ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG: ಅಶ್ವಿನ್–ಜಡೇಜ ಮುಂದೆ ಕುಸಿದ ‘ಬಾಝ್‌ಬಾಲ್’

Published 25 ಜನವರಿ 2024, 9:02 IST
Last Updated 25 ಜನವರಿ 2024, 9:02 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತದ  ಸ್ಪಿನ್‌ ಜೋಡಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ‘ಜೊತೆಯಾಟ’ದ ಮುಂದೆ  ಇಂಗ್ಲೆಂಡ್‌ನ ಬಾಝ್‌ಬಾಲ್ ತಂತ್ರ ನಡೆಯಲಿಲ್ಲ.

ಗುರುವಾರ ಉಪ್ಪಳದ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ತಲಾ ಮೂರು ವಿಕೆಟ್ ಗಳಿಸಿದ ಅಶ್ವಿನ್ ಮತ್ತು ಜಡೆಜ ಜೋಡಿಯು ಇಂಗ್ಲೆಂಡ್ ತಂಡವನ್ನು 246 ರನ್‌ಗಳಿಗೆ ನಿಯಂತ್ರಿಸಿತು. ತಂಡದ ಇನ್ನೊಬ್ಬ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಎರಡು ವಿಕೆಟ್ ಗಳಿಸಿ ತಾವೇನೂ ಕಮ್ಮಿಯಲ್ಲ ಎಂದು ತೋರಿಸಿದರು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡವು ದಿನದಾಟದ ಮುಕ್ತಾಯಕ್ಕೆ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 119 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 76; 70ಎ, 4X9, 6X3) ಮತ್ತು ಶುಭಮನ್ ಗಿಲ್ (ಬ್ಯಾಟಿಂಗ್ 14; 43ಎ, 4X1) ಕ್ರೀಸ್‌ನಲ್ಲಿದ್ದಾರೆ. ಮೊದಲ ವಿಕೆಟ್ ಜೊತೆಯಾಟದಲ್ಲಿ ಯಶಸ್ವಿಯೊಂದಿಗೆ 80 ರನ್ ಸೇರಿಸಿದ ರೋಹಿತ್ ಶರ್ಮಾ (24; 27ಎ, 4X3) ಅವರು ಔಟಾಗಿ ನಿರ್ಗಮಿಸಿದರು. ಆದರೆ ಯಶಸ್ವಿ ಮಾತ್ರ ತುಂಬು ಆತ್ಮವಿಶ್ವಾಸದಿಂದ ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸಿದರು.

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 55 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಇವರ ಆಟ ನಡೆದಿದ್ದು ಅಶ್ವಿನ್ ದಾಳಿಗಿಳಿಯುವವರೆ ಮಾತ್ರ. 12ನೇ ಓವರ್‌ನಲ್ಲಿ ಡಕೆಟ್ ಮತ್ತು 16ನೇ ಓವರ್‌ನಲ್ಲಿ ಕ್ರಾಲಿ ವಿಕೆಟ್‌ಗಳನ್ನು ಅಶ್ವಿನ್ ಕಬಳಿಸಿದರು. ಈ ನಡುವೆ ಜಡೇಜ ಅವರ ಕೈಚಳಕಕ್ಕೆ ಒಲೀ ಪೋಪ್ (1 ರನ್) ಪೆವಿಲಿಯನ್ ಸೇರಬೇಕಾಯಿತು.

ಅನುಭವಿ ಬ್ಯಾಟರ್ ಜೋ ರೂಟ್ (29; 60ಎ) ಆಟಕ್ಕೆ ಕುದುರಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರಿಗೂ ಜಡೇಜ ಎಸೆತದ ತಿರುವು ಗುರುತಿಸುವುದು ಕಷ್ಟವಾಯಿತು. ಬೂಮ್ರಾಗೆ ಕ್ಯಾಚಿತ್ತು ನಿರ್ಗಮಿಸಿದರು.

ಈ ಹಂತದಲ್ಲಿ ನಾಯಕ ಬೆನ್ ಸ್ಟೋಕ್ಸ್  ಮತ್ತು ಜಾನಿ ಬೆಸ್ಟೊ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು. ಈ ಜೊತೆಯಾಟವನ್ನು ಅಕ್ಷರ್ ಪಟೇಲ್ ಮುರಿದರು. ಅವರ ಬೌಲಿಂಗ್‌ನಲ್ಲಿ ಬೆಸ್ಟೊ (37; 58ಎ) ಔಟಾದರು.

ಇನ್ನೊಂದೆಡೆ ದಿಟ್ಟತನದಿಂದ ಬ್ಯಾಟ್ ಬೀಸಿದ ಸ್ಟೋಕ್ಸ್‌ ಅರ್ಧಶತಕ ದಾಟಿದರು. 88 ಎಸೆತಗಳಲ್ಲಿ 70 ರನ್‌ ಗಳಿಸಿದರು. ಅದರಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಅವರು ಸಿಡಿಸಿದರು. ಇನಿಂಗ್ಸ್‌ನಲ್ಲಿ ಕೊನೆಯವರಾಗಿ ಜಸ್‌ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಉಳಿದ ಬ್ಯಾಟರ್‌ಗಳು ಅಲ್ಪ ಕಾಣಿಕೆಗಳನ್ನು ನೀಡಿದರು. ಇದರಿಂದಾಗಿ ತಂಡವು ಸಾಧಾರಣ ಮೊತ್ತ ಗಳಿಸಲು ಸಾಧ್ಯವಾಯಿತು.

ಬೌಲಿಂಗ್ ಜೊತೆಯಾಟದ ದಾಖಲೆ

ಆಫ್‌ಸ್ಪಿನ್ನರ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ಜಡೇಜ ಅವರು ಬೌಲಿಂಗ್ ಜೊತೆಯಾಟದಲ್ಲಿ ದಾಖಲೆ ಬರೆದರು. ಇವರಿಬ್ಬರೂ 50 ಟೆಸ್ಟ್‌ಗಳಲ್ಲಿ ಒಟ್ಟು 503 ವಿಕೆಟ್‌ಗಳನ್ನು ಗಳಿಸಿದ್ದಾರೆ.  ಇದರೊಂದಿಗೆ ಅನಿಲ್ ಕುಂಬ್ಳೆ ಹಾಗೂ ಹರಭಜನ್ ಸಿಂಗ್ 54 ಟೆಸ್ಟ್‌ಗಳಲ್ಲಿ ಗಳಿಸಿದ್ದ 501 ವಿಕೆಟ್‌ಗಳ ಜೊತೆಯಾಟದ ದಾಖಲೆಯನ್ನು ಮೀರಿದ್ದಾರೆ. ವೇಗಿ ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ 59 ಪಂದ್ಯಗಳಲ್ಲಿ 474 ವಿಕೆಟ್‌ ಗಳಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT