ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG | ಎರಡನೇ ಟೆಸ್ಟ್: ರಜತ್, ಸರ್ಫರಾಜ್ ಇಬ್ಬರೂ ಉತ್ತಮರು- ವಿಕ್ರಂ

ಎರಡನೇ ಟೆಸ್ಟ್: 11ರ ಬಳಗದ ಆಯ್ಕೆ ಕಸರತ್ತು ಕುರಿತು ವಿಕ್ರಂ
Published 31 ಜನವರಿ 2024, 13:41 IST
Last Updated 31 ಜನವರಿ 2024, 13:41 IST
ಅಕ್ಷರ ಗಾತ್ರ

ವಿಶಾಖಪಟ್ನಂ (ಪಿಟಿಐ): ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಭಾರತದ ಹನ್ನೊಂದರ ಬಳಗದಲ್ಲಿ ಸರ್ಫರಾಜ್ ಖಾನ್ ಮತ್ತು ರಜತ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಬಲು ಕಠಿಣ ಸವಾಲಾಗಲಿದೆ ಎಂದು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಪಂದ್ಯ ಆರಂಭವಾಗಲಿದೆ. ಕೆ.ಎಲ್. ರಾಹುಲ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಗಾಯಗೊಂಡಿದ್ದರಿಂದ ಈ ಪಂದ್ಯದಲ್ಲಿ ಆಡುವುದಿಲ್ಲ. ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅದರಿಂದಾಗಿ ತಂಡಕ್ಕೆ ಸರ್ಫರಾಜ್, ಸೌರಭ್ ಕುಮಾರ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸೇರ್ಪಡೆ ಮಾಡಲಾಗಿತ್ತು. ರಜತ್ ಪಾಟೀದಾರ್ ಕೂಡ ತಂಡದಲ್ಲಿದ್ದಾರೆ.

‘ರಜತ್ ಮತ್ತು ಸರ್ಫರಾಜ್ ಇಬ್ಬರೂ ಉತ್ತಮ ಆಟಗಾರರು. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸವಾಲು.  ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅವರ ಸಾಧನೆಯನ್ನು ನಾವೆಲ್ಲರೂ ನೋಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಅವರಿಬ್ಬರೂ ಚೆನ್ನಾಗಿ ಆಡಿದ್ದಾರೆ. ಇಲ್ಲಿರುವ ಪಿಚ್‌ ಮೇಲೆ ಅವರು ತಮ್ಮ ಸಾಮರ್ಥ್ಯವನ್ನು ತೋರಬಲ್ಲರು. ಅವರಿಂದ ತಂಡದ ಬಲವರ್ಧನೆಯಾಗುತ್ತದೆ’ ಎಂದು ಸುದ್ದಿಗಾರರಿಗೆ ರಾಥೋಡ್ ಹೇಳಿದರು.

‘ಅವರಿಬ್ಬರನ್ನೂ  ಆಯ್ಕೆ ಮಾಡುವುದು ಕಷ್ಟವಲ್ಲ. ಆದರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಠಿಣ. ಈ ವಿಷಯ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ಬಿಟ್ಟಿದ್ದು’ ಎಂದರು.

'ನಮ್ಮಲ್ಲಿ ಯುವ ಬ್ಯಾಟರ್‌ಗಳು ಇದ್ದಾರೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಕಳೆದ ಕೆಲ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಟೆಸ್ಟ್‌ಗಳಲ್ಲಿ ಆಡಿದ ಅನುಭವ ಇಲ್ಲ. ಆದ್ದರಿಂದ ಅವರ ಬಗ್ಗೆ ತಂಡವು ತಾಳ್ಮೆಯಿಂದ ಇರುವುದು ಮುಖ್ಯವಾಗಿದೆ. ಅವರು ದೊಡ್ಡ ಇನಿಂಗ್ಸ್‌ ಆಡುವ ಭರವಸೆ ಇದೆ’ ಎಂದರು.

ವಿಶ್ವ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ತವರಿನಲ್ಲಿ ಕಳೆದ 12–13 ವರ್ಷಗಳಲ್ಲಿ ನಾವು ಟೆಸ್ಟ್ ಸರಣಿ ಸೋತಿಲ್ಲ. ಬ್ಯಾಟರ್‌ಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಅವರ ಕೌಶಲಗಳಲ್ಲಿ ಸುಧಾರಣೆಗೆ ಸೂಕ್ತ ಸಮಾಲೋಚನೆ ಮಾಡಿದ್ದೇವೆ. ಅಲ್ಲದೇ ಫೀಲ್ಡಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿಯೂ ಸುಧಾರಣೆಗೆ ಒತ್ತು ನೀಡಲಾಗಿದೆ. ತಂಡದಲ್ಲಿರುವ ಆಟಗಾರರು ಉತ್ತಮವಾಗಿದ್ದಾರೆ. ಅವರಿಗೆ ಹೆಚ್ಚು ಕೋಚಿಂಗ್‌ ಅವಶ್ಯಕತೆ ಇಲ್ಲ’ ಎಂದರು.

’ಶಮಿ ಗೈರು; ಬೂಮ್ರಾಗಿಲ್ಲ ಒತ್ತಡ‘

ನವದೆಹಲಿ(ಪಿಟಿಐ): ವೇಗಿ ಮೊಹಮ್ಮದ್ ಶಮಿ ಅವರ ಗೈರುಹಾಜರಿಯಿಂದಾಗಿ ಜಸ್‌ಪ್ರೀತ್ ಬೂಮ್ರಾ ಅವರ ಮೇಲೆ ಒತ್ತಡ ಹೆಚ್ಚಿಲ್ಲ.  ಉತ್ತಮ ವೇಗದ ಬೌಲರ್‌ಗಳು ತಂಡದಲ್ಲಿದ್ದಾರೆ ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ. ಗಾಯಗೊಂಡಿರುವ ಶಮಿ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಆಡುತ್ತಿಲ್ಲ. ಈ ಕುರಿತು ಪಿಟಿಐ ಟಿವಿಯಲ್ಲಿ ಮಾತನಾಡಿರುವ ಇರ್ಫಾನ್ ‘ಶಮಿ ಅವರು ಆಡದಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಆದರೆ ಅದರಿಂದ ಬೂಮ್ರಾ ಅವರ ಮೇಲೆ ಒತ್ತಡ ಹೆಚ್ಚಿ ಗಾಯಗೊಳ್ಳುವ ಸಾಧ್ಯತೆ ಹೆಚ್ಚು  ಎಂದು ಹೇಳಲಾಗದು.  ಏಕೆಂದರೆ ತಂಡದಲ್ಲಿರುವ ಇನ್ನುಳಿದ ವೇಗಿಗಳು ಉತ್ತಮವಾಗಿದ್ದಾರೆ. ಪಂದ್ಯದ ಫಲಿತಾಂಶವನ್ನು ತಂಡದ ಪರವಾಗಿ ಎಳೆದು ತರುವ ಸಮರ್ಥರಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT