ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್ | ತ್ರಿಪುರ ತಂಡಕ್ಕೆ ಶರತ್ ಶ್ರೀನಿವಾಸ್

ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ವಿಕೆಟ್‌ಕೀಪರ್
Published : 18 ಸೆಪ್ಟೆಂಬರ್ 2024, 15:45 IST
Last Updated : 18 ಸೆಪ್ಟೆಂಬರ್ 2024, 15:45 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ –ಬ್ಯಾಟರ್ ಶರತ್ ಶ್ರೀನಿವಾಸ್ ಅವರು ಇದೇ ದೇಶಿ ಋತುವಿನಿಂದ ತ್ರಿಪುರ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಅವರು ತವರಿನ ತಂಡದಿಂದ ತ್ರಿಪುರಕ್ಕೆ ವರ್ಗಾವಣೆಯಾಗಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. 

‘ಮೂರು ಮಾದರಿಗಳಲ್ಲಿಯೂ ಕ್ರಿಕೆಟ್ ಆಡುವ ಅವಕಾಶಕ್ಕಾಗಿ ತ್ರಿಪುರ ತಂಡಕ್ಕೆ ವಲಸೆ ಹೋಗುತ್ತಿರುವೆ. ಬೇರೆ ಯಾವುದೇ ಕಾರಣಗಳೂ ಇಲ್ಲ. ಕರ್ನಾಟಕ ತಂಡದಲ್ಲಿ ನನಗೆ ಎಲ್ಲ ರೀತಿಯ ಬೆಂಬಲ ಮತ್ತು ಮಾರ್ಗದರ್ಶನ ದೊರೆತಿದೆ’ ಎಂದು 28 ವರ್ಷದ ಶರತ್ ‘ಪ್ರಜಾವಾಣಿ’ಗೆ ತಿಳಿಸಿದರು. 

2018ರಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಶರತ್ ಪದಾರ್ಪಣೆ ಮಾಡಿದ್ದರು. 20 ಪ್ರಥಮ ದರ್ಜೆ ಪಂದ್ಯಗಳಿಂದ 943 ರನ್‌ ಗಳಿಸಿದ್ದಾರೆ. ಅದರಲ್ಲ ಒಂದು ಶತಕ ಮತ್ತು 4 ಅರ್ಧಶತಕಗಳು ಇವೆ. 79 ಕ್ಯಾಚ್ ಪಡೆದಿರುವ ಅವರು 5 ಸ್ಟಂಪಿಂಗ್ ಮಾಡಿದ್ದಾರೆ. 7 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದು,  ಒಂದು ಅರ್ಧಶತಕ ಹೊಡೆದಿದ್ದಾರೆ. ಒಟ್ಟು 139 ರನ್‌ಗಳು ಅವರ ಖಾತೆಯಲ್ಲಿವೆ. 

ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಕರ್ನಾಟಕ ಸಂಭವನೀಯರ ತಂಡವನ್ನು ಈಚೆಗೆ ಪ್ರಕಟಿಸಲಾಗಿತ್ತು. ಅದರಲ್ಲಿ 28 ವರ್ಷದ ಶರತ್ ಕೂಡ ಇದ್ದರು. ಅದೇ ತಂಡದಲ್ಲಿ ಉದಯೋನ್ಮುಖ ವಿಕೆಟ್‌ಕೀಪರ್‌ಗಳಾದ ಲವನೀತ್ ಸಿಸೊಡಿಯಾ, ಸುಜಯ್ ಸತೇರಿ ಹಾಗೂ ಕೃತಿಕ್ ಕೃಷ್ಣ ಸ್ಥಾನ ಪಡೆದಿದ್ದಾರೆ. 

‘ಇದುವರೆಗೆ ದೀರ್ಘ ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಲಭಿಸಿದೆ. ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಮತ್ತು ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಆಡುವುದು ನನ್ನ ಗುರಿ’ ಎಂದು ಶರತ್ ಹೇಳಿದರು. 

‘ಶರತ್ ಪ್ರತಿಭಾವಂತ ಆಟಗಾರ. ಅವರು ತ್ರಿಪುರ ತಂಡದಲ್ಲಿ ಆಡುವ ಇಚ್ಛೆ ಹೊಂದಿದ್ದು ಎನ್‌ಒಸಿ ನೀಡಲಾಗಿದೆ. ಕರ್ನಾಟಕ ತಂಡದಲ್ಲಿ ಉತ್ತಮ ಹಾಗೂ ಪ್ರತಿಭಾನ್ವಿತರಾದ ಮೂರ್ನಾಲ್ಕು ಜನ ವಿಕೆಟ್‌ಕೀಪರ್‌ಗಳು ಇದ್ದಾರೆ’ ಎಂದು ಕೆಎಸ್‌ಸಿಎ ಮೂಲಗಳು ಸ್ಪಷ್ಟಪಡಿಸಿವೆ. 

ಈಚೆಗೆ ಆರಂಭಿಕ ಬ್ಯಾಟರ್ ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಅವರೂ ಪರರಾಜ್ಯಗಳ ತಂಡಗಳಿಗೆ ವಲಸೆ ಹೋಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT