ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚಿನ ಪಂದ್ಯಗಳಿಗೆ ರೋಹಿತ್, ಕೊಹ್ಲಿ ಲಭ್ಯ: ಗೌತಮ್ ಗಂಭೀರ್ ವಿಶ್ವಾಸ

ಗೌತಮ್ ಗಂಭೀರ್ ವಿಶ್ವಾಸ
Published 22 ಜುಲೈ 2024, 14:36 IST
Last Updated 22 ಜುಲೈ 2024, 14:36 IST
ಅಕ್ಷರ ಗಾತ್ರ

ಮುಂಬೈ: ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಸೀನಿಯರ್‌ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು ಬಹುತೇಕ ಏಕದಿನ ಪಂದ್ಯಗಳಿಗೆ ಮತ್ತು ಟೆಸ್ಟ್‌ಗಳಿಗೆ ಲಭ್ಯರಾಗುತ್ತಾರೆ ಎಂದು ನಿರೀಕ್ಷಿಸಿರುವುದಾಗಿ ಭಾರತ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್ ಸೋಮವಾರ ಇಲ್ಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಿಗದಿಯಾಗಿರುವ 2027ರ ಏಕದಿನ ವಿಶ್ವಕಪ್‌ಗೆ ಪರಿಗಣಿಸುವಂತಾಗಲು  ಅವರಿಬ್ಬರೂ ಫಿಟ್ನೆಸ್‌ ಉಳಿಸಿಕೊಳ್ಳುವ ವಿಶ್ವಾಸ ಹೊಂದಿರುವುದಾಗಿಯೂ ಗಂಭೀರ್ ಹೇಳಿದ್ದಾರೆ.

ಟಿ20 ವಿಶ್ವಕಪ್ ಗೆದ್ದ ನಂತರ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಈ ಅನುಭವಿ ಬ್ಯಾಟರ್‌ಗಳು ಹೇಳಿದ್ದರು. ಇಬ್ಬರೂ ಶ್ರೀಲಂಕಾ ಪ್ರವಾಸಕ್ಕೆ ವಿಶ್ರಾಂತಿ ಪಡೆಯಬಹುದೆಂಬ ನಿರೀಕ್ಷೆಗಳಿದ್ದವು.

ಆದರೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಿನ್ನೆಲೆಯಲ್ಲಿ, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮುಂದಿನ ತಿಂಗಳು ದ್ವೀಪರಾಷ್ಟ್ರದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ಸರಣಿಗೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಂದಿನ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಿಗದಿ ಆಗಿದೆ.

ಮುಖ್ಯ ಕೋಚ್‌ ಆದ ನಂತರ ಮೊದಲ ಬಾರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗಂಭಿರ್‌, ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಸಂಬಂಧಿಸಿ ಮಾತ್ರ ಕಾರ್ಯಭಾರ ಒತ್ತಡದ ಮಾತುಗಳನ್ನು ಆಡಿದರು.

‘ಬೂಮ್ರಾ ಅಂಥ ಆಟಗಾರರಿಗೆ ಸಂಬಂಧಿಸಿ ಕಾರ್ಯದೊತ್ತಡ ನಿರ್ವಹಣೆ ಮಾಡುವುದು ಮುಖ್ಯವಾಗಿದೆ ಎಂದು ಹಿಂದೆಯೂ ಹೇಳಿದ್ದೇನೆ. ಸ್ಥಿರ ಪ್ರದರ್ಶನ ನೀಡುವ, ಉತ್ತಮ ಲಯದಲ್ಲಿರುವ ಬ್ಯಾಟರ್‌ಗಳು ಎಲ್ಲ ಪಂದ್ಯಗಳನ್ನು ಆಡಬೇಕಾಗುತ್ತದೆ’ ಎಂದರು.

ರೋಹಿತ್ ಮತ್ತು ವಿರಾಟ್ ಟಿ20 ಕ್ರಿಕೆಟ್‌ ಆಡದಿರುವ ಕಾರಣ ಅವರಿಗೆ ಎರಡು ಮಾದರಿಗಳಷ್ಟೇ ಉಳಿದಿವೆ. ಅವರಿಬ್ಬರೂ ಬಹುತೇಕ ಪಂದ್ಯಗಳಿಗೆ ಲಭ್ಯರಿರುವ ವಿಶ್ವಾಸವಿದೆ’ ಎಂದು ಗಂಭೀರ್ ಹೇಳಿದರು.

‘ಬೂಮ್ರಾ ಅವರು ವಿರಳ ರೀತಿಯ ಬೌಲರ್‌. ಹೀಗಾಗಿ ವೇಗದ ಬೌಲರ್‌ಗಳಿಗೆ ಆಗುವ ರೀತಿ ಅವರು ಗಾಯಾಳಾಗದಂತೆ ಎಚ್ಚರಿಕೆಯಿಂದ  ನಿರ್ವಹಣೆ ಮಾಡಬೇಕಾಗುತ್ತದೆ. ಬರೇ ಬೂಮ್ರಾ ಮಾತ್ರವಲ್ಲ, ಹೆಚ್ಚಿನ ವೇಗದ ಬೌಲರ್‌ಗಳ ವಿಷಯದಲ್ಲೂ ಕಾರ್ಯಭಾರ ಹೆಚ್ಚಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.

ಪ್ರತ್ಯೇಕ ತಂಡ– ಸಾಧ್ಯತೆ:

ಏಕದಿನ, ಟಿ20 ಮತ್ತು ಟೆಸ್ಟ್‌ಗೆ ಮೂರು ಪ್ರತ್ಯೇಕ ತಂಡಗಳನ್ನು ಹೊಂದುವ ಸಾಧ್ಯತೆಯನ್ನು ಅವರು ಅಲ್ಲಗೆಳೆಯಲಿಲ್ಲ. ಆದರೆ ಈಗ ಭಾರತ ತಂಡ ಸ್ಥಿರ ಪ್ರದರ್ಶನ ನೀಡುವುದು ಅತ್ಯಗತ್ಯವಾಗಿದೆ ಎಂದರು.

‘ಮೂರು ತಂಡಗಳು ಇರಲಿವೆ ಎಂಬುದನ್ನು ಈಗಲೇ ನಾನು ಹೇಳಲಾಗದು. ಟಿ20 ತಂಡ ಪರಿವರ್ತನೆಯ ಹಂತದಲ್ಲಿದೆ. ಅತ್ಯುತ್ತಮ, ವಿಶ್ವದರ್ಜೆಯ ಮೂವರು ಆಟಗಾರರು ಈ ಮಾದರಿಯಿಂದ ನಿವೃತ್ತಿಯಾಗಿದ್ದಾರೆ’ ಎಂದು ರೋಹಿತ್‌, ವಿರಾಟ್‌, ಜಡೇಜಾ ಅವರ ನಿವೃತ್ತಿ ಉದ್ದೇಶಿಸಿ ಹೇಳಿದರು.

‘ಆದರೆ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದಷ್ಟೂ ತಂಡಕ್ಕೆ ಉತ್ತಮ. ಈ ಎರಡು ಮಾದರಿಗಳಲ್ಲಿ ಹೆಚ್ಚು ಆಟಗಾರರಿರುವುದು, ಯಾವುದೇ ತಂಡಕ್ಕೆ ಒಳ್ಳೆಯದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT