ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

Published : 6 ಜುಲೈ 2024, 10:05 IST
Last Updated : 6 ಜುಲೈ 2024, 10:05 IST
ಫಾಲೋ ಮಾಡಿ
Comments

ಸಿಯೋಲ್: ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ ರೊಬೊ ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಈ ಕುರಿತು ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ.

ಗುಮಿ ಎಂಬ ನಗರದ ಆಡಳಿತಾತ್ಮಕ ಕಾರ್ಯಗಳಲ್ಲಿ ಕಳೆದ ಒಂದು ವರ್ಷಗಳಿಂದ ಈ ರೊಬೊ ನಾಗರಿಕರಿಗೆ ನೆರವಾಗುತ್ತಿತ್ತು. ಜೂನ್ 26ರಂದು ಮಹಡಿ ಮೇಲಿನಿಂದ ತಾನೇ ಬಿದ್ದ ರೊಬೊ, ಮೆಟ್ಟಿಲ ಕೆಳಗೆ ನಿಷ್ಕ್ರಿಯೆಯಾಗಿತ್ತು ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ. 

‘ಮಹಡಿ ಮೇಲಿದ್ದ ರೊಬೊ ತಾನೇ ತಿರುಗಿ ಕೆಳಗೆ ಬಿದ್ದಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಘಟನೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ’ ಎಂದಿದ್ದಾರೆ.

ಈ ರೊಬೊ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಬಿಡುವಿಲ್ಲದೆ ಕೆಲಸ ಮಾಡುತ್ತಿತ್ತು. ಅತಿಯಾದ ಕಾರ್ಯ ಒತ್ತಡದಿಂದ ಅದು ಬಳಲಿರಬಹುದು.  ಮೇಲಿಂದ ಬೀಳುವ ಮೊದಲು ತಾನಿರುವ ಸ್ಥಳದಲ್ಲೇ ಹಲವು ಸುತ್ತು ಅದು ಗಿರಕಿ ಹೊಡೆದಿದೆ. ನಂತರ ಮಹಡಿ ಮೇಲಿಂದ ಕೆಳಕ್ಕೆ ನೆಗೆಯಿತು. ರೊಬೊ ಇಂಥ ವರ್ತನೆ ಕುರಿತು ತನಿಖೆ ನಡೆಸಬೇಕಿದೆ ಎಂದು ಪ್ರತ್ಯಕ್ಷದರ್ಶಿಗಳು ಒತ್ತಾಯಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ಬೀರ್ ರೊಬೊಟಿಕ್ಸ್‌ ಇದನ್ನು ಅಭಿವೃದ್ಧಿಪಡಿಸಿದೆ. ಇದು ಗುಮಿಯ ಸ್ಥಳೀಯ ಆಡಳಿತದ ಅಧಿಕೃತ ಭಾಗವೇ ಆಗಿತ್ತು. ಕೆಳಗೆ ಬಿದ್ದಾಗ ರೊಬೊ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೊಬೊ ಕೇವಲ ಮೊದಲ ಮಹಡಿಗಷ್ಟೇ ಸೀಮಿತವಾಗಿರಲಿಲ್ಲ. ಇತರ ಮಹಡಿಗಳಿಗೆ ತೆರಳಲು ಲಿಫ್ಟ್‌ ನೆರವು ಪಡೆಯುತ್ತಿತ್ತು. ಆದರೆ ಅತಿಯಾದ ಕಾರ್ಯ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿತೇ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ರೊಬೊ ಬಳಸುತ್ತಿರುವ ದೇಶದಲ್ಲಿ ದಕ್ಷಿಣ ಕೊರಿಯಾ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವಿಭಿನ್ನ ಬಗೆಯ ರೊಬೊಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಹತ್ತು ನೌಕರರಿಗೆ ಒಂದು ರೊಬೊ ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಂತರರಾಷ್ಟ್ರೀಯ ರೊಬೊಟಿಕ್ಸ್‌ ಒಕ್ಕೂಟ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT