ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ಅತ್ತೆಗೆ ಥಳಿಸಿ ಕ್ರೌರ್ಯ ಮೆರೆದ ಸೊಸೆ; ವಿಡಿಯೊ ಚಿತ್ರೀಕರಿಸಿದ ಮಗ

Published : 2 ಸೆಪ್ಟೆಂಬರ್ 2024, 14:33 IST
Last Updated : 2 ಸೆಪ್ಟೆಂಬರ್ 2024, 14:33 IST
ಫಾಲೋ ಮಾಡಿ
Comments

ಚನ್ನಪಟ್ಟಣ: ಸೊಸೆಯೊಬ್ಬಳು ತನ್ನ ಮನೆಯಲ್ಲಿ ಅತ್ತೆಗೆ ದೊಣ್ಣೆಯಿಂದ ಅಮಾನವೀಯವಾಗಿ ಥಳಿಸಿದ್ದು, ಪತ್ನಿಯ ಕ್ರೌರ್ಯದ ದೃಶ್ಯವನ್ನು ಸ್ವತಃ ಪುತ್ರನೇ ವಿಡಿಯೊ ಮಾಡಿ ವಿಕೃತಿ ಮೆರೆದಿರುವ ಘಟನೆ ತಾಲ್ಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಆಧರಿಸಿ, ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ. ಅರವತ್ತು ವರ್ಷದ ಶಾಂತಮ್ಮ ಹಲ್ಲೆಗೊಳಗಾದವರು. ಸಂಜನಾ ತನ್ನ ಅತ್ತೆ ಮೇಲೆ ಕ್ರೌರ್ಯ ಮೆರೆದಿದ್ದು, ರವೀಂದ್ರ ಹಲ್ಲೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಭೂಪ!

ಅತ್ತೆ ಮತ್ತು ಸೊಸೆ ನಡುವೆ ಕೆಲ ತಿಂಗಳುಗಳಿಂದ ಜಗಳ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತಿದ್ದ ಶಾಂತಮ್ಮ ತಮ್ಮ ತವರು ಮನೆಗೆ ಹೋಗಿದ್ದರು. ಏಪ್ರಿಲ್ 19ರಂದು ಮನೆಗೆ ಬಂದಾಗ ಸಂಜನಾ, ‘ಯಾಕೆ ಮನೆಗೆ ಬಂದೆ’ ಎಂದು ತನ್ನ ಅತ್ತೆ ಜೊತೆ ಜಗಳ ತೆಗೆದು ನಿಂದಿಸಿದ್ದಾಳೆ ಎಂದು ಪೊಲೀಸರು ತಿಳಿಸಿದರು.

ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ಆಗ, ಶಾಂತಮ್ಮ ತಾನು ಕುಳಿತಿದ್ದ ಮಂಚದಿಂದ ಎದ್ದು ಹೊರಕ್ಕೆ ತೆರಳಲು ಮುಂದಾದರು. ಆಗ ಅವರನ್ನು ತಡೆದ ಸಂಜನಾ ಹಿಂದಕ್ಕೆ ತಳ್ಳಿದ್ದಾಳೆ. ಮಂಚದ ಮೇಲಿದ್ದ ದೊಣ್ಣೆಯಿಂದ ಕೈ, ಕಾಲು ಹಾಗೂ ಬೆನ್ನಿಗೆ ಹೊಡೆದಿದ್ದಾಳೆ. ಕಾಲಿನಿಂದ ಒದ್ದು ಎಳೆದಾಡಿದ್ದಾಳೆ. ಎಲ್ಲವನ್ನೂ ವಿಡಿಯೊ ಮಾಡಿಕೊ, ನಿಮ್ಮ ಮಾವಂದಿರಿಗೆ ಕಳಿಸು ಎಂದು ಗಂಡನಿಗೆ ತಾಕೀತು ಮಾಡಿದ್ದಾಳೆ ಎಂದು ಹೇಳಿದರು.

ಕಿರುಚಿಕೊಂಡ ಮೊಮ್ಮಗಳು: ತಾಯಿ ತನ್ನ ಅಜ್ಜಿಗೆ ಹೊಡೆಯುವಾಗ ಅಜ್ಜಿ ನೋವಿನಿಂದ ಕೂಗಿಕೊಳ್ಳುವುದನ್ನು ನೋಡಿದ ಮೊಮ್ಮಗಳು ಕಿರುಚಿಕೊಂಡಿದ್ದಾಳೆ. ಆಗ ರವೀಂದ್ರ ಮಗುವನ್ನು ಎತ್ತಿಕೊಳ್ಳುತ್ತಾನೆ. ಘಟನೆ ಮಧ್ಯೆ, ಹೆಂಡತಿಯನ್ನು ಒಂದು ಮಾತೂ ಪ್ರಶ್ನಿಸದ ರವೀಂದ್ರ, ಕಡೆ ಪಕ್ಷ ಹಲ್ಲೆ ಮಾಡುವಾಗಲೂ ತಡೆಯಲು ಯತ್ನಿಸದೆ ಪತ್ನಿ ಆಣತಿಯಂತೆ, ಇಡೀ ಘಟನೆಯನ್ನು ವಿಡಿಯೊ ಮಾಡಿದ್ದಾನೆ.

ಘಟನೆಯ ವಿಡಿಯೊವನ್ನು ರವೀಂದ್ರ ತನ್ನ ಸಂಬಂಧಿಕರೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದ. ಆ ಪೈಕಿ ಕೆಲವರು ತಮ್ಮ ಸ್ನೇಹಿತರಿಗೆ ಕಳಿಸಿದ್ದಾರೆ. ಕಡೆಗೆ ವಿಡಿಯೊ ಗ್ರೂಪ್‌ಗಳಲ್ಲಿ ಹರಿದಾಡಿದೆ. ವಿಡಿಯೊ ಗಮನಿಸಿದ ಕನಕಪುರ ತಾಲ್ಲೂಕಿನ ಜೀವನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಜೀವನ್ ಹೊಸದುರ್ಗ ಅವರು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೂ ದೂರು ಕೊಟ್ಟಿದ್ದಾರೆ.

ಅಧಿಕಾರಿಗಳ ದೌಡು: ವಿಡಿಯೊ ಹರಿದಾಡುತ್ತಿದ್ದಂತೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸರು ಅಬ್ಬರೂದೊಡ್ಡಿಯ ರವೀಂದ್ರ ಮನೆಗೆ ದೌಡಾಯಿಸಿದ್ದಾರೆ. ಘಟನೆ ಕುರಿತು ಅತ್ತೆ, ಸೊಸೆ ಹಾಗೂ ಮಗನನ್ನು ವಿಚಾರಣೆ ನಡೆಸಿದರು.

‘ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ವಿಡಿಯೊ ಕುರಿತು ಮಾಹಿತಿ ಬಂದ ತಕ್ಷಣ ಅಬ್ಬೂರುದೊಡ್ಡಿಗೆ ಹೋಗಿ ಶಾಂತಮ್ಮ ಮತ್ತು ಸೊಸೆ ಸಂಜನಾ ಅವರನ್ನು ವಿಚಾರಿಸಿದೆವು. ಹಿರಿಯರ ರಕ್ಷಣೆಗೆ ಕಾನೂನು ಇದ್ದು, ಉಲ್ಲಂಘಿಸಿದವರಿಗೆ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿರುವುದನ್ನು ಗಮನಕ್ಕೆ ತಂದೆವು. ಸದ್ಯ ನಾವು ಚನ್ನಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಏನಾದರೂ ಸಮಸ್ಯೆಯಾದರೆ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಸೊಸೆ ಮತ್ತು ಮಗನಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘4 ತಿಂಗಳ ಹಿಂದಿನ ವಿಡಿಯೊ’

ಹಲ್ಲೆಯ ವಿಡಿಯೊ ನಾಲ್ಕು ತಿಂಗಳ ಹಿಂದಿನದ್ದಾಗಿದೆ. ಮನೆಯಲ್ಲಿ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆಯುತ್ತಲೇ ಇತ್ತು. ಹಲ್ಲೆ ಘಟನೆ ಬಳಿಕ ಕುಟುಂಬದ ಹಿರಿಯರು ಪಂಚಾಯಿತಿ ನಡೆಸಿ ಇಬ್ಬರನ್ನು ರಾಜಿ ಮಾಡಿಸಿದ್ದರು. ಇದೀಗ ಹಲ್ಲೆ ವಿಡಿಯೊ ಹರಿದಾಡುತ್ತಿದ್ದನ್ನು ಆಧರಿಸಿ, ಜೀವನ್ ಹೊಸದುರ್ಗ ಎಂಬುವರು ದೂರು ನೀಡಿದ್ದಾರೆ. ಆ ಮೇರೆಗೆ, ಸೊಸೆ ಸಂಜನಾ ವಿರುದ್ಧ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ತೊಂದರೆ ಇಲ್ಲ’

‘ಹಿಂದೆ ಜಗಳವಾದಾಗ ನನ್ನ ತವರು ಮನೆಗೆ ಹೋಗಿದ್ದೆ. ಕೆಲ ದಿನಗಳ ಬಳಿಕ, ಮನೆಗೆ ವಾಪಸ್ ಬಂದಾಗ ಸೊಸೆ ಜಗಳವಾಡಿ ಹಲ್ಲೆ ಮಾಡಿದ್ದಳು. ಆಗ ನನ್ನ ತಮ್ಮಂದಿರು ಊರಿಗೆ ಬಂದು ಪಂಚಾಯಿತಿ ಮಾಡಿದ್ದರು. ಇಲ್ಲಿರುವ ಎರಡು ಮನೆಗಳ ಪೈಕಿ ಒಂದು ಮನೆಯಲ್ಲಿ ನನಗೆ, ಮತ್ತೊಂದು ಮನೆಯಲ್ಲಿ ಮಗ ಮತ್ತು ಸೊಸೆ ಇರುವಂತೆ ಹೇಳಿದ್ದರು. ಅದರಂತೆ, ನನ್ನ ಪಾಡಿಗೆ ನಾನಿದ್ದೇನೆ. ಸದ್ಯ ಯಾವುದೇ ಸಮಸ್ಯೆ ಇಲ್ಲ’ ಎಂದು ಹಲ್ಲೆಗೊಳಗಾದ ಶಾಂತಮ್ಮ ಅವರು, ತಮ್ಮ ಮನೆಗೆ ಭೇಟಿ ನೀಡಿದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳು, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹಾಗೂ ಪೊಲೀಸರಿಗೆ ತಿಳಿಸಿದರು.

‘1991ರಲ್ಲಿ ನನಗೆ ಮದುವೆಯಾಯಿತು. ಇಬ್ಬರು ಗಂಡು ಮಕ್ಕಳಿದ್ದು, 1997ರಲ್ಲಿ ಪತಿ ತೀರಿಕೊಂಡರು. ಮಕ್ಕಳ ಪೈಕಿ ಒಬ್ಬ ತೀರಿಕೊಂಡಿದ್ದು, ಉಳಿದಿರುವ ಮಗನ ಮೇಲೆ ನಾವೆಲ್ಲರೂ ಜೀವ ಇಟ್ಟುಕೊಂಡಿದ್ದೇನೆ. ಸದ್ಯ ನಮ್ಮ ನಡುವೆ ಯಾವುದೇ ಜಗಳವಿಲ್ಲ. ಮತ್ತೇನಾದರೂ ತೊಂದರೆಯಾದರೆ ನಿಮ್ಮ ಗಮನಕ್ಕೆ ತರುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT