ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ20 ವಿಶ್ವ ಚಾಂಪಿಯನ್ ಭಾರತ: ವಿಮಾನ ಪಯಣದಲ್ಲಿಯೂ ವಿಜಯದ ಮೆಲುಕು

Published 4 ಜುಲೈ 2024, 22:16 IST
Last Updated 4 ಜುಲೈ 2024, 22:16 IST
ಅಕ್ಷರ ಗಾತ್ರ

ನವದೆಹಲಿ: ಬಾರ್ಬಾಡೋಸ್‌ನಿಂದ ನವದೆಹಲಿಯರವರೆಗಿನ 16 ಗಂಟೆಗಳ ವಿಮಾನ ಪ್ರಯಾಣವು ಟಿ20 ವಿಶ್ವಕಪ್ ವಿಜಯಯಾತ್ರೆಯಾಗಿತ್ತು.

ಬುಧವಾರ ಆರಂಭವಾದ ಪ್ರಯಾಣವು ಗುರುವಾರದ ಬೆಳಗಿನ ಜಾವ ದೆಹಲಿಗೆ ಬಂದು ಮುಕ್ತಾಯವಾಯಿತು.  ತಂಡದ ಆಟಗಾರರು ಮತ್ತು ಬಿಸಿಸಿಐ ಅಧಿಕಾರಿಗಳಿಗೆ ನಿಗದಿ ಮಾಡಿದ್ದ ಚಾರ್ಟರ್‌ ವಿಮಾನದಲ್ಲಿಯೇ ಭಾರತದ ಮಾಧ್ಯಮ ಪ್ರತಿನಿಧಿಗಳಿಗೂ ಪ್ರಯಾಣದ ಅವಕಾಶ ಒದಗಿಸಲಾಗಿತ್ತು.

ಆದರೆ ಆಟಗಾರರ ಖಾಸಗಿತನದ ಗೋಪ್ಯತೆಯ ರಕ್ಷಣೆಯ ಮನವಿಯನ್ನೂ ಮ್ಯಾನೇಜ್‌ಮೆಂಟ್‌ ಮಾಡಿತ್ತು. 

ತಂಡವು ಟಿ20 ವಿಶ್ವಕಪ್ ಜಯಿಸಿ ಐದು ದಿನ ಕಳೆದರೂ ಸಂಭ್ರಮದ ಛಾಯೆ ಒಂದಿನಿತೂ  ಮಾಸಿರಲಿಲ್ಲ. ಹೋದ ಶನಿವಾರವೇ ಫೈನಲ್ ಪಂದ್ಯ ಮುಗಿದಿತ್ತು.

ಆದರೆ ಚಂಡಮಾರುತದಿಂದಾಗಿ ವಿಮಾನಯಾನವು ಸ್ಥಗಿತವಾಗಿತ್ತು. ಬುಧವಾರದವರೆಗೂ ತಂಡವು ಅಲ್ಲಿಯೇ ಬೀಡುಬಿಟ್ಟಿತ್ತು. 

ಬುಧವಾರ ಮುಂಜಾನೆ 4.30ಕ್ಕೆ ವಿಶೇಷ ವಿಮಾನದಲ್ಲಿ ಪ್ರಯಾಣ ಆರಂಭವಾಯಿತು.

ತಂಡದ ಆಟಗಾರರಿಗೆ ಬಿಸಿನೆಸ್ ಕ್ಲಾಸ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.  ಆದರೆ ಆರಂಭದಲ್ಲಿ ಯಾರಿಗೂ ಮಾತನಾಡುವಷ್ಟು ಚೈತನ್ಯ ಇರಲಿಲ್ಲ. ಕೆಲವು ಹೊತ್ತಿನ ವಿಶ್ರಾಂತಿಯ ನಂತರ  ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ರವೀಂದ್ರ ಜಡೇಜ, ಶಿವಂ ದುಬೆ ಅವರು ‘ಎಕಾನಮಿ’ ವಿಭಾಗಕ್ಕೆ ಬಂದರು. 

ಪತ್ರಕರ್ತರೊಂದಿಗೆ ಕಪ್ ಜಯ ಮತ್ತು ಇನ್ನೂಕೆಲವು ವಿಷಯಗಳ ಕುರಿತು ಹರಟೆ ಹೊಡೆದರು. ಸಮಯ ವಲಯದ ಬದಲಾವಣೆ ಮತ್ತು ಗೊಂದಲದ ಕುರಿತೂ ಮಾತನಾಡಿದರು.

ಇದೆಲ್ಲದರ ನಡುವೆ ವಿಶ್ವಕಪ್ ಟ್ರೋಫಿಯನ್ನು ಎಕಾನಮಿ ವಿಭಾಗದಲ್ಲಿಯೇ ಇರಿಸಲಾಗಿತ್ತು. ಇದರಿಂದಾಗಿ ಪತ್ರಕರ್ತರೂ ಟ್ರೋಫಿಯನ್ನು ಹಿಡಿದು ಸಂಭ್ರಮಿಸುವ ಅವಕಾಶ ಲಭಿಸಿತ್ತು. 

ವಿಮಾನವು ಗುರುವಾರ ಬೆಳಗಿನ ಜಾವ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಾಗ ಈ ವಿಶೇಷ ಮತ್ತು ತುಸು ಪ್ರಯಾಸದ ಪ್ರಯಾಣವು ಅಂತಿಮ ಹಂತ ತಲುಪಿತ್ತು. ಶ್ವೇತ ವರ್ಣದ ಜೆರ್ಸಿ (ವಿಶೇಷ ಆವೃತ್ತಿಯ ಪೋಷಾಕು. ಅದರ ಮೇಲೆ ಚಾಂಪಿಯನ್ಸ್‌ ಎಂಬ ಒಕ್ಕಣೆ ಇತ್ತು) ಧರಿಸಿದ್ದ ಆಟಗಾರರು ವಿಮಾನದಿಂದ ಇಳಿದು ಲಾಂಜ್‌ನತ್ತ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ನೂರಾರು ಜನರು  ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಜಯಘೋಷ ಕೂಗಿದರು. 

15 ಸಾವಿರ ಮೈಲುಗಳ ಪ್ರಯಾಣ ಮುಗಿಸಿ ಬಂದಿದ್ದ ಆಟಗಾರರು ದಣಿದಿದ್ದರೂ ಜನರತ್ತ ಕೈಬೀಸುತ್ತ, ವಿಮಾನ ನಿಲ್ದಾಣದ ಹೊರಗಡೆ ಕಲಾವಿದರೊಂದಿಗೆ ನರ್ತಿಸಿದರು. ಸಂಭ್ರಮಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT