ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ಸುಲಭ ತುತ್ತಾದ ಮಲೇಷ್ಯಾ

Published : 11 ಸೆಪ್ಟೆಂಬರ್ 2024, 21:42 IST
Last Updated : 11 ಸೆಪ್ಟೆಂಬರ್ 2024, 21:42 IST
ಫಾಲೋ ಮಾಡಿ
Comments

ಹುಲುನ್‌ಬುಯಿರ್‌ (ಚೀನಾ): ಯುವ ಫಾರ್ವರ್ಡ್ ಆಟಗಾರ ರಾಜಕುಮಾರ್ ಪಾಲ್ ಅವರ ಹ್ಯಾಟ್ರಿಕ್ ನೆರವಿನಿಂದ ಭಾರತ ತಂಡ 8–1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸದೆಬಡಿದು, ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಮೂರನೇ ಗೆಲುವನ್ನು ಸಾಧಿಸಿತು. ಆ ಮೂಲಕ ಸೆಮಿಫೈನಲ್‌ ಸ್ಥಾನವನ್ನು ಕಾದಿರಿಸಿತು.

ರಾಜಕುಮಾರ್‌ ಬುಧವಾರ ನಡೆದ ಈ ಪಂದ್ಯದ ಮೂರನೇ, 25 ಮತ್ತು 33ನೇ ನಿಮಿಷ ಗೋಲುಗಳನ್ನು ಗಳಿಸಿದರು. ಅರಿಜಿತ್ ಸಿಂಗ್ ಹುಂಡಲ್‌ (6 ಮತ್ತು 39ನೇ ನಿಮಿಷ), ಜುಗರಾಜ್ ಸಿಂಗ್‌ (ಏಳನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ) ಮತ್ತು ಉತ್ತಮ್ ಸಿಂಗ್ (40ನೇ ನಿಮಿಷ) ಅವರು ಇತರ ಗೋಲುಗಳಿಗೆ ಕಾರಣರಾದರು.

ಮಲೇಷ್ಯಾದ ಏಕೈಕ ಗೋಲನ್ನು ಅಖೀಮುಲ್ಲಾ ಅನ್ವರ್‌ 34ನೇ ನಿಮಿಷ ಗಳಿಸಿದರು.

ಆರು ತಂಡಗಳು ಕಣದಲ್ಲಿರುವ ಈ ಟೂರ್ನಿಯಲ್ಲಿ ಭಾರತ ಪ್ರಸ್ತುತ ಮೂರು ಪಂದ್ಯಗಳಿಂದ 9 ಪಾಯಿಂಟ್ಸ್ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ತಂಡವು ಗುರುವಾರ ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಕೊನೆಯ ಲೀಗ್ ಪಂದ್ಯ ಶನಿವಾರ ನಡೆಯಲಿದೆ.

ರೌಂಡ್‌–ರಾಬಿನ್ ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಸೆ. 16ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮರುದಿನ ಫೈನಲ್ ನಿಗದಿಯಾಗಿದೆ.

ಭಾರತ, ಇದಕ್ಕೆ ಮೊದಲು ಆತಿಥೇಯ ಚೀನಾ ತಂಡವನ್ನು 3–0 ಗೋಲುಗಳಿಂದ, ಜಪಾನ್ ತಂಡವನ್ನು 5–1 ಗೋಲುಗಳಿಂದ ಸೋಲಿಸಿತ್ತು.

ಭಾರತದ ಮುಂಚೂಣಿ ಆಟಗಾರರು ಅತ್ಯುತ್ತಮ ಲಯದಲ್ಲಿದ್ದು, ತಂಡವು ಆರಂಭದಿಂದಲೇ ಮೇಲುಗೈ ಸಾಧಿಸಿತು. ಐದು ಫೀಲ್ಡ್‌ ಗೋಲುಗಳನ್ನು, ಪೆನಾಲ್ಟಿ ಕಾರ್ನರ್‌ ಮೂಲಕ ಮೂರು ಗೋಲುಗಳನ್ನ  ಗಳಿಸಿತು. ಜುಗರಾಜ್, ಹರ್ಮನ್‌ಪ್ರೀತ್‌, ಉತ್ತಮ್ ಪೆನಾಲ್ಟಿ ಕಾರ್ನರ್‌ಗಳನ್ನು ಪರಿವರ್ತಿಸಿದರು.

ಮೊದಲ ಕ್ವಾರ್ಟರ್‌ನಲ್ಲೇ ಬಿರುಸಿನ ದಾಳಿಗಳ ಮೂಲಕ ಭಾರತ ಹಿಡಿತ ಸಾಧಿಸಿದ್ದು, ಶೀಘ್ರವೇ ಮುನ್ನಡೆ ಪಡೆಯಿತು. ಅಮೋಘ ಸ್ಟಿಕ್‌ವರ್ಕ್‌ ಮೂಲಕ ರಾಜಕುಮಾರ್‌ ಮೂರನೇ ನಿಮಿಷವೇ ಗೋಲು ಗಳಿಸಿದರು.

ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮಲೇಷ್ಯಾ ರಕ್ಷಣಾ ವಿಭಾಗ ಪರದಾಡಿತು. ಮೂರು ನಿಮಿಷ ನಂತರ ಅರಿಜಿತ್ ಹುಂಡಲ್ ಮುನ್ನಡೆ ಹೆಚ್ಚಿಸಿದರು. ಮರು ನಿಮಿಷವೇ ಜುಗರಾಜ್ ಗೋಲು ಗಳಿಸಿ, ಭಾರತ ಮೊದಲ ಕ್ವಾರ್ಟರ್‌ಗೆ 3–0  ಮುನ್ನಡೆ ಪಡೆಯಲು ನೆರವಾದರು.

ಎರಡನೇ ಕ್ವಾರ್ಟರ್‌ನಲ್ಲಿ ಮಲೇಷ್ಯಾ ಸ್ವಲ್ಪ ಆಕ್ರಮಣಕಾರಿಯಾಗಿ ಆಡಿತು. ಬೇಗನೇ ಪೆನಾಲ್ಟಿ ಕಾರ್ನರ್‌ ಕೂಡ ಗಳಿಸಿತು. ಆದರೆ ಭಾರತದ ರಕ್ಷಣಾಪಡೆ ಅದನ್ನು ತಡೆಯಿತು. ಭಾರತ 22ನೇ ನಿಮಿಷ ಒಂದರ ಹಿಂದೆ ಒಂದಂತೆ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು. ವಿಶ್ವದ ಅತ್ಯುತ್ತಮ ಡ್ರ್ಯಾಗ್‌ಫ್ಲಿಕರ್‌ಗಳಲ್ಲಿ ಒಬ್ಬರಾದ ಹರ್ಮನ್‌ಪ್ರೀತ್‌ ಎರಡನೇ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಕೆಲವೇ ನಿಮಿಷಗಳ ಅಂತರದಲ್ಲಿ ರಾಜಕುಮಾರ್ ಎರಡನೇ ಗೋಲು ಗಳಿಸಿದರೆ, ಅರಿಜಿತ್ ಹುಂಡಲ್ ವಿರಾಮದ ವೇಳೆ ಭಾರತದ ಮುನ್ನಡೆಯನ್ನು 5–0ಗೆ ಹೆಚ್ಚಿಸಿದರು.

ಉತ್ತರಾರ್ಧದ ಮೂರನೇ ನಿಮಿಷ, ವಿವೇಕಸಾಗರ್ ಪ್ರಸಾದ್ ಅವರ ಯತ್ನವನ್ನು ಮಲೇಷ್ಯಾದ ಗೋಲ್‌ಕೀಪರ್ ತಡೆದು ಮುಂದೆ ತಳ್ಳಿದಾಗೆ ಆ ರಿಬೌಂಡ್‌ನಲ್ಲಿ ಚೆಂಡನ್ನು ಗುರಿತಲುಪಿಸಿ ರಾಜಕುಮಾರ್ ‘ಹ್ಯಾಟ್ರಿಕ್‌’ ಪೂರೈಸಿದರು. ನಂತರವಷ್ಟೇ ಮಲೇಷ್ಯಾ, ಅನ್ವರ್ ಮೂಲಕ ಸೋಲಿನ ಅಂತರ ತಗ್ಗಿಸಿತು.

ಆದರೆ ಭಾರತದ ಮುನ್ನಡೆ 6–1ಕ್ಕೆ ಸೀಮಿತಗೊಳ್ಳಲಿಲ್ಲ. ನೀಲಕಂಠ ಶರ್ಮಾ ಪಾಸ್‌ನಲ್ಲಿ ಅರಿಜಿತ್ ಹುಂಡಲ್ ತಮ್ಮ ಎರಡನೇ ಗೋಲು ಗಳಿಸಿದರೆ, ಉತ್ತಮ್ ಕೊನೆಯ ಪಂದ್ಯದ ಕೊನೆಯ ಗೋಲು ತಂದಿತ್ತರು.

ಪಾಕಿಸ್ತಾನಕ್ಕೆ ಗೆಲುವು
ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 2–1 ಗೋಲುಳಿಂದ ಜಪಾನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಅವಕಾಶವನ್ನು ಹಸಿರಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT