ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published : 8 ಜುಲೈ 2024, 20:58 IST
Last Updated : 8 ಜುಲೈ 2024, 20:58 IST
ಫಾಲೋ ಮಾಡಿ
Comments

ರಾಜಕೀಯ ಬೀಗರೊಂದಿಗೆ ಸಮಾರಾಧನೆ

ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ, ಬಿಜೆಪಿಯ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸಲು ನೆಲಮಂಗಲದಲ್ಲಿ ಬಿಜೆಪಿ-ಜೆಡಿಎಸ್ ಭಾನುವಾರ ಹಮ್ಮಿಕೊಂಡಿದ್ದ ‘ಮೈತ್ರಿ ಹಬ್ಬ’ದಲ್ಲಿ ‘ಮದ್ಯ ಸಮಾರಾಧನೆ’ ನಡೆದು ಜನರು ನಶೆಯಲ್ಲಿ ತೇಲಾಡಿದರೆಂಬ ಸುದ್ದಿ (ಪ್ರ.ವಾ., ಜುಲೈ 8) ಓದಿ ಆಘಾತವಾಯಿತು. ಅದಕ್ಕೂ ಮಿಗಿಲಾಗಿ, ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದ ಸುಧಾಕರ್ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ‘ಕಾರ್ಯಕ್ರಮದ ನಂತರ ಅಲ್ಲೇನು ನಡೆಯಿತೆಂಬುದು ಗೊತ್ತಿಲ್ಲ’ ಎಂದಿರುವುದು ಪಲಾಯನವಾದ. ಅವರಿಬ್ಬರ ಮಾತುಗಳು ನೈತಿಕವಾಗಿ ಬೇಜವಾಬ್ದಾರಿಯವು.

ಬಿಜೆಪಿಯವರು ಮಾತುಮಾತಿಗೂ ದೇವರು, ಸನಾತನಧರ್ಮ ಎನ್ನುವುದಿದೆ. ಅವರು ಈಗ ತಮ್ಮ ಹೊಸ ‘ರಾಜಕೀಯ ಬೀಗರಾದ’ ಜೆಡಿಎಸ್ ಜೊತೆಗೂಡಿ ಸಾರ್ವಜನಿಕವಾಗಿ ಇಂಥದ್ದೊಂದು ‘ಮದ್ಯ ಸಮಾರಾಧನೆ’ಯನ್ನು ಬೌನ್ಸರ್‌ಗಳನ್ನು ಇಟ್ಟುಕೊಂಡು ನಡೆಸಿರುವುದು ನೈತಿಕ ಅಧಃಪತನಕ್ಕೆ ಸಾಕ್ಷಿ. ಈ ಕೆಟ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಬಿಜೆಪಿ ಮುಖಂಡರು ರಾಜ್ಯದ ಜನರ ಕ್ಷಮೆ ಕೇಳಬೇಕು.

⇒ಆರ್.ಎಸ್. ಅಯ್ಯರ್, ತುಮಕೂರು

ಪ್ರಜಾತಂತ್ರದ ಮತ್ತೊಂದು ಮಜಲು!

ನೆಲಮಂಗಲದಲ್ಲಿ ಬಿಜೆಪಿ–ಜೆಡಿಎಸ್ ‘ಮೈತ್ರಿ ಹಬ್ಬ’ದ ಕಾರ್ಯಕ್ರಮದಲ್ಲಿ ಮದ್ಯ ಸಮಾರಾಧನೆ ಸುದ್ದಿ ಓದಿ ಸಖೇದಾಶ್ಚರ್ಯವಾಯಿತು. ಚುನಾವಣೆ ಪೂರ್ವದಲ್ಲಿ ನಡೆಯುತ್ತಿದ್ದ ಇಂಥ ಸಮಾರಾಧನೆಗಳು ಈಗ ಚುನಾವಣೆಯ ನಂತರಕ್ಕೂ ವಿಸ್ತರಣೆ ಕಂಡಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ಮಜಲು ಮೇಲಕ್ಕೆ ಏರಿರುವುದನ್ನು ತೋರಿಸುತ್ತಿದೆ ಎಂದು ಭಾವಿಸೋಣವೇ?!

ಅದೂ ಪೊಲೀಸರ ಸಮಕ್ಷಮದಲ್ಲಿ, ಅವರ ಸಹಾಯ, ಸಹಕಾರದೊಂದಿಗೆ ಇದು ನಡೆದಿದೆ. ಸಮಾರಂಭದಲ್ಲಿ ಎರಡು ಟ್ರಕ್ ಮದ್ಯ ತ್ವರಿತವಾಗಿ ವಿಲೇವಾರಿಯಾಗಿದೆ. ಇಂತಹ ‘ಮೈತ್ರಿ ಸಮಾವೇಶ’ಗಳು ರಾಜ್ಯದ ಅಲ್ಲಲ್ಲಿ ನಡೆದಲ್ಲಿ ಅಬಕಾರಿ ಇಲಾಖೆಗೆ ತನ್ನ ವಾರ್ಷಿಕ ವರಮಾನ ಸಂಗ್ರಹದ ಗುರಿ ತಲುಪಲು ತುಂಬಾ ಸಹಾಯವಾಗಬಹುದು! ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಒಗ್ಗೂಡಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರಕ್ಕೂ ಇದೊಂದು ಒಳ್ಳೆಯ ಬೆಳವಣಿಗೆಯಾಗಿ ಕಾಣಬಹುದು! ಇದು ರಾಷ್ಟ್ರಮಟ್ಟದಲ್ಲಿ ವಿಸ್ತರಣೆ ಆದರೆ ನಮ್ಮ ದೇಶವು ಜಗತ್ತಿನ ತೃತೀಯ ಆರ್ಥಿಕ ಶಕ್ತಿಯಾಗಿ ತ್ವರಿತವಾಗಿ ಹೊರಹೊಮ್ಮಲೂ ಸಹಾಯವಾಗಬಹುದು!

⇒ವೆಂಕಟೇಶ ಮಾಚಕನೂರ, ಧಾರವಾಡ

ರಿಷಿ ಸುನಕ್‌ ನಡೆ ಮಾದರಿಯಾಗಲಿ

ಬ್ರಿಟನ್ನಿನ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಾರ್ಟಿಯ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಸೋತ ಬಳಿಕ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ‘ಜನರು ಬ್ರಿಟನ್ ದೇಶದ ಅಭಿವೃದ್ಧಿಗಾಗಿ ಹೊಸ ಸರ್ಕಾರವನ್ನು ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಅಧಿಕಾರಾವಧಿಯಲ್ಲಿ ಜನರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತೇನೆ’ ಎಂದರು. ಜನರು ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಇದೇ ವೇಳೆ ಶುಭ ಕೋರಿದರು. ತಮ್ಮ ಪಕ್ಷ ಸೋತ ನೋವಿನಲ್ಲಿ ಗೆದ್ದವರನ್ನು ಜರಿಯುವುದು, ಸೋತ ಇತರ ಅಭ್ಯರ್ಥಿಗಳ ಲೇವಡಿ, ಚುನಾವಣೆಯಲ್ಲಿ ಹಣ, ಜಾತಿ, ಧರ್ಮ, ಕುಟುಂಬ ರಾಜಕಾರಣ ಮೇಲುಗೈಯಾಗಿದೆ ಎಂಬ ಆರೋಪಗಳನ್ನು ಮಾಡಲಿಲ್ಲ. ಸುನಕ್ ಅವರ ಈ ನಡೆ ಭಾರತದ ರಾಜಕಾರಣಿಗಳಿಗೆ ಒಂದು ಮಾದರಿಯಾಗಬೇಕಿದೆ.

⇒ಸುರೇಂದ್ರ‌ ಪೈ, ಭಟ್ಕಳ

ಜಾತಿಯ ಹೆಸರೇ ‘ಸಾಮಾಜಿಕ ಬಂಡವಾಳ’

ಮೋದೂರು ಮಹೇಶಾರಾಧ್ಯ ಅವರು ನನ್ನ ಲೇಖನಕ್ಕೆ ಪ್ರತಿಕ್ರಿಯೆ ಬರೆದಿದ್ದಾರೆ (ಪ್ರ.ವಾ. ಜುಲೈ 6). ಅವರ ಪ್ರಕಾರ ‘ಶುದ್ಧ ಸಸ್ಯಹಾರಿ’ ಪದ ಶುದ್ಧ ಜಾತಿಸೂಚಕವಲ್ಲ. ಬದಲಾಗಿ, ಅದು ಸಸ್ಯಾಹಾರ ಮಾತ್ರ ಸಿಗುತ್ತದೆ ಎನ್ನುವುದರ ಸೂಚಕ. ಇಂದು ಆಹಾರ ಪದ್ಧತಿ ಮತ್ತು ಜಾತಿ ವಿಂಗಡಣೆಯ ಕಾಲ ಮುಗಿದುಹೋಗಿದೆ ಎಂದೂ ಅವರು ಹೇಳಿದ್ದಾರೆ.

ಆದರೆ ವಾಸ್ತವ ಬೇರೆಯೇ ಇದೆ. ಉದಾಹರಣೆಗೆ, ಪ್ರಬಲ ಜಾತಿಗಳ ಹೆಸರು ಹೊತ್ತ ನೂರಾರು ಹೋಟೆಲುಗಳನ್ನು ನಾವು ಎಲ್ಲಾ ಕಡೆ ಕಾಣಬಹುದು. ಆ ಹೆಸರಿನ ಕಾರಣಕ್ಕೆ ಅವುಗಳಿಗೆ ಬ್ರ್ಯಾಂಡ್ ಮೌಲ್ಯ ಇರುತ್ತದೆ. ಇದರ ಅರ್ಥ ನಮ್ಮ ಸಮಾಜದಲ್ಲಿ ಕೆಲವು ಜಾತಿಗಳ ಹೆಸರು ಕೂಡ ‘ಸಾಮಾಜಿಕ ಬಂಡವಾಳವಾಗಿ’ ಕೆಲಸ ಮಾಡುತ್ತಿರುತ್ತದೆ ಎಂಬುದು. ಆದರೆ ತಳ ಸಮುದಾಯಗಳ ಹೆಸರು ಇಟ್ಟು ನಾವು ಹೋಟೆಲ್ ಉದ್ಯಮ ನಡೆಸಲು ಸಾಧ್ಯವಿದೆಯೇ? ಹಾಗೆ ನಡೆಸುತ್ತಿರುವ ಎಷ್ಟು ಉದಾಹರಣೆಗಳು ನಮ್ಮ ನಡುವೆ ಇವೆ? ಈ ಪ್ರಶ್ನೆ ಕೇಳಿಕೊಂಡರೆ ವಾಸ್ತವ ಅರಿವಿಗೆ ಬರುತ್ತದೆ.

ನಾವು ಬಳಸುವ ಪ್ರತಿ ಪದವೂ ಸಾಮಾಜಿಕ ವಾಸ್ತವದ ಪ್ರತಿಬಿಂಬವಷ್ಟೇ ಆಗಿರುವುದಿಲ್ಲ; ಅದು ಒಪ್ಪಿತ ಸಾಮಾಜಿಕ ವಾಸ್ತವವನ್ನು ಮರು-ನಿರ್ಮಿಸುವ, ಸಮರ್ಥಿಸುವ ಕೆಲಸವನ್ನೂ ಮಾಡುತ್ತಿರುತ್ತದೆ. ಭಾರತದಲ್ಲಿ ಜಾತಿಯು ‘ಸಾಮಾಜಿಕ ವಾಸ್ತವ’. ಅದು ನಿಂತಿರುವುದೇ ಶುದ್ಧ-ಅಶುದ್ಧವೆಂಬ ತಾತ್ವಿಕತೆಯ ಮೇಲೆ. ಹಾಗಾಗಿ ನಾವು ಶುದ್ಧ ಎಂಬ ಪದವನ್ನು ಯಾವ ಸ್ವರೂಪದಲ್ಲಿ ಬಳಸಿದರೂ ಅದು ಜಾತಿ ಎಂಬ ಸಾಮಾಜಿಕ ವಾಸ್ತವವನ್ನು ಗಟ್ಟಿಗೊಳಿಸುತ್ತಿರುತ್ತದೆ.ಹಾಗಾಗಿ ಈ ಕಾಲಕ್ಕೆ ಪ್ರಜ್ಞಾಪೂರ್ವಕವಾಗಿ ಈ ಮಾದರಿಯ ಪದಗಳ ಬಳಕೆ ಕಡಿಮೆ ಮಾಡಬೇಕು. ಉದಾಹರಣೆಗೆ. ಶುದ್ಧ ಸಸ್ಯಾಹಾರ ಎನ್ನುವ ಬದಲು ‘ಶುಚಿಯಾದ ಸಸ್ಯಾಹಾರ’ ಎಂದು ಬಳಸಬಹುದು ಅನ್ನಿಸುತ್ತದೆ. ಪೆರಿಯಾರ್ ನಡೆಸಿದ ಕ್ರಾಂತಿಯ ಕಾರಣಕ್ಕೆ ಸಾವಿರಾರು ಜನ ಜಾತಿಸೂಚಕ ಹೆಸರುಗಳ ಬಳಕೆ ಬಿಟ್ಟ ಉದಾಹರಣೆ ನಮ್ಮ ಮುಂದಿದೆ.

ರಾಜ್ಯಸಭೆಯ ಸಭಾಪತಿಯ ಮಾತನ್ನು ಜಾತಿ ನೆಲೆಯಲ್ಲಿ ನೋಡಬಾರದು ಎಂದು ಮಹೇಶಾರಾಧ್ಯ ಹೇಳಿದ್ದಾರೆ. ಆದರೆ ತಳಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಮಾತು ವರ್ಣವ್ಯವಸ್ಥೆಯ ಅಲೋಚನಾ ಕ್ರಮದಿಂದ ಮಾತ್ರ ಹುಟ್ಟಿರಲು ಸಾಧ್ಯ ಅನ್ನಿಸಿರುವುದರಿಂದ ಅವರ ಭಾವವನ್ನು ಗುರುತಿಸುವಷ್ಟು ಸೂಕ್ಷ್ಮತೆಯನ್ನೂ ನಾವು ಹೊಂದಬೇಕಿದೆ. ‘ನೊಂದವರ ನೋವ ನೋಯದವರೆತ್ತ ಬಲ್ಲರು’ ಎಂಬ ಅಕ್ಕಮಹಾದೇವಿ ಅವರ ವಚನದ ಮಾತು ಮತ್ತೆ ನೆನಪಾಗುತ್ತಿದೆ.

⇒ಕಿರಣ್ ಎಂ. ಗಾಜನೂರು, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT