ಮಲೆನಾಡಿನ ಹಳ್ಳಿಯೊಂದರ ಜಡಿ ಮಳೆಯಲ್ಲಿ ತೋಯುತ್ತ, ಕನ್ನಡ ಶಾಲೆಗೆ ಹೋಗುತ್ತಿದ್ದ ಹುಡುಗ ಚಾಪೆಯ ಮೇಲೆ ಕುಳಿತು ಪಾಠ ಕೇಳುತ್ತಿದ್ದ. ಭವಿಷ್ಯದಲ್ಲಿ ತಾನೊಬ್ಬ ಉನ್ನತ ವ್ಯಕ್ತಿಯಾಗುವ ಬಗ್ಗೆಯಾಗಲೀ, ತನ್ನ ಹಳ್ಳಿಯ ಮನೆಗೆ ಮಾಜಿ ರಾಷ್ಟ್ರಪತಿಯೊಬ್ಬರು ಭೇಟಿ ನೀಡುತ್ತಾರೆ ಎಂದಾಗಲೀ ಆಗ ಊಹಿಸಿಯೇ ಇರಲಿಲ್ಲ.

ಕಾಫಿ, ಅಡಿಕೆ, ಬಾಳೆ ತೋಟಗಳಲ್ಲಿ ಅಪ್ಪ, ದೊಡ್ಡಪ್ಪನೊಂದಿಗೆ ಓಡಾಡಿಕೊಂಡಿದ್ದ ಲವಲವಿಕೆಯ ಹುಡುಗ ಇಂದು ಅಂತರಿಕ್ಷಯಾನ ವಿಜ್ಞಾನದಲ್ಲಿ (ಏರೊಸ್ಪೇಸ್ ಸೈನ್ಸ್) ದೊಡ್ಡ ಹೆಸರು ಮಾಡಿದ್ದು ರೋಚಕ ತಿರುವುಗಳಿರುವ ಕಥೆಯಂತಿದೆ. ಬೆಂಗಳೂರಿನ ಇಸ್ರೊ ಪ್ರಧಾನ ಕಚೇರಿಯಲ್ಲಿ ‘ವಿಕ್ರಮ್ ಸಾರಾಭಾಯ್ ಪೀಠ’ದ ಪ್ರಾಧ್ಯಾಪಕರಾಗಿರುವ ಡಾ. ಬೈರಣ್ಣ ನಾಗಪ್ಪ ಸುರೇಶ್ (ಬಿ.ಎನ್.ಸುರೇಶ್) ಅವರ ಬಗ್ಗೆ ಹೇಳುತ್ತಾ ಹೋದರೆ ಬಗೆ ತೆರೆದ ಬಾನಿನಂತೆ ಅನೇಕ ಆಸಕ್ತಿಕರ ಸಂಗತಿಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

‘2009ರ ಫೆಬ್ರುವರಿಯಲ್ಲಿ ನಡೆದ ಘಟನೆ ಅದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹಳ್ಳೀಲಿರೋ ನನ್ನ ಮನೆಗೆ ಬರಬೇಕೆಂದು ತುದಿಗಾಲ ಮೇಲೆ ನಿಂತಿದ್ದರು. ಭದ್ರತೆ ಒದಗಿಸುವುದು ಹೇಗಪ್ಪಾ ಎನ್ನುವ ಚಿಂತೆ ಪೊಲೀಸರಿಗೆ. ಎಷ್ಟು ಹೇಳಿದರೂ ಕಲಾಂ ಪಟ್ಟು ಬಿಡಲಿಲ್ಲ. ನಾನು ನಿಮ್ಮ ಮನೆ ನೋಡಲೇಬೇಕು ಎಂದು ಮಗುವಿನಂತೆ ಹಟ ಹಿಡಿದರು. ಆಗ ನೋಡಬೇಕಿತ್ತು ನಮ್ಮೂರ ಬೀದಿಯನ್ನು. ಪ್ರತಿ ನೂರು ಮೀಟರ್‌ಗೆ ಒಬ್ಬೊಬ್ಬರು ಪೊಲೀಸರು.

ಮನೆಯ ಸುತ್ತಲೂ ಪೊಲೀಸರೇ ಪೊಲೀಸರು. ಅಂತೂ ಕಲಾಂ ನಮ್ಮ ಮನೆಗೆ ಬಂದರು. ಒಂದು ತಾಸು ಇದ್ದರು. ಮನೆಮಂದಿಯ ಜತೆಗೆ ಫೋಟೊ ತೆಗೆಸಿಕೊಂಡರು. ಟೀ ಕುಡಿದು ಹೋದರು’– ಹೀಗೆ ಹಳೆಯ ನೆನಪುಗಳ ಬುತ್ತಿ ಬಿಚ್ಚುತ್ತ ಹೋದರು ಸುರೇಶ್. ಇತ್ತೀಚೆಗೆ ಇಸ್ರೊ, ಐದು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿ ಮತ್ತೊಂದು ದಾಖಲೆ ಬರೆಯಿತು. ಈ ಉಪಗ್ರಹಗಳ ಉಡಾವಣಾ ವಾಹಕವನ್ನು ಅಭಿವೃದ್ಧಿಪಡಿಸಿದ್ದು (ಪಿಎಸ್‌ಎಲ್‌ವಿ–ಸಿ 23) ಇದೇ ಸುರೇಶ್ ಅವರ ನೇತೃತ್ವದಲ್ಲಿ.

ಸಾಮಾನ್ಯವಾಗಿ ಉಪಗ್ರಹ ಉಡಾವಣೆ ವೇಳೆ ಒಳಗಡೆ ಇದ್ದುಕೊಂಡು ನಿಗಾ ಇಡುತ್ತಿದ್ದ ಅವರು ಅಂದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಜತೆ ಹೊರಗೆ ಬಂದು ರಾಕೆಟ್ ನಭಕ್ಕೆ ನೆಗೆದ ಭವ್ಯ ದೃಶ್ಯವನ್ನು ಕಣ್ತುಂಬಿಕೊಂಡರು. ‘ಇದು ನನ್ನ ಮಟ್ಟಿಗೆ ವಿಶೇಷ ಅನುಭವ. ಪ್ರತಿ ಉಡಾವಣೆಯಲ್ಲೂ ಆತಂಕ ಇದ್ದದ್ದೇ. ಒಂದೊಂದು ನಿಮಿಷವೂ ವರ್ಷವಿದ್ದಂತೆ. ಎಲ್ಲಿ ಏನು ಬೇಕಾದರೂ ಆಗಬಹುದಲ್ಲ-’ ಎನ್ನುತ್ತ ರಾಕೆಟ್ ಸೈನ್ಸ್‌ನ ಸಂಕೀರ್ಣತೆಯನ್ನು ಮನವರಿಕೆ ಮಾಡಿಕೊಡುತ್ತಾರೆ.

ಬಾಲ್ಯ, ಶಿಕ್ಷಣ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೊಸಕೆರೆ –ಅಂದಗಾರು ಗ್ರಾಮದ ಕೃಷಿಕ ಕುಟುಂಬದಲ್ಲಿ 1943ರ ನವೆಂಬರ್ 12ರಂದು ಸುರೇಶ್ ಹುಟ್ಟಿದ್ದು. ಬಿ.ನಾಗಪ್ಪ, ಶಾರದಮ್ಮ ದಂಪತಿಗೆ ಇವರೇ ಹಿರಿಯ ಮಗ. ಮೂವರು ಸಹೋದರರು ಮತ್ತು ಮೂವರು ಸಹೋದರಿಯರು. ಒಟ್ಟು ಏಳು ಜನ ಮಕ್ಕಳು. ಎಲ್ಲರೂ ಸಾಕಷ್ಟು ಓದಿಕೊಂಡವರು. ನಾಗಪ್ಪನವರಿಗೆ ತಮ್ಮ ಪುತ್ರ ಸುರೇಶ್ ಎಂಜಿನಿಯರ್‌್ ಆಗಬೇಕೆನ್ನುವ ಹಟ ಇತ್ತು.

ನಾಲ್ಕನೇ ತರಗತಿವರೆಗೆ ಕಲಿತದ್ದು ಅಂದಗಾರಿನ ಕನ್ನಡ ಶಾಲೆಯಲ್ಲಿ. ಅಲ್ಲಿಂದ ಮುಂದೆ ಎಸ್ಸೆಸ್ಸೆಲ್ಸಿವರೆಗೆ ಕೊಪ್ಪದಲ್ಲಿ ಓದು ಸಾಗಿತು. ಪಿಯುಸಿ ಮುಗಿಸಿದ್ದು ಶಿವಮೊಗ್ಗದಲ್ಲಿ (ಈಗಿನ ಸಹ್ಯಾದ್ರಿ ಕಾಲೇಜು). ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಹಾಗೂ ಬಿ.ಇ ಪದವಿ ಗಳಿಸಿದ ಅವರು 1969ರಲ್ಲಿ ಮದ್ರಾಸ್‌ನ ಐಐಟಿಯಲ್ಲಿ ಎಂ.ಟೆಕ್ ಮಾಡಿದರು. ಬಳಿಕ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ವೃತ್ತಿ ಬದುಕು ಆರಂಭವಾಯಿತು.

2003ರಿಂದ 2007ರ ನವೆಂಬರ್ವರೆಗೆ ವಿಎಸ್‌ಎಸ್‌ಸಿ ನಿರ್ದೇಶಕರಾಗಿದ್ದಾಗ ಹಲವಾರು ಪ್ರಮುಖ ಪ್ರಾಜೆಕ್ಟ್ಗಳ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು. ಬ್ರಿಟನ್‌ನ ಸಾಲ್ಫೋರ್ಡ್ ವಿವಿಯಿಂದ ಪಿಎಚ್.ಡಿ. ಪಡೆದಿರುವ ಸುರೇಶ್, ಉಪಗ್ರಹ ಉಡಾವಣಾ ವಾಹಕ ವಿನ್ಯಾಸದಲ್ಲಿ ಪರಿಣತರು. ರಾಕೆಟ್ ಯಾನ ನಿರ್ವಹಣೆ ಹಾಗೂ ನಿಯಂತ್ರಣ ವ್ಯವಸ್ಥೆಯಂಥ (ಸ್ಪೇಸ್ ನ್ಯಾವಿಗೇಷನ್ ಗೈಡನ್ಸ್ ಅಂಡ್ ಕಂಟ್ರೋಲ್ ಸಿಸ್ಟಮ್–ಎನ್‌ಜಿಸಿ) ಸಂಕೀರ್ಣ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಮಹತ್ವದ್ದು.

ಸಾಧನೆ, ಕನಸು...
ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ (ಉಪಗ್ರಹ ಉಡಾವಣಾ ವಾಹಕಗಳು)ಯಶಸ್ವಿ ಉಡಾವಣೆಗಳಲ್ಲಿ ಕೂಡ ಸುರೇಶ್ ಪಾತ್ರ ಹಿರಿದಾದುದು. ಎಎಸ್‌ಎಲ್‌ವಿ ಎರಡು ಸಲ ವಿಫಲವಾದಾಗ ದೇಶದಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಬಡವರು ತಿನ್ನಲು ಅನ್ನಕ್ಕಾಗಿ ಪರದಾಡುತ್ತಿರುವಾಗ ಇಂಥದ್ದಕ್ಕೆಲ್ಲ ಯಾಕೆ ದುಡ್ಡು ಹಾಳು ಮಾಡಬೇಕು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿತ್ತು. ಆದರೆ ಸುರೇಶ್ ಮತ್ತವರ ತಂಡದವರು ಈ ಟೀಕೆ, ಆರೋಪಗಳನ್ನೆಲ್ಲ ಸವಾಲಾಗಿ ತೆಗೆದುಕೊಂಡರು. ‘ಮೂರನೇ ಸಲ ಎಎಸ್‌ಎಲ್‌ವಿ ಯಶಸ್ಸು ಕಂಡಿತು. ನಿಜಕ್ಕೂ ಇದೊಂದು ಮಹತ್ವದ ತಿರುವು’ ಎಂದು ಅವರು ನೆಮ್ಮದಿಯ ನಿಟ್ಟುಸಿರಿಡುತ್ತಾರೆ.

ಈ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಕಾಲ ದುಡಿದಿರುವ ಸುರೇಶ್ ಮುಡಿಗೇರಿದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿನ ಅನನ್ಯ ಕೊಡುಗೆಗಾಗಿ 2013ರಲ್ಲಿ ಪದ್ಮಭೂಷಣ ಗೌರವಕ್ಕೆ ಪಾತ್ರರಾದರು. ಯುವಶಕ್ತಿಯ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡಿರುವ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರು ಕೂಡ ಹೌದು. ದೇಶ ವಿದೇಶಗಳಲ್ಲಿ ಹಲವಾರು ಉಪನ್ಯಾಸಗಳನ್ನು ಕೊಟ್ಟಿದ್ದಾರೆ. ಈಗ ‘ರಾಕೆಟ್ ಡಿಸೈನ್’ ಬಗ್ಗೆ ಇಂಗ್ಲಿಷ್‌ನಲ್ಲಿ ಪುಸ್ತಕ ಬರೆಯುತ್ತಿದ್ದಾರೆ. ಇದು ಅವರ ಚೊಚ್ಚಲ ಕೃತಿ.

ಮಕ್ಕಳಾದ ಸುನೀಲ್, ಸುಮಾ ಇಬ್ಬರೂ ಎಂಜಿನಿಯರಿಂಗ್ ಓದಿದ್ದಾರೆ. ಸುನೀಲ್ ದುಬೈನಲ್ಲಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಿರುವನಂತಪುರದಲ್ಲಿದ್ದಾಗ ಪತ್ನಿ ಶೋಭಾ ಜತೆಗೂಡಿ ಹಲವಾರು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಮಧುರ ನೆನಪು ಈಗಲೂ ಅವರ ಸ್ಮೃತಿಪಟಲದಲ್ಲಿ ಇದೆ. ಬೆಳಗಿನ ಹೊತ್ತು ಸಂಗೀತ ಕೇಳುವುದು ಅವರಿಗಿಷ್ಟ.

ಮೊದಲೆಲ್ಲ ಷಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರಂತೆ. ಓದುವ ಹವ್ಯಾಸವೇ ಬಿಡುವಿನ ಸಮಯದ ಸಂಗಾತಿ. ಆತ್ಮಕಥೆಗಳೆಂದರೆ ಅವರಿಗೆ ಅಚ್ಚುಮೆಚ್ಚು. ಏರೊಸ್ಪೇಸ್ ಸೈನ್ಸ್ ಭವಿಷ್ಯದ ಬಗ್ಗೆ ಅದಮ್ಯ ಕನಸು ಇಟ್ಟುಕೊಂಡಿರುವ ಅವರ ಪಾಲಿಗೆ ಇದೊಂದು ಸೀಮಾತೀತ ಕ್ಷೇತ್ರ. ಉನ್ನತ ತಂತ್ರಜ್ಞಾನವು ಸಮಾಜಕ್ಕೆ, ಜನರಿಗೆ ಉಪಯೋಗವಾಗಬೇಕು ಎನ್ನುವ ಕಾಳಜಿಯಲ್ಲೇ ಅವರು ತಮ್ಮ ಇನ್ನಷ್ಟು ಕನವರಿಕೆಗಳನ್ನು ನೇವರಿಸುತ್ತಾ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.