂ ಯಾವುದೇ ಆಮಿಷ, ಪೂರ್ವಗ್ರಹ, ಮುಲಾಜುಗಳಿಗೆ ಒಳಗಾಗದೇ ಕನ್ನಡವೆಂಬ ಮನಸ್ಸಾಕ್ಷಿಯನ್ನು ಜೀವಂತವಾಗಿ, ಜಾಗೃತವಾಗಿ ಇರಿಸುವ ಕಾಯಕವನ್ನು ವೈದ್ಯಕೀಯದಂತೆ, ಉಪಾಸನೆಯಂತೆ ನಡೆಸಿಕೊಂಡು ಬಂದ ಧೀಮಂತ ದೈನಿಕ ಇದು.

ಸಂಗ್ರಾಮ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಸಾರ್ಥಕವಾಗುವಂತೆ ಸಮಾಜವನ್ನು ಕಟ್ಟುವಲ್ಲಿ ಶಿಕ್ಷಣದ ಪಾತ್ರ ಎಷ್ಟು ಮಹತ್ವದ್ದೋ ಪತ್ರಿಕೋದ್ಯಮದ ಭೂಮಿಕೆಯೂ ಅಷ್ಟೇ ಮುಖ್ಯವಾಗಿತ್ತು. ಆ ನಿಟ್ಟಿನಲ್ಲಿ ಘನವಾದ ಕಾಯಕವನ್ನು ‘ಪ್ರಜಾವಾಣಿ’ ಮಾಡಲು ಸಾಧ್ಯವಾದದ್ದು ಅದರ ಬಹುಮುಖಿ, ಪುರೋಗಾಮಿ ನಿಲುವಿನಿಂದ. ಇದರ ಸ್ಥೈರ್ಯಕ್ಕೆ ನೀರೆರೆದ, ಮೊದಲ ಸಂಚಿಕೆಯಿಂದ ಈ ಸಂಚಿಕೆಯ ತನಕದ, 'ಸಂಪಾದಕೀಯ- ಲೇಖಕ- ವರದಿಗಾರ- ವಿತರಕ- ವಾಚಕ ' ಬಳಗದ ಎಲ್ಲರನ್ನೂ ಆಭಾರಪೂರ್ವಕವಾಗಿ ನೆನೆಯಬೇಕಾದ ಕ್ಷಣ ಇದು.

ಕೇವಲ ವರ್ತಮಾನ ಪತ್ರಿಕೆಯಾಗದೆ, ಕನ್ನಡ ವಾಙ್ಮಯ ಸಾಹಿತ್ಯದ ಹೂರಣ, ಅಭಿರುಚಿ, ಆಕಾರ, ಕಾಳಜಿ, ಅಭಿವ್ಯಕ್ತಿಗೆ ಹೊಸ ಕಿಟಕಿಗಳನ್ನು ತೆರೆದ ಹೆಗ್ಗಳಿಕೆ ‘ಪ್ರಜಾವಾಣಿ’ಯದು. ಉದಾಹರಣೆಗೆ, ಕಳೆದ ಐದಾರು ದಶಕಗಳ ಕನ್ನಡದ ಸಣ್ಣಕಥೆಗಳ ಹರಿವನ್ನು, ಗುಣಲಕ್ಷಣಗಳನ್ನು ಒಟ್ಟಾರೆ ಗಮನಿಸಿದರೆ, ಅದರ ಹಿಂದೆ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಗಳ ನೇರ, ಪರೋಕ್ಷ ಪ್ರಭಾವವನ್ನು ಮನಗಾಣಬಹುದು. ಹೇಗೆ ಒಂದು ವೃತ್ತಪತ್ರಿಕೆಯ ವಾರ್ಷಿಕ ಕಥಾ ಸ್ಪರ್ಧೆಯು ಮೂರು ಪೀಳಿಗೆಗಳ ಕಥನ ಸಾಹಿತ್ಯದ ಹಡಗಿನ ಚುಕ್ಕಾಣಿ ಹಿಡಿಯಬಲ್ಲದು ಎಂಬುದೇ ಒಂದು ಅದ್ಭುತ ಸಂಗತಿಯಾಗಿದೆ. ಇದರಲ್ಲಿ , ಪರಿಣತ ಸಂಪಾದಕೀಯ ಬಳಗದ ಮತ್ತು ಅಂತಿಮ ಹಂತದ ಅತಿಥಿ ತೀರ್ಪುಗಾರರ ಕೊಡುಗೆ ಅಮೂಲ್ಯವಾದದ್ದು. ಕಾವ್ಯ, ಕಥೆ, ವಿಡಂಬನೆ, ಪ್ರಬಂಧ, ಚಿತ್ರಲೇಖನ, ವ್ಯಂಗ್ಯಚಿತ್ರ ಮತ್ತು ಇವಕ್ಕೆಲ್ಲ ಪೂರಕವಾದ ರೇಖಾಚಿತ್ರ ಕಲೆಗಾರಿಕೆ, ಪುಟ ವಿನ್ಯಾಸ – ಇವೆಲ್ಲ ಪ್ರಕಾರಗಳಿಗೂ ಉತ್ಕೃಷ್ಟತೆಯ ಉನ್ನತ ಮಾನದಂಡವನ್ನೇ ರೂಪಿಸಿದ ಈ ಪತ್ರಿಕೆ, ಲೇಖಕರ ಜೊತೆ ರೇಖಕರನ್ನೂ (ಚಿತ್ರಕಲೆಗಾರರು), ಛಾಯಾಗ್ರಾಹಕರನ್ನೂ, ವರದಿಗಾರರನ್ನೂ ಬೆಳೆಸಿದೆ.

ಮೊಡವೆಗಳಂತೆ ಕವಿತೆಗಳೂ ಮೂಡುವ ಹರೆಯಕಾಲದಲ್ಲಂತೂ ಎಲ್ಲ ಎಳೆಯರನ್ನೂ ‘ಪ್ರಜಾವಾಣಿ’ಯ ಪುಟಗಳು ಸೆಳೆದ ರೀತಿ ಅನನ್ಯ. ‘ಪ್ರಜಾವಾಣಿ’ಯ ಪುರವಣಿಯಲ್ಲಿ ಪ್ರಕಟಗೊಳ್ಳುವ ತನಕ ನಾವು ಕವಿಗಳೇ ಅಲ್ಲ– ಎನ್ನುವ ಕಾವ್ಯ ಸಂಹಿತೆ ನಮ್ಮೆಲ್ಲರಲ್ಲಿ ರೂಢವಾಗಿತ್ತು. ಹಿರಿಯ ಸಾಹಿತಿಗಳ ಅಥವಾ ಪ್ರಾಧ್ಯಾಪಕರ ಬಳಿ ಹೋದಾಗ ಅಥವಾ ಹೊಸ ಸಾಹಿತಿಗಳ ಪರಿಚಯ ಮಾಡಿಕೊಳ್ಳುವಾಗ – ಆ ಕಡೆಯಿಂದ ‘ಪ್ರಜಾವಾಣೀಲಿ ಬಂದದೆಯೋ?’ ಎಂಬ ತೀಕ್ಷ್ಣ ಬಾಣ ನಮ್ಮೆಡೆಗೆ ಬಂದೇ ಬರುತ್ತಿತ್ತು. ‘ಪ್ರಜಾವಾಣಿ’ಯಲ್ಲಿ ಬಂದಮೇಲೆಯೆ ನಮ್ಮ ನಮ್ಮ ಖಾಸಗಿ ಶಾಪ ವಿಮೋಚನೆ ಆಗುತ್ತಿತ್ತು.

ನಮ್ಮ ನಿಲುಕಿನ ಆಚೆ ಎಲ್ಲೋ ನಡೆಯುವ, ಐಸಿಯು ಗಾಂಭೀರ್ಯದ ಸೆಮಿನಾರು, ಗೋಷ್ಠಿಗಳಿಂದ ನಮಗೆ ಸಿಗದೇ ಹೋದ ಏನೋ ಒಂದು, ‘ಪ್ರಜಾವಾಣಿ’ಯ ಸಾಪ್ತಾಹಿಕದ ಎರಡು ವಿಶಾಲ ವಿಮರ್ಶಾ ಪುಟಗಳಲ್ಲಿ ಸಿಗುತ್ತಿತ್ತು. ಆಗ ಪುಟಗಳ ಆಕಾರವೂ ಇನ್ನೂ ದೊಡ್ಡದಿತ್ತು. ಯಾರದೋ ಹೊಸ ಪುಸ್ತಕಕ್ಕೆ ಇನ್ಯಾರೋ ಹಿರಿಯರು ಬರೆದ ವಿಮರ್ಶೆ ನಮಗೂ ಸಂಬಂಧಪಡುತ್ತಿರುವಂತೆ ಅನಿಸುತ್ತಿತ್ತು. ಸಾಹಿತ್ಯ ಒಂದು ಪ್ರತ್ಯೇಕ ವ್ಯಕ್ತಿಗತ (ಎಕ್ಸ್ಕ್ಲೂಸಿವ್) ಚಟುವಟಿಕೆ ಅಲ್ಲ, ಅದೊಂದು ಸಂಯುಕ್ತ (ಇನ್ಕ್ಲೂಸಿವ್) ಮಾನವೀಯ ಕಲಾಪ ಎಂಬ ಮೌಲ್ಯ ಆ ಪುಟಗಳಲ್ಲಿ ಅನುಭವಕ್ಕೆ ಬರುತ್ತಿತ್ತು.

ರಾಜಕೀಯ, ಸಾಹಿತ್ಯಿಕ, ಸಾಮಾಜಿಕ, ವೈಜ್ಞಾನಿಕ, ಮಾನವಿಕ ವಿದ್ಯಮಾನಗಳ ಜೊತೆಗೇ ಕನ್ನಡದಲ್ಲಿ ಬಂದ ವಿವಿಧ ಕ್ಷೇತ್ರಗಳ ಹೊಸ ಅಲೆಗಳಿಗೂ ‘ಪ್ರಜಾವಾಣಿ’ ಆಯಾ ಕಾಲಕ್ಕೆ ಮುಕ್ತವಾಗಿ ಕಲ್ಪಿಸಿದ ಆವರಣ ನಮ್ಮೆಲ್ಲರನ್ನು ಅದರ ರಸಾಸ್ವಾದನೆಗೆ ತಯಾರು ಮಾಡಿತು.‘ಕಸ್ತೂರಿ ನಿವಾಸ’, ‘ನಾಗರಹಾವು’ ಚಿತ್ರಗಳಷ್ಟೇ ಉತ್ಸುಕತೆಯಿಂದ ‘ಕಾಡು’, ‘ವಂಶವೃಕ್ಷ’, ‘ಸಂಸ್ಕಾರ’, ‘ಗರಂ ಹವಾ’ ಸಿನಿಮಾಗಳನ್ನು ನೋಡಲು ಪ್ರೇರೇಪಿಸಿತು. ‘ಕೊಂಡು ತಂದ ಗಂಡ’, ‘ಸಂಪತ್ತಿಗೆ ಸವಾಲ್’ – ಇಂಥ ಕಂಪನಿ ನಾಟಕಗಳ ಜೊತೆಗೆ ‘ಸತ್ತವರ ನೆರಳು’, ‘ಸಂಗ್ಯಾ ಬಾಳ್ಯಾ’, ‘ಆಷಾಢದ ಒಂದು ದಿನ’, ‘ಘಾಶಿರಾಂ ಕೊತ್ವಾಲ್’, ‘ವಾಡಾ ಚಿರೇಬಂದಿ’ ನಾಟಕಗಳನ್ನು ನೋಡಲು ಒತ್ತಾಯಿಸಿತು. ಅಮೂರ್ತ ಚಿತ್ರಕಲೆಗಳ ಬಗ್ಗೆ ಆಸಕ್ತಿ ಹುಟ್ಟಿಸಿತು.

ನಮ್ಮೂರು ಗೋಕರ್ಣಕ್ಕೆ ಪತ್ರಿಕೆಯ ಬಂಡಲ್ ಸಂಜೆ ಐದೂವರೆಗೆ ಹುಬ್ಬಳ್ಳಿ ಬಸ್ಸಿಗೆ ಬರುತ್ತಿತ್ತು. ನಾವು ಗೆಳೆಯರು, ಭಾನುವಾರವಂತೂ ನೆಂಟರಿಗೆ ಕಾದಂತೆ ಆ ಬಸ್ಸಿಗೆ ಕಾಯುತ್ತಿದ್ದೆವು. ಹಿರಿಯ ಏಜೆಂಟರಾಗಿದ್ದ ಅನಂತ ಶೆಟ್ಟರ ಮಗ ಬಾಲಕೃಷ್ಣ ಶೆಟ್ಟರು ನಮಗೆ ಬಸ್ ಸ್ಟ್ಯಾಂಡಿನಲ್ಲೇ ಬಂಡಲ್ ಒಡೆದು ಸಂಚಿಕೆ ಕೊಡುತ್ತಿದ್ದರು. ಅವರು ಬಂಡಲ್ ತೆಗೆಯುವುದಕ್ಕೆ ನಾವು ಉತ್ಕಂಠಿತರಾಗಿ ಕಾದ ಕ್ಷಣಗಳ ಕಾಂತತ್ವ... ಪದಗಳಿಗೆ ಮೀರಿದ್ದು. ಗೌರೀಶ ಕಾಯ್ಕಿಣಿಯವರು ಹೇಳುವ ‘ಸಂಯುಕ್ತ, ಚಿಂತನಶೀಲ ತನ್ಮಯತೆ’ಯ ದಾಹ ಅದು. ಈ ದಾಹವನ್ನು ಬಿತ್ತಿದ, ಮತ್ತು ಆತ್ಮ ಗೌರವಕ್ಕಿಂತಲೂ ಮಿಗಿಲಾದ ಮೌಲ್ಯವಿಲ್ಲ ಎಂಬುದನ್ನು ಪಾರದರ್ಶಕವಾಗಿ ಮನವರಿಕೆ ಮಾಡುತ್ತಲೆ ಬಂದ, ನೆಚ್ಚಿನ ‘ಪ್ರಜಾವಾಣಿ’ಗೆ ಬೆಚ್ಚನೆ ವಂದನೆ.

– ಜಯಂತ ಕಾಯ್ಕಿಣಿ, ಗೋಕರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.