ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್ ಟೆನಿಸ್: ರೋಹಿತ್‌, ಸಹನಾಗೆ ಸತತ 2ನೇ ಪ್ರಶಸ್ತಿ

Published 4 ಜುಲೈ 2024, 16:18 IST
Last Updated 4 ಜುಲೈ 2024, 16:18 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರು ಜೈನ್ ಕಾಲೇಜಿನ ರೋಹಿತ್ ಶಂಕರ್ ಮತ್ತು ವಿನ್ನರ್ಸ್ ಕ್ಲೌಡ್‌ ಟೇಬಲ್ ಟೆನಿಸ್ ಸೆಂಟರ್‌ನ (ಡಬ್ಯುಸಿಟಿಟಿಸಿ) ಸಹನಾ ಎಚ್‌.ಮೂರ್ತಿ ಇಲ್ಲಿ ಗುರುವಾರ ಆರಂಭಗೊಂಡ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 19 ವರ್ಷದೊಳಗಿನ ವಿಭಾಗದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ, ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ ಬಾಲಕರ ಫೈನಲ್‌ನಲ್ಲಿ ರೋಹಿತ್ ಶಂಕರ್ ಬೆಂಗಳೂರಿನ ಬಿಎನ್‌ಎಂ ಕ್ಲಬ್‌ನ ಅಭಿನವ್ ಕೆ. ಮೂರ್ತಿ ವಿರುದ್ಧ 11-8, 8-11, 9-11, 11-8, 11-8, 11-7ರಲ್ಲಿ ಮತ್ತು ಸಹನಾ ಬೆಂಗಳೂರಿನ ಸ್ಕೈಸ್‌ ಕ್ಲಬ್‌ನ ತೃಪ್ತಿ ಪುರೋಹಿತ್ ಎದುರು 11-9, 11-4, 11-1, 5-11, 11-13, 11-4ರಲ್ಲಿ ಜಯ ಸಾಧಿಸಿದರು.

ಜೂನ್ ಕೊನೆಯ ವಾರ ಬೆಂಗಳೂರಿನಲ್ಲಿ ನಡೆದಿದ್ದ ಈ ವರ್ಷದ ಮೊದಲ ರಾಜ್ಯ ರ‍್ಯಾಂಕಿಂಗ್ ಟೂರ್ನಿಯಲ್ಲೂ 19 ವರ್ಷದೊಳಗಿನವರ ವಿಭಾಗದಲ್ಲಿ ರೋಹಿತ್ ಮತ್ತು ಸಹನಾ ಚಾಂಪಿಯನ್ ಆಗಿದ್ದರು. ಎದುರಾಳಿಯ ಆಟವನ್ನು ಅಳೆಯುತ್ತ ತಂತ್ರಗಳನ್ನು ಹೆಣೆದ ರೋಹಿತ್ ಬ್ಯಾಕ್‌ಹ್ಯಾಂಡ್‌ನಲ್ಲಿ ಮಿಂಚಿನ ಹೊಡೆತಗಳ ಮೂಲಕ ಅಮೋಘ ಪ್ರದರ್ಶನ ನೀಡಿದರು. 

ಮೊದಲ ಎರಡು ಗೇಮ್‌ಗಳಲ್ಲಿ ಇಬ್ಬರೂ ಸಮಬಲದಿಂದ ಕಾದಾಡಿದರು. ಮೂರನೇ ಗೇಮ್‌ನಲ್ಲಿ ಅಭಿನವ್‌ ಪ್ರತಿರೋಧ ಹೆಚ್ಚಾಗಿತ್ತು. ನಾಲ್ಕನೇ ಗೇಮ್‌ ಒಂದು ಹಂತದಲ್ಲಿ 8–8ರಿಂದ ಸಮ ಆಗಿತ್ತು. ನಂತರ ಸತತ ಮೂರು ಪಾಯಿಂಟ್ ಕಲೆ ಹಾಕಿ ಜಯ ಸಾಧಿಸಿದ ರೋಹಿತ್ ಪಂದ್ಯವನ್ನು 2–2ರಲ್ಲಿ ಸಮ ಮಾಡಿದರು. ಮುಂದಿನ ಎರಡು ಗೇಮ್‌ಗಳಲ್ಲಿ ಎದುರಾಳಿಯಿಂದ ಉತ್ತಮ ಹೋರಾಟ ಕಂಡುಬಂದರೂ ರೋಹಿತ್ ಗೆದ್ದು ಸಂಭ್ರಮಿಸಿದರು.

ಮಿಂಚಿದ ಸಹನಾ: ವರ್ಷದ ಮೊದಲ ರ‍್ಯಾಂಕಿಂಗ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಎಡಗೈ ಆಟಗಾರ್ತಿ ತೃಪ್ತಿ ಪುರೋಹಿತ್ ಗುರುವಾರ ಎದುರಾಳಿಗಳನ್ನು ಸುಲಭವಾಗಿ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸಹನಾ ಹಣೆದ ತಂತ್ರಗಳಿಗೆ ಮಣಿದರು. ಟಾಪ್ ಸ್ಪಿನ್‌ ಮತ್ತು ಬಲಶಾಲಿ ಹೊಡೆತಗಳ ಮೂಲಕ ಮಿಂಚಿದ ಸಹನಾ ಮೊದಲ ಮತ್ತು 5ನೇ ಗೇಮ್‌ನಲ್ಲಿ ಮಾತ್ರ ಸ್ವಲ್ಪ ವಿಚಲಿತರಾದರು. ಮೊದಲ ಗೇಮ್‌ನ ಕೊನೆಯ ಹಂತದಲ್ಲಿ 9–9ರ ಸಮಬಲ ಸಾಧಿಸಿದ ತೃಪ್ತಿ ನಂತರ ಸೋತರು. ಐದನೇ ಗೇಮ್‌ 10–10 ಮತ್ತು 11–11ರಲ್ಲಿ ಸಮ ಆದಾಗ ಪ್ರೇಕ್ಷಕರು ರೋಮಾಂಚನಗೊಂಡರು. ಎಚ್ಚರಿಕೆಯ ಆಟವಾಡಿದ ತೃಪ್ತಿ 13–11ರಲ್ಲಿ ಗೆದ್ದು ಭರವಸೆ ಮೂಡಿಸಿದರು. ಆದರೆ ಮುಂದಿನ ಗೇಮ್‌ನ ಆರಂಭದಲ್ಲೇ ಸತತ ಪಾಯಿಂಟ್ ಗಳಿಸಿದ ಸಹನಾ ಎದುರಾಳಿಗೆ ಕೇವಲ 4 ಪಾಯಿಂಟ್ ಬಿಟ್ಟುಕೊಟ್ಟರು.

19 ವರ್ಷದೊಳಗಿನವರ ವಿಭಾಗದ ಫಲಿತಾಂಶಗಳು: ಬಾಲಕರ ಫೈನಲ್‌: ರೋಹಿತ್ ಶಂಕರ್‌ಗೆ ಅಭಿನವ್‌ ಮೂರ್ತಿ ವಿರುದ್ಧ 11-8, 8-11, 9-11, 11-8, 11-8, 11-7ರಲ್ಲಿ ಜಯ; ಸೆಮಿಫೈನಲ್‌ನಲ್ಲಿ ರೋಹಿತ್‌ಗೆ ವಿಭಾಸ್‌ ವಿ.ಜಿ ವಿರುದ್ಧ 9-11, 11-7, 11-9, 11-4ರಲ್ಲಿ, ಅಭಿನವ್‌ಗೆ ವರುಣ್ ಕಶ್ಯಪ್ ವಿರುದ್ಧ 11-3, 11-9, 11-4ರಲ್ಲಿ ಜಯ; ಕ್ವಾರ್ಟರ್ ಫೈನಲ್‌ನಲ್ಲಿ ರೋಹಿತ್‌ಗೆ ಶಶಾಂಕ್ ಕೇಶವ್‌ ರಾವ್ ವಿರುದ್ಧ 11-4, 8-11, 11-6, 13-11ರಲ್ಲಿ, ವಿಭಾಸ್‌ಗೆ ಅಮನ್ ಜಾರ್ಜ್ ಥಾಮಸ್ ವಿರುದ್ಧ 11-7, 11-4, 11-7ರಲ್ಲಿ, ಅಭಿನವ್‌ಗೆ ಹೃಷಿಕೇಶ್‌ ಶೆಟ್ಲೂರು ವಿರುದ್ಧ 11-4, 11-6, 11-7ರಲ್ಲಿ, ವರುಣ್‌ಗೆ ತೇಶುಭ್ ದಿನೇಶ್ ವಿರುದ್ಧ 7-11, 11-4, 11-7, 3-11, 11-6ರಲ್ಲಿ ಗೆಲುವು. ಬಾಲಕಿಯರ ಫೈನಲ್‌: ಸಹನಾಮೂರ್ತಿಗೆ ತೃಪ್ತಿ ಪುರೋಹಿತ್ ವಿರುದ್ಧ 11-9, 11-4, 11-1, 5-11, 11-13, 11-4ರಲ್ಲಿ ಜಯ. ಸೆಮಿಫೈನಲ್‌: ಸಹನಾಗೆ ದೇಶ್ನಾ ವಂಶಿಕಾ ವಿರುದ್ಧ 11-8, 11-5, 11-9ರಲ್ಲಿ, ತೃಪ್ತಿಗೆ ನೀತಿ ಅಗರ್ವಾಲ್ ವಿರುದ್ಧ 11-7, 9-11, 11-4, 11-7ರಲ್ಲಿ ಗೆಲುವು. ಕ್ವಾರ್ಟರ್ ಫೈನಲ್‌ನಲ್ಲಿ ಸಹನಾಗೆ ಹಿಯಾ ಸಿಂಗ್‌ ಎದುರು 11-7, 11-6, 11-6ರಲ್ಲಿ, ತೃಪ್ತಿಗೆ ಪರ್ಣವಿ ವಿರುದ್ಧ 11-7, 11-3, 11-6ರಲ್ಲಿ, ನೀತಿ ಅಗರವಾಲ್‌ಗೆ ಹಿಮಾಂಶಿ ಚೌಧರಿ ಎದುರು 11-8, 11-6, 5-11, 5-11, 11-6ರಲ್ಲಿ ಹಾಗೂ ದೇಶ್ನಾ ವಂಶಿಕಗೆ ಪ್ರೇಕ್ಷಾ ತಿಲಾವತ್ ವಿರುದ್ಧ 7-11, 11-7, 10-12, 11-2, 11-6ರಲ್ಲಿ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT