‘ಸಾಗಬೇಕಾದ ಹಾದಿ ಸುದೀರ್ಘವಾಗಿದೆ. ಈ ಪಯಣದಲ್ಲಿ ಬೇರೆ ತಂಡಗಳ ಸೋಲು–ಗೆಲುವಿನ ಮೇಲೆಯೂ ಕಣ್ಣಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಾವು ಭರವಸೆ ಕೈಬಿಟ್ಟಿಲ್ಲ. ಎದೆಗುಂದದೆ, ಸಕಾರಾತ್ಮಕ ಚಿಂತನೆಯೊಂದಿಗೆ ಮುಂದಡಿ ಇಡುವುದು ಮತ್ತು ಉಳಿದಿರುವ ಪಂದ್ಯಗಳಲ್ಲಿ ಜಯವೊಂದನ್ನೇ ಮಂತ್ರವಾಗಿಸಿಕೊಂಡು ಆಡುವುದು ತಂಡದ ಮುಂದೆ ಇರುವ ಆಯ್ಕೆ…’

ಫೆಬ್ರುವರಿ ಒಂಬತ್ತರಂದು ಗೋವಾದ ಫತೋರ್ಡ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡಕ್ಕೆ 0–2ರಲ್ಲಿ ಮಣಿದ ನಂತರ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಹಂಗಾಮಿ ಕೋಚ್ ನೌಶಾದ್ ಮೂಸಾ ಆಡಿದ ಮಾತು ಇದು.

ಇದಾಗಿ ಎರಡು ದಿನಗಳ ನಂತರ ಬೆಂಗಳೂರು ಎಫ್ಸಿ ತಂಡದಲ್ಲಿ ಮಹತ್ವದ ಬೆಳವಣಿಗೆಯೊಂದು ಆಯಿತು. ಇಟಲಿಯ ಮಾರ್ಕೊ ಪೆಜಯೊಲಿ ಅವರನ್ನು ತಂಡದ ಆಡಳಿತ ಮುಖ್ಯ ಕೋಚ್ ಆಗಿ ನೇಮಕ ಮಾಡಿಕೊಂಡಿತು. ಐಎಸ್ಎಲ್ನಲ್ಲಿ ಸತತ ಸೋಲಿನಿಂದ ತಂಡ ಕಂಗೆಟ್ಟಿದ್ದಾಗ ಕೋಚ್ ಆಗಿದ್ದ ಕಾರ್ಲಸ್ ಕ್ವದ್ರತ್ ‘ಸ್ವಯಂಪ್ರೇರಿತ’ರಾಗಿ ತಂಡವನ್ನು ತೊರೆದು ಹೋದನಂತರ ಅಳೆದು–ತೂಗಿ ನಿರ್ಧಾರ ತೆಗೆದುಕೊಂಡಿರುವ ತಂಡದ ಆಡಳಿತ ‘ಸಾಮರ್ಥ್ಯ ಪ್ರದರ್ಶನದ ಆಧಾರದ ಮೇಲೆ’ ಪೆಜಯೊಲಿ ಜೊತೆ ಮೂರು ವರ್ಷಗಳ ಗುತ್ತಿಗೆಗೆ ಸಹಿ ಹಾಕಿದೆ. ಈ ನೇಮಕದಿಂದ ನೌಶಾದ್ ಮೂಸಾ ಸ್ವಲ್ಪ ನಿರಾಳವಾದಂತೆ ಕಂಡುಬಂದರೂ ಐಎಸ್ಎಲ್ನ ಈ ಆವೃತ್ತಿಗೆ ಸಂಬಂಧಿಸಿದಂತೆ ತಂಡಕ್ಕೆ ಹೆಚ್ಚಿನ ಪ್ರಯೋಜನವೇನೂ ಇಲ್ಲ. ಯಾಕೆಂದರೆ ಪೆಜಯೊಲಿ ಅವರ ಅವಧಿ ಆರಂಭವಾಗುವುದೇ ಐಎಸ್ಎಲ್ ಮುಕ್ತಾಯದ ನಂತರ.

ಎಎಫ್ಸಿ ಕಪ್ ಪ್ರಾಥಮಿಕ ಹಂತದ ಪಂದ್ಯಗಳ ಆರಂಭದಲ್ಲಿ ಅವರು ಬಿಎಫ್ಸಿ ಜೊತೆಗಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದಾರೆ. ಹೀಗಾಗಿ ಐಎಸ್ಎಲ್ನಲ್ಲಿ ಉಳಿದಿರುವ ಪಂದ್ಯಗಳಲ್ಲಿ ತಂಡ ಮೂಸಾ ಮಾರ್ಗದರ್ಶನದಲ್ಲೇ ಕಣಕ್ಕೆ ಇಳಿಯಲಿದೆ. ತಲಾ ಒಂದು ಬಾರಿ ಚಾಂಪಿಯನ್ ಮತ್ತು ರನ್ನರ್ ಅಪ್ ಆಗಿರುವ ಬಿಎಫ್ಸಿ ಇದೇ ಮೊದಲ ಸಲ ಐಎಸ್ಎಲ್ನಲ್ಲಿ ನೀರಸ ಪ್ರದರ್ಶನ ನೀಡಿದೆ. ಆರಂಭದಿಂದಲೇ ಕಳಪೆ ಆಟ ಆಡುತ್ತ ಬಂದಿರುವ ತಂಡ ಈಗ ಪ್ಲೇ ಆಫ್ ಹಂತ ತಲುಪದೇ ಹೊರಬೀಳುವ ಆತಂಕದಲ್ಲಿದೆ. ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಬೇಕಾದರೆ ತಂಡ ಲೀಗ್ ಹಂತದಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಜಯ ಗಳಿಸಲೇಬೇಕು.

17 ಪಂದ್ಯಗಳನ್ನು ಆಡಿರುವ ತಂಡ ಕೇವಲ ನಾಲ್ಕರಲ್ಲಿ ಗೆದ್ದಿದ್ದು ಆರರಲ್ಲಿ ಸೋತಿದೆ. ಗಳಿಸಿರುವ ಗೋಲು 19, ಬಿಟ್ಟುಕೊಟ್ಟದ್ದು 21. ಆರಂಭದಲ್ಲಿ ಬಿದ್ದ ಹೊಡೆತದಿಂದ ಚೇತರಿಸಿಕೊಳ್ಳಲು ಪ್ರತಿ ಪಂದ್ಯದಲ್ಲೂ ಪ್ರಯತ್ನ ನಡೆಸಿದ ತಂಡ ಫಲ ಕಾಣಲಿಲ್ಲ. ಹೀಗಾಗಿ ಎಟಿಕೆ ಎದುರಿನ ಸೋಲಿನ ನಂತರ ಮೂಸಾ ಆಡಿದ ಮಾತು ಎಷ್ಟರ ಮಟ್ಟಿಗೆ ಕಾರ್ಯಗತ ಆಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಮುಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ತಂಡ ಎದುರಿಸಬೇಕಾಗಿರುವುದು ಬಲಿಷ್ಠ ತಂಡಗಳನ್ನು.

ಅಂತಿಮ ಹಂತದ ಹೋರಾಟಕ್ಕೆ ಸಜ್ಜಾಗಿರುವ ಸುನಿಲ್ ಚೆಟ್ರಿ ಬಳಿಕ ಫೆಬ್ರುವರಿ 15ರ ಸೋಮವಾರ ಈ ಹಾದಿಯಲ್ಲಿ ಮೊದಲ ಸವಾಲನ್ನು ಮೀರಿ ನಿಲ್ಲಬೇಕಾಗಿದೆ. ಬ್ಯಾಂಬೊಲಿಮ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ತಂಡದ ಎದುರಾಳಿ ಮುಂಬೈ ಸಿಟಿ ಎಫ್ಸಿ. 16 ಪಂದ್ಯಗಳಲ್ಲಿ 10 ಜಯ ಮತ್ತು ನಾಲ್ಕು ಡ್ರಾದೊಂದಿಗೆ 34 ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿ ವಿರಾಜಮಾನವಾಗಿರುವ ಮುಂಬೈ ಸಿಟಿಯನ್ನು ಮಣಿಸಿ ಮುಂದೆ ಸಾಗುವುದು ಬಿಎಫ್ಸಿ ಎದುರು ಇರುವ ಬಹುದೊಡ್ಡ ಸವಾಲು. ಫೆಬ್ರುವರಿ 21ರಂದು ಫತೋರ್ಡದಲ್ಲಿ ಬಿಎಫ್ಸಿ ಮತ್ತೊಂದು ತಡೆಗೋಡೆಯನ್ನೂ ಹತ್ತಿ ಇಳಿಯಬೇಕಾಗಿದೆ. ಅಂದು ನಡೆಯಲಿರುವ ಪಂದ್ಯದಲ್ಲಿ ಬಿಎಫ್ಸಿಯ ಎದುರಾಳಿ ಎಫ್ಸಿ ಗೋವಾ. ತಿಲಕ್ ಮೈದಾನದಲ್ಲಿ ಜೆಮ್ಶೆಡ್ಪುರ ಎಫ್ಸಿಯನ್ನು ತಂಡ ಎದುರಿಸಲಿದೆ.

ಎಟಿಕೆ ಮೋಹನ್ ಬಾಗನ್ ತಂಡದೊಂದಿಗೆ ಮುಂಬೈ ಸಿಟಿ ಎಫ್ಸಿ ಈಗಾಗಲೇ ಟೂರ್ನಿಯ ಪ್ಲೇ ಆಫ್ ಹಂತಕ್ಕೇರಿದೆ. ಆದ್ದರಿಂದ ಆ ತಂಡದ ಮೇಲೆ ಯಾವ ಬಗೆಯ ಒತ್ತಡವೂ ಇಲ್ಲ. ಇದು, ಬಿಎಫ್ಸಿಯ ಆತಂಕವನ್ನು ಇಮ್ಮಡಿಗೊಳಿಸಿದೆ. ಶಿಸ್ತುಬದ್ಧ ಆಟವಾಡುವ ಮುಂಬೈ ಒತ್ತಡವಿಲ್ಲದ ಕಾರಣ ಇನ್ನಷ್ಟು ಬಲಶಾಲಿ ಆಕ್ರಮಣಕ್ಕೆ ಮುಂದಾಗಲಿದೆ. ಇದಕ್ಕೆ ಮದ್ದು ಅರೆಯಲು ಬಿಎಫ್ಸಿ ಯಾವ ತಂತ್ರ ಬಳಸಲಿದೆ ಎಂಬುದು ಕುತೂಹಲದ ಸಂಗತಿ.

ಅಂತಿಮ ನಾಲ್ಕರಲ್ಲಿ ಉಳಿದಿರುವ ಎರಡು ಸ್ಥಾನಗಳಲ್ಲಿ ಒಂದನ್ನು ತನ್ನದಾಗಿಸಿಕೊಳ್ಳಲು ಗೋವಾ ಶತಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಆ ತಂಡವನ್ನೂ ಮಣಿಸುವುದು ಸುಲಭದ ಕಾರ್ಯವೇನೂ ಅಲ್ಲ. ಜೆಮ್ಶೆಡ್ಪುರ ತಂಡ ಬಿಎಫ್ಸಿ ಹಾದಿಯಲ್ಲಿ ದೊಡ್ಡ ತಡೆಯೇನೂ ಅಲ್ಲ. ಆದರೆ ಆ ಪಂದ್ಯಕ್ಕೂ ಮೊದಲು ಒಂದರಲ್ಲಿ ಸೋತರೂ ತಂಡದ ಕನಸು ನುಚ್ಚುನೂರು ಆಗಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಪಂದ್ಯವೇ ತಂಡಕ್ಕೆ ಬಹುಮುಖ್ಯ ಆಗಲಿದೆ.

ಹೊಸ ಕೋಚ್ ಪ್ರವೇಶ ಪರಿಣಾಮ ಬೀರುವುದೇ?

ಹೊಸ ಕೋಚ್ ಐಎಸ್ಎಲ್ನಲ್ಲಿ ಈ ಬಾರಿ ತಂಡದೊಂದಿಗೆ ಇರುವುದಿಲ್ಲವಾದರೂ ಅವರ ನೇಮಕ ಆಟಗಾರರಲ್ಲಿ ಹೊಸ ಹುರುಪು ತುಂಬಿರುವ ಸಾಧ್ಯತೆ ಇದೆ. ಅದು ಮುಂಬೈ ಎದುರಿನ ಪಂದ್ಯದಲ್ಲಿ ಹೊರಸೂಸುವುದೇ ಎಂಬುದನ್ನು ಕಾದುನೋಡಬೇಕು. ಜರ್ಮನಿಯಲ್ಲಿ ಜನಿಸಿ ಇಟಲಿಯಲ್ಲಿ ಬೆಳೆದ ಪೆಜಯೊಲಿ ಯುರೋಪ್ನ ಫುಟ್ಬಾಲ್ನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅದರ ಲಾಭ ಬಿಎಫ್ಸಿ ಮೇಲೆ ಆಗುವ ಸಾಧ್ಯತೆ ಇದೆ ಎಂಬುದೇ ತಜ್ಞರ ವಿಶ್ವಾಸ. ಅವರ ಪ್ರಭಾ ವಲಯದಲ್ಲಿ ತಂಡ ಐಎಸ್ಎಲ್ನಲ್ಲಿ ಪುಟಿದೆದ್ದರೆ ಎಎಫ್ಸಿ ಕಪ್ ಪ್ರಾಥಮಿಕ ಹಂತದ ಪಂದ್ಯಗಳಲ್ಲೂ ತಂಡಕ್ಕೆ ಲಾಭವಾಗಲಿದೆ. ಅದಿಲ್ಲದಿದ್ದರೆ ಬಿಎಫ್ಸಿಯ ‘ನೈಜ’ ಆಟ ನೋಡಲು ಮುಂದಿನ ಐಎಸ್ಎಲ್ವರೆಗೆ ಕಾಯಲೇಬೇಕು.

ಇದನ್ನೂ ಓದಿ:PV Web Exclusive: ಇಶಾಂತ್ ಶರ್ಮಾ ’ತ್ರಿಶತಕ‘ದ ಮುಂದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.