ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್‌ ಹಾಕಿ: ಭಾರತಕ್ಕೆ ಇಂದು ನ್ಯೂಜಿಲೆಂಡ್‌ ಸವಾಲು

ಸೇಡು ತೀರಿಸಲು ಅವಕಾಶ
Published 26 ಜುಲೈ 2024, 23:30 IST
Last Updated 26 ಜುಲೈ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ದುರ್ಗಮ ಹಾದಿಯಲ್ಲಿ ಸಾಗಲು ತನ್ನೆಲ್ಲಾ ಪ್ರಯತ್ನದೊಡನೆ ಸಜ್ಜಾಗಿದೆ. ಈವ್ಸ್ ಡ್ಯು ಮ್ಯಾನುವಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಅಪಾಯಕಾರಿ ನ್ಯೂಜಿಲೆಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದು 41 ವರ್ಷಗಳ ಒಲಿಂಪಿಕ್ಸ್‌  ಪದಕದ ಬರ ನೀಗಿಸಿದ್ದ ಭಾರತ ತಂಡ, ನಂತರ ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದುಕೊಂಡಿತು. ಹೀಗಾಗಿ ಹರ್ಮನ್‌ಪ್ರೀತ್‌ ಸಿಂಗ್‌ ಬಳಗದ ಮೇಲೆ ನಿರೀಕ್ಷೆಯ ಭಾರ ಇದೆ. ಆದರೆ ತಂಡಕ್ಕೆ ಮುಂದಿನ ಹಾದಿಯಲ್ಲಿ ಎದುರಾಗುವ ಕಠಿಣ ಸವಾಲುಗಳ ಅರಿವು ಇದ್ದೇ ಇದೆ.

ಮೊದಲನೆಯದಾಗಿ ಭಾರತಕ್ಕೆ ಗುಂಪು ಹಂತದಿಂದಲೇ ಸವಾಲು ಇದೆ. ಭಾರತದ ಜೊತೆ ‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ, ಮೂರು ಬಾರಿಯ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ, ರಿಯೊ ಕ್ರೀಡೆಗಳಲ್ಲಿ ಚಿನ್ನ ಗೆದ್ದ ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ ತಂಡಗಳಿವೆ.

ಎರಡನೆಯದಾಗಿ ನ್ಯೂಜಿಲೆಂಡ್‌ ಒಡ್ಡಬಹುದಾದ ಅಪಾಯ. ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ವಿಶ್ವಕಪ್‌ ಕ್ವಾರ್ಟರ್‌ಫೈನಲ್‌ ಸ್ಥಾನಕಕಾಗಿ ನಡೆದ ಪಂದ್ಯದಲ್ಲಿ ಭಾರತವನ್ನು, ನ್ಯೂಜಿಲೆಂಡ್‌  ಸೋಲಿಸಿತ್ತು. ಆಗ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತ, ಕಿವೀಸ್‌ ತಂಡವನ್ನು ಮಣಿಸುವ ವಿಶ್ವಾಸದಲ್ಲಿದ್ದು ವಿರಾಮದ ವೇಳೆ 2–1 ಗೋಲುಗಳ ಮುನ್ನಡೆ ಹೊಂದಿತ್ತು. ಆದರೆ ಅಮೋಘವಾಗಿ ಪುಟಿದೆದ್ದ ನ್ಯೂಜಿಲೆಂಡ್‌ ಕೊನೆಗೆ 3–3ರಲ್ಲಿ ಸಮಮಾಡಿಕೊಂಡು, ಶೂಟೌಟ್‌ನಲ್ಲಿ 5–4ರಿಂದ ಗೆದ್ದು ಆತಿಥೇಯರಿಗೆ ಆಘಾತ ನೀಡಿತ್ತು. ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಸ್ಥಾನಕ್ಕೂ ಇದು ಎರವಾಯಿತು.

ಹರ್ಮನ್‌ಪ್ರೀತ್ ಸಿಂಗ್‌ ಪಡೆಗೆ ಈಗ ಸೇಡು ತೀರಿಸಲು ಅವಕಾಶವಿದೆ. ‘ನಾವು ನ್ಯೂಜಿಲೆಂಡ್‌ ತಂಡವನ್ನು ಮೊದಲಿಂದಲೂ ಪ್ರಬಲ ಎದುರಾಳಿಯಾಗಿ ಕಂಡಿದ್ದೇವೆ. ಈಗ ವಿಶ್ವಕಪ್ ಪಂದ್ಯದ ನೆನಪಾಗಿದ್ದು ಒಳ್ಳೆಯದೇ. ಯಾವುದೇ ಹಂತದಲ್ಲಿ ನಾವು ಸಡಿಲುಬಿಡುವಂತಿಲ್ಲ. ಉತ್ತಮ ಆರಂಭ ಮಾಡಿ, ಕೊನೆಯವರೆಗೂ ಒತ್ತಡ ಹೇರುವುದು ಬಲು ಮುಖ್ಯ’ ಎಂದು ಅನುಭವಿ ಡ್ರ್ಯಾಗ್‌ಫ್ಲಿಕ್ಕರ್ ಸಿಂಗ್ ಶುಕ್ರವಾರ ತಿಳಿಸಿದರು.

ಉತ್ತಮ ಆರಂಭ ಪಡೆಯುವುದು ಭಾರತಕ್ಕೆ ಅನಿವಾರ್ಯ ಕೂಡ. ‘ಬಲಾಢ್ಯರ ಗುಂಪಿ’ನಲ್ಲಿ ಮುಂದಿನ ಪಂದ್ಯಗಳೆಲ್ಲಾ ಕಠಿಣವಾಗುತ್ತ ಹೋಗುತ್ತದೆ. ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಬಿಟ್ಟರೆ ಉಳಿದ ತಂಡಗಳ ವಿರುದ್ಧದ ಪಂದ್ಯಗಳು ಕಠಿಣ ಸವಾಲಿನದ್ದೇ. ಈ ಎರಡು ತಂಡಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರೆ ಕ್ವಾರ್ಟರ್‌ಫೈನಲ್‌ ರೇಸ್‌ನಲ್ಲಿ ಉಳಿಯಬಹುದು.

ಇದಕ್ಕಾಗಿ ತಂಡದ ಕಾರ್ಯತಂತ್ರ ಸರಿಯಾಗಿರಬೇಕು. ಹಾಲಿ ಕೋಚ್ ಕ್ರೇಗ್‌ ಫುಲ್ಟನ್‌ ಡಿಫೆನ್ಸ್‌ಗೆ ಒತ್ತು ನೀಡಿದರೆ, ತಂಡ ಆಕ್ರಮಣ ಬಯಸುತ್ತಿದೆ. ಸಂದರ್ಭ ನೋಡಿಕೊಂಡು ದಾಳಿಗಿಳಿಯುವ ಯೋಜನೆಗೆ ತಂಡ ಹೇಗೊ ಒಗ್ಗಿಕೊಂಡಿದೆ. ಆದರೆ ಇದರಲ್ಲಿ ಶಿಸ್ತಿನ ಕೊರತೆ ಕಾಣುತ್ತಿದೆ.

ಮುನ್ನುಗ್ಗುವ ವೇಳೆ ಮಾಡುವ ಅಚಾತುರ್ಯದಿಂದ ಎದುರಾಳಿ ತಂಡಕ್ಕೆ ಪ್ರತಿದಾಳಿಗೆ ಅವಕಾಶ ನೀಡಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತು ಪ್ರೊ ಲೀಗ್‌ ವೇಳೆ ಇದರಿಂದ ನಿರಾಶೆ ಅನುಭವಿಸಿದೆ. ಆಸ್ಟ್ರೇಲಿಯಾ ವಿರುದ್ಧ ಐದೂ ಪಂದ್ಯ ಸೋತರೆ, ಪ್ರೊ ಲೀಗ್‌ನ ಎಂಟು ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ ಒಂದು.

‘ನಾವು ಈ ಬಾರಿ ಚಿನ್ನ ಗೆಲ್ಲುವ ಗುರಿಯೊಡನೆ ಬಂದಿದ್ದೇವೆ. ನಾವು ಪ್ರಬಲ ಗುಂಪಿನಲ್ಲಿದ್ದೇವೆ. ಎದುರಾಳಿಗಳೆಲ್ಲಾ ಪದಕಕ್ಕೆ ಪೈಪೋಟಿಯೊಡ್ಡುವವರು. ಆದರೆ ಪಂದ್ಯದ ದಿನ ನಮ್ಮಿಂದ ಉತ್ತಮ ಪ್ರದರ್ಶನ ಮೂಡಿದರೆ, ಉಳಿದವರಿಗಿಂತ ಉತ್ತಮ ಎನಿಸಬಲ್ಲೆವು. ಆ ಮನೋಭಾವದೊಡನೆ ಇಲ್ಲಿಗೆ ಬಂದಿದ್ದೇವೆ’ ಎಂದು ಉಪನಾಯಕ ಹಾರ್ದಿಕ್‌ ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT