ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಹರಿ | ಅಪ್ಪನ್ ಜೊತಿಗೆ ಪ್ಯಾಟಿಗ್ ಹೋಪ್ದೇ ಖುಷಿ!

Published : 11 ಅಕ್ಟೋಬರ್ 2024, 8:49 IST
Last Updated : 11 ಅಕ್ಟೋಬರ್ 2024, 8:49 IST
ಫಾಲೋ ಮಾಡಿ
Comments

ಮನೆಲ್ಲಿ ಬಟ್ಟೆ ಸೋಪು, ಕಾಳ್‌ಕಡಿ ಹೇಳಿ ಸುಮಾರ್‌ ವಸ್ತು ಖಾಲಿ ಆಗೋಜು, ಅಂಗ್ಡಿಗೆ ಹೋಗಿ ತಗಂಬತ್ರ?.... ಹೇಳಿ ನನ್ನ ಪತಿದೇವರನ್ನ ಕೇಳಿದ್ದಕ್ಕೆ ಚೂರ್‌ ಆಫೀಸ್‌ ಕೆಲಸ ಇದ್ದಲೆ… ಆನ್‌ಲೈನ್‌ಲ್ಲಿ ಆರ್ಡರ್‌ ಹಾಕೇ… ಆನು ರೆಡಿ ಆಗಿ ಹೋಗಿ ತಗಂಡ್ ಬಪ್ಪ ಅಷ್ಟ್ರಲ್ಲಿ ಮನೆಗೇ ಬಂದಿರ್ತು... ಹೇಳಿ ಸುಮ್ನಾದ್ರು. ನಾನೂ ಎಂಥೂ ಮಾತಾಡಿದ್ನಿಲ್ಲೆ..

ಎಂತಕ್ಕೆ ಅಂದ್ರೆ ಪ್ಯಾಟೆ ಮೇಲಿನ ಜೀವನನೇ ಹಂಗೆ ಹೇಳದು ಅರ್ಥ ಆಗಿತ್ತು. ಎಲ್ಲರಿಗೂ ಅರ್ಜೆಂಟು, ಯಾವುದಕ್ಕೂ ಸಮಯ ಇಲ್ಲೆ, ಬೇಗ್ನೆ ಆಫೀಸಿಗೆ ಹೊರಡವು, ಇಲ್ದಿದ್ರೆ ಟ್ರಾಫಿಕ್‌ ಜಾಮ್‌ ಆಗೋಗ್ತು ಹೇಳ ಭಯ. ಇಡೀ ದಿನ ತಲೆಕೆಡ್ಸಕ್ಯಂಡು ಬಾಸ್‌ ಹತ್ರ ಕೆಲಸ ಮಾಡಿ ಇವತ್ತು ತಲೆ ಹನ್ನೆರಡಾಣೆ ಆಜು ನಂದು... ಅಂತಾ ಹೇಳ ಮಾತು ಕೇಳಿ ಕೇಳಿ ರೂಢಿ ಆಗೋಜು. ಇದ್ರ ಮಧ್ಯೆ ಅಂಗಡಿಗೆ ಹೋಗಿ ಅದ್‌ ತಗ ಬನ್ನಿ.. ಇದ್‌ ತಗ ಬನ್ನಿ.. ಅಂದ್ರೆ ಅದೊಂದು ರೀತಿ ಕಿರಿಕಿರಿನೆಯಾ. ಹಿಂಗಾಗಿ ಆನ್‌ಲೈನ್‌ ಶಾಪಿಂಗ್‌ ಜೀವನ ಪ್ಯಾಟೆ ಮೇಲ್ನೌಕೆ ರಾಶಿ ಸಸಾರ ಮಾಡಿಗಿದು ಹೇಳಿ ಮನ್ಸಲ್ಲೆ ಅನ್ಕಂಡಿ.

ಆದ್ರೂ ಒಂದ್ಸಲ ಹೊರಗಡೆ ಓಡಾಡ್‌ಕ್ಯಂಡ್‌ ಬರವು ಕಂಡಾಗ ಹಿಂಗ್‌ ಶಣ್ ಶಣ್‌ ನೆಪ ಹುಡ್ಕ್ಯಂಡ್‌ ನಾ ಹೋಗ್ತಿ, ಒಳ್ಳೆ ಗಾಳಿ ಸಿಕ್ತು ಹೇಳಿ ಅಲ್ದೇ ಇದ್ರೂ ಊರಲ್ಲಿ ಹತ್ತಾರು ಮನೆಗಳ ಮಧ್ಯೆ ಬೆಳೆದವಕೆ ನಾಲ್ಕ್‌ ಹೊಸ ಜನರ್‌ ಮುಖ ಕಾಣ್ತು ಹೇಳದೇ ಸಮಾಧಾನ.
ಈ ಗಡಿಬಿಡಿ ಜೀವನದಲ್ಲಿ ಆವಾಗ್‌ ಆವಾಗ್‌ ನೆನಪಾಪ್ದು ಅಂದ್ರೆ ಊರು. ವಾರಕ್ಕೋ, 15 ದಿನಕ್ಕೊ ಒಂದ್‌ ಸಲ ಪ್ಯಾಟಿಗ್‌ ಹೋದ್ರೆ ಅವತ್ತೇ ಎಲ್ಲಾ ಸಾಮಾನ್‌ ಲಿಸ್ಟ್‌ ಅಮ್ಮಂದು ರೆಡಿ ಇರ್ತಿತ್ತು.

‘ಅಮ್ಮಾ ಕೆಂಪ್ ಚೀಲ ಅಡ್ಡಿಲ್ಯ? ಹಳದಿದ್ ಅಡ್ಡಿಲ್ಯ?’ ಹೇಳ್‌ ಕೇಳಿದ್ರೆ ತನ್ನ ಪತಿದೇವರಿಗೆ ಎಲ್ಲದೂ ಕೈಯಲ್ಲಿ ಹಿಡ್ಸವು ಹೇಳ ಅರ್ಜೆಂಟ್‌ನಲ್ಲಿ, ‘ಯಾವದಾದ್ರೂ ಒಂದ್‌ ತಗಳೆ ಮಾರಾಯ್ತಿ… ಪ್ರತಿ ಸಲ ಪ್ಯಾಟಿಗ್‌ ಹೋಪಕೀರೆ ಅಪ್ಪನ್‌ ಸಂತಿಗೆ ಹೋಗ್ತೆ ಹೇಳ್‌ ಹಠ ಮಾಡ್ತೆ… ಬ್ಯಾಡ್ದೋದ್‌ ಎಲ್ಲಾ ತಗ ಬಂದ್ಕತ್ತೆ. ನಾಲ್ಕ್‌ ದಿವಸನೂ ಅದ್‌ ಉಪಯೋಗಕ್‌ ಬತ್ತಿಲ್ಲೆ’ ಹೇಳ ಅಮ್ಮನ ಮಂತ್ರಾಕ್ಷತೆ ಖಾಯಂ ಆಗಿತ್ತು.
ಆದ್ರೂ ಅಪ್ಪನ್‌ ಸಂತಿಗೆ ಪ್ಯಾಟಿಗ್‌ ಹೋದ್ರೆ ಅಪ್ಪ ಖುಷಿನೇ ಬೇರೆ. ಆ ಸಂತೆ ಮಾರ್ಕೆಟು, ಬಣ್ ಬಣ್ಣದ್ ಪುಗ್ಗಿ(ಬಲೂನು), ಪೇಪರ್‌ ಕಟ್‌ ಮಾಡಿ ಚಂದ ಕಾಂಬ ಹಂಗೆ ಮಾಡಿರೊ ಹೂವು, ಗಾಳಿಗೆ ಬರ್ರನೆ ತಿರುಗೊ ಗಿರ್‌ಗಿಟ್ಲೆ, ರಟ್ಟಿನ ಪೈಪ್‌ನಲ್ಲಿ ಜೋಡ್ಸಿದ್ ಗಾಜಿನ ಬಳೆ, ದಾರಿಯಲ್ಲಿ ಹೋಗ್ತಾ ಇದ್ರೆ ‘ಚಂದ ಕಾಣ್ತೆ ಒಂದ್‌ ಸಲ ನೋಡೆ’ ಹೇಳೋ ಕನ್ನಡಿ, ಬಣ್ಣದ ರಬ್ಬರ್‌ ಬ್ಯಾಂಡ್‌, ಹಣಿಗೆ, ಪ್ಲಾಸ್ಟಿಕ್‌ ಅಡಿಗೆ ಸಾಮಾನ್‌ ಸೆಟ್ಟು, ಮಲ್ಲಿಗೆ, ಸೇವಂತಿಗೆ, ಗುಲಾಬಿ ಹೂವುಗಳ ಪರಿಮಳ…, ಹಸಿ ತರಕಾರಿ, ಬೆಳ್ಳುಳ್ಳಿ-ಈರುಳ್ಳಿ ಘಮ ಒಂದ್ಕಡೆಯಾದ್ರೆ ಅತ್ಲಾಗೆ ಕೊಳೆತ ತರಕಾರಿ, ಇನ್ನೊಂದ್ಕಡೆ ಚರಂಡಿ ನೀರಿನ ಘಾಟು…

ಅಪ್ಪನ ಕೈ ಹಿಡ್ಕಂಡು ಹೋಗ್ತಾ ಇದ್ರೆ ಒಂಥರಾ ಗತ್ತು.. ದಾರಿ ಮಧ್ಯೆ ಸಿಗುವ ಪರಿಚಯಸ್ಥರು..'ನೀನೂ ಬಂಜ್ಯನೆ ಅಪ್ಪನ್‌ ಸಂತಿಗೆ ಪ್ಯಾಟಿಗೆ… ಎಂತೆಂತ ತಗಂಡೆ..’ ಹೇಳಿ ರಾಗ ಎಳ್ದು ಕೇಳಿದ್ರೆ ನಾಚಿಕೆ, ಖುಷಿಯಿಂದ ‘ಹು’ ಎಂದು ಹೇಳುವ ಪರಿ..

‘ಈ ಚೀಲ ಹಿಡ್ಕ.. ಚೊಲೊ ಚೊಲೊ ತರಕಾರಿ ತಗಳನ.. ಹುಳಿ, ಪಲ್ಯ ಮಾಡಲೆ ಬೇಕಲೆ..’ ಹೇಳಿ, ರಾಶಿ ಹಾಕಿದ್‌ ತರಕಾರಿ ರಾಶಿಯಲ್ಲಿ ಅಪ್ಪ ಒಂದೊಂದೆ ತರಕಾರಿ ಆರ್ಸದ್ ನೋಡಿ ಇದೆಲ್ಲ ಅಪ್ಪಂಗೆ ಹೆಂಗ್‌ ತೆಳೀತು ಹೇಳಿ ಆಶ್ಚರ್ಯ ಆಗ್ತಿತ್ತು, ಅದಕ್ಕಿಂತ ಚೌಕಾಸಿ ಮಾಡಿ ಅಂಗಡಿಯವು ಹೇಳಿದ್‌ ರೇಟಿಗಿಂತ ಕಡಿಮೆ ದುಡ್ಡು ಕೊಟ್ಟು ಖರೀದಿ ಮಾಡ್ಕ್ಯಂಡು ಬಪ್ದ್ ನೋಡಿ.. ‘ಅಪ್ಪ ಅವು ನಿಂಗ್‌ ಗೊತ್ತಿದ್ದವ?.. ನೀ ಹೇಳಿದ್‌ ರೇಟಿಗೇ ಕೊಟ್ವಲಾ? ಎಂತಕ್ಕೆ? ನಾನ್ ಕೇಳಿದ್ ಪ್ರಶ್ನೆಗೆ ‘ಅವು ಜಾಸ್ತಿ ಹೇಳ್ತ ನಾವು ಕಮ್ಮಿಗೆ ಕೇಳವು..ಅತ್ಲಾಗ್‌ ಇತ್ಲಾಗ್‌ ಮಾಡಿ ಹೇಳಿದ್‌ಕ್ಕಿಂತ ಕಡಿಮೆಗೆ ಅವೇ ಇಳಿತ. ಆದ್ರೆ ಒಂದ್‌ ನೆನ್‌ಪ್‌ ಇಟ್ಕ್‌ ಎಲ್ಲರತ್ರೂ ಚೌಕಾಸಿ ಮಾಡಲಾಗ.. ಒಂದಷ್ಟ್‌ ಜನ ಕಷ್ಟಪಟ್ಟು ತರಕಾರಿ ಬೆಳ್ದು ತಂದಿರ್ತ. ಅವು ಮೋಸ ಮಾಡ್ತ್ವಿಲ್ಲೆ, ಖರೆನೇ ಹೇಳ್ತ.. ಆವಾಗ ನಾವೂ ನೋಡಿ ದುಡ್‌ ಕೊಡಕಾಗ್ತು’ ಎನ್ನುವ ಬುದ್ಧಿವಾದ…

ಮನೆಗ್‌ ಬರ್ತಾ ಅಪ್ಪನ ಕೈಲಿಪ್ಪ ತುಂಬಿದ ಚೀಲದಲ್ಲಿ ನನಗೆ ಬೇಕಾಗಿದ್ದೂ ಇದ್ದು ಹೇಳದೇ ಖುಷಿ ಆಗಿರ್ತಿತ್ತು. ಆದ್ರೆ ಇವತ್ತಿನ ಪ್ಯಾಟೆ ಜೀವ್ನ ಇಂಥ ಸಣ್ ಸಣ್ ಖುಷೀನೆಲ್ಲ ಕಿತ್ಕಂಡಿಗಿದು ಹೇಳದೇ ಬೇಜಾರು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT