ಈ ವರ್ಷ ಮುಂಗಾರು ತುಂಬ ತಡವಾಗಿ ಶುರುವಾಯಿತು. ಮಾತ್ರವಲ್ಲ ದೇಶದ ಉದ್ದಗಲಕ್ಕೂ ಮಹಾಮಳೆ ಅವಾಂತರಗಳನ್ನೇ ಸೃಷ್ಟಿಸಿತು. ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಕೊಂಚ ವಿರಾಮ ಕೊಟ್ಟಿತು. ಮಳೆಯಿಂದ ತೊಯ್ದ ಬೆಟ್ಟಗುಡ್ಡಗಳ ಮೇಲೆ ಹಸಿರು ಚಿಗುರಿತು. ದಟ್ಟ ಕಾಡಿನಲ್ಲಿ ಸಸ್ಯ ರಾಶಿ ತಲೆ ಎತ್ತಿದವು. ಪರ್ವತಶ್ರೇಣಿಗಳ ಕಣಿವೆಗಳಲ್ಲಿನ ಜಲಪಾತಗಳಿಗೆ ಹೊಸಜೀವ ಬಂದಂತಾಯಿತು.

ಮಳೆ ನಿಂತ ಮೇಲೆ ಮಹಾರಾಷ್ಟ್ರದ ಠಾಣ ಜಿಲ್ಲೆಯ ಕಲ್ಯಾಣದಿಂದ ಮೌಂಟ್ ಅಲ್ಟೆರಾ ಕಡೆಗೆ ನಮ್ಮ ಪ್ರವಾಸ ಶುರುವಾಯಿತು. ನಡುನಡುವೆ ಸಿಕ್ಕ ಮಳೆಯನ್ನು ಬರಮಾಡಿಕೊಳ್ಳುತ್ತಾ ಅಲ್ಟೆರಾ ಗಿರಿಶ್ರೇಣಿಯಲ್ಲಿ ನಿಂತಾಗ ಮೈಚಾಚಿದ ಭೂರಮ್ಯತೆಗೆ ನಾವು ಮೌನವಾದೆವು.

ಅಲ್ಟೆರಾ ಗಿರಿಕಂದರಗಳ ಮೇಲೆ

ಮುಂಬೈ ಪೂನಾ ಹಳೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚರಿಸುವಾಗ ಲೋನವಾಲಕ್ಕೆ ಐದಾರು ಕಿ.ಮೀ. ಮೊದಲು ಬಲಕ್ಕೆ ತಿರುಗಿದರೆ ಸಾಧಾರಣ ರಸ್ತೆಯೊಂದು ಕಾಣುತ್ತದೆ. ಈ ಕಚ್ಚಾ ರಸ್ತೆಯಲ್ಲಿ ನಾಲ್ಕು ಕಿ.ಮೀ. ಉದ್ದಕ್ಕೂ ಸಾಗಿದರೆ ಅಲ್ಟೆರಾ ಹೆಸರಿನ ಗಿರಿಶ್ರೇಣಿಗಳು ಕಾಣುತ್ತವೆ. ಲೋನವಾಲ ಮತ್ತು ಖಂಡಾಲ ಎಂಬ ಅವಳಿ ಪಟ್ಟಣಗಳನ್ನು ಪಶ್ಚಿಮಘಟ್ಟಗಳ ಸಾಲು ಆವರಿಸಿಕೊಂಡಿದೆ. ಇವೆರಡೂ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪ್ರಸಿದ್ಧ ಗಿರಿಧಾಮಗಳು.

ಮೌಂಟ್ ಅಲ್ಟೆರಾ ಸಮುದ್ರಮಟ್ಟದಿಂದ 454 ಮೀ ಎತ್ತರದಲ್ಲಿದೆ. ಇದು ಪಶ್ಚಿಮಘಟ್ಟಗಳ ಸೆರಗಿಗೆ ಸೇರಿದ ಸುಂದರ ಗಿರಿಶ್ರೇಣಿ. ಇಲ್ಲಿಯ ಗಿರಿಗಳು ಕರ್ನಾಟಕದ ಘಟ್ಟಪ್ರದೇಶದಲ್ಲಿದ್ದಷ್ಟು ದಟ್ಟ ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿಲ್ಲ. ಆದರೂ ಅಲ್ಲಲ್ಲಿ ಚದುರಿದಂತೆ ಕಾಡಿದೆ. ಬೆಟ್ಟಗಳ ಮೇಲ್ಮೈ ಹಸಿರಾಗಿದೆ. ಬೆಟ್ಟದ ಸಾಲುಗಳು ಕೆಲವೆಡೆ ಕವಲುಗಳಾಗಿ ಹಬ್ಬಿ ನಡುವೆ ಮುದಗೊಳಿಸುವ ತಪ್ಪಲುಗಳನ್ನು ಸೃಷ್ಟಿಸಿವೆ. ಅಲ್ಲಿ ಹರಿಯುವ ತೊರೆ, ಇಕ್ಕೆಲಗಳಲ್ಲಿ ವಿರಳವಾಗಿ ಕಾಣುವ ಮನೆಗಳು, ಒಂದಿಷ್ಟು ಹೊಲಗಳನ್ನು ಮೇಲಿನಿಂದ ವೀಕ್ಷಿಸಬಹುದು. ಅಲ್ಟೆರಾ ಪರ್ವತಶ್ರೇಣಿಯ ತುತ್ತತುದಿಯಲ್ಲಿ ನಿಂತರೆ ಮುಂದಿರುವ ಕಡಿದಾದ ಕಣಿವೆಗಳು, ಎದುರಿಗೆ ಹಬ್ಬಿದ ಖಂಡಾಲ ಪರ್ವತಮಾಲೆ, ನಡುವೆ ಹರಡಿಕೊಂಡಿರುವ ತಪ್ಪಲು ಪ್ರದೇಶ, ಮೋಡಗಳು ಆವರಿಸಿರುವ ಬೆಟ್ಟದ ಶಿಖರಗಳು ನಮ್ಮನ್ನು ಬೇರೆಯದೇ ಭಾವಲೋಕಕ್ಕೆ ಕರೆದೊಯ್ಯುತ್ತವೆ.

ಶಿಖರ ಶ್ರೇಣಿಯಲ್ಲಿ ಕೆಲವೆಡೆ ಇಳಿಜಾರಿನಲ್ಲಿ ಜಾರುಬಂಡಿಯಂತಹ ಗುಡ್ಡಗಳಿವೆ. ಅವುಗಳ ಮೇಲೆ ಅಲ್ಲೊಂದು ಇಲ್ಲೊಂದು ಮರಗಳು, ನಡುನಡುವೆ ಹಸಿರ ಹೊದಿಕೆ. ಇವನ್ನೆಲ್ಲ ಕಣ್ತುಂಬಿಕೊಳ್ಳುತ್ತಿದ್ದಾಗ ಆಕಾಶದಲ್ಲಿ ತೇಲುವ ಕಪ್ಪುಬಿಳುಪಿನ ಮೋಡಗಳು, ಬೆಟ್ಟಗಳ ಮೇಲೆ ಓಡಾಡುವ ಬಿಸಿಲು, ಎದುರಿಗೆ ಸೆಟೆದು ನಿಂತ ಖಂಡಾಲ ಪರ್ವತಸಾಲು ಎಲ್ಲವೂ ನಿಸರ್ಗದ ಚಿತ್ರಪಟದಂತೆ ಕಂಡವು. ಎದುರಿಗಿರುವ ಗಿರಿ–ಕಣಿವೆಗಳಿಂದ ಧುಮ್ಮಿಕ್ಕುವ ಲೆಕ್ಕವಿಲ್ಲದಷ್ಟು ಜಲಪಾತಗಳು ದೂರದಿಂದ ಬೆಳ್ಳಿರೇಖೆಯಂತೆ ಗೋಚರಿಸಿದವು.

ಖಂಡಾಲ ಶಿಖರಗಳನ್ನು ಮುತ್ತಿಡುವ ಮೋಡಗಳು, ಆಗಾಗ್ಗೆ ಬೀಳುವ ಮಳೆಯ ತುಂತುರು ಹನಿ, ಮಳೆಯನ್ನು ಸೀಳಿ ಮಿನುಗುವ ಸೂರ್ಯರಶ್ಮಿ, ತಟ್ಟನೆ ಕತ್ತಲು ಕವಿಸುವ ಕಪ್ಪುಮೋಡಗಳು.. ಇಲ್ಲಿ ಮಳೆಗಾಲದ ಈ ಸೊಬಗಿಗೆ ಸರಿಸಾಟಿಯಿಲ್ಲ. ದಾರಿಮಧ್ಯೆ ಸಿಗುವ ದಿಬ್ಬಗಳನ್ನು ಏರಿ ನಿಂತರೆ ಈ ರಮ್ಯತೆಯ ಪೂರ್ಣ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದು. ಸುತ್ತಲೂ ಹಬ್ಬಿದ ಪಶ್ಚಿಮಘಟ್ಟಗಳ ಸಾಲು ನೋಡಿದಷ್ಟು ಮುಗಿಯದ, ಕುತೂಹಲ ತಣಿಸದ ಸೊಬಗಿನ ಧಾರಾವಾಹಿಯಂತೆ ನಿಮಗೆ ಭಾಸವಾಗುತ್ತವೆ. ಹೀಗೆ ಸುತ್ತಲಿನ ಪ್ರಕೃತಿಯನ್ನು ಆಸ್ವಾದಿಸುತ್ತಾ ನಾಲ್ಕು ಕಿ.ಮೀ. ಕ್ರಮಿಸಿದರೆ ಮುಂದೆ ರಸ್ತೆಯಿಲ್ಲ. ಹೋದ ಹಾದಿಯಲ್ಲೇ ಹಿಂತಿರುಗಿ ಬರಬೇಕು.

ಅಲ್ಟೆರಾ ಸೊಬಗು ಉಳಿದೀತೆ..

ಅಲ್ಟೆರಾ ಗಿರಿಶ್ರೇಣಿಗಳ ಮೇಲಿಂದ ಸಾಗಿದ ಡಾಂಬರು ಕಿತ್ತುಹೋದ ಕಚ್ಚಾರಸ್ತೆ ಮುಂದೆ ಕೋಟಿಗಟ್ಟಲೆ ಗಳಿಸುವ ಹೆದ್ದಾರಿಯಾಗಲಿದೆ. ಆ ಲಕ್ಷಣಗಳು ಈಗಾಗಲೇ ಅಲ್ಲಿ ಗೋಚರಿಸತೊಡಗಿವೆ. ಗಿರಿಧಾಮಗಳ ಸೌಂದರ್ಯವನ್ನು ಅದರಷ್ಟಕ್ಕೆ ಬಿಟ್ಟು ಅನುಭವಿಸುವ ವಿವೇಚನೆಯನ್ನು ಮರೆತು ವಸಾಹತು, ವಿಲ್ಲಾ, ಐಷಾರಾಮಿ ರೆಸಾರ್ಟ್ಗಳ ನಿರ್ಮಾಣಕ್ಕೆ ತೊಡಗಿದರೆ ಈಗಿರುವ ನಿಸರ್ಗದ ಸೊಗಸು ಉಳಿಯಲು ಸಾಧ್ಯವಿಲ್ಲ. ಇದು ಮೌಂಟ್ ಅಲ್ಟೆರಾ ಶ್ರೇಣಿಗಳು ಎದುರಿಸುತ್ತಿರುವ ಸದ್ಯದ ಆತಂಕ. ಇದಕ್ಕೆ ಪರಿಹಾರವೂ ಇಲ್ಲ, ಎನ್ನಿ.

ಹೋಗುವುದು ಹೇಗೆ?

ಮುಂಬೈ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ ಲೋನವಾಲ – ಅಲ್ಟೆರಾ ಪರ್ವತ ಶ್ರೇಣಿ. ಲೋನವಾಲ, ಮುಂಬೈಯಿಂದ 83 ಕಿ.ಮೀ. ಪುಣೆಯಿಂದ 67 ಕಿ.ಮೀ. ದೂರದಲ್ಲಿದೆ. ಎರಡೂ ಕಡೆಗೂ ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆ ಇದೆ. ಅಲ್ಟೆರಾ ಗಿರಿಕಂದರಗಳನ್ನು ನೋಡಲು ಲೋನವಾಲದಿಂದ ಖಾಸಗಿ ವಾಹನದಲ್ಲಿಯೇ ಸಾಗಬೇಕು. ಈ ಸ್ಥಳವನ್ನು ನೋಡಲು ಮಳೆಗಾಲ ಮತ್ತು ಚಳಿಗಾಲ ಸೂಕ್ತವಾದ ಸಮಯ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.