ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ 2024 ಸಾಧಕರು: ಸವಾಲು ಸಾವಿರ.. ಆತ್ಮವಿಶ್ವಾಸ ಅಪಾರ!

ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವಂತೆ ಬದುಕಿ, ಸಾಧಿಸಿ ತೋರಿಸಿದ ಜೀವಚೇತನಗಳಿವು...
Published : 15 ಸೆಪ್ಟೆಂಬರ್ 2024, 0:31 IST
Last Updated : 15 ಸೆಪ್ಟೆಂಬರ್ 2024, 0:31 IST
ಫಾಲೋ ಮಾಡಿ
Comments
ಸಾಧಿಸಿ ತೋರಿಸಿದ ಜೀವಚೇತನಗಳಿವು
ಅಂಗವೈಕಲ್ಯ ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವಂತೆ ಬದುಕಿ, ಸಾಧಿಸಿ ತೋರಿಸಿದ ಜೀವಚೇತನಗಳಿವು. ಹುಟ್ಟಿನಿಂದ, ಅಪಘಾತ, ಅಪರೂಪದ ಕಾಯಿಲೆಗಳಿಂದ ಅಂಗಗಳನ್ನು ಕಳೆದುಕೊಂಡರೂ ಕೊರಗದೇ ಎದ್ದುನಿಂತು ಜಯಿಸಿದವರು. ನೋವು, ಸಂಕಷ್ಟ, ಕಷ್ಟನಷ್ಟಗಳಿಗೇ ಸವಾಲು ಹಾಕಿದವರು. ಇವರಿಗೆ ಕೊರತೆ ಕಾಡದಂತೆ ನೋಡಿಕೊಂಡವರು ಪೋಷಕರು. ಅವರ ಕಕ್ಕುಲಾತಿಯಿಂದಲೇ ಬೆಳೆದ ಇವರು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಮುಡಿಗೇರಿಸಿಕೊಂಡರು. ಇಂತಹ ಹತ್ತು ಸಾಧಕ–ಸಾಧಕಿಯರ ಸ್ಫೂರ್ತಿದಾಯಕ ಕಥನಗಳ ಗುಚ್ಛವನ್ನು ಪ್ರದೀಶ್ ಎಚ್. ಮರೋಡಿ ಕಟ್ಟಿಕೊಟ್ಟಿದ್ದಾರೆ
ನವದೀಪ್ ಸಿಂಗ್

ನವದೀಪ್ ಸಿಂಗ್

ನವದೀಪ್‌ ಎತ್ತರದ ಸಾಧನೆ...

ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚು ಹರಿಸಿದ ಅಥ್ಲೀಟ್‌ಗಳಲ್ಲಿ ಹೆಚ್ಚು ಗಮನ ಸೆಳೆದ ಹೆಸರು ನಾಲ್ಕೂವರೆ ಅಡಿ ಎತ್ತರದ ಜಾವೆಲಿನ್ ಥ್ರೋ ಪಟು ನವದೀಪ್ ಸಿಂಗ್. ಈ ಕುಬ್ಜನ ಚಿನ್ನದ ಪಯಣವೇ ರೋಚಕ.

ಹರಿಯಾಣದ ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದ ನವದೀಪ್ ಜೀವನದಲ್ಲಿ ಸಾಕಷ್ಟು ನೋವುಗಳನ್ನುಂಡವರು. ನವದೀಪ್ ಅವರಿಗೆ ಎರಡು ವರ್ಷ ತುಂಬಿದಾಗ ಕುಬ್ಜತೆ ಇರುವುದು ಪತ್ತೆಯಾಗಿತ್ತು. ರಾಷ್ಟ್ರಮಟ್ಟದ ಕುಸ್ತಿಪಟುವಾಗಿದ್ದ ತಂದೆ ದಲ್ಬೀರ್ ಸಿಂಗ್ ವಾಸ್ತವವನ್ನು ಅರಿತುಕೊಂಡು ಮಗನನ್ನು ಬೆಂಬಲಿಸಿದರು. ಅವರ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದರು.

ನವದೀಪ್ ಅವರ ಎತ್ತರ ಕೇವಲ ನಾಲ್ಕು ಅಡಿ ನಾಲ್ಕು ಇಂಚು. ಆದರೆ, ಕುಬ್ಜತೆಯನ್ನು ತಮ್ಮ ಸಾಧನೆಗೆ ಅಡ್ಡಿಯಾಗಲು ಬಿಡಲಿಲ್ಲ. 2017ರಲ್ಲಿ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲ ಹೆಜ್ಜೆಯಿಟ್ಟರು. ರಾಷ್ಟ್ರೀಯ ಸ್ಪರ್ಧೆ ಮತ್ತು 2021ರಲ್ಲಿ ವಿಶ್ವ ಪ್ಯಾರಾ ಗ್ರ್ಯಾನ್‌ಪ್ರಿಕ್ಸ್‌ ಕೂಟದಲ್ಲಿ ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಬರೆದರು. 

ಒಲಿದ ಅದೃಷ್ಟ

ಪ್ಯಾರಿಸ್‌ನಲ್ಲಿ ನಡೆದ ಫೈನಲ್‌ನಲ್ಲಿ 47.32 ಮೀಟರ್‌ ಸಾಧನೆಯೊಂದಿಗೆ ನವದೀಪ್‌ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು. ಆದರೆ, ಇವರಿಗಿಂತ ಕೊಂಚ ದೂರ ಎಸೆದಿದ್ದ ಇರಾನ್ ಅಥ್ಲೀಟ್ ವಿವಾದಾತ್ಮಕ ಬಾವುಟ ತೋರಿಸಿ ಅನರ್ಹಗೊಂಡರು. ಹೀಗಾಗಿ, ಬೆಳ್ಳಿಯ ಸಾಧನೆಗೆ ಚಿನ್ನದ ಮೆರುಗಿನ ಅದೃಷ್ಟ ಒಲಿಯಿತು.

ಆದಾಯ ತೆರಿಗೆ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿರುವ ಅವರು, ಸದ್ಯ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

***

ಶೀತಲ್‌

ಶೀತಲ್‌

ಬಿಲ್ಗಾರ್ತಿ ಶೀತಲ್‌ ಎಂಬ ಅಚ್ಚರಿ

ಎರಡೂ ತೋಳುಗಳಿಲ್ಲದ ಶೀತಲ್‌ ದೇವಿ ಆರ್ಚರಿಯ ಸಾಧನೆಯನ್ನು ಕಂಡು ವಿಶ್ವವೇ ಬೆರಗಾಗಿದೆ. ಕಾಲಿನಲ್ಲಿ ಬಿಲ್ಲನ್ನು ಹಿಡಿದುಕೊಂಡು ಬಾಯಿಯಿಂದ ಬಾಣವನ್ನು ಬಿಗಿಗೊಳಿಸಿ ಗುರಿಯಿಡುವ ಇವರ ಕೌಶಲ ಅಚ್ಚರಿ ಮೂಡಿಸಿದೆ.

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಕೃಷಿ ಕುಟುಂಬದ ಹಿನ್ನೆಲೆಯ ಮನ್‌ ಸಿಂಗ್‌ ಮತ್ತು ಶಕ್ತಿ ದೇವಿ ದಂಪತಿಯ ಮುದ್ದಿನ ಮಗಳು ಶೀತಲ್‌ಗೆ ಹುಟ್ಟುವಾಗಲೇ ಕೈಗಳು ಬೆಳೆದಿರಲಿಲ್ಲ. ಅಪರೂಪದ ಫೋಕೊಮೆಲಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದ ಆಕೆಗೆ ಕೈಗಳಿಲ್ಲ ಎಂಬ ಕೊರತೆ ಕಾಡದಂತೆ ಪೋಷಕರು ನೋಡಿಕೊಂಡಿದ್ದರು.

ತೋಳುಗಳಿಲ್ಲದಿದ್ದರೂ ಮನೆಯ ಸುತ್ತಮುತ್ತಲಿನ ಮರಗಳನ್ನು ಸರಸರನೆ ಏರುತ್ತಿದ್ದರು. ಅದೇ ಅಭ್ಯಾಸ ಇವರ ಶರೀರಕ್ಕೆ ಬಲ ತುಂಬಿತು. 2019ರಲ್ಲಿ ಕಿಶ್ತ್ವಾರ್‌ನಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಯುವ ಕ್ರೀಡಾಕೂಟದ ವೇಳೆ ಶೀತಲ್‌ ಅವರ ಕ್ರೀಡಾಸ್ಫೂರ್ತಿಯನ್ನು ಕಂಡು ಸೇನೆಯ ಅಧಿಕಾರಿಗಳು ಸಹಾಯಹಸ್ತ ಚಾಚಿದರು. ಬೆಂಗಳೂರಿನ ಮೇಜರ್‌ ಅಕ್ಷಯ್‌ ಮೆಮೋರಿಯಲ್‌ ಟ್ರಸ್ಟ್‌ನ ನೆರವೂ ದೊರಕಿತು. ಇದು ಅವರ ಆರ್ಚರಿ ಬದುಕಿಗೆ ಹೊಸ ದಿಕ್ಕನ್ನು ತೋರಿಸಿತು.

ಆರಂಭದಲ್ಲಿ 27.5 ಕೆಜಿ ಭಾರದ ಬಿಲ್ಲನ್ನು ಎತ್ತಲು ಸಾಧ್ಯವಾಗದ ಪರಿಸ್ಥಿತಿ ಅವರದ್ದಾಗಿತ್ತು. ಬಿಲ್ಲು ಹಿಡಿಯಲು ಬಳಸುವ ಬ್ಯಾಂಡ್‌ನಿಂದಾಗಿ ಭುಜದಲ್ಲಿ ಅದೆಷ್ಟೋ ಬಾರಿ ಗಾಯವಾಗಿತ್ತು. ಆದರೆ, ಹಂತಹಂತವಾಗಿ ಪರಿಣತಿ ಗಳಿಸಿದರು. ಪ್ಯಾರಿಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರೂ ಮಿಶ್ರ ತಂಡ ಸ್ಪರ್ಧೆಯಲ್ಲಿ ರಾಕೇಶ್‌ ಕುಮಾರ್‌ ಅವರೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇವರ ಬಾಣ ಪ್ರಯೋಗದ ಕೌಶಲ ನೋಡಲೆಂದೇ ಪ್ರೇಕ್ಷಕರು ಸೇರಿದ್ದರು. ಅಲ್ಲಿ ಪದಕ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಕೂಡ ಆಗಿದ್ದಾರೆ. ಎರಡೂ ತೋಳುಗಳಿಲ್ಲದ ವಿಶ್ವದ ಮೊದಲ ಬಿಲ್ಗಾರ್ತಿಯಾಗಿರುವ ಶೀತಲ್‌ಗೆ ಅರ್ಜುನ ಪ‍್ರಶಸ್ತಿ ಲಭಿಸಿದೆ.

***

Hokato Hotozhe Sema

Hokato Hotozhe Sema

ಛಿದ್ರಗೊಂಡಿದ್ದು ಕಾಲು, ಕನಸಲ್ಲ!

ಪುರುಷರ ಷಾಟ್‌ಪಟ್‌ನಲ್ಲಿ ಕಂಚು ಗೆದ್ದ ನಾಗಾಲ್ಯಾಂಡ್‌ನ ಹೊಕಾಟೊ ಹೊಟೊಝೆ ಸೆಮಾ ಅವರು ಭಾರತೀಯ ಸೇನೆಯ ಸೈನಿಕ. ಅವರು ಕೇವಲ 17 ವರ್ಷ ವಯಸ್ಸಿನಲ್ಲಿ ಸೇನೆಗೆ ಸೇರಿದ್ದರು. 2002ರಲ್ಲಿ ವಿಶೇಷ ಪಡೆಯ ಭಾಗವಾಗಿದ್ದ ಹೊಕಾಟೊ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಜಮ್ಮು ಕಾಶ್ಮೀರದ ಚೌಕಿಬಾಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಅವರ ಎಡಗಾಲಿನ ಮಂಡಿಯ ಕೆಳಗಿನ ಭಾಗ ಛಿದ್ರಗೊಂಡಿತು.

ಯುವ ಸೈನಿಕನ ಕನಸುಗಳು ಕಾಲಿನೊಂದಿಗೆ ನುಚ್ಚುನೂರಾದರೂ ಎದೆಗುಂದಲಿಲ್ಲ. ತಮ್ಮ ನೋವನ್ನು ಮೆಟ್ಟಿನಿಲ್ಲಲು  ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು. 32 ವರ್ಷ ವಯಸ್ಸಿನಲ್ಲಿ ಅವರ ಫಿಟ್ನೆಸ್‌ ನೋಡಿ ಸೇನೆಯ ಹಿರಿಯ ಅಧಿಕಾರಿಗಳು ಷಾಟ್‌ಪಟ್‌ ಕ್ರೀಡೆಯತ್ತ ಗುರಿ ಕೇಂದ್ರೀಕರಿಸಲು ಪ್ರೋತ್ಸಾಹಿಸಿದರು. ರಾಕೇಶ್ ರಾವತ್ ಅವರ ಗರಡಿಯಲ್ಲಿ ಅಭ್ಯಾಸ ಆರಂಭಿಸಿದರು.

2022ರಲ್ಲಿ ಮೊರಾಕೊ ಗ್ರ್ಯಾನ್‌ಪ್ರಿಯಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ಹೊಕಾಟೊ, ಪ್ಯಾರಿಸ್‌ನಲ್ಲಿ ವೈಯಕ್ತಿಕ ಅತ್ಯುತ್ತಮ 14.65 ಮೀಟರ್‌ ಸಾಧನೆಯೊಂದಿಗೆ ಭಾರತಕ್ಕೆ ಪ್ಯಾರಾಲಿಂಪಿಕ್ಸ್‌ ಪದಕವನ್ನು ಗೆದ್ದಿದ್ದಾರೆ.

ಹೊಕಾಟೊ ಹೊಟೊಝೆ ಸೆಮಾ

l ನಾಗಾಲ್ಯಾಂಡ್‌, 40 ವರ್ಷ

l ಸ್ಪರ್ಧೆ: ಪುರುಷರ ಷಾಟ್‌ಪಟ್ ಎಫ್57

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು, ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು, ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಬೆಳ್ಳಿ

***

Yogesh Kathuniya

Yogesh Kathuniya

ವಿರಳ ಕಾಯಿಲೆಗೆ ಅಂಜದ ಗಂಡು

ಹರಿಯಾಣ ಬಹದ್ದೂರ್‌ಗಢದ ಯೋಗೇಶ್‌ ಕಥುನಿಯಾ ವೈದ್ಯರಾಗಬೇಕೆಂದು ಕನಸು ಕಂಡವರು. ಯೋಧ ಜ್ಞಾನಚಂದ್‌ ಕಥುನಿಯಾ ಮತ್ತು ಗೃಹಿಣಿ ಮೀನಾದೇವಿ ದಂಪತಿ ಮಗನ ಭವಿಷ್ಯದ ಬಗ್ಗೆ ಸುಂದರ ಕನಸು ಕಂಡಿದ್ದರು. ಆದರೆ ಒಂಬತ್ತನೇ ವಯಸ್ಸಿನಲ್ಲಿ ಪಾರ್ಕ್‌ನಲ್ಲಿ ಬಿದ್ದ ಬಳಿಕ ಅವರಿಗೆ ಎದ್ದು ನಿಲ್ಲಲಾಗದ ಸ್ಥಿತಿ ಎದುರಾಯಿತು. ವೈದ್ಯರು ಪರೀಕ್ಷಿಸಿದಾಗ ಗ್ಯುಲಿಯನ್‌ ಬೇರ್‌ ಸಿಂಡ್ರೋಮ್‌ (ಜಿಬಿಎಸ್‌) ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು. ಇದರಿಂದ ಭಾಗಶಃ ಪಾರ್ಶ್ವವಾಯುವಿಗೆ ತುತ್ತಾದ ಅವರು ಗಾಲಿಕುರ್ಚಿಯನ್ನು ಅವಲಂಬಿಸುವಂತಾಯಿತು.

ಮೀನಾದೇವಿ ಅವರೇ ಫಿಸಿಯೋಥೆರಪಿ ತಂತ್ರಗಳನ್ನು ಕಲಿತು ಆರೈಕೆ ಮಾಡಿದರು. ಮೂರೇ ವರ್ಷದಲ್ಲಿ ಚೇತರಿಸಿಕೊಂಡ ಯೋಗೇಶ್‌ ಊರುಗೋಲಿನ ಸಹಾಯದಿಂದ ನಡೆಯಲು ಆರಂಭಿಸಿದರು. ಇದು ಅವರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವ ಜೊತೆಗೆ ಸಾಧನೆಯ ಹಸಿವನ್ನು ಹೆಚ್ಚಿಸಿತು. ಚಂಡೀಗಢದ ಆರ್ಮಿ ಶಾಲೆಯಲ್ಲಿ ಶಿಕ್ಷಣವನ್ನು ಮುಂದು ವರಿಸಿದ ಅವರು ಪ್ಯಾರಾ ಕ್ರೀಡೆಯತ್ತ ಗಮನ ಕೇಂದ್ರೀಕರಿಸಿದರು. 2016ರಲ್ಲಿ ಯೋಗೇಶ್‌ ಕ್ರೀಡಾ ಪಯಣ ಆರಂಭ. ಬರ್ಲಿನ್‌ನಲ್ಲಿ 2018ರಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 45.18 ಮೀಟರ್‌ ಡಿಸ್ಕಸ್‌ ಎಸೆತದೊಂದಿಗೆ ವಿಶ್ವ ದಾಖಲೆ ಬರೆದರು. ಕ್ರೀಡಾ ಸಾಧನೆಗೆ ಅರ್ಜುನ ಪ್ರಶಸ್ತಿ ದೊರಕಿದೆ.

ಯೋಗೇಶ್ ಕಥುನಿಯಾ

l ಹರಿಯಾಣ, 27 ವರ್ಷ

l ಸ್ಪರ್ಧೆ: ಪುರುಷರ ಡಿಸ್ಕಸ್ ಥ್ರೋ ಎಫ್‌56 

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಬೆಳ್ಳಿ ಪದಕ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಸೇರಿ ಮೂರು ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ

***

Kapil Parmar

Kapil Parmar

ಅಂಧನ ಬದುಕಲ್ಲಿ ಜೂಡೊ ಬೆಳಕು

ಪ್ಯಾರಾಲಿಂಪಿಕ್ಸ್‌ನ ಇತಿಹಾಸದಲ್ಲೇ ಜೂಡೊ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟ ಕಪಿಲ್‌ ಪರಮಾರ್‌ ಅವರು ಬದುಕುಳಿದಿದ್ದೇ ಪವಾಡ. ಮಧ್ಯಪ್ರದೇಶದ ಶಿವೋರ್ ಎಂಬ ಹಳ್ಳಿಯ ಟ್ಯಾಕ್ಸಿ ಚಾಲಕನ ಪುತ್ರನಾಗಿರುವ ಇವರು ಬಾಲ್ಯದಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರು. ಹೊಲದಲ್ಲಿ ಆಟವಾಡುತ್ತಿದ್ದಾಗ ನೀರಿನ ಪಂಪ್ ಅನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಭೋಪಾಲ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆರು ತಿಂಗಳು ಕೋಮಾದಲ್ಲಿದ್ದ ಕಪಿಲ್ ಕಣ್ಣುಗಳಿಗೆ ತೀವ್ರ ಹಾನಿಯಾಗಿತ್ತು. ಪ್ರಜ್ಞೆ ಬಂದಾಗ ಅವರು ಶೇಕಡ 90ರಷ್ಟು ದೃಷ್ಟಿ ಕಳೆದುಕೊಂಡಿದ್ದರು. ಇಲ್ಲಿಗೆ ಮಗನ ಬದುಕೇ ಮುಗಿಯಿತು ಎಂದು ಪೋಷಕರು ಕಣ್ಣೀರು ಹಾಕಿದ್ದರು. ವರ್ಷಗಳ ಬಳಿಕ ಚೇತರಿಸಿಕೊಂಡ ಅವರನ್ನು ಜೂಡೊ ಕ್ರೀಡೆ ಆಕರ್ಷಿಸಿತು. ಕಪಿಲ್‌ ಅವರ ಆಸಕ್ತಿಗೆ ಪೋಷಕರು ಮತ್ತು ಸಹೋದರರು ಜೀವ ತುಂಬಿದರು. 

ಕೋಚ್ ಭಗವಾನ್ ದಾಸ್ ಮತ್ತು ಮನೋಜ್‌ ಪ್ರೋತ್ಸಾಹದಿಂದ ಅಂಧರ ಜೂಡೊ ಪಯಣ ಶುರು ಮಾಡಿದರು. ಬಿಡುವಿನ ಸಮಯದಲ್ಲಿ ಜೀವನ ನಿರ್ವಹಣೆಗಾಗಿ ಅಣ್ಣನೊಂದಿಗೆ ಸೇರಿ ಚಹಾ ಮಾರಾಟ ಮಾಡುತ್ತಿದ್ದರು.

ಹಂತಹಂತವಾಗಿ ಸಾಧನೆಯ ಮೆಟ್ಟಿಲನ್ನು ಏರಿದ ಅವರು ಪ್ಯಾರಿಸ್‌ನಲ್ಲಿ ಜಾದೂ ಮಾಡಿದರು. ಪುರುಷರ 60 ಕೆ.ಜಿ ಜೆ–1 ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಕಪಿಲ್‌ ಅವರು ಬ್ರೆಜಿಲ್‌ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಕೇವಲ 33 ಸೆಕೆಂಡುಗಳಲ್ಲಿ ಹಿಮ್ಮೆಟ್ಟಿಸಿ ಗಮನ ಸೆಳೆದರು.

ಕಪಿಲ್‌ ಪರಮಾರ್

l ಮಧ್ಯಪ್ರದೇಶ, 24 ವರ್ಷ

l ಸ್ಪರ್ಧೆ: ಪುರುಷರ ಜೂಡೊ 60 ಕೆಜಿ ಜೆ–1 

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು, ವಿಶ್ವ ಗೇಮ್ಸ್‌ನಲ್ಲಿ ಕಂಚು, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ, ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ

***

ಸುಮಿತ್‌ ಅಂಟಿಲ್‌

ಸುಮಿತ್‌ ಅಂಟಿಲ್‌

ಅಪಘಾತ ಧೃತಿಗೆಡಿಸಲಿಲ್ಲ!

ಏಳು ವರ್ಷ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಸುಮಿತ್‌ ಅಂಟಿಲ್‌ ಬಾಲ್ಯದಿಂದಲೇ ಸವಾಲನ್ನು ಮೆಟ್ಟಿ ಬೆಳೆದವರು. ವಾಯುಪಡೆ ಅಧಿಕಾರಿಯಾಗಿದ್ದ ತಂದೆ ರಾಮ್‌ಕುಮಾರ್‌ ಅಂಟಿಲ್‌ ಅವರ ಹಾದಿಯಲ್ಲಿ ಸೇನೆ ಸೇರಲು ಹಂಬಲಿಸಿದ್ದ ಸುಮಿತ್‌ ಅವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು 2015ರಲ್ಲಿ ನಡೆದ ಅಪಘಾತ.

ಟ್ಯೂಷನ್‌ನಿಂದ ವಾಪಸಾಗುತ್ತಿದ್ದಾಗ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಾಗ ಎಡಗಾಲಿನ ಮಂಡಿಯ ಕೆಳಗಿನ ಭಾಗ ತುಂಡಾಗಿ ಹೋಯಿತು. ಹಾಗೆಯೇ ಅವರ ಕನಸುಗಳೂ ಕೂಡ. ಆದರೆ, ಅಮ್ಮನ ಆರೈಕೆ– ದೃಢವಾದ ಆತ್ಮವಿಶ್ವಾಸ ಸುಮಿತ್‌ ಅವರಿಗೆ ಪುನರ್ಜನ್ಮ ನೀಡಿತು. ಕೃತಕ ಕಾಲು ಕಟ್ಟಿಕೊಂಡು ನಡೆಯತೊಡಗಿದರು. ನಡೆಯುತ್ತಾ, ನಡೆಯುತ್ತಾ ಓಡಿದರು. ಹೀಗೆ, ಹೊಸ ಕನಸಿನೊಂದಿಗೆ ಓಡಲು ತೊಡಗಿದ್ದ ಸುಮಿತ್‌ ಕೈಗೆ ಬಂದಿದ್ದು ಜಾವೆಲಿನ್‌. 

ಸುಮಿತ್‌ ಅವರ ಛಲ ಮತ್ತು ಕೌಶಲವನ್ನು ಗುರುತಿಸಿದ್ದು ಮತ್ತೊಬ್ಬ ಪ್ಯಾರಾ ಅಥ್ಲೀಟ್‌ ರಾಜಕುಮಾರ್‌. ಅಪಘಾತವಾದ ಎರಡೇ ವರ್ಷಕ್ಕೆ, ಅಂದರೆ 2017ರಲ್ಲಿ ಸುಮಿತ್‌ ಭರ್ಜಿಯನ್ನು ಎಸೆದು ಸೈ ಎನಿಸಿಕೊಂಡರು. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಚಿನ್ನ ಗೆದ್ದಿದ್ದ ಸುಮಿತ್‌, ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 70.59 ಮೀಟರ್‌ ಪ್ಯಾರಾಲಿಂಪಿಕ್ಸ್‌ ದಾಖಲೆಯೊಂದಿಗೆ ಸತತ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್‌. ಕಳೆದ ವರ್ಷ ಪ್ಯಾರಾ ಏಷ್ಯನ್‌ ಕೂಟದಲ್ಲೂ 73.29 ಮೀಟರ್‌ ಜಾವೆಲಿನ್‌ ಎಸೆದು ವಿಶ್ವ ದಾಖಲೆ ನಿರ್ಮಿಸಿದ್ದ, ಈ ಛಲದ ಕುವರನಿಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ, ಪದ್ಮಶ್ರೀ ಪ್ರಶಸ್ತಿ ಸಂದಿವೆ.

ಸುಮಿತ್ ಆಂಟಿಲ್

l ಹರಿಯಾಣ, 26 ವರ್ಷ

l ಸ್ಪರ್ಧೆ: ಪುರುಷರ ಜಾವೆಲಿನ್ ಥ್ರೋ ಎಫ್‌ 64

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡು ಚಿನ್ನ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಸೇರಿ ಮೂರು ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಸ್ವರ್ಣ

***

ಪ್ರೀತಿ ಪಾಲ್‌

ಪ್ರೀತಿ ಪಾಲ್‌

ನರಗಳ ದೌರ್ಬಲ್ಯ ಮೆಟ್ಟಿನಿಂತ ಪ್ರೀತಿ

ಒಲಿಂಪಿಕ್ಸ್ ಅಥವಾ ಪ್ಯಾರಾಲಿಂಪಿಕ್ಸ್‌ನಲ್ಲಿ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಪದಕ ಜಯಿಸುವುದು ಭಾರತಕ್ಕೆ ಈತನಕ ಕನಸಿನ ಮಾತಾಗಿತ್ತು. ಆದರೆ, ಉತ್ತರ ಪ್ರದೇಶದ ಮೀರತ್‌ನ ರೈತ ಕುಟುಂಬದ ಪ್ರೀತಿ ಪಾಲ್‌ ಈ ಎರಡೂ ಸ್ಪರ್ಧೆಗಳಲ್ಲಿ ಕಂಚಿಗೆ ಕೊರಳೊಡ್ಡಿ ಇತಿಹಾಸ ಬರೆದಿದ್ದಾರೆ.

ಪ್ಯಾರಿಸ್‌ನಲ್ಲಿ ಅಮೋಘ ಸಾಧನೆ ಮೆರೆದಿರುವ ಪ್ರೀತಿಯ ಬದುಕಿನ ಬಂಡಿ ಸರಳವಾಗಿರಲಿಲ್ಲ. ಅವರ ತಂದೆ ಅನಿಲ್ ಕುಮಾರ್ ಪಾಲ್ ಹಾಲಿನ ಡೇರಿ ನಡೆಸುತ್ತಿದ್ದಾರೆ. ನಾಲ್ಕು ಮಕ್ಕಳಲ್ಲಿ ಪ್ರೀತಿ ಎರಡನೆಯವರು. ಹೈಪರ್ಟೊನಿಯಾ, ಅಟಾಕ್ಸಿಯಾ ಮತ್ತು ಅಥೆಟೊಸಿಸ್ ಕಾಯಿಲೆಗಳಿಂದಾಗಿ ಬಾಲ್ಯದಲ್ಲೇ ಪ್ರೀತಿ ಅವರ ಕಾಲುಗಳಲ್ಲಿ ನರಗಳು ದುರ್ಬಲವಾಗಿವೆ. ಆರಂಭದಲ್ಲಿ ಮೀರತ್‌ನಲ್ಲಿ ಚಿಕಿತ್ಸೆ ಕೊಡಿಸಿ, ನಂತರ ದೆಹಲಿಯ ಆಸ್ಪತ್ರೆಗೆ ಕರೆದೊಯ್ದರೂ ಅವರು ಗುಣಮುಖವಾಗಲಿಲ್ಲ. ಸೊಟ್ಟ ಭಂಗಿಯಿಂದಾಗಿ ಬದುಕಿನ ಬಗ್ಗೆ ‘ಪ್ರೀತಿ’ಯನ್ನೇ ಕಳೆದುಕೊಂಡಿದ್ದರು. 

ಆರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾ ಅಥ್ಲೀಟ್‌ಗಳ ಓಟ ಅವರ ಕಣ್ಣಿಗೆ ಬಿತ್ತು. ತಾನೂ ಯಾಕೆ ಟ್ರ್ಯಾಕ್‌ಗೆ ಇಳಿಯಬಾರದು ಎಂಬ ಪ್ರಶ್ನೆ ಅವರಲ್ಲೇ ಮೂಡಿತು. ಆ ಬಗ್ಗೆ ಮಾಹಿತಿ ಪಡೆದು, ಕೋಚ್ ಗಜೇಂದ್ರ ಸಿಂಗ್ ಅವರಿಂದ ತರಬೇತಿ ಪಡೆದರು. 2018ರಲ್ಲಿ ಮೊದಲ ಬಾರಿ ರಾಜ್ಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದ ಅವರು ನಂತರ ಹಿಂತಿರುಗಿ ನೋಡಿಲ್ಲ. ಪ್ಯಾರಾಲಿಂಪಿಕ್‌ನ ಒಂದೇ ಕೂಟದ ಟ್ರ್ಯಾಕ್‌ ವಿಭಾಗದಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಅವರಾಗಿದ್ದಾರೆ.

ಪ್ರೀತಿ ಪಾಲ್‌

l ಉತ್ತರ ಪ್ರದೇಶ, 23 ವರ್ಷ

l ಸ್ಪರ್ಧೆ: ಮಹಿಳೆಯರ 100, 200 ಮೀಟರ್ ಟಿ35

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಕಂಚು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚು

***

Avani Lekhara

Avani Lekhara

ಅವನಿ ಅಂದ್ರೆ ಗೆಲುವು!

ಅಪಘಾತವೆಂಬ ಆಘಾತ ಜೀವನದ ಗುರಿ ತಪ್ಪಿಸಲು ನೋಡಿದರೆ, ಗಾಲಿ ಕುರ್ಚಿಯಲ್ಲಿಯೇ ಕುಳಿತು ‘ಗುರಿ’ ಮುಟ್ಟಿದವರು ಶೂಟರ್‌ ಅವನಿ ಲೇಖರಾ. ಜೈಪುರದ ಅವನಿ ಚಿಕ್ಕಂದಿನಿಂದಲೇ ಕಲ್ಲು–ಮುಳ್ಳುಗಳ ಹಾದಿಯಲ್ಲಿ ಸಾಗಿದವರು. 2012ರಲ್ಲಿ ಸಂಭವಿಸಿದ ಕಾರು ಅಪಘಾತ ಇವರನ್ನು ಗಂಭೀರವಾಗಿ ಗಾಯಗೊಳಿಸಿದ್ದು ಮಾತ್ರವಲ್ಲದೆ, ಪಾರ್ಶ್ವವಾಯುವಿಗೂ ಈಡು ಮಾಡಿತು. ನಂತರ, ಅವನಿ ಅನಿವಾರ್ಯವಾಗಿ ಆಶ್ರಯಿಸಿದ್ದು ಗಾಲಿ ಕುರ್ಚಿಯನ್ನು. ಆ ಕುರ್ಚಿಯ ಗಾಲಿಗೆ ಕೀಲಾದವರು ತಂದೆ ಪ್ರವೀಣ್‌ ಲೇಖರಾ. ಅವರು ಮಗಳಿಗಿದ್ದ ಬಿಲ್ಲುಗಾರಿಕೆಯ ಆಸಕ್ತಿಯನ್ನು ಗುರುತಿಸಿ ತರಬೇತಿ ಕೊಡಿಸಿದರು. ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಅವರನ್ನು ಸ್ಫೂರ್ತಿಯಾಗಿಸಿಕೊಂಡಿದ್ದ ಅವನಿ, ಆರ್ಚರಿಯಿಂದ ಶೂಟಿಂಗ್‌ನತ್ತ ಮುಖ ಮಾಡಿದರು. 2015ರಲ್ಲಿ  ಕ್ರೀಡಾಲೋಕ ಪ್ರವೇಶಿಸಿದ ಅವರು ಹಿಂದಿರುಗಿ ನೋಡಲೇ ಇಲ್ಲ. ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾದರು. ಅಲ್ಲದೆ, ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಸ್ವರ್ಣ ಗೆದ್ದ ದೇಶದ ಮೊದಲ ಕ್ರೀಡಾಪಟು ಎಂದೆನಿಸಿದರು. ಅವರ ಸಾಧನೆಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ, ಪದ್ಮಶ್ರೀ ಪ್ರಶಸ್ತಿ ಲಭಿಸಿವೆ.

ಅವನಿ ಲೇಖರಾ

l ರಾಜಸ್ಥಾನ, 22 ವರ್ಷ

l ಸ್ಪರ್ಧೆ: ಮಹಿಳೆಯರ ಶೂಟಿಂಗ್ 10 ಮೀಟರ್ ಏರ್ ರೈಫಲ್ ಎಸ್ಎಚ್1

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡು ಚಿನ್ನ ಸೇರಿ ಮೂರು ಪದಕ, ಪ್ಯಾರಾ ವಿಶ್ವಕಪ್‌ನಲ್ಲೂ ಎರಡು ಸ್ವರ್ಣ ಸೇರಿ ಮೂರು ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ

***

ನಿತೇಶ್‌ ಕುಮಾರ್‌

ನಿತೇಶ್‌ ಕುಮಾರ್‌

ಸಾಧನೆಯ ಹಳಿಗೆ ಮರಳಿದ ಬದುಕು

ಹಿಮಾಚಲ ಪ್ರದೇಶದ ಮಂಡಿಯ ಐಐಟಿ ಪದವೀಧರ ನಿತೇಶ್‌ಕುಮಾರ್. ಕಾಲ್ಬಲವನ್ನೇ ನೆಚ್ಚಿಕೊಂಡಿರುವ ಫುಟ್‌ಬಾಲ್‌ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ನಿತೇಶ್‌ ಅವರ ಒಂದು ಕಾಲನ್ನು ನುಜ್ಜುಗುಜ್ಜು ಮಾಡಿದ್ದು 2009ರಲ್ಲಿ ನಡೆದ ದುರ್ಘಟನೆ. ವಿಶಾಖಪಟ್ಟಣದಲ್ಲಿ ನಡೆದ ರೈಲು ಅಪಘಾತ ನಿತೇಶ್‌ ಅವರ ಬದುಕಿನ ಹಳಿ ತಪ್ಪಿಸಿತು. ಆಗ ಅವರ ವಯಸ್ಸು 15 ವರ್ಷ.

ಎಡಗಾಲಿಗೆ ಗಂಭೀರ ಪೆಟ್ಟಾಗಿ ಸುಮಾರು ಆರು ತಿಂಗಳು ಹಾಸಿಗೆ ಹಿಡಿದಿದ್ದರು. ನಿಧಾನವಾಗಿ ಚೇತರಿಸಿಕೊಂಡ ಅವರು ಪುಣೆಯ ಕೃತಕ ಅಂಗಜೋಡಣಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಗಾಯಗೊಂಡ ಸೈನಿಕರು ಅಂಗಜೋಡಣೆಯ ನಂತರ ಸವಾಲುಗಳಿಗೆ ಸಜ್ಜಾಗುತ್ತಿದ್ದ ಪರಿಯನ್ನು ನೋಡಿ ತನ್ನಲ್ಲೂ ಮನೋಸ್ಥೈರ್ಯ ಬೆಳೆಸಿಕೊಂಡರು.

ಕಲಿಕೆಯಲ್ಲೂ ಪ್ರತಿಭಾನ್ವಿತರಾಗಿದ್ದ ಅವರು ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಈ ವೇಳೆ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿದ್ದ ಪ್ರಮೋದ್ ಭಗತ್ ಅವರೊಂದಿಗಿನ ಆಕಸ್ಮಿಕ ಭೇಟಿ ಅವರ ಬದುಕಿಗೆ ಹೊಸ ದಿಕ್ಕು ತೋರಿತು. ವರ್ಷ ಕಳೆದಂತೆ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಕೌಶಲ ವೃದ್ಧಿಸಿಕೊಂಡರು. 2016ರಲ್ಲಿ ಫರಿದಾಬಾದ್‌ನಲ್ಲಿ ನಡೆದ ಪ್ಯಾರಾ ರಾಷ್ಟ್ರೀಯ ಕೂಟದಲ್ಲಿ ಹರಿಯಾಣ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದರು. ಆನಂತರದ್ದು ಯಶೋಗಾಥೆ. ಪ್ಯಾರಿಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಇವರು, ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ (ಸಿಂಗಲ್ಸ್‌) ಸ್ಥಾನದಲ್ಲಿದ್ದಾರೆ.

ನಿತೇಶ್‌ ಕುಮಾರ್‌

l ರಾಜಸ್ಥಾನ, 29 ವರ್ಷ l ಸ್ಪರ್ಧೆ: ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್ ಎಸ್ಎಲ್ 3

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಸೇರಿ ಮೂರು ಪದಕ, ಏಷ್ಯನ್‌ ಗೇಮ್ಸ್‌ನಲ್ಲಿ ಒಂದು ಸ್ವರ್ಣ ಸೇರಿ ನಾಲ್ಕು ಪದಕ

***

ರಾಕೇಶ್‌ ಕುಮಾರ್‌

ರಾಕೇಶ್‌ ಕುಮಾರ್‌

ಆತ್ಮಹತ್ಯೆ ಯೋಚನೆಗೆ ‘ಆರ್ಚರಿ’ ಮದ್ದು!

ಕೆಲ ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಕಷ್ಟನಷ್ಟಗಳನ್ನು ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ರಾಕೇಶ್‌ ಕುಮಾರ್‌ ಈಗ ಕ್ರೀಡಾಭಿಮಾನಿಗಳ ಕಣ್ಮಣಿ. ಜಮ್ಮು ಮತ್ತು ಕಾಶ್ಮೀರದ ಕತ್ರಾ ನಿವಾಸಿಯಾಗಿರುವ ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 2009ರಲ್ಲಿ ಭೀಕರ ಅಪಘಾತದಿಂದಾಗಿ ರಾಕೇಶ್‌ ತಮ್ಮ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡರು. ಅಂದಿನಿಂದ ಗಾಲಿಕುರ್ಚಿಯ ಆಧಾರದಿಂದಲೇ ಜೀವನ ಸಾಗಿಸುತ್ತಿದ್ದಾರೆ.

ಸಾಮಾನ್ಯನಂತೆ ಎಲ್ಲೆಡೆ ಓಡಾಡುತ್ತಿದ್ದ ರಾಕೇಶ್‌ ಅಪಘಾತದ ಬಳಿಕ ಒತ್ತಡಕ್ಕೆ ಒಳಗಾದರು. ಆರು ತಿಂಗಳು ಹಾಸಿಗೆ ಹಿಡಿದಿದ್ದ ಅವರಿಗೆ ಚೇತರಿಸಿಕೊಳ್ಳಲು ಮೂರು ವರ್ಷಗಳು ಬೇಕಾದವು. ಈ ಮಧ್ಯೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.

ಅವರ ಬದುಕಿಗೆ ಹೊಸ ತಿರುವು ನೀಡಿದ್ದೇ ಆರ್ಚರಿ. ಸಾಧಿಸುವ ಛಲದೊಂದಿಗೆ 2017ರಲ್ಲಿ ಬಿಲ್ಗಾರಿಕೆಯತ್ತ ಆಸಕ್ತಿ ಬೆಳೆಸಿಕೊಂಡರು. ಶ್ರೀಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆರ್ಚರಿಯ ವಿದ್ಯೆ ಕಲಿಯಲು ಆರಂಭಿಸಿದರು. ಆರ್ಥಿಕ ಅಡಚಣೆ ಎದುರಾದಾಗ ಸ್ಥಳೀಯರು ಶಕ್ತಿ ತುಂಬಿದರು. ಅದರ ಪ್ರತಿಫಲವಾಗಿ ಭಾರತದ ಅಗ್ರ ಪ್ಯಾರಾ ಆರ್ಚರಿಪಟುಗಳಲ್ಲಿ ಇವರು ಒಬ್ಬರಾಗಿದ್ದಾರೆ. 2023ರ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ರಾಕೇಶ್ ಡಬಲ್‌ ಚಿನ್ನ ಗೆದ್ದಿದ್ದರು. ಏಷ್ಯನ್‌ ಕೂಟದಲ್ಲಿ ಮೂರು ಪದಕ ಜಯಿಸಿದ್ದ ಅವರು, ಪ್ಯಾರಿಸ್‌ನಲ್ಲಿ ಶೀತಲ್‌ ದೇವಿ ಅವರೊಂದಿಗೆ ಕಂಚಿಗೆ ಗುರಿಯಿಟ್ಟರು.

ರಾಕೇಶ್‌ ಕುಮಾರ್‌

l ಜಮ್ಮು ಕಾಶ್ಮೀರ, 39 ವರ್ಷ

l ಸ್ಪರ್ಧೆ: ಆರ್ಚರಿ ಕಾಂಪೌಂಡ್ ಮಿಶ್ರ ತಂಡ

l ಸಾಧನೆ: ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು, ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಏಷ್ಯನ್‌ ಗೇಮ್ಸ್‌ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ.

*******

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT