ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕಷ್ಟ ದಿನಗಳಿಂದ ಯಶಸ್ಸಿನವರೆಗೆ.. ಲಲಿತ್ ಕುಮಾರ್ ಉಪಾಧ್ಯಾಯ ಹಾದಿ

Published 17 ಜುಲೈ 2024, 0:03 IST
Last Updated 17 ಜುಲೈ 2024, 0:03 IST
ಅಕ್ಷರ ಗಾತ್ರ

ನವದೆಹಲಿ: ಹಾಕಿ ವೃತ್ತಿಜೀವನದ ಆರಂಭದಲ್ಲೇ ಟಿವಿ ಚಾನೆಲ್‌ವೊಂದು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಲಿಪಶುವಾದ ಈ ಆಟಗಾರ ನಂತರ ಪರಿಶ್ರಮಪಟ್ಟರು. ಭಾರತ ತಂಡಕ್ಕೆ ಮರಳಿದ ನಂತರ ಹಿಂತಿರುಗಿ ನೋಡಲಿಲ್ಲ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ತಂಡದ ಡಿಫೆಂಡರ್‌ ಲಲಿತ್‌ ಉಪಾಧ್ಯಾಯ ಅವರೇ ಈ ಆಟಗಾರ.

ಅಂದು ಬೇಗನೇ ಅಂತ್ಯಗೊಳ್ಳುವಂತೆ ಕಂಡಿದ್ದ ವೃತ್ತಿಜೀವನವನ್ನು ಮರುರೂಪಿಸುವಲ್ಲಿ ಲಲಿತ್‌ ಪಟ್ಟಪಾಡು ಅಷ್ಟಿಷ್ಟಲ್ಲ. ಯಾತನೆಯಿಂದ ವ್ಯಾಕುಲರಾಗದೇ ಅದನ್ನೇ ವರದಾನವಾಗಿ ಪರಿವರ್ತಿಸಿದರು.

2008 ರಲ್ಲಿ ಟಿ.ವಿ. ಚಾನೆಲ್‌ ಒಂದು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಅವರ ಹೆಸರು ಕೇಳಿಬಂದಿತ್ತು. ಭಾರತ ಹಾಕಿ ಫೆಡರೇಷನ್‌ನ ಆಗಿನ ಕಾರ್ಯದರ್ಶಿ ಕೆ.ಜ್ಯೋತಿಕುಮಾರನ್‌ ಅವರೊಂದಿಗೆ ‘ಏಜಂಟ್‌’ ಎಂದು ಹೇಳಿಕೊಂಡ ಚಾನೆಲ್‌ ವರದಿಗಾರ, ‘ವ್ಯವಹಾರದ’ ಮಾತುಕತೆ ನಡೆಸಿದ್ದರು. ತಮ್ಮಿಷ್ಟದ ಆಟಗಾರರನ್ನು ಸೇರ್ಪಡೆ ಮಾಡಿದರೆ, ಪ್ರಾಯೋಜಕತ್ವ ಕುದುರಿಸಿಕೊಡುದಾಗಿ ಹೇಳಿದರು. ಆಗ ಏಜಂಟ್ ಹೇಳಿದ ಹೆಸರೇ ಲಲಿತ್‌ ಅವರದು.

ಅಮಾಯಕರಾದ ಲಲಿತ್‌ ತಮ್ಮ ಹೆಸರು ಕೇಳಿಬಂದಾಗ ಕಂಗಾಲಾದರು. ಆಟದಿಂದ ದೂರವಾಗುವ ಮಟ್ಟಕ್ಕೆ ಹೋಗಿದ್ದರು. ‘ದೊಡ್ಡ ಕನಸಿನೊಡನೆ ತಂಡಕ್ಕೆ ಬರುವ ಆಟಗಾರನೊಬ್ಬ ಹೀಗಾದಲ್ಲಿ ಆಟವನ್ನೇ ಬಿಡುತ್ತಿದ್ದ. ಆದರೆ ಆ ಪ್ರಕರಣ ಸಂಕಷ್ಟದಲ್ಲೂ ವರದಾನದಂತೆ ಆಯಿತು. ಆರಂಭದಲ್ಲೇ ಇದನ್ನು ಎದುರಿಸಿ ಮೆಟ್ಟಿನಿಂತಿದ್ದರಿಂದ ಮಾನಸಿಕವಾಗಿ ಗಟ್ಟಿಯಾದೆ. ಆ ಘಟನೆಯನ್ನು ಮರೆತುಬಿಟ್ಟಿದ್ದೇನೆ’ ಎಂದು ಅವರು ಪಿಟಿಐಗೆ ತಿಳಿಸಿದರು.

‘ಒಲಿಂಪಿಕ್ಸ್‌ನಲ್ಲಿ ಭಾರತ ಎಂಟು ಪದಕಗಳನ್ನು ಗೆದ್ದಿರುವುದನ್ನು ಕೇಳಿ ತಿಳಿದಿದ್ದೆವು. ಆದರೆ ತಂಡ ಪದಕ ಗೆದ್ದಿರುವುದನ್ನು ನಾವು ನೋಡಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ಆಡಿ ಪದಕ ಗಳಿಸುವುದು ನನ್ನ ಕನಸಾಗಿತ್ತು’ ಎಂದರು.

‘ಈಗ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ಬಂದಿವೆ. ಈಗ ಯಾರಿಗೂ ಈ ರೀತಿ  ಆಗುವುದಿಲ್ಲ. ನಾನು ಅದನ್ನೆಲ್ಲಾ ಮರೆತು ಎರಡನೇ ಬಾರಿ ಒಲಿಂಪಿಕ್ಸ್‌ ಆಡಲು ತೆರಳುತ್ತಿದ್ದೇನೆ. ತಂಡದ ಜರ್ಸಿ ಧರಿಸಿದಾಗಲೆಲ್ಲಾ ಏನಾದರೂ ವಿಶೇಷವಾದುದನ್ನು ಸಾಧಿಸಬೇಕೆಂಬ ಸ್ಫೂರ್ತಿ ಮೂಡುತ್ತದೆ’ ಎಂದು 30 ವರ್ಷ ವಯಸ್ಸಿನ ಲಲಿತ್ ಹೇಳಿದರು.

ಒಲಿಂಪಿಕ್ಸ್‌ ಕಂಚು, ಏಷ್ಯನ್ ಗೇಮ್ಸ್‌ ಚಿನ್ನವನ್ನು ಈಗಾಗಲೇ ಗೆದ್ದಿರುವ ಲಲಿತ್‌, ಇದೇ 26ರಂದು ಆರಂಭವಾಗುವ ಪ್ಯಾರಿಸ್‌ ಕ್ರೀಡೆಗಳಲ್ಲಿ ಈ ಬಾರಿ ಇನ್ನೂ ಹೆಚ್ಚಿನ ಸಾಧನೆಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಭಾರತ ತಂಡದ ಪರ 168 ಪಂದ್ಯಗಳಲ್ಲಿ ಅವರು 45 ಗೋಲುಗಳನ್ನು ಗಳಿಸಿದ್ದಾರೆ.

ಲಲಿತ್ ಕುಮಾರ್ ಉಪಾಧ್ಯಾಯ

ಲಲಿತ್ ಕುಮಾರ್ ಉಪಾಧ್ಯಾಯ

‘ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದ ನಂತರ ನಿರೀಕ್ಷೆಯ ಮಟ್ಟ ಮೇಲೇರಿದೆ. ಈ ಬಾರಿ ಪದಕದ ಬಣ್ಣ ಬದಲಾಗುತ್ತದೆ ಎನ್ನುವ ವಿಶ್ವಾಸವಿದೆ’ ಎಂದು ಲಲಿತ್‌ ಹೇಳಿದರು.

ಟೋಕಿಯೊದಲ್ಲಿ ಆಡಿದ್ದ ತಂಡದಲ್ಲಿದ್ದ 11 ಆಟಗಾರರು ಪ್ಯಾರಿಸ್‌ನಲ್ಲಿ ಆಡಲಿದ್ದಾರೆ. ಐದು ಮಂದಿ ಮೊದಲ ಸಲ ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT