ಗಡಿ ಕನ್ನಡಿಗರಲ್ಲಿ ಅಭದ್ರ ಭಾವ ನಿವಾರಿಸಿ

ಮಹಾರಾಷ್ಟ್ರದಲ್ಲಿ ಚುನಾವಣೆ ವೇಳೆ ಗಡಿ ವಿಷಯ ಪ್ರಸ್ತಾಪವಾಗುವುದು ಸಾಮಾನ್ಯ ಎಂಬಂತಾಗಿತ್ತು. ಆದರೆ ಈ ಸಲ ಅಂತಹ ಪರಿಪಾಟಕ್ಕೆ ತಡೆ ಬಿದ್ದಿದೆ. ಕರ್ನಾಟಕ–ಮಹಾರಾಷ್ಟ್ರ ಗಡಿ ವಿಷಯವನ್ನು ಆ ರಾಜ್ಯದ ಯಾವ ಪ್ರಮುಖ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಸೇರಿಸದಿರುವುದು ಸಮಾಧಾನ ತಂದಿದೆ. ಆ ರಾಜ್ಯದ ಸುಮಾರು 35 ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡ ಭಾಷಿಕರದು ನಿರ್ಣಾಯಕ ಪಾತ್ರ ಎಂಬ ಮಾಹಿತಿ (ಪ್ರ.ವಾ., ನ.18), ಕನ್ನಡಿಗರು ಗಣನೀಯ ಪ್ರಮಾಣದಲ್ಲಿ ಅಲ್ಲಿ ನೆಲಸಿರುವುದನ್ನು ಸ್ಪಷ್ಟಪಡಿಸುತ್ತದೆ.

ಸದಾ ಗದ್ದಲ ಎಬ್ಬಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಈ ಚುನಾವಣೆ ಸಂದರ್ಭದಲ್ಲಿ ಭಾರಿ ಮುಖಭಂಗ ಆಗಿರುವುದು ಸರಿಯಾಗಿಯೇ ಇದೆ. ಅಲ್ಲಿನ ಕನ್ನಡಿಗರು ಈ ಬಾರಿ ಒಗ್ಗಟ್ಟಿನ ಮಂತ್ರ ಜಪಿಸಿರುವುದರ ಜೊತೆಗೆ ‘ಕನ್ನಡಿಗರಿಗೆ ಗೌರವ ನೀಡುವವರಿಗೆ, ಕನ್ನಡಿಗರ ಬೇಡಿಕೆ ಈಡೇರಿಸುವವರಿಗೆ ನಮ್ಮ ಮತ’ ಎಂಬಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಚುರುಕು ಮುಟ್ಟಿಸಿರುವುದು ಖುಷಿಯ ವಿಷಯ. ರಾಜ್ಯದ ಎಲ್ಲ ಗಡಿಭಾಗಗಳಲ್ಲಿ ಕನ್ನಡ ಅಭಿಮಾನ ಇದೇ ರೀತಿ ಚಿಗುರಲಿ, ಬೆಳೆಯಲಿ, ಮೊಳಗಲಿ. ಕನ್ನಡದ ಅಸ್ಮಿತೆ ಗಟ್ಟಿಯಾಗಲಿ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಅಲ್ಲಿನವರಿಗೆ ಕಾಲಕಾಲಕ್ಕೆ ಸರಿಯಾದ ಸಲಹೆ, ಸಹಕಾರ, ನೆರವು ನೀಡುವಂತೆ ಆಗಬೇಕು. ಅವರಲ್ಲಿ ಅಭದ್ರತೆ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿಯುತ ನಡೆಯೂ ಮುಖ್ಯ.

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ವಿವಾಹದ ಸಡಗರ ನಂತರವೂ ಉಳಿಯಲಿ

ಭಾರತದಲ್ಲಿ ಶಿಕ್ಷಣಕ್ಕಿಂತಲೂ ವಿವಾಹಕ್ಕೆ ಹೆಚ್ಚಿನ ಹಣ ವೆಚ್ಚವಾಗುತ್ತಿರುವ ಕುರಿತ ವಿಶೇಷ ವರದಿ (ಪ್ರ.ವಾ., ನ.18) ಓದಿ ವಿಷಾದವಾಯಿತು. ವಿವಾಹ ಎಂಬುದು ಕುಟುಂಬ, ಸ್ನೇಹ ಮತ್ತು ಸಂಬಂಧವನ್ನು ಬೆಸೆಯುವ ವೈಯಕ್ತಿಕ ವಿಚಾರವಾಗಿರದೆ, ವೈಭೋಗ, ಆಡಂಬರ ಪ್ರದರ್ಶನದ ವೇದಿಕೆಯಾಗಿರುವುದು ದುಃಖಕರ. ಇಂತಹ ವೈಭವೋಪೇತ ಮದುವೆಗೆ ಕಾರಣ ಅನುಕರಣೆ! ಒಬ್ಬರನ್ನು ಅನುಸರಿಸಿ ಸಾಲಸೋಲ ಮಾಡಿಯಾದರೂ ತಮ್ಮ ಕುಟುಂಬದವರ ಮದುವೆಗಳನ್ನೂ ಅದೇ ರೀತಿ ಏರ್ಪಡಿಸಲು ಮುಂದಾಗುವವರೇ ಹೆಚ್ಚು. ಇಂತಹವರ ನಡುವೆ, ಸರಳವಾಗಿ ಮದುವೆಯಾಗುವ ಮೂಲಕ ಮದುವೆಗೆ ಖರ್ಚು ಮಾಡಬೇಕಿದ್ದ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ನೀಡಿದ ಅರಕಲಗೂಡಿನ ಎಂಜಿನಿಯರ್ ಶಿವಕುಮಾರ್ (ಪ್ರ.ವಾ., ನ. 12) ಮಾದರಿಯಾಗಿದ್ದಾರೆ. ಸರಳವಾಗಿ ಕುವೆಂಪು ಅವರ ಮಂತ್ರಮಾಂಗಲ್ಯದ ವಿಧಾನ ಅನುಸರಿಸುವವರೂ ಇದ್ದಾರೆ.

ಇಷ್ಟರ ನಡುವೆಯೂ ವಿವಾಹ ಸಮಾರಂಭ ಹೇಗಿರಬೇಕು ಎಂಬುದು ಅವರವರ ಇಚ್ಛೆಗೆ ಬಿಟ್ಟ ವಿಚಾರ. ಆದರೆ ವಿವಾಹದ ನಂತರದ ಬೆಳವಣಿಗೆಗಳು ಕಳವಳ ಮೂಡಿಸುವಂತಿವೆ. ವಿವಾಹಗಳು ಸಲೀಸಾಗಿ ನೆರವೇರುತ್ತಿರುವಂತೆಯೇ ವಿಚ್ಛೇದನಗಳೂ ಸಲೀಸಾಗಿ ನಡೆಯುತ್ತಿವೆ. ವಿವಾಹದ ಸಂದರ್ಭದಲ್ಲಿ ಇದ್ದ ಖುಷಿ, ಸಡಗರವು ವಿವಾಹದ ನಂತರ ಅದೂ ಬಲು ಬೇಗ ಮರೆಯಾಗುವುದೇಕೆ? ಮದುವೆ ಸಂದರ್ಭದಲ್ಲಿ ಬಟ್ಟೆಯಿಂದ ಹಿಡಿದು ಆಹಾರದವರೆಗೆ ಯೋಚಿಸಿ ಆಯ್ಕೆ ಮಾಡುವ ಜನ, ಅಷ್ಟು ಸಲೀಸಾಗಿ ವಿಚ್ಛೇದನ ನೀಡುತ್ತಿರುವುದೇಕೆ? ಇವೆಲ್ಲವುಗಳ ಬಗ್ಗೆ ಸೂಕ್ತ ಪರಾಮರ್ಶೆ ನಡೆಯಬೇಕಿದೆ.

- ಗಿರೀಶ್ ಡಿ., ಬೆಳ್ಳಾವಿ

ಸಂಘರ್ಷದ ಬೆಂಕಿ ಆರುವುದೆಂದು?

ಮಣಿಪುರದಲ್ಲಿ ಹೊತ್ತಿ ಉರಿಯುತ್ತಿರುವ ಸಂಘರ್ಷದ ಬೆಂಕಿ ಆರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕೇಂದ್ರ ಸರ್ಕಾರವಾಗಲಿ, ಅಲ್ಲಿನ ರಾಜ್ಯ ಸರ್ಕಾರವಾಗಲಿ ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ತಹಬಂದಿಗೆ ತರುವ ಪ್ರಯತ್ನವನ್ನು ಬದ್ಧತೆಯಿಂದ ಮಾಡಿದಂತೆ ಕಾಣುವುದಿಲ್ಲ. ಮೈತೇಯಿ ಮತ್ತು ಕುಕಿ ಬುಡಕಟ್ಟು ಜನರ ನಡುವೆ ರಾಕ್ಷಸಾಕಾರದಲ್ಲಿ ಬೆಳೆದುನಿಂತಿರುವ ಅಪನಂಬಿಕೆ ಮತ್ತು ಅಸಹನೆಯನ್ನು ಬರೀ ಪೊಲೀಸ್ ಮತ್ತು ಸೇನೆಯ ನಿಯೋಜನೆಯಿಂದ ಬಗೆಹರಿಸಲಾಗದು. ಬಿರೇನ್ ಸಿಂಗ್ ನೇತೃತ್ವದ ಸರ್ಕಾರವು ಉಭಯ ಸಮುದಾಯಗಳ ನಡುವೆ ಸೌಹಾರ್ದದ ಸೇತುವೆ ಕಟ್ಟುವುದಿರಲಿ ಆ ಗುಂಪುಗಳ ಮುಂದಾಳುಗಳನ್ನು ಮಾತುಕತೆಯ ಮೇಜಿಗೆ ಕರೆತರುವುದಕ್ಕೂ ಮನಸ್ಸು ಮಾಡುತ್ತಿಲ್ಲ. ಸರ್ಕಾರ ಈಗ ರಾಜ್ಯದ ಕೆಲವು ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಜಾರಿಗೆ ತಂದಿದೆಯಾದರೂ ಅದರಿಂದ ಹೆಚ್ಚಿನ ಪ್ರಯೋಜನ ಸಿಗುವ ಸಾಧ್ಯತೆ ಇಲ್ಲ. ಅದು ಈ ಹಿಂದೆ ಮಾಡಿರುವ ಅವಾಂತರಗಳು ಮತ್ತು ಜನಮನದ ಮೇಲೆ ಮಾಡಿರುವ ಗಾಯಗಳನ್ನು ಮಣಿಪುರದ ಜನ ಇನ್ನೂ ಮರೆತಂತಿಲ್ಲ. ಪ್ರಾರಂಭದಿಂದಲೂ ಮಣಿಪುರದ ಬೆಳವಣಿಗೆಗಳನ್ನು ಸರ್ಕಾರಗಳು ಲಘುವಾಗಿ ಸ್ವೀಕರಿಸಿದ ಪರಿಣಾಮವಾಗಿ ಇಂದು ಅದು ಬೃಹದಾಕಾರವಾಗಿ ಬೆಳೆದಿದೆ. ಈಗ ಈ ಅಶಾಂತಿಯ ದಾವಾಗ್ನಿ ನಿಯಂತ್ರಿಸುವ ಹೊಣೆ ಈ ಸರ್ಕಾರಗಳದ್ದೇ ಆಗಿದೆ.

-ಮೋದೂರು ಮಹೇಶಾರಾಧ್ಯ, ಹುಣಸೂರು

ಸಾಹಿತ್ಯ ಕೃತಿ ಮತ್ತು ನ್ಯಾಯದಾನ ಪ್ರಕ್ರಿಯೆ

ನಿವೃತ್ತಿಯಾದ ಮೇಲೆ ‘ಯೂಟ್ಯೂಬ್’ನಲ್ಲಿ ಕರ್ನಾಟಕ ಹೈಕೋರ್ಟ್ನ ಕಲಾಪಗಳನ್ನು ನೋಡುವ ಗೀಳು ನನಗೆ. ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ಒಂದು ಆಸಕ್ತಿದಾಯಕ ಪ್ರಕರಣ ಬಂದುದನ್ನು ನೋಡಿದೆ. ಒಬ್ಬ ಸರ್ಕಾರಿ ನೌಕರನಿಗೆ ನಿವೃತ್ತಿಯಾಗಿ 12 ವರ್ಷಗಳಾದರೂ ಪಿಂಚಣಿ ಸೌಲಭ್ಯ ಮಂಜೂರಾಗದಿರುವ ಬಗ್ಗೆ ಸಲ್ಲಿಸಿದ ದಾವೆ ಅದಾಗಿತ್ತು. ಪ್ರಕರಣದ ದಾಖಲೆ ಅವಗಾಹಿಸಿ ಮತ್ತು ಎರಡೂ ಕಡೆಯವರ ವಾದ ಆಲಿಸಿ, ಇಷ್ಟು ವರ್ಷಗಳಾದರೂ ಪಿಂಚಣಿ ಮಂಜೂರು ಮಾಡದ ಬಗ್ಗೆ ನ್ಯಾಯಮೂರ್ತಿಗಳು, ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ’ ಓದಿಕೊಂಡು ಬರಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿದರು.

ನ್ಯಾಯಮೂರ್ತಿಗಳ ಸಂವೇದನಾಶೀಲತೆಗೆ ಮತ್ತು ಸಾಹಿತ್ಯ ಕೃತಿಗಳು ನ್ಯಾಯದಾನ ಪ್ರಕ್ರಿಯೆಯಲ್ಲಿ ಹೇಗೆ ಪರಿಣಾಮ ಬೀರಬಲ್ಲವು ಎನ್ನುವುದಕ್ಕೆ ಇದೊಂದು ದೃಷ್ಟಾಂತ.

-ವೆಂಕಟೇಶ್ ಮುದಗಲ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.