ಎನ್ನ ಕಾಯದ ಪ್ರಭುಲಿಂಗವೇ, ಎನ್ನ ಮನದ ಪ್ರೇಮಲಿಂಗವೇ, ಎನ್ನ ಭಾವದ ಜೀವಲಿಂಗವೇ ಶರಣು ಶರಣಾರ್ಥಿ.
ವನಸುಮದೊಳೆನ್ನ ಜೀವನವರಳಿ ಅರಳಿ ಮದುಮಧುರ ಷೋಡಶಿಯಾಗಿ ಒಲವುದುಂಬುತ್ತಿರುವಾಗಲೇ, ತನುವರಳಿ ಹೂವಾಗಿ, ಮನವರಳಿ ಜೇನಾಗಿ, ಭಾವವರಳಿ ತನಿಯಾಗಿ, ಮಾದಕ ಮಾದಳದಂತೆ ಮೈದುಂಬಿ ನಿಂತಾಗ, ದುಂಬಿಗಾಗಿ ಜಗದೆ ವಿಹರಿಸುತ್ತಿರುವಾಗಲೇ ವಚನವಾಙ್ಮಯದ ಮೇರು, ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುಲಿಂಗ ದೇವರ ಪರಿಚಯ,

`ಬಿರುಗಾಳಿ ಬೀಸಿ ಮರ ಮುರಿಯುವಂತಹ ಸುಳುಹ ಸುಳಿಯದೆ, ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ' ಸುಳಿದು ಮನೋಲ್ಲಾಸದ ಉದ್ಯಾನವನದ ಹೆಬ್ಬಾಗಿಲನ್ನೇ ತೆರೆದ ಪರಿಯಿನ್ನೂ ಮನಃಪಟಲದಿಂದಾಚೆಗೆ ಸರಿದಿಲ್ಲ! ಇಳಿವಯಸ್ಸಿನ ಮುಸ್ಸಂಜೆಯ ಈ ಗೋಧೂಳಿ ಸಮಯದಲ್ಲೂ ಪ್ರಭುವಿನ ನೆನಪಿನ ಅರಿವೆ ಮಾಸದೆ ನವನವೋನ್ಮೇಷಶಾಲಿನಿಯಾಗಿ ಜೀವ-ಜೀವನದ ಪರಿವೇಷವಾದದ್ದೇ ಒಂದು ಬೆರಗು!

ತನುಭಾವ, ಮನಭಾವ, ಆತ್ಮಭಾವ, ಭಾವಾನುಭಾವವಿಭಾವಗಳ ಪರಿಧಿಯಿಂದತ್ತತ್ತ ಸರಿದ ಈ ಭಾವಲೋಕದ ಪರಿಯನೇನೆಂಬೆ, ಎಂತೆಂಬೆ ಪ್ರಭುವೆ- ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?

ಪ್ರಭೂ, ಹದಿನಾರರಿಂದ ಇಪ್ಪತ್ತರವರೆಗಿನ ವಯೋಮಾನದ ಜೀವನವರಳಿದ್ದು ಹೇಗೆ ಗೊತ್ತಾ? `ಜಗಜ್ಯೋತಿ ಬಸವೇಶ್ವರ' ಎಂಬ ಕನ್ನಡ ಚಲನಚಿತ್ರದಲ್ಲಿ ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುಲಿಂಗದೇವರ ಪಾತ್ರವನ್ನು ನೋಡಿ ಎದೆ ಏಕೆ ಝಲ್ಲೆಂದಿತು?

ಶರಣಕುಲತಿಲಕನಾದ ಅಲ್ಲಮನ ಬಗೆಗೆ ಷೋಡಶಿಯ ಬೆಲ್ಲಮನದಲ್ಲಿ ಪುಳಕವೇಕೆ ಪ್ರಭೂ? ಧಮನಿಧಮನಿಯಲಿ ನದಿಯೊಂದು ಓಡಿದ್ದೇಕೆ? ಪ್ರಭುವೆ, ನಾನಿಂದು ಷಷ್ಠಿಪೂರ್ತಿ ಮುಗಿಸಿದರೂ, ನಿಮ್ಮನ್ನು ಈ ಇಹಲೋಕದಲ್ಲಿ ಹುಡುಕುತ್ತಲೇ ಇದ್ದೇನೆ. ನಿಮ್ಮ ವಚನರಚನಾ ಕುಸುಮಗಳಲ್ಲಿ ಮರಿದುಂಬಿಯಾಗಿ ವಿಹರಿಸುತ್ತಿದ್ದೇನೆ. ಅಲ್ಲಮಪ್ರಭು ದೇವರೆಂದರೆ ರೋಮಾಂಚನವೇಕೆ?- ಇದೇನಯ್ಯಾ, ಇದೆಂತಯ್ಯಾ ಪ್ರಭುವೇ?

ನನ್ನೂರಿನ ಹಿರೇಮಠದ ಜಂಗಮ ಸ್ವಾಮೀಜಿಯವರನ್ನು ಕಂಡು ಸಾಕ್ಷಾತ್ ಅಲ್ಲಮಪ್ರಭುವಿನ ದರ್ಶನವೆಂದೇ ಬಗೆದು ಎದೆಯಲ್ಲಿ ಡಮರುಗ ಢಮರುಢಮರೆಂದಿತು! ಆ ಕಾಷಾಯ ವಸ್ತ್ರ, ಕಪ್ಪು ದಾಡಿ-ಜಟೆಗಳು! ಬಿರುಬಿರನೆ ಬೀಸಿ ನಡೆವ ಆ ದಾಪುಗಾಲು, ಓಹ್! ಆ ವ್ಯಕ್ತಿ ಕಣ್ಣಿನಿಂದ ಮರೆಯಾದರೂ ಆ ಚಿತ್ರ ಮನೋಭಿತ್ತಿಯ ಮೇಲೆ ಇಂದಿಗೂ ಅಚ್ಚೊತ್ತಿದೆ.

ಯೌವನ ಏರುತ್ತಿದ್ದಂತೆ ಪ್ರಭುವೇ, ತಮ್ಮ ಬಗೆಗಿನ ಹೇಳಲಾಗದ ಭಾವವೊಂದು ಬಲಿಯುತ್ತಾ ಸಾಗಿತು. ಹದಿನೆಂಟು-ಹತ್ತೊಂಬತ್ತರ ವಯದಲ್ಲಿ, ನಾನು ಓದುತ್ತಿದ್ದ ಸರ್ಕಾರಿ ಕಾಲೇಜಿನ ಗ್ರಂಥಾಲಯದಲ್ಲಿ ಚಾಮರಸನ `ಪ್ರಭುಲಿಂಗಲೀಲೆ'ಯನ್ನು ಓದುತ್ತಾ ಓದುತ್ತಾ, ವಯೋಸಹಜವಾದ ಪುಳಕಗಳು, ರೋಮಾಂಚನಗಳು ತನುವನ್ನೂ ಮನವನ್ನೂ ಮುದಗೊಳಿಸಿದುವು; ಓದಿನ ದಣಿವಾರಿಸಿದುವು; ಬಡತನದ ಬೇಗೆಗೆ ತಂಪುಣಿಸಿದುವು.

ಈ ಲೋಕದ ಮನುಜರಲ್ಲದ ನಿಮಗೆ ಈ ಹೊನ್ನಾಂಬಿಕೆ ಮರುಳಾದುದು ಏಕೆ? ಈಗಲೂ ನಿಮ್ಮ ನೆನಪು ತರುವುದು ಪುಳಕವನ್ನೇ! ಈ ಲೋಕದ ಮನುಜರಲ್ಲೇಕೆ ಆಸಕ್ತಳಾಗಲಿಲ್ಲ! ಆರನೇ ಇಂದ್ರಿಯ ಅಥವಾ ಮೂರನೇ ಕಣ್ಣು ಸೂಚಿಸಿದ್ದು -ನನಗೆ ಈ ಲೋಕದ ಸಂಸಾರ ಹೊಂದುವುದಿಲ್ಲವೆಂಬ ಸತ್ಯ! ಆದದ್ದೆಲ್ಲಾ ಒಳಿತೇ ಆಯಿತು. ಪ್ರಭುದೇವರೇ, ನನ್ನ ಮನದ ವೇದಿಕೆಯಲ್ಲಿ ನಿಮ್ಮ ಕಾಲ್ಪನಿಕ ರೂಪ ರಿಂಗಣಗುಣಿಸಹತ್ತಿತು! ನಾನು ನನ್ನನ್ನು ಮಾಯಾದೇವಿಯೆಂದೇ ಬಗೆದುಬಿಟ್ಟೆ.

ನಿಮ್ಮ ಢಮರುನಿನಾದದ ನಾದತರಂಗಗಳು ರುಧಿರವಾಹಿನಿಯಲ್ಲಿ ಉಬ್ಬರವಿಳಿತವನ್ನೆಬ್ಬಿಸಿದುವು. ಅಲ್ಲಮಪ್ರಭುವೆ, ನಾನು ನಿಮ್ಮ ಕಾಯದ ಚಿತ್ರವನ್ನು ಕಲ್ಪಿಸಿಕೊಂಡದ್ದು ಚಾಮರಸನ ದಿಗ್ದರ್ಶನದಲ್ಲಿ! ಅದಿನ್ನೂ ನನ್ನ ಮನದಿಂದ ಮರೆಯಾಗಿಲ್ಲ.
ಏನಂತೀರಿ? ಏಕೆ ಹೀಗೆ? ಈ ಕಲ್ಪನೆ ನನ್ನನ್ನು ಅದೆಷ್ಟೋ ಬಾರಿ, ಲೆಕ್ಕವಿಲ್ಲದಷ್ಟು ಸಾರಿ ನನ್ನ ನೆನಪಿನಂಗಳದಲ್ಲಿ ಕಣ್ಣಾಮುಚ್ಚಾಲೆ ಆಡಿದ್ದುಂಟು.

ಓಹ್! ಚಾಮರಸನ ದಿಗ್ದರ್ಶನದಲ್ಲಿ ಅಲ್ಲಮರಸನ ನರ್ತನ! ನಾನಂತೂ ಚಾಮರಸನಿಗೆ ಋಣಿ. ಪ್ರಭುವೇ, ಮನಃಶಾಸ್ತ್ರಜ್ಞನ ಪ್ರಕಾರ- `ಇದು ರಸಿಕಳಾದೊಬ್ಬ ಹೆಣ್ಣುಮಗಳ ಮಧುರ ಕಲ್ಪನೆ, ವಯೋಸಹಜ. ಬಡತನದ ಬೇಗೆಯಿಂದ ಪಲಾಯನಗೈದು ಮನದ ಬಯಕೆಯ ತಣಿಸುವ ಪರಿ. ಬಡಹೆಣ್ಣಿಗೆ ಯಾರು ಮಣೆ ಹಾಕುವರೆಂಬ ಸತ್ಯದರಿವು!' ಇರಲಿರಲಿ. ಆದರೂ ಶಿವಶರಣರಲ್ಲಿ ನೀವೆಂದರೆ ನನಗೆ ಬಲು ಅಚ್ಚುಮೆಚ್ಚು!

ಬಳ್ಳಿಗಾವೆಯ ದೇವಳದಲ್ಲಿ, ನೀವು ನಿಮ್ಮ ವಾದ್ಯವನ್ನೇರಿಸಿಕೊಂಡು, ನವರಂಗದ ಗೋಡೆಗೊರಗಿ ಒಂದು ಕಾಲನ್ನು ಬೆನ್ನಕಡೆಗಿನ ಗೋಡೆಗಾನಿಸಿ ನಿಂತು, ಕಣ್ಣ ಮುಚ್ಚಿ ಮಾಯಾಂಗನೆಯ ನರ್ತನಕ್ಕೆ ವಾದ್ಯವನ್ನು ಬಾರಿಸುತ್ತಿರುವ ನಿಮ್ಮ ನಿಲುವು! -ಕಲ್ಪನೆ ಅದೆಷ್ಟು ಮನೋಹರವಾಗಿ ಕಂಡಿತ್ತೋ ಅಂದು, ಇಂದೂ ಸಹ ಆ ನಿಲುವಿನ ಕಲ್ಪನೆ ಅತಿಶಯವಾಗಿ ಚೇತೋಹಾರಿಯಾಗಿದೆ.

ಮುಪ್ಪೆಂದರೆ ಇನ್ನೇನು ಪ್ರಭುವೇ? -ಗತಿಸಿ ಹೋದ ರಸನಿಮಿಷಗಳ ಮಧುರ ನೆನಪೇ! ಚಿತ್ತದಲ್ಲಿನ ಅಲ್ಲಮನ ಚಿತ್ರ ಓಹ್, ಅದೆಷ್ಟು ಅದ್ಭುತವಾಗಿತ್ತೋ ಆ ಎಳೆಯ ವಯಸ್ಸಿನ ಕಲ್ಪನೆಯಲ್ಲಿ, ಈಗಲೂ ಅಷ್ಟೇ ಅದ್ಭುತ! ಇದೆಂತಯ್ಯಾ, ಇದೇನಯ್ಯಾ? ಅಹುದಹುದು -ಮನದ ಶಾಸ್ತ್ರವ ಬಲ್ಲ ನಿಪುಣನಿಗೇ ಗೊತ್ತುಂಟು ಇದರ ಮರ್ಮ. ನನ್ನ ಮನದ ಎಲ್ಲ ಪರಿವೆಗಳ ಪರಿಯೂ ನನಗೆ ಗೊತ್ತುಂಟು.

ಸುಮಾರು ಐವತ್ತು ವರ್ಷಗಳಿಂದಲೂ ನಿಮ್ಮ ಕಾಲ್ಪನಿಕ ಚಿತ್ರಗಳನ್ನು ನೇಯುತ್ತಿರುವ ಈ ಹೊನ್ನಾಂಬಿಕೆಯ ಚಿತ್ತದ ಚಿತ್ರದ ಕಲ್ಪನೆಯೇನಾದರೂ ನಿಮಗಿದೆಯೇ? ನಾನು ಎಂಬತ್ತೇಳನೇ ಇಸವಿಯಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅಂಚೆಶಿಕ್ಷಣದ ಮೂಲಕ ಆಂಗ್ಲಭಾಷೆಯಲ್ಲಿ ಎಂ.ಎ. ಪದವಿಯಲ್ಲಿ, ಶೇಕ್ಸ್ಪಿಯರನನ್ನು ನೆಚ್ಚಿನ ಕವಿಯಾಗಿ ಆರಿಸಿಕೊಂಡಾಗ, ಅವನು ಮತ್ತೆ ನನಗೆ ಚಾಮರಸನಾದ.

ನಿಮ್ಮ ನೆನಪು ಮತ್ತೆ ಎದ್ದಿತು ಛಲ್ಲನೆ! ಅವನು ಯಾವುದೋ ಯುವತಿಯನ್ನು ಪ್ಲೇಟಾನಿಕ್ ಆಗಿ ಪ್ರೀತಿಸುತ್ತಿದ್ದನಂತೆ. ಕಾಯದ ಹಂಗಿಲ್ಲದ ಮನವೆಲ್ಲಾ ತಾನೇತಾನಾದ ಆ ದಿವ್ಯಪ್ರೇಮದ ಕಲ್ಪನೆ ನನ್ನ ಮಧ್ಯವಯಸ್ಸಿನಲ್ಲಿ ರಂಗೆಬ್ಬಿಸಿತು! ಚಾಮರಸನೂ ಶೇಕ್ಸ್ಪಿಯರನೂ ನನಗೆ ಆತ್ಮೀಯರಾದರು. ಚಾಮರಸನು ನಿಮ್ಮನ್ನು ಪರಿಚಯಿಸಿದ, ಶೇಕ್ಸ್ಪಿಯರನು ಆ ಭಾವನೆಗಳಿಗೊಂದು ಪವಿತ್ರ ಮುದ್ರೆಯೊತ್ತಿದ.

ನಿಮ್ಮ ನೆನಪು ನನಗೆ ಇಂದಿಗೂ ಪ್ರಿಯ. ನಾನಿಂದು ಬರೆಯುತ್ತಿರುವ ಪ್ರೇಮಪತ್ರಕ್ಕೆ ಐವತ್ತು ವರ್ಷಗಳ ಹಿಂದೆಯೇ ಪೀಠಿಕೆ ಸಿದ್ಧವಾಗಿತ್ತು. ಪ್ರಭೂ, ನೀವು ಜ್ಞಾನವೆಂಬ ಗುರು, ನಾನು ಪ್ರೇಮವೆಂಬ ಶಿಷ್ಯೆ. ಈ ದೈವೀಪ್ರೇಮಕ್ಕೆ ಕಾಮದ ಲೇಪವಿಲ್ಲ - ಗಾಳಿಗೆ ದೂಳಿನ ಲೇಪವಿಲ್ಲ.

ಈ ದೇವ ಆ ದೇವ ಮಾದೇವನೆನಬೇಡವೆಂದ ಮನ, ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕೆದಿತು? ನೆಲದ ಮೇಲಿನ ದೇವಾಲಯಗಳಿಗೆ ಭೇಟಿ ನಿಲ್ಲಿಸಿದೆ. ಕೌಶಿಕರಿಬ್ಬರ ಕಿರುಕುಳದಿಂದ ಜೀವ ಬಯಲಾಯಿತು, ಜೀವನ ಬರಿದಾಯಿತು. ಈ ಬಟಾಬಯಲನ್ನು ತುಂಬಿದ್ದು ನಿಮ್ಮ ನೆನಪೇ ಪ್ರಭುವೇ! `ದೌರ್ಬಲ್ಯವನು ದಹಿಸು' ಎಂದರು ಕುವೆಂಪು.

ನಿಮಗೆ ಗೊತ್ತೆ ಪ್ರಭು, ಪರ ಊರಿನ ಹೊಸಮಠದ ಅಯ್ಯನೊಬ್ಬ ನಿಮ್ಮದೇ ನಕಲಿ! ಎದೆಯ ಬಡಿತ ನೂರ್ಮಡಿ! ಆ ನಕಲೀಶಾಮ ಮಂದಹಾಸದ ಹಾಸನ್ನೇ ಹಾಸಿದರು. ಕಣ್ಣಲ್ಲಿ ಕಣ್ಣು ನೆಟ್ಟರು, ಪ್ರಭುವೇ! ಈ ನಗೆಬೊಂಬೆ ಅಲ್ಲಮ ಪ್ರಭು ಹೇಗಾದಾನು? ಎಚ್ಚೆತ್ತ ಮಸ್ತಕದೊಳಗೆ ಪುಸ್ತಕಗಳ ತುಂಬಿದೆ.

ಎಣ್ಣೆ ಬೇರೆ, ಬತ್ತಿ ಬೇರೆ, ಎರಡೂ ಕೂಡಿ ಸೊಡರಾಯಿತ್ತು- ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ, ಭಕ್ತಿಯ ಮಾಡಬಲ್ಲಡೆ, ಆತನೇ ದೇವ ಗುಹೇಶ್ವರಾ: ಅಹುದಹುದು ಪ್ರಭುವೇ, ನೀವೇ ಬೇರೆ, ನಾನೇ ಬೇರೆ. ಇಬ್ಬರೂ ಕೂಡಿ ಪ್ರೇಮಜ್ಯೋತಿಯಾಗಿತ್ತು. ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ ನಿಮ್ಮಲ್ಲಿ ಭಕ್ತಿಯುಂಟಾಗಿತ್ತು.

ಅಲ್ಲಮದೇವರೆ, ಆಸೆಗೆ, ಆಮಿಷಕ್ಕೆ, ಹೊನ್ನು, ಹೆಣ್ಣು, ಮಣ್ಣಿಂಗೆ ಸತ್ತುದು ಕೋಟಿ, ನಿಮ್ಮ ಗುಹೇಶ್ವರನಿಗಾಗಿ ಸತ್ತವನಾರನೂ ಕಾಣೆ. ನೀವೆನ್ನ ಗುಹೇಶ್ವರ, ನಿಮ್ಮಂಥ ಗುಹೇಶ್ವರ ನನಗುಂಟು, ನಿಮಗಿಲ್ಲ. ನಿಮ್ಮ ನೆನಪೊಂದು ಸಾವಲ್ಲ, ಅದೊಂದು ಬದುಕು -ಸಾವಿರ ಸಾವಿರ ವರುಷ ಹರುಷದಲಿ ರಸಿಕರ ಮನೋಮಂಡಲದಲ್ಲಿ ಹಾಯಾಗಿ ಬದುಕುವೆ.

ಪ್ರಭುವೇ ನಿಮ್ಮನರಿದ ಬಳಿಕ, ಈ ಲೋಕದ, ಈ ಲೋಕದ ಮನುಜರಗೊಡವೆ ಬೇಡವೇ ಬೇಡವಾಗಿದೆ- `ಹಾಲುಂಡು ಮೇಲುಂಬರೆ ಪ್ರಭುಲಿಂಗೇಶ?' ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ. ಮೇರುಮಧ್ಯದೊಳಗಿದ್ದು ಜರಗ ತೊಳೆವ ಚಿಂತೆ ಏಕೆ?' ಮನಃಸ್ಥಲದೊಳಗೆ ನೀವಿದ್ದು ಮತ್ತಾವ ಚಿಂತೆ ಏಕೆ ಹೇಳಾ, ನನ್ನ ಗುಹೇಶ್ವರನೇ. ನಮ್ಮ ಚಿಂತೆ ಹಾಸಲುಂಟು, ಹೊದೆಯಲುಂಟು.

ತನುವೆಂಬ ಭಾಂಡದಲ್ಲಿ ಮನವೆಂಬ ಮೇಲೋಗರ, ಆ ಮೇಲೋಗರದಲ್ಲಿ ಪ್ರೇಮವೆಂಬ ಘತ - ನಿಮಗರ್ಪಿಸಿ ಧನ್ಯಳಾದೆ ಪ್ರಭೂ. `ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ' ಕಾಣಿ. ನಿಮ್ಮ ನೆನಪಿಂದ ಚಿಮ್ಮಿದ ಪ್ರೇಮದ ಚಿಲುಮೆಯನ್ನು ನಿಮಗೇ ಅರ್ಪಿಸಿ ಸಮಾಧಾನಿಯಾದೆ.

ಅಲ್ಲಮಪ್ರಭುವೆ, ಇದು `ಗಳಿಗೆಯ ಬೇಟವ ಮಾಡಿಹೆನೆಂಬ ಪರಿ'ಯದಲ್ಲ, ಜನ್ಮಜನ್ಮಾಂತರದ್ದು- ಹನ್ನೆರಡನೇ ಶತಮಾನದಿಂದ ಇಪ್ಪತ್ತೊಂದನೇ ಶತಮಾನದವರೆಗಿನ ಸಕಲಂದದ ಜನುಮಜನುಮಗಳದ್ದು! ಎಲ್ಲಾ ನಿಮಗಾಗಿ, ಪ್ರಭುಲಿಂಗವೇ! ನಿಮ್ಮ ನೆನಪೇ ನನಗೆ ಮರುಜವಣಿಯಂತೆ. ನೀವೇ ಗುರಿಯಾಗಿ ಹೋಗುವೆ, ಹೋಗಿಯೇಬಿಡುವೆ. `ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ -ನೀನು ಗುರಿಯಾಗಿ ಹೋದವನಾರನೂ ಕಾಣೆ, ಗುಹೇಶ್ವರಾ' ಎಂದು ಹಲುಬುವಿರೇಕೆ, ಪ್ರಭುವೇ?

`ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ? ಕಂಗಳಿಗೆ ಮರೆಯುಂಟೆ, ಹೇಳಾ ಲಿಂಗವೇ? ದಾಳಿಕಾರಂಗೆ ಧರ್ಮವುಂಟೆ'. ದಿವ್ಯಪ್ರೇಮಕ್ಕೆ ತಣಿವುಂಟೆ, ದಣಿವುಂಟೆ? ಮಡಿಮೈಲಿಗೆಯುಂಟೆ? ಕಾಮವುಂಟೆ, ಕಾತುರವುಂಟೆ? `ಎಸೆಯದಿರು, ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೋ' ದಿವಿನಾದ ಪ್ರೇಮಕ್ಕೆ ಕಾಮದ ಲೇಪವಿಲ್ಲ.
ಅಲ್ಲಮಪ್ರಭುವೇ, ನಾ ಎಂಬುದಿಲ್ಲ, ಇಲ್ಲವೇ ಇಲ್ಲ, ನೀವೇ ಎಲ್ಲ! `ಕರ್ಪೂರದ ಗಿರಿಯ ಉರಿ ಹಿಡಿದಡೆ ಇದ್ದಿಲುಂಟೆ? ಮಂಜಿನ ಶಿವಾಲಯಕೆ ಬಿಸಿಲ ಕಳಸವುಂಟೆ? ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ, ಮರಳಿ ಬಾಣವನರಸಲುಂಟೆ?

ಗುಹೇಶ್ವರನೆಂಬ ಲಿಂಗವನರಿದು ಮರಳಿ ನೆನೆಯಲುಂಟೆ?'- ನನ್ನ ಗುಹೇಶ್ವರನ ಮರೆತು ನಾನಿಲ್ಲ. ನನ್ನ ಮನ ನಿಮ್ಮಳಗು ಪ್ರಭುವೆ, ಮರಳಿ ನಾನಿಲ್ಲ. `ಅಂಬುಧಿಯೊಳಗಾದ ನದಿಗಳು ಮರಳುವುವೆ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ?' - ನಿಮ್ಮ ನೆನೆದು ನಿಮ್ಮಲ್ಲಿ ಐಕ್ಯವಾದ ಬಳಿಕ ಈ ಹೊನ್ನಾಂಬಿಕೆ ಮತ್ತೆ ಹುಟ್ಟುವುದೆ, ಪ್ರಭು? ನಿಮ್ಮಗೊಡವೆಯೇ ನನ್ನ ಒಡವೆ. ನಿಮ್ಮ ಬಗೆಗಿನ ಅರಿವೇ ಜ್ಞಾನರತ್ನ. ಅಂತಪ್ಪ ದಿವ್ಯರತ್ನವ ಕೆಡಗುಡದೆ, ಆ ರತ್ನವ ನಾನು ಅಲಂಕರಿಸಿಯಾದಡೆ, ನನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.

ಈ ಪ್ರೇಮದ ಭಾಷೆಯಲ್ಲಿ ಸತ್ಯವಿದೆ, ನಿತ್ಯಸತ್ಯವಿದೆ, ದೈವವಿದೆ, ಬೆಳಕಿದೆ, ಬೆಳ್ಳಂ ಬೆಳಗಿದೆ. ಮುಗಿಲ ಮರೆಯ ಮಿಂಚಿನಂತೆ, ಬಯಲ ಮರೆಯ ಮರೀಚಿಕೆಯಂತೆ, ಶಬ್ದದ ಮರೆಯ ನಿಶ್ಶಬ್ದದಂತೆ, ಕಂಗಳ ಮರೆಯ ಬೆಳಗಿನಂತೆ -ನನ್ನ ಅಲ್ಲಮೇಶ್ವರಾ, ನಿಮ್ಮ ನಿಲುವು! ನಿಮ್ಮ ನಿಲುವಿನೆದುರು ಕುಬ್ಜೆ ನಾ.

ಪ್ರಭುವೇ, ಈ ಪ್ರೇಮಪತ್ರದ ಮೂಲಕ ಮತ್ತೆ ನಿಮ್ಮ ನೆನಪಿನ ಸುಳಿಯಲ್ಲಿ ಸಿಲುಕಿ ಮುದಗೊಂಡೆ ವಾರಿಕಲ್ಲ ಪುತ್ಥಳಿಯ ಅಪ್ಪುಕೊಂಡಂತಾಯಿತ್ತು. ಅಗ್ನಿಪುರುಷನ ಮುಸುಕ ತೆಗೆದ ಕರ್ಪುರದಂತಾಯಿತ್ತು. ಕತ್ತಲೆಯೊಳಗೆ ರವಿಯ ಬೆಳಗು ಹೊಕ್ಕಂತಾಯಿತ್ತು.ಬಸವಪ್ರಭುದೇವರು ತಮ್ಮ ಇಷ್ಟದೈವ ಕೂಡಲಸಂಗಮೇಶ್ವರನಲ್ಲಿ ಐಕ್ಯವಾದಂತೆ, ನಾ ನನ್ನ ಪ್ರೇಮದೇವತೆಯಲ್ಲಿ ಐಕ್ಯವಾಗಿ ಹೋದುದ, ಶರಣಬಳಗದ ಶಿಖರವ ನೆನೆ ನೆನೆದು ಬಾಳು ಹಸನಾದುದ ಕಂಡೆ!

ಅಲ್ಲಮಪ್ರಭುವೇ, ನೀವೇ ಮಾಮರ, ನಾನೇ ಕೋಗಿಲ. ಬೆಟ್ಟದ ಮೇಲಣ ನೆಲ್ಲಿಕಾಯಿ ನಾನೆ, ಸಮುದ್ರದೊಳಗಣ ಉಪ್ಪು ನೀವೇ. ಅತ್ತಣಿಂದಿತ್ತ, ಇತ್ತಣಿಂದತ್ತ ಸಂಬಂಧವಿಹುದು. ಗುಹೇಶ್ವರಲಿಂಗಕ್ಕೆಯೂ ನಿಮಗೆಯೂ ಸಂಬಂಧ ಹೇಂಗೋ, ನನಗೂ ನಿಮಗೂ ಸಂಬಂಧ ಹಾಂಗೆ, ತಿಳಿಯಿತೇ?

ಪ್ರಭುದೇವರೇ, ಹರಿವ ನದಿಗೆ ಮೈಯೆಲ್ಲಾ ಕಾಲು, ಉರಿವ ಕಿಚ್ಚಿಗೆ ಮೈಯೆಲ್ಲಾ ನಾಲಿಗೆ, ಬೀಸುವ ಗಾಳಿಗೆ ಮೈಯೆಲ್ಲಾ ಮುಖ. ಗುಹೇಶ್ವರಾ, ನಿಮ್ಮ ಶರಣಂಗೆ ಸರ್ವಾಂಗವೆಲ್ಲಾ ಲಿಂಗ- ನನ್ನ ಸರ್ವಾಂಗವೆಲ್ಲಾ ಅಲ್ಲಮಪ್ರಭುಲಿಂಗ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.