ಧಾರವಾಡ: ಅಲ್ಲಿ ಬಣ್ಣದ ಮಾತುಗಳಿರಲಿಲ್ಲ. ನೇರ, ನೈಜ ಮಾತುಗಳೇ ಎಲ್ಲಾ. ಸಾಹಿತ್ಯ ‘ಸಂಭ್ರಮ’ ಎಂದಷ್ಟೇ ಕೊಂಡವರನ್ನು ರೂಪಕಗಳಲ್ಲೇ ಚುಚ್ಚಿದರು. ಸಾಹಿತ್ಯವನ್ನು ಅಪವ್ಯಾಖ್ಯಾನ ಮಾಡುತ್ತಾ ಬಂದವರನ್ನೂ ತಮ್ಮ ಮೃದು ಹೃದಯದ ಬಂಡಾಯದ ಮಾತುಗಳಿಂದ ತಾಕಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮ–2019 ವನ್ನು ಉದ್ಘಾಟಿಸಿದ ಚಿಂತಕ ಬರಗೂರು ರಾಮಚಂದ್ರಪ್ಪ ಸಾಹಿತ್ಯದ ನಿಲುವು, ಒಲವು, ಸಿದ್ಧಾಂತಗಳ ಬಗ್ಗೆ ತಮ್ಮದೇ ಆದ ಸ್ಪಷ್ಟ, ನಿಖರ ಅಭಿಪ್ರಾಯಗಳನ್ನು ದಾಖಲಿಸಿದರು.

ಅವರ ಮಾತಿನ ಚಾಟಿಗೆ ಮೊದಲು ಗುರಿಯಾಗಿದ್ದೇಸಾಹಿತ್ಯ ಸಂಭ್ರಮ ಸಂಘಟಕರ ಆಶಯ. ಪ್ರಾಸ್ತಾವಿಕ ಭಾಷಣ ಮಾಡಿದ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ತಮ್ಮ ಎಡ–ಬಲ ಅಲ್ಲದ ಮಧ್ಯಮ ಪಂಥ ಎಂದಿದ್ದನ್ನೇ ಇದು ಬೇಲಿ ಮೇಲೆ ಕುಳಿತ ಮಾರ್ಗ ತರಹ ಎಂದು ಟೀಕಿಸಿದರು.

ಸಾಹಿತ್ಯ ಸಂಭ್ರಮ ಎಂಬ ಹೆಸರೇ ಆನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ನಮ್ಮ ಬದುಕು ಏಕರೇಖಾತ್ಮಕವಲ್ಲ; ಏಕಮುಖೀಚಲನೆಯನ್ನೂ ಹೊಂದಿಲ್ಲ. ಸಂಭ್ರಮದ ಬೆನ್ನ ಹಿಂದೆಯೇ ಸಂಕಟ ಹಿಂಬಾಲಿಸುತ್ತದೆ. ಮಾತಿನ ಹಿಂದೆ ಮೌನ ಬೆನ್ನುತ್ತುತ್ತದೆ. ಸಂತೋಷ–ವಿಷಾದ, ಮಾತು–ಮೌನಗಳನ್ನು ಒಟ್ಟಿಗೇ ಒಳಗೊಳ್ಳದ ಗ್ರಹಿಕೆಯ ಕ್ರಮವು ಒಂದು ರೀತಿಯ ಅಕ್ರಮ ಸಂತಾನವಾಗುತ್ತದೆ ಎಂದು ವ್ಯಾಖ್ಯಾನಿಸಿದರು.

ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರದವರಿಗೆ ಇದು ಸುಲಭವಾಗಿ ಸಂಭ್ರಮಿಸುವ ಸಂದರ್ಭವಲ್ಲ. ನಾವು ಬದುಕುತ್ತಿರುವ, ಬರೆಯುತ್ತಿರುವ ಸಂದರ್ಭದಲ್ಲಿ ಸಂಭವಿಸುತ್ತಿರುವ ಅಮಾನವೀಯ ಘಟನೆಗಳಿಂದ ನಾವು ಸಂಭ್ರಮಕ್ಕಿಂತ ಸಂಕಟ ಪಡಬೇಕಾದ್ದೇ ಹೆಚ್ಚು. ಸಾಹಿತ್ಯಕ–ಸಾಂಸ್ಕೃತಿಕ ಸಂಭ್ರಮ ಸಾಧ್ಯವಾಗಬೇಕಾದರೆ ನಮ್ಮಿಂದ ಬರೆಸಿಕೊಳ್ಳುವ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ, ಮಾನವತೆ ಮುನ್ನೆಲೆಗೆ ಬಂದಿರಬೇಕು. ತನ್ಮೂಲಕ ಸಂಭ್ರಮ ಅರಳಬೇಕು. ಸಂಕಟ ಮೀರುವ ಸಂಭ್ರಮ ಇಲ್ಲದಿದ್ದರೆ ನಾವು ಮನುಷ್ಯರಾಗುವುದಿಲ್ಲ ಎಂದು ವಿಶ್ಲೇಷಿಸಿದರು.

ಸಾಹಿತ್ಯ ಲೆಕ್ಕದ ಪುಸ್ತಕವಲ್ಲ; ಸಂಸ್ಕೃತಿ ಶ್ರೇಷ್ಠತೆಯ ಸೊಕ್ಕಲ್ಲ. ಇಲ್ಲಿ ಮೇಲು–ಕೀಳುಗಳ ಮಾರಣ ಹೋಮಕ್ಕೆ ಅವಕಾಶವಿಲ್ಲ. ಆದ್ದರಿಂದ ಸಾಹಿತ್ಯ, ಸಂಸ್ಕೃತಿಗಳು ಸಮಾನತೆ–ಸೌಹಾರ್ದತೆಗಳ ಜೀವಶಕ್ತಿಯನ್ನು ಒಳಗೊಳ್ಳಬೇಕು. ಈ ಜೀವಶಕ್ತಿಯ ಸಾಹಿತ್ಯ–ಸಂಸ್ಕೃತಿಗಳ ವಿನ್ಯಾಸಗಳಲ್ಲಿ ಸಂಭವಿಸಬೇಕಾದರೆ ಸಾಹಿತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಪ್ರಜ್ಞೆ ಬೇಕು. ಸಾಮಾಜಿಕ ಪ್ರಜ್ಞೆಯೆಂದರೆ ಜಾತಿವಾದಪರ ಪ್ರಜ್ಞೆಯಲ್ಲ; ರಾಜಕೀಯ ಪ್ರಜ್ಞೆಯೆಂದರೆ ರಾಜಕೀಯ ಪಕ್ಷ ಪರ ಪ್ರಜ್ಞೆಯಲ್ಲ. ವಿವಿಧ ಸಾಮಾಜಿಕ–ರಾಜಕೀಯ ಸೈದ್ಧಾಂತಿಕತೆಗಳನ್ನು ಮನುಷ್ಯಪರ ಸಂವೇದನೆಯಾಗಿ ರೂಪಾಂತರಿಸಿಕೊಳ್ಳುವ ಪ್ರಕ್ರಿಯಾತ್ಮಕ ಪ್ರಜ್ಞೆ ನಮಗೆ ಬೇಕು ಎಂದು ಬರಗೂರು ಪ್ರತಿಪಾದಿಸಿದರು.

ಸಾಹಿತ್ಯ ಮತ್ತು ಸಾಹಿತಿಗಳಲ್ಲಿ ಸಾಮಾಜಿಕ ರಾಜಕೀಯ ಪ್ರಜ್ಞೆ ಹೇಗಿರುತ್ತದೆ ಎನ್ನುವುದಕ್ಕೆ ಉದಾಹರಣೆ ನೀಡಿದ ಬರಗೂರು, ಮೋದಿ ಪ್ರಧಾನಿಯಾದರೆ ಬದುಕಲೇ ಬಾರದು ಅನ್ನಿಸುತ್ತದೆ ಎಂದು ಹಿಂದೆ ಅನಂತಮೂರ್ತಿ ಅವರು ಭಾವಾವೇಶದಲ್ಲಿ ಹೇಳಿದರು. ಮುಂದೆ ಅದು ಬೇರೆ, ಬೇರೆ ರೂಪ ಪಡೆಯಿತು ಎನ್ನುವುದು ಬೇರೆ ವಿಚಾರ. ಭೈರಪ್ಪ ಅವರು ಈಚೆಗೆ ಮೋದಿ ಅವರೇ ಮುಂದಿನ ಮೂರು ಅವಧಿಗೆ ಪ್ರಧಾನಿಯಾಗಬೇಕು ಎಂದು ಹೇಳಿದರು. ಪರಸ್ಪರ ವಿರುದ್ಧವಾದ ನಿಲುವು ರಾಜಕೀಯ ಪ್ರಜ್ಞೆ ಇಲ್ಲದೆ ಪ್ರಕಟವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕಾಗೆ ನಮ್ಮ ಕಾಲದ ಗುರು
ಕೋಮು ಸೌಹಾರ್ದ ಕದಡುತ್ತಿರುವ ಈ ಕಾಲದಲ್ಲಿ ಕಾಗೆಯ ಕಾರುಣ್ಯ, ಕೋಗಿಲೆಯ ಕಂಠದೊಳಗೆ ಒಂದಾಗಬೇಕು. ಕಾಗೆ–ಕೋಗಿಲೆಗಳ ನೈಸರ್ಗಿಕ ಸಹಜ ಸೌಹಾರ್ದವು ಸಮಾಜದ ಜೀವಶಕ್ತಿಯಾದಾಗ ನಮ್ಮದು ಹೆಮ್ಮ ಪಡುವ ನಿಜದ ನಾಡಾಗುತ್ತದೆ. ಆದರೆ, ಕೋಗಿಲೆಯ ಕಂಠಸಿರಿಯನ್ನು ಹಾಡಿ, ಹೊಗಳುತ್ತ ಕಾಗೆಯ ಕಂಠವನ್ನು ಕರ್ಕಶವೆನ್ನುವ ವಿಪರ್ಯಾಸ ನಮ್ಮೆದುರಿಗಿದೆ. ಹೀಗಾಗಿ, ಸಾಕ್ಷರ ಕವಿಗಳೂ, ಧಾರ್ಮಿಕ ಕಲಿಗಳೂ, ರಾಜಕೀಯ ಹುಲಿಗಳು ಕಾಗೆಯಿಂದ ಸೌಹಾರ್ದದ ಪಾಠ ಕಲಿಯಬೇಕಾದ ಕಾಲ ಬಂದಿದೆ. ಕಾಗೆ ನಮ್ಮ ಕಾಲದ ಗುರು ಎಂದು ಬರಗೂರು ರೂಪಕಾತ್ಮಕವಾಗಿ ವಿಶ್ಲೇಷಿಸಿದರು.

ಕನ್ನಡದಲ್ಲಿವೆ ವಿಮರ್ಶಾವರ್ಣಾಶ್ರಮ ಹಾಗೂ ವಿಮರ್ಶಾವಿಪರ್ಯಾಸ!
‘ನಾವು ಬರಗೂರ್‌ಗೆ ಅನ್ಯಾಯ ಮಾಡಿದೆವು ಅನ್ಸುತ್ತೆ ಎಂದು ಅನಂತಮೂರ್ತಿ ಅವರು ಹೇಳಲು 80 ವರ್ಷ ಬೇಕಾಗಿತ್ತು. ಅದನ್ನು ಕೇಳುವ ಅಷ್ಟೊತ್ತಿಗೆ ನನಗೆ 65 ವರ್ಷ ಆಗಿ ದಾಟಿತ್ತು. ಹಾಗೆಯೇ, ಈ ಸಾಹಿತ್ಯ ಸಂಭ್ರಮಕ್ಕೆ ನಾನು ಬರಲು ಏಳು ವರ್ಷಗಳು ಬೇಕಾಯಿತು’ ಎಂದು ತಮ್ಮದೇ ಉದಾಹರಣೆಯೊಂದಿಗೆ ಕನ್ನಡದಲ್ಲಿ ವಿಮರ್ಶಾವರ್ಣಾಶ್ರಮ ಪದ್ಧತಿ ಇದೆ ಎಂದು ಬರಗೂರು ಪ್ರತಿಪಾದಿಸಿದರು.

ಸಾಮಾಜಿಕ ವರ್ಣಾಶ್ರಮದಲ್ಲಿ ಕೆಲವರನ್ನು ಹೊರಗಿಟ್ಟಂತೆಯೇಪ್ರಗತಿಪರ ವಿಚಾರಧಾರೆಯ ಸಾಹಿತ್ಯ ಮತ್ತು ಸರಳ ನಿರೂಪಣಾ ವಿಧಾನದ ಜನಪ್ರಿಯ ಸಾಹಿತ್ಯವನ್ನು ಹೊರಗಿಡುವ ಶ್ರೇಷ್ಠತೆಯ ಸೊಕ್ಕಿನ ವಿಮರ್ಶಾ ಪ್ರವೃತ್ತಿಯೇ ’ವಿಮರ್ಶಾವರ್ಣಾಶ್ರಮ’ ಎಂದು ಜರಿದರು.

ನಿರಂಜನರ ‘ಚಿರಸ್ಮರಣೆ, ಬಸವರಾಜ ಕಟ್ಟೀಮನಿ ಅವರ ‘ಜ್ವಾಲಮುಖಿಯ ಮೇಲೆ’ ಕಾದಂಬರಿಗಳ ಗುಣಗಳನ್ನು ಗುರುತಿಸಲು ವಿಮರ್ಶಕರಿಗೆ ದಶಕಗಳ ಕಾಲ ಬೇಕಾಯಿತು. ಅ.ನ.ಕೃ ಅವರಂತಹ ಲೇಖಕರ ಬಗ್ಗೆಯೂ ಅವರ ಬದುಕಿದ್ದಾಗ ಸರಿಯಾದ ವಿಮರ್ಶೆ ಬಂದಿಲ್ಲ. ಪ್ರಗತಿಪರ ವಿಚಾರಧಾರೆಯ ಸಾಹಿತಿ ಮತ್ತು ಸಾಹಿತ್ಯವನ್ನು ‘ಶಿಲ್ಪ’ದ ಮಾನದಂಡ ಮುಖ್ಯ ಮಾಡಿಕೊಂಡು ಹೊರಗಿಟ್ಟ ’ವಿಮರ್ಶಾವರ್ಣಾಶ್ರಮ’ ಬಹಳಷ್ಟು ಸಾಹಿತಿಗಳಿಗೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ವಿಮರ್ಶಾವಿಪರ್ಯಾಸ ಕವಿಗಳಾದ ಕುವೆಂಪು, ಬೇಂದ್ರೆ ಅವರನ್ನೂ ತಟ್ಟದೆ ಬಿಟ್ಟಿಲ್ಲ. ಕುವೆಂಪು ಮಹಾಕವಿ ಅಲ್ಲ, ಅದು ಬೇಂದ್ರೆ ಎಂದು ಕೆಲ ವಿಮರ್ಶೆಗಳು ಬಂದಿದ್ದು ಉಂಟು. ಬೇಂದ್ರೆ ಸಹಜ ಮಹಾಕವಿ. ಆದರೆ, ಯುಗದ ಕವಿ, ಜಗದ ಕವಿ ಎಂದು ಕುವೆಂಪು ಅವರನ್ನು ಕರೆದು ಕವಿತೆ ಬರೆದಿದ್ದ ಬೇಂದ್ರೆ ಅವರನ್ನು ಕುವೆಂಪು ಅವರಿಗೆ ಎದುರಾಗಿಸಿ ಮಹಾಕವಿ ಮಾಡುವ ಮನೋವೃತ್ತಿಯೇ ಕುಬ್ಬವಾದದ್ದು ಎಂದು ಟೀಕಿಸಿದರು.

ವಿಮರ್ಶಾವಿಪರ್ಯಾಸಕ್ಕೆ ಒಳಗಾದ ಕುವೆಂಪು ಇನ್ನೊಂದು ಕೃತಿ ‘ಶೂದ್ರ ತಪಸ್ವಿ’. ಕೆಲವರು ಬ್ರಾಹ್ಮಣ ವಿರೋಧಿ ಪಟ್ಟಿ ಕಟ್ಟಿದರು. ಇನ್ನೂ ಕೆಲವರು ಇದನ್ನು ಸಮರ್ಥಿಸಿದರು. ಈ ವಾಗ್ವಾದವನ್ನು ಗಮನಿಸುತ್ತಾ ಬಂದ ಕುವೆಂಪು ‘ಶೂದ್ರ ತಪಸ್ವಿ’ಯ ಮೂರನೇ ಮುದ್ರಣದಲ್ಲಿ ತಮ್ಮ ಕೃತಿಯನ್ನೂ ಯಾರೂ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಎಂದು ಬರೆಯುತ್ತಾರೆ. ‘ನನ್ನ ಕೃತಿ ಬ್ರಾಹ್ಮಣ ವಿರೋಧವಾಗಿರಲಿಲ್ಲ. ತಪಸ್ಸು ಎಲ್ಲ ಮಾನವರ ಹಕ್ಕು ಎಂಬ ಸಾಮಾಜಿಕ ಸಿದ್ಧಾಂತವನ್ನು ಸಾಹಿತ್ಯೀಕರಿಸಿದ್ದೆ’ ಎಂದು ಬರೆದಿದ್ದನ್ನು ಬರಗೂರು ಉದಾಹರಣೆ ನೀಡಿದರು.

ಮಾರೆಯಾದ ಮಾದರಿ ವಾಗ್ವಾದಗಳು
ಗಾಂಧಿ ಸಂತನ ಪ್ರಜ್ಞೆ ಹಾಗೂ ಅಂಬೇಡ್ಕರ್ ಅವರ ಸ್ಫೋಟಕ ಗುಣ ಇದ್ದರೂ ಅವರಿಬ್ಬರೂ ಎಂದಿಗೂ ಭಾಷೆಯ ಭ್ರಷ್ಟಗೊಳಿಸಲಿಲ್ಲ. ಹಿಂಸೆಗೆ ಒಳಪಡಿಸಲಿಲ್ಲ. ಈ ಇಬ್ಬರ ವಾಗ್ವಾದಗಳು ಇಂದಿಗೂ ಆದರ್ಶವಾಗಬೇಕು. ಆದರೆ, ಇಂದು ದ್ರುವೀಕೃತ ದೌರ್ಜನ್ಯಗಳಾಗುತ್ತಿವೆ. ಹಲ್ಲೆ, ಹತ್ಯೆಗಳಿಗೂ ಹೇಸದ ಹಿಂಸೆಯಾಗುತ್ತಿವೆ. ದೃಷ್ಟಿದೋಷವೇ ಧೀಮಂತಿಕೆಯಾಗುತ್ತಿದೆ. ದೃಷ್ಟಿದೋಷದ ದ್ರುವೀಕರಣಗಳು ದೇಶದ ದಾರಿಯುದ್ದಕ್ಕೂ ದ್ವೇಷದ ನೆತ್ತರ ಬೀಜ ಬಿತ್ತುತ್ತಿವೆ ಎಂದು ವಿಷಾದಿಸಿದರು.

ಕನ್ನಡದಲ್ಲಿ ಭಾರತೀಯತೆಯ ದೃಷ್ಟಿಕೋನ ಕಾಣುತ್ತಿಲ್ಲವೆಂಬ ವರದಿಗಳು ಈಗ ಕೇಳಿಬರುತ್ತಿವೆ. ಆದರೆ, ಹೀಗೆ ಹೇಳುವವರ ದೃಷ್ಟಿಯಲ್ಲಿ ಭಾರತೀಯತೆಯ ಅಭಿವ್ಯಕ್ತಿ ಎಂದರೆ ಸನಾತನತೆ ಮಾತ್ರವೆಂದು ಕಾಣುತ್ತದೆ. ಭಾರತೀಯತೆ ಎನ್ನುವುದು ಸನಾತನ ಕಾಲದಿಂದ ಸಮಕಾಲೀನದವರೆಗೆ ಎಲ್ಲವನ್ನೂ ಒಳಗೊಂಡ ಬಹುರೂಪಿ ಕಲ್ಪನೆ. ಕನ್ನಡ ಸಾಹಿತ್ಯವು ಏಕಕಾಲಕ್ಕೆ ಸ್ಥಳೀಯವೂ, ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗುವ ಸಂವೇದನಾ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.