ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟಿಂಗ್‌ | ಭಾರತ ತಂಡದ ಸಿದ್ಧತೆ ಇನ್ನೂ ಉತ್ತಮವಾಗಿರಬೇಕಿತ್ತು: ರಂಜನ್ ಸೋಧಿ

Published 19 ಜುಲೈ 2024, 15:18 IST
Last Updated 19 ಜುಲೈ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ‘ಪ್ಯಾರಿಸ್‌ಗೆ ತೆರಳುತ್ತಿರುವ ಭಾರತ ತಂಡದ ಸಿದ್ಧತೆ ಇನ್ನೂ ಉತ್ತಮವಾಗಿ ಇರಬೇಕಾಗಿತ್ತು‘ ಎಂದು ಏಷ್ಯನ್ ಗೇಮ್ಸ್‌ ಚಿನ್ನ ವಿಜೇತ ಶೂಟರ್‌ ರಂಜನ್ ಸೋಧಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಫೆಡರೇಷನ್‌ ನಡೆಸುವಲ್ಲಿ ಆಡಳಿತಗಾರರ ಜೊತೆ ಕ್ರೀಡಾಪಟುಗಳ ಮಾತಿಗೂ ಹೆಚ್ಚು ಬೆಲೆ ಇರಬೇಕು’ ಎಂದೂ ಅವರು ಒತ್ತಾಯಿಸಿದರು.

ಪ್ಯಾರಿಸ್‌ ಕ್ರೀಡೆಗಳಿಗೆ 21 ಮಂದಿಯ ತಂಡವನ್ನು ಘೋಷಣೆ ಮಾಡುವಲ್ಲಿ ಭಾರತ ರಾಷ್ಟ್ರೀಯ ರೈಫಲ್‌ ಶೂಟಿಂಗ್‌ ಸಂಸ್ಥೆ ವಿಳಂಬ ಮಾಡಿತು. ಆದರೂ ಈ ದೊಡ್ಡ ತಂಡದ ಮೇಲೆ ಅಪಾರ ವಿಶ್ವಾಸ ಹೊಂದಿರುವುದಾಗಿ ಒಲಿಂಪಿಯನ್ ಡಬಲ್ ಟ್ರ್ಯಾಪ್ ಶೂಟರ್‌ ಸೋಧಿ ಶುಕ್ರವಾರ ಹೇಳಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ದಾಖಲೆ ಸಂಖ್ಯೆಯ ಶೂಟರ್‌ಗಳು ಅರ್ಹತೆ ಪಡೆದಿದ್ದಾರೆ. 2021ರ ಟೋಕಿಯೊ ಕ್ರೀಡೆಗಳಲ್ಲಿ 15 ಮಂದಿ ಪಾಲ್ಗೊಂಡಿದ್ದೇ ಇದುವರೆಗಿನ ದಾಖಲೆ ಆಗಿತ್ತು. ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಒಂದೂ ಪದಕ ಬಂದಿಲ್ಲ.

‘ಎರಡು ತಿಂಗಳು ಇರುವಾಗ ನೀವು (ಎನ್‌ಆರ್‌ಎಐ) ತಂಡವನ್ನು ಘೋಷಿಸುವುದು ಬಹಳ ವಿಳಂಬ ಮಾಡಿದಂತೆ. ನಾನು ಮನಸ್ಸಿನಲ್ಲಿರುವುದನ್ನು ಹೇಳುತ್ತೇನೆ. ತಂಡವನ್ನು ಇನ್ನೂ ಬೇಗ ಪ್ರಕಟಿಸಬಹುದಿತ್ತು’ ಎಂದರು.

ಶೂಟಿಂಗ್‌ನಲ್ಲಿ ಪ್ರಬಲ ಶಕ್ತಿಯಾಗಿರುವ ಯುರೋಪ್‌ನ ದೇಶಗಳು ಮತ್ತು ಇತರೆಡೆಯ ದೇಶಗಳು ತಮ್ಮ ತಂಡಗಳನ್ನು ಮಾರ್ಚ್‌– ಏಪ್ರಿಲ್‌ನಲ್ಲೇ ಪ್ರಕಟಿಸಿದವು. ಆದರೆ ಎನ್‌ಆರ್‌ಎಐ ಜೂನ್ ಮಧ್ಯದಲ್ಲಿ ನಾಲ್ಕು ಟ್ರಯಲ್ಸ್‌ಗಲನ್ನು ನಡೆಸಿ ತಂಡವನ್ನು ಆಯ್ಕೆ ಮಾಡಿತು. ಇದು ಶೂಟರ್‌ಗಳಲ್ಲಿ ಒತ್ತಡ, ಉದ್ವೇಗ ಹೆಚ್ಚುವಂತೆ ಮಾಡಿತು. ಅವರು ಸಿದ್ಧತೆಗಾಗಿ ವಿದೇಶ ಪ್ರವಾಸ ಯೋಜಿಸಲು ಕಷ್ಟಪಡಬೇಕಾಯಿತು’ ಎಂದರು.

2010 ಮತ್ತು 2011ರಲ್ಲಿ ಸೋಧಿ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದು ಸತತ ಎರಡು ವರ್ಷ ವಿಸ್ವಕಪ್‌ ಚಿನ್ನದ ಪದಕ ಗೆದ್ದುಕೊಂಡಿದ್ದರು. ವಿಶ್ವ ಅಗ್ರ ಕ್ರಮಾಂಕಕ್ಕೂ ಏರಿದ್ದರು.

ಕ್ರೀಡಾಸಂಸ್ಥೆಗಳು ಕ್ರೀಡಾಪಟುಸ್ನೇಹಿಯಾಗಿರಲು ದೇಶದ ಕ್ರೀಡಾ ಫೆಡರೇಷನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇರಬೇಕು ಎಂದರು. ಆಡಳಿತ ನಡೆಸುವಲ್ಲಿ ರಾಜಕಾರಣಿಗಳ ಜೊತೆ ಕ್ರೀಡಾಪಟುಗಳಿಗೂ ಧ್ವನಿ ಇರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT