ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌: ಭಾರತ ಬಳಗದಲ್ಲಿ 117 ಕ್ರೀಡಾಪಟುಗಳು, 140 ಸಿಬ್ಬಂದಿ

Published 17 ಜುಲೈ 2024, 16:18 IST
Last Updated 17 ಜುಲೈ 2024, 16:18 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ  ಭಾರತದ 117 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ಮಂಗಳವಾರ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕ್ರೀಡಾಪಟುಗಳೊಂದಿಗೆ 140 ಮಂದಿ ನೆರವು ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಆಟಗಾರರ ‘ಅವಶ್ಯಕತೆ‘ಗಳನ್ನು ಪೂರೈಸಲಿರುವ 72 ಮಂದಿಗೆ ‘ಸರ್ಕಾರಿ ವೆಚ್ಚ’ದಲ್ಲಿ ತೆರಳುವ ಅವಕಾಶ ಲಭಿಸಿದೆ.

‘ಕ್ರೀಡಾಗ್ರಾಮದಲ್ಲಿ ತಂಗಲು ತಂಡವೊಂದರ 67 ಮಂದಿ ನೆರವು ಸಿಬ್ಬಂದಿಗೆ ಅವಕಾಶ ಇದೆ. ಅದರಲ್ಲಿ 11 ಜನ ಐಒಎ ಪ್ರತಿನಿಧಿಸುವ ಅಧಿಕಾರಿಗಳೂ ಸೇರಿದ್ದಾರೆ. ಅದರಲ್ಲಿಯೇ ಐವರು ವೈದ್ಯಕೀಯ ತಂಡದ ಸದಸ್ಯರೂ ಸೇರಿರಬೇಕು ಎಂಬ ನಿಯಮವಿದೆ‘ ಎಂದು ಈಚೆಗೆ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಅವರು ಕ್ರೀಡಾಪಟುಗಳು ಮತ್ತು ಸಿಬ್ಬಂದಿ ಪ್ರಮಾಣದ ಕುರಿತು ವಿವರಿಸಿದ್ದಾರೆ.

‘ಅಥ್ಲೀಟ್‌ಗಳ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 72  ತರಬೇತುದಾರರು ಮತ್ತು ಇನ್ನಿತರ ನೆರವು ಸಿಬ್ಬಂದಿಗಳಿಗೆ ಅವಕಾಶ ನೀಡಲಾಗಿದೆ. ಅವರ ವೆಚ್ಚವನ್ನು ಸರ್ಕಾರವು ಭರಿಸಲಿದೆ. ಅವರಿಗೆ ಕ್ರೀಡಾಗ್ರಾಮದ ಹೊರಗೆ ಇರುವ ಹೋಟೆಲ್  ಮತ್ತಿತರ ತಾಣಗಳಲ್ಲಿ ವಸತಿ ವ್ಯವಸ್ಥೆ  ಮಾಡಿಕೊಡಲಾಗವುದು’ ಎಂದು ಸ್ಪಷ್ಟಪಡಿಸಿದ್ದಾರೆ. 

ಸದ್ಯ ಹೊರಟಿರುವ ಬಳಗದಲ್ಲಿ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ಗಳದ್ದೇ ದೊಡ್ಡ ದಂಡು ಇದೆ. ಒಟ್ಟು 29 (11 ಮಹಿಳೆಯರು ಮತ್ತು 18 ಪುರುಷರು) ಇದರಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಶೂಟಿಂಗ್ (21) ಮತ್ತು ಹಾಕಿ (19) ತಂಡಗಳಿವೆ. ಶೂಟಿಂಗ್ ತಂಡದಲ್ಲಿ 11 ಮಹಿಳೆಯರು ಮತ್ತು 10 ಪುರುಷರು ಇದ್ದಾರೆ. 

ಇನ್ನುಳಿದಂತೆ;  ಟೇಬಲ್ ಟೆನಿಸ್ (8), ಬ್ಯಾಡ್ಮಿಂಟನ್ (7), ಕುಸ್ತಿ (6), ಆರ್ಚರಿ (6), ಬಾಕ್ಸಿಂಗ್ (6), ಗಾಲ್ಫ್ (4), ಟೆನಿಸ್ (3), ಈಜು (2) ಸೇಲಿಂಗ್ (2) ಹಾಗೂ ಈಕ್ವೆಸ್ಟ್ರಿಯನ್, ಜೂಡೊ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ ಕ್ರೀಡಗಳಲ್ಲಿ ತಲಾ ಒಬ್ಬರು ಸ್ಪರ್ಧಿ ಇದ್ದಾರೆ.  

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಎರಡು ಒಲಿಂಪಿಕ್ಸ್ ಪದಕ ವಿಜೇತರಾದ ಪಿ.ವಿ. ಸಿಂಧು, ಬೆಳ್ಳಿ ಪದಕವಿಜೇತ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಬಾಕ್ಸಿಂಗ್ ತಾರೆ ಲವ್ಲೀನಾ ಬೋರ್ಗೊಹೈನ್ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ. 

ಅಥ್ಲೆಟಿಕ್ಸ್ ತಂಡಕ್ಕೆ 17 ನೆರವು ಸಿಬ್ಬಂದಿ ಇದ್ದಾರೆ. ಉಳಿದಂತೆ ಕುಸ್ತಿ (12), ಬಾಕ್ಸಿಂಗ್ (11), ಹಾಕಿ (10), ಟೇಬಲ್ ಟೆನಿಸ್ (9), ಬ್ಯಾಡ್ಮಿಂಟನ್ (9), ಗಾಲ್ಫ್ (7), ಈಕ್ವೆಸ್ಟ್ರಿಯನ್ (5), ಆರ್ಚರಿ (4), ಸೇಲಿಂಗ್ (4), ವೇಟ್‌ಲಿಫ್ಟಿಂಗ್ (4), ಟೆನಿಸ್ (3), ಈಜು (2) ಮತ್ತು ಜುಡೊ (1) ಸಿಬ್ಬಂದಿ ಇದ್ದಾರೆ.

ಇದಲ್ಲದೇ  ಒಟ್ಟು 21 ಅಧಿಕಾರಿಗಳ ನಿಯೋಗವೂ ಇದ್ದು ಈ  ಪೈಕಿ 11 ಜನ ಕ್ರೀಡಾಗ್ರಾಮದೊಳಗಿನ ವಸತಿ ಸೌಕರ್ಯ ಪಡೆಯಲಿದ್ದಾರೆ. ಅದರಲ್ಲಿ  ಚೆಫ್‌ ಡಿ ಮಿಷನ್ ಗಗನ್ ನಾರಂಗ್, ಇಬ್ಬರು ಡೆಪ್ಯೂಟಿ ಚೆಫ್ ಡಿ ಮಿಷನ್,  ಒಬ್ಬರು ಮಾಧ್ಯಮ ಸಂಯೋಜಕ, ಇಬ್ಬರು ಕೇಂದ್ರಕಚೇರಿ ಅಧಿಕಾರಿಗಳು ಮತ್ತು ಐವರು ವೈದ್ಯಕೀಯ ತಂಡದ ಸದಸ್ಯರು ಇರುವರು. 

ಫ್ರಾನ್ಸ್‌ನಲ್ಲಿರುವ ಭಾರತ ರಾಯಭಾರ ಕಚೇರಿಯ ಅಧಿಕಾರಿ ಏರ್ ಕಮಾಂಡರ್ ಪ್ರಶಾಂತ್ ಆರ್ಯ ಅವರಿಗೆ ಒಲಿಂಪಿಕ್ ಮಾನ್ಯತಾಪತ್ರ ಪಡೆದಿದ್ದಾರೆ. ಅವರು ಕ್ರೀಡಾಗ್ರಾಮಕ್ಕೆ ಭೇಟಿ ನೀಡಿ ಭಾರತ ತಂಡದವರಿಗೆ ಅಗತ್ಯವಿರುವ ಸಹಕಾರ ನೀಡಲಿರುವರು ಎಂದು ಕೇಂದ್ರ ಕ್ರೀಡಾ ಇಲಾಖೆ ಪತ್ರದಲ್ಲಿ ತಿಳಿಸಿದೆ.  

2020ರ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಿದ್ದ ತಂಡದಲ್ಲಿ ಭಾರತದ 119 ಕ್ರೀಡಾಪಟುಗಳು ಇದ್ದರು. ಆಗ ಭಾರತವು ಒಟ್ಟು 7 ಪದಕ ಗೆದ್ದು ಇತಿಹಾಸ ರಚಿಸಿತ್ತು. 

ಅಭಾ ಕಟುವಾ ಹೆಸರು ನಾಪತ್ತೆ!

ಈ ಹಿಂದೆ  ಅರ್ಹತೆ ಗಿಟ್ಟಿಸಿದ್ದ ಮಹಿಳಾ ಶಾಟ್‌ಪಟ್ ಅಥ್ಲೀಟ್ ಅಭಾ ಕಟುವಾ ಅವರ ಹೆಸರು ಈ ಪಟ್ಟಿಯಿಂದ ನಾಪತ್ತೆಯಾಗಿದೆ! ಅಭಾ ಅವರು ವಿಶ್ವ ರ‍್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರ ಹೆಸರು ವಿಶ್ವ ಅಥ್ಲೆಟಿಕ್ಸ್‌ (ಡಬ್ಲ್ಯುಎ) ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಇರಲಿಲ್ಲ. ಅವರಿಗೆ ಯಾವುದೇ ಮಾಹಿತಿ ನೀಡದೇ ಹೆಸರನ್ನು ಕೈಬಿಡಲಾಗಿದೆ. 

ಗಾಯ ಅಥವಾ ಉದ್ದೀಪನ ಮದ್ದು ತಡೆ ನಿಯಮ ಉಲ್ಲಂಘನೆಗಾಗಿ ಕೈಬಿಡಲಾಗಿದೆಯೇ ಎಂಬ ಯಾವುದೇ ಕಾರಣಗಳನ್ನೂ ಐಒಎ ಇದುವರೆಗೆ ನೀಡಿಲ್ಲ.   ಗಾಲ್ಫ್ ತಂಡಕ್ಕೆ ಹೋಟೆಲ್‌ ವಸತಿ ಪ್ಯಾರಿಸ್‌ ನಗರದಿಂದ 42 ಕಿ.ಮೀ ದೂರದಲ್ಲಿರುವ ಕ್ವಿಂಟಿನ್ ಎನ್ ವೆಲಿನೆಸ್ ನಲ್ಲಿ ಗಾಲ್ಫ್‌ ಸ್ಪರ್ಧೆಗಳು ನಡೆಯಲಿವೆ.   ಆದ್ದರಿಂದ ಸ್ಪರ್ಧಾತಾಣಕ್ಕೆ ಸಮೀಪದಲ್ಲಿರುವ  ಹೋಟೆಲ್‌ನಲ್ಲಿ ಭಾರತ ಗಾಲ್ಫ್ ತಂಡ ಕೋಚ್‌ಗಳು ಫಿಸಿಯೊ ಮತ್ತು ಕ್ಯಾಡಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. 

‘ಗಾಲ್ಫ್‌ ಆಟಗಾರರು ಮತ್ತು ಭಾರತ ಗಾಲ್ಫ್ ಯೂನಿಯನ್ ಮನವಿಯ ಮೇರೆಗೆ ಸ್ಪರ್ಧಾ ತಾಣಕ್ಕೆ ಹತ್ತಿರವಿರುವ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಪತ್ರದಲ್ಲಿ ಉಲ್ಲೇಖವಾಗಿದೆ.  ಪ್ಯಾರಿಸ್ ಆಯೋಜನೆ ಸಂಘಟನೆಯು ಭಾರತ ತಂಡಕ್ಕೆ ಸ್ಥಳೀಯ ಬಳಕೆಗಾಗಿ ಮೂರು ಕಾರುಗಳನ್ನು ನೀಡಲಿದೆ. ಆದರೆ ಅವುಗಳಿಗೆ ಚಾಲಕರನ್ನು ನೀಡಿಲ್ಲ. 

‘ತಾತ್ಕಾಲಿಕ ನೇಮಕಾತಿಯ ಮೂಲಕ ಚಾಲಕರನ್ನು ನೇಮಕ ಮಾಡಿಕೊಡುವಂತೆ ರಾಯಭಾರ ಕಚೇರಿಯು  ಆಯೋಜಕರಿಗೆ ಮನವಿ ಮಾಡಿದೆ’ ಎಂದು ಸಚಿವಾಲಯ ತಿಳಿಸಿದೆ.

ಡೋಪಿಂಗ್ ತಡೆಗೆ ಸೂಚನೆ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುತ್ತದೆ. ಆದ್ದರಿಂದ ಯಾವುದೇ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಭಾರತ ಒಲಿಂಪಿಕ್ ಸಂಸ್ಥೆ ಭಾರತೀಯ ಕ್ರೀಡಾ ಪ್ರಾಧಿಕಾರಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಹಾಗೂ ಕ್ರೀಡಾ ಫೆಡರೇಷನ್‌ಗಳಿಗೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT