ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಭೀತರಾಗಿ ಆಡಿ; ಪೂರ್ವಗ್ರಹ ಪರಿಕಲ್ಪನೆಗಳ ಬಗ್ಗೆ ಯೋಚಿಸಬೇಡಿ:ಅಶೋಕ್ ಧ್ಯಾನಚಂದ್

Published 19 ಜುಲೈ 2024, 16:31 IST
Last Updated 19 ಜುಲೈ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ‘ನಿರ್ಭೀತಿಯಿಂದ ಆಡಿ. ಯಾವುದೇ ಪೂರ್ವಗ್ರಹ ಪರಿಕಲ್ಪನೆಗಳ ಬಗ್ಗೆ ಯೋಚಿಸಬೇಡಿ. ಸವಾಲು ಸ್ವೀಕರಿಸಿ ಆಡಿ’ ಎಂದು ಮಾಜಿ ಹಾಕಿ ಆಟಗಾರ ಅಶೋಕ್ ಧ್ಯಾನಚಂದ್ ಅವರು ಭಾರತ ಹಾಕಿ ತಂಡಕ್ಕೆ ಸಲಹೆ ನೀಡಿದ್ದಾರೆ. 

ಭಾರತ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. ಅದರೊಂದಿಗೆ ನಾಲ್ಕು ದಶಕಗಳ ಪದಕದ ಬರವನ್ನು ನೀಗಿಸಿತ್ತು. ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಗುಂಪು ಹಂತದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ, ಬೆಲ್ಜಿಯಂ, ಅರ್ಜೆಂಟೀನಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸವಾಲೊಡ್ಡಲಿವೆ.

ಭಾರತ ತಂಡದ ಒಲಿಂಪಿಕ್ ಕೂಟದ  ಸಿದ್ಧತೆಗಳ ಕುರಿತು ಶುಕ್ರವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಶೋಕಕುಮಾರ್ ಮಾತನಾಡಿದರು. 

‘ಭಾರತ ತಂಡವು ಇರುವ ಗುಂಪಿನಲ್ಲಿ ಕಠಿಣ ಸ್ಪರ್ಧೆ ಇದೆ. ಈ ಹಿಂದೆಯೂ ಇವೇ ತಂಡಗಳು ನಮಗೆ ಕಠಿಣ ಸವಾಲೊಡ್ಡಿದ್ದವು. ನಮ್ಮ ತಂಡವು ಸ್ಪಷ್ಟ ನಿಲುವು ಮತ್ತು ಮನೋಬಲದೊಂದಿಗೆ ಈ ಸವಾಲನ್ನು ಎದುರಿಸಲಿವೆ. ಈ ತಂಡಗಳನ್ನು ಸೋಲಿಸುವ ಸಾಮರ್ಥ್ಯ ಭಾರತಕ್ಕಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ತಂಡವು ಈಚೆಗೆ ಆಸ್ಟ್ರೇಲಿಯಾ ವಿರುದ್ಧದ  ಐದು ಟೆಸ್ಟ್ ಸರಣಿಯಲ್ಲಿ ಸೋತಿತ್ತು. ಪ್ರೊ ಲೀಗ್ ಹಾಕಿ ಟೂರ್ನಿಯ ಯುರೋಪಿಯನ್ ಲೆಗ್‌ನಲ್ಲಿ ಏಳನೇ ಸ್ಥಾನ ಪಡೆದಿತ್ತು. 

‘ಹಳೆಯದನ್ನೆಲ್ಲ ಮರೆತು ಹೊಸ ಉಲ್ಲಾಸದೊಂದಿಗೆ ನಿರ್ಭೀತರಾಗಿ ಆಡಬೇಕು. ಪರಿಸ್ಥಿತಿಗೆ ತಕ್ಕಂತೆ ಯೋಚಿಸಿ ನಿರ್ಧರಿಸುವ ಮನೋಭಾವ ಮುಖ್ಯ’ ಎಂದರು. 

1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದಲ್ಲಿ ಅಶೋಕಕುಮಾರ್ ಆಡಿದ್ದರು. 

‘ಈ ಸಲ 25ಕ್ಕಿಂತ ಹೆಚ್ಚು ಪದಕ’

‘ಈ ಸಲದ ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ತಂಡವು 25ಕ್ಕಿಂತಲೂ (ಅಬ್‌ ಕೀ ಬಾರ್ 25 ಕೆ ಪಾರ್) ಹೆಚ್ಚುಪದಕ ಜಯಿಸಲಿದೆ‘ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೆಂದ್ರ ಝಜಾರಿಯಾ ಹೇಳಿದ್ದಾರೆ.  ಸಂವಾದದಲ್ಲಿ ಭಾಗವಹಿಸಿದ್ದ ಅವರು ‘ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗಾಗಿ ನಮ್ಮ ತಂಡವು ಉತ್ತಮವಾಗಿ ಸಿದ್ಧತೆ ನಡೆಸುತ್ತಿದೆ. ಆದ್ದರಿಂದ ಈ ಬಾರಿ ಪದಕ ಸಾಧನೆಯು ಉತ್ತಮವಾಗಲಿದೆ’ ಎಂದರು.   ಹೋದ ಸಲ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವು 19 ಪದಕಗಳನ್ನು ಜಯಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT