ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

HMD 105: ಸ್ಮಾರ್ಟ್ ಕಾಲದಲ್ಲಿ ಗಮನ ಸೆಳೆಯುವ ಫೀಚರ್ ಫೋನ್

Published 9 ಜುಲೈ 2024, 13:28 IST
Last Updated 9 ಜುಲೈ 2024, 13:28 IST
ಅಕ್ಷರ ಗಾತ್ರ
ಪ್ರಮುಖ ವೈಶಿಷ್ಟ್ಯಗಳು
  • ತೆಗೆಯಬಹುದಾದ ಬ್ಯಾಟರಿ
  • ವೈರ್‌ಲೆಸ್ ಎಫ್ಎಂ ರೇಡಿಯೊ
  • ದೀರ್ಘ ಬ್ಯಾಟರಿ ಬಾಳಿಕೆ

ನೋಕಿಯಾ ಫೋನ್‌ಗಳನ್ನು ತಯಾರಿಸುತ್ತಾ ಹೆಸರು ಪಡೆದಿದ್ದ ಹೆಚ್ಎಂಡಿ ಗ್ಲೋಬಲ್ ಕಂಪನಿಯು ಕಳೆದ ತಿಂಗಳು HMD 105 ಹಾಗೂ HMD 110 ಹೆಸರಿನಲ್ಲಿ ತನ್ನದೇ ಬ್ರ್ಯಾಂಡ್‌ನಲ್ಲಿ ಎರಡು ಫೀಚರ್ ಫೋನ್‌ಗಳನ್ನು ಭಾರತದ ಮಾರುಕಟ್ಟೆಗಿಳಿಸಿದೆ. ತೀರಾ ಅಗ್ಗದ ದರದಲ್ಲಿ, ಈ ಬೇಸಿಕ್ ಫೋನ್ ತನ್ನದೇ ಆದ ವಿಶಿಷ್ಟ ಮಾರುಕಟ್ಟೆಯನ್ನು ಹೊಂದಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ HMD 105 ಹೇಗಿದೆ? ಇಲ್ಲಿದೆ ಮಾಹಿತಿ.

ಸ್ಮಾರ್ಟ್ ಫೋನ್‌ಗಳ ಯುಗದಲ್ಲಿ ಫೀಚರ್ ಫೋನ್‌ಗೇನು ಕೆಲಸ ಎಂದು ಮೂಗುಮುರಿಯಬೇಕಿಲ್ಲ. ಇದರ ಸಾಮರ್ಥ್ಯವು ಸ್ಮಾರ್ಟ್‌ಫೋನ್‌ಗಿಂತಲೂ ಚೆನ್ನಾಗಿದೆ ಎಂಬುದು ಹಿಂದಿನಿಂದಲೂ ಬೇಸಿಕ್ ಫೋನ್ ಬಳಸುತ್ತಿದ್ದ ಹಲವರ ಅಂಬೋಣ. ಇದೇ ರೀತಿಯಲ್ಲಿದೆ ಹೆಚ್ಎಂಡಿ 105 ಫೋನ್. 1000mAh ಸಾಮರ್ಥ್ಯದ ಬ್ಯಾಟರಿಯಲ್ಲೇ ದೀರ್ಘಾವಧಿಯ ಚಾರ್ಜ್, ಎಂಪಿ3 ಪ್ಲೇಯರ್, ಫ್ಲ್ಯಾಶ್ ಲೈಟ್, ಎಫ್ಎಂ ರೇಡಿಯೋ, ಕಾಲ್ ರೆಕಾರ್ಡಿಂಗ್, ಬಹುಭಾಷಾ ಬೆಂಬಲ ಹಾಗೂ ಇತರ ಹಲವು ವೈಶಿಷ್ಟ್ಯಗಳಿವೆ. ಅದರಲ್ಲೂ ಗಮನಿಸಬೇಕಾಗಿರುವುದು ಅಂತರ್-ನಿರ್ಮಿತ ಯುಪಿಐ ಪಾವತಿ ವ್ಯವಸ್ಥೆ.

ವಿನ್ಯಾಸ, ಗುಣಮಟ್ಟ ಹೇಗಿದೆ?

ಸುಮಾರು 77.5 ಗ್ರಾಂ ಹಗುರವಾದ ಈ ಫೋನ್ ನೋಡುವುದಕ್ಕೆ ಕ್ಲಾಸಿಕ್ ಆಗಿದ್ದು, ಉತ್ತಮ ಬಿಲ್ಡ್ ಗುಣಮಟ್ಟ ಹೊಂದಿದೆ. 2 ಇಂಚಿನ (ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಸುಸ್ಪಷ್ಟವಾಗಿಲ್ಲದ) ಕ್ಯುಕ್ಯುವಿಜಿಎ ಸ್ಕ್ರೀನ್ ಇದರಲ್ಲಿದೆ. ಕೀಪ್ಯಾಡ್ ಇದ್ದು, ಹಿಂಭಾಗದಲ್ಲಿ ಹೆಚ್ಎಂಡಿ ಬ್ರ್ಯಾಂಡಿಂಗ್ ಇದೆ. ಹಿಂಭಾಗದ ಕವಚ ತೆರೆದರೆ, ಎರಡು ಸಿಮ್ ಹಾಗೂ ಒಂದು ಮೆಮೊರಿ ಕಾರ್ಡ್ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದಿನ ನೋಕಿಯಾ ಫೀಚರ್ ಫೋನ್‌ಗಳಂತೆಯೇ ಬ್ಯಾಟರಿಯನ್ನು ತೆಗೆಯಬಹುದಾಗಿದೆ. ಮೇಲ್ಭಾಗದಲ್ಲಿ ಟಾರ್ಚ್ ಲೈಟ್ ಮತ್ತು ಸ್ಪೀಕರ್, ಕೆಳಭಾಗದಲ್ಲಿ 3.5 ಮಿಮೀ ಇಯರ್‌ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇದೆ. ಆನ್/ಆಫ್, ವಾಲ್ಯೂಮ್ ಕಂಟ್ರೋಲ್ ಸ್ವಿಚ್ ಕೀಪ್ಯಾಡ್‌ನಲ್ಲೇ ಇದೆ. ಹಿಂಭಾಗದಲ್ಲಿ ಸುಂದರ ವಿನ್ಯಾಸದ ಪಾಲಿಕಾರ್ಬೊನೇಟ್ ಕವಚವಿದ್ದು, ಐಪಿ52 ಜಲನಿರೋಧಕ ರೇಟಿಂಗಿಗೆ ಅನುಗುಣವಾಗಿದೆ.

ಕೀಪ್ಯಾಡ್ ಬಟನ್‌ಗಳು ದೊಡ್ಡದಾಗಿದ್ದು, ಟೈಪಿಂಗ್ ಸುಲಭ. 5ಜಿ ಕಾಲದಲ್ಲಿಯೂ ಇದರಲ್ಲಿರುವ ಇಂಟರ್ನೆಟ್ ವ್ಯವಸ್ಥೆ ಕೆಲಸ ಮಾಡುವುದು 2ಜಿ ಮೂಲಕ. ಇದರಲ್ಲಿ ವೆಬ್ ಬ್ರೌಸರ್ ಇಲ್ಲದಿರುವುದರಿಂದ ಇದೇನೂ ಸಮಸ್ಯೆಯಾಗದು. ಯಾಕೆಂದರೆ, ಇದರ ಮೂಲ ಉದ್ದೇಶ ಕೇವಲ ಸಂವಹನವಷ್ಟೇ ಹೊರತು ಪೂರ್ಣ ಮನರಂಜನೆಯಲ್ಲ.

ತಂತ್ರಾಂಶ, ಕಾರ್ಯನಿರ್ವಹಣೆ ಮತ್ತು ವೈಶಿಷ್ಟ್ಯಗಳು

ಹೆಚ್ಎಂಡಿ 105ಯಲ್ಲಿ ಹೊಸದಾಗಿ ಆ್ಯಪ್ ಅಳವಡಿಸಿಕೊಳ್ಳಲಾಗದು. ಅಂತರ್-ನಿರ್ಮಿತವಾಗಿಯೇ ನಮಗೆ ಅತ್ಯಗತ್ಯವಾಗಿರುವ ಆ್ಯಪ್‌ಗಳಿವೆ. ಉದಾಹರಣೆಗೆ, ಮ್ಯೂಸಿಕ್ ಪ್ಲೇಯರ್, ಮೆಸೇಜಸ್, ಎಫ್ಎಂ ರೇಡಿಯೊ, ಸ್ನೇಕ್ ಗೇಮ್, ವಾಯ್ಸ್ ರೆಕಾರ್ಡರ್, ಕ್ಯಾಲೆಂಡರ್, ಕ್ಯಾಲ್ಕುಲೇಟರ್, ಗಡಿಯಾರ, ಅಲಾರಂ, ಫೈಲ್ ಮ್ಯಾನೇಜರ್ ಹಾಗೂ ಜಿಎಸ್ ಪೇ ಎಂಬ ಪಾವತಿ ಆ್ಯಪ್. ವೆಬ್ ಬ್ರೌಸರ್ ಇಲ್ಲ. 4MB RAM ಮತ್ತು 4MB ಮೆಮೊರಿ ಮಾತ್ರ ಇದೆ. 32 ಜಿಬಿವರೆಗಿನ ಮೈಕ್ರೋ ಎಸ್‌ಡಿ ಮೆಮೊರಿ ಕಾರ್ಡ್ ಅಳವಡಿಸಬಹುದು.

ಆ್ಯಪ್‌ಗಳನ್ನು ಶಾರ್ಟ್‌ಕಟ್‌ಗಳ ಮೂಲಕ ಉಪಯೋಗಿಸಬಹುದು. ಸುಮಾರು 2000ದಷ್ಟು ಕಾಂಟ್ಯಾಕ್ಟ್ ನಂಬರ್‌ಗಳನ್ನು ಫೋನ್‌ನಲ್ಲಿ ಉಳಿಸಿಕೊಳ್ಳಬಹುದು. ಜೊತೆಗೆ, ಹಿಂದಿನ ಫೀಚರ್ ಫೋನ್‌ಗಳನ್ನು ಬಳಸಿದವರಿಗೆ ಖುಷಿ ನೀಡಬಲ್ಲ ಸ್ನೇಕ್ ಗೇಮ್ ಇದರಲ್ಲಿ ಅಂತರ್-ನಿರ್ಮಿತವಾಗಿದೆ.

ಅತ್ಯುತ್ತಮ ಧ್ವನಿ

ಸಂಗೀತ ಪ್ರಿಯರಿಗೆ ಇಷ್ಟವಾಗುವ ಅಂಶವೆಂದರೆ, ಎಫ್ಎಂ ರೇಡಿಯೊ ಮತ್ತು ಸಂಗೀತ ಆಲಿಸುವುದು. ಅತ್ಯುತ್ತಮ ಮಟ್ಟದ ವಾಲ್ಯೂಮ್‌ನಲ್ಲಿ ಹಾಡು ಪ್ಲೇ ಆಗುತ್ತದೆ. ಇಯರ್‌ಫೋನ್ ಹಾಕದಿದ್ದರೂ ಎಫ್ಎಂ ರೇಡಿಯೊ ಆಲಿಸಬಹುದಾಗಿದೆ. ಮನೆಯ ಒಳಗೆ ರೇಡಿಯೊ ಸಿಗ್ನಲ್ ದುರ್ಬಲವಾಗಿರಬಹುದು, ಅಂಥ ಸಂದರ್ಭದಲ್ಲಿ ಇಯರ್‌ಫೋನ್ ಮೂಲಕ ಸಮಸ್ಯೆಯಿಲ್ಲದೆ ರೇಡಿಯೊ ಆಲಿಸಬಹುದು. ಇದಲ್ಲದೆ, ಮಾರುಕಟ್ಟೆಯಲ್ಲೋ, ಬಸ್ಸಿನಲ್ಲೋ ಅಥವಾ ಬೇರೆ ಕಡೆ, ಜನಜಂಗುಳಿ, ಗದ್ದಲ ಜಾಸ್ತಿ ಇರುವಲ್ಲಿ ಫೋನ್‌ನಲ್ಲಿ ಅತ್ತಲಿಂದ ಬರುವ ಧ್ವನಿಯನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ. ಹಾಡು ಆಲಿಸುವುದಕ್ಕಾಗಿ ಲಾಕ್ ಸ್ಕ್ರೀನ್‌ನಿಂದಲೇ ಪ್ರತ್ಯೇಕ ಮ್ಯೂಸಿಕ್ ಪ್ಲೇ ಬಟನ್ ಇದ್ದರೆ ಚೆನ್ನಾಗಿತ್ತು ಎಂಬುದು ಬಳಕೆಯ ಸಂದರ್ಭದಲ್ಲಿ ಕಂಡುಬಂದ ಅಂಶ.

ಬ್ಯಾಟರಿ

1000 mAh ಸಾಮರ್ಥ್ಯದ, ತೆಗೆಯಬಹುದಾದ ಬ್ಯಾಟರಿ ಇದರಲ್ಲಿದ್ದು, ಸಾಧಾರಣ ಬಳಕೆಯನ್ನು ಪರಿಗಣಿಸಿದರೆ, ಅಂದರೆ ಕರೆ, ಎಸ್ಎಂಎಸ್ ಮತ್ತು ಎಫ್ಎಂ ರೇಡಿಯೋ ಆಲಿಸುವುದಷ್ಟೇ ಆದರೆ, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ ನಂತರ ಐದರಿಂದ ಏಳು ದಿನಗಳ ಕಾಲ ಚಾರ್ಜ್ ಮಾಡಬೇಕಾಗಿರುವುದಿಲ್ಲ. ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಫೀಚರ್ ಫೋನ್‌ಗಳ ಬ್ಯಾಟರಿ ಚಾರ್ಜ್ ಬಾಳಿಕೆ ಯಾವತ್ತೂ ಹೆಚ್ಚೇ ಇರುತ್ತದೆ.

ಯುಪಿಐ ಪಾವತಿ ಮಾಡಬೇಕಿದ್ದರೆ, ಮೊದಲು ನೋಂದಾಯಿಸಿಕೊಂಡು, ಹಣ ಸ್ವೀಕರಿಸಬೇಕಾದವರ ಯುಪಿಐ ಐಡಿ ಅಥವಾ ಮೊಬೈಲ್ ಫೋನ್ ನಂಬರ್ ನಮೂದಿಸಿ, ಯುಪಿಐ ಪಿನ್ ನಮೂದಿಸಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, 3ಜಿ, 4ಜಿ, 5ಜಿ ನೆಟ್‌ವರ್ಕ್ ಇಲ್ಲದ, ಕೇವಲ 2ಜಿ ನೆಟ್‌ವರ್ಕ್‌ನಲ್ಲಿ (ಬಹುತೇಕ ಎಲ್ಲ ಕಡೆ ಪ್ರಬಲವಾಗಿ ಸಿಗ್ನಲ್ ಇರುತ್ತದೆ) ಕೆಲಸ ಮಾಡುವ, ಕ್ಯಾಮೆರಾ, ವ್ಯಾಟ್ಸ್ಆ್ಯಪ್ ಅಥವಾ ಯಾವುದೇ ಸೋಷಿಯಲ್ ಮೀಡಿಯಾ ಇಲ್ಲದ, ಇಂಟರ್ನೆಟ್ ಬ್ರೌಸರ್ ಕೂಡ ಇಲ್ಲದ ಫೋನ್ ಇದು. ಆದರೂ ಹಣಪಾವತಿಸಲು, ಎಫ್ಎಂ ರೇಡಿಯೋ, ಸಂಗೀತ ಆಲಿಸುವುದಕ್ಕಾಗಿ ಮತ್ತು ಎಸ್ಎಂಎಸ್ ಸಂದೇಶ ವಿನಿಮಯ ಹಾಗೂ ಕೇವಲ ಮಾತುಕತೆಗಾಗಿರುವ, ದೀರ್ಘ ಬ್ಯಾಟರಿ ಬಾಳಿಕೆಯ ಈ ಫೋನ್ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ. ಈಗಿನ ಫೇಕ್ ನ್ಯೂಸ್ ಹರಡುವ ಸಾಮಾಜಿಕ ಮಾಧ್ಯಮಗಳ ಕಿರಿಕಿರಿ ಬದಲು, ಅಮೂಲ್ಯ ಫೋನ್ ಇದು ಅನ್ನಿಸದಿರದು. ಬೆಲೆ ಕೇವಲ ₹999.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT