ಪ್ರೇಮಿಗಳ ದಿನದ ನಿರೀಕ್ಷೆಯಲ್ಲಿ ಪ್ರತಿದಿನವೂ ಸಂಭ್ರಮ ಆಚರಿಸಲಾಗುತ್ತಿದೆ. ಪ್ರೇಮ.. ಅಂದ್ರೆ ಕಾಳಜಿ, ಕಣ್ರೆಪ್ಪೆಯ ಮೇಲಿನ ಕನಸದು. ಕೆನ್ನೆಗಾನಿದರೆ ನನಸೂ ಆದೀತು, ಕಣ್ಣೀರೂ ಆದೀತು.

ಪ್ರೇಮ... ಅಂದ್ರೆ ಗೌರವ. ನೀನೂ ನನ್ನಂತೆಯೇ, ನಾನೂ ನಿನ್ನಂತೆಯೇ ಎಂಬ ಪರಸ್ಪರ ಗೌರವ

ಪ್ರೇಮ ಅಂದ್ರೆ.. ಸಮಯ, ಪರಸ್ಪರ ನೀಡಬೇಕಿರುವ ಸಮಯ, ಪರಸ್ಪರರಿಗಾಗಿ ಮೀಸಲಿಡಬೇಕಾದ ಸಮಯ

ಪ್ರೇಮ... ಅಂದ್ರೆ.. ಅದೆಂದೂ ಮುಗಿಯದ ಅಫ್ಸಾನಾ,(ಕತೆಗಳ ಸರಮಾಲೆ) ಅದೆಂದಿಗೂ ಅಪೂರ್ಣ

ಪ್ರೇಮ.. ಚಾಕಲೇಟಿನ ಕೊನೆಯ ಕಣವನ್ನೂ ನಾಲಗೆಯ ತುದಿಯಿಂದ ಆಸ್ವಾದಿಸುತ್ತ, ಕಣ್ಮುಚ್ಚುವುದು, ತಿಂದಾದ ಮೇಲೆಯೂ ಅದರದ್ದೇ ಸ್ವಾದದಲ್ಲಿ ಮಿಂದೇಳುವುದು...

ಪ್ರೇಮ.. ಕರಗಿ, ಜಾರಿ ಬೀಳಬಹುದಾದ ಐಸ್ಕ್ರೀಂನಂತೆ.. ಕರಗುವ ಮುನ್ನ ತಿಂದರೂ ಮುಗಿದೇ ಹೋಯ್ತಲ್ಲ ಎಂದು ಕೊರಗುವುದು, ಕೊನೆಯವರೆಗೂ ಉಳಿಯಲಿ ಎಂದು ಕಾಪಿಟ್ಟರೂ, ಕರಗಿ ಹೋಯ್ತಲ್ಲ ಎಂದು ಅಳುವುದು. ಬದುಕನ್ನು ಆಸ್ವಾದಿಸುವುದು, ಆನಂದಿಸುವುದು, ವಿರಹಿನಿಯಾಗುವುದು, ಪ್ರಣಯಿನಿ ಆಗುವುದು, ಆಮೋದಿನಿಯಾಗುವುದು.. ಹೀಗೆ ಏನೆಲ್ಲ.. ಬದುಕಿನ ನವರಸಗಳನ್ನೂ ಅನುಭವಕ್ಕೆ ತರುವ ಪ್ರೇಮದ ಪರಿ ಕಾಲ ಬದಲಾದಂತೆ, ವಯಸ್ಸು ಮಾಗಿದಂತೆ ಬದಲಾಗುತ್ತಲೇ ಹೋಗುತ್ತದೆ. ವಿಷಾದ, ನಿರೀಕ್ಷೆ, ಉತ್ಸಾಹ, ಕಾಯುವುದು, ಬೇಯುವುದು ಎಲ್ಲವೂ ಪ್ರೇಮದ ಪರಿಯೇ ಹೌದು. ಇಲ್ಲಿ ಅಂಥ ಕೆಲವು ಪ್ರೇಮದ ವ್ಯಾಖ್ಯಾನಗಳು ನಿಮಗಾಗಿ...

ಒಟ್ಟಿಗಿರುವುದೇ ಒಲವಲ್ಲ...

ಹತ್ತು ವರ್ಷಗಳ ಹಿಂದೆ ಕಬ್ಬಳಿ ಜಾತ್ರೆಯಲ್ಲಿ ಕೇಳಿದ ಎಲ್ಲವನ್ನೂ ಕೊಡಿಸಿದ್ದ ಅಪ್ಪ ಜಡೆಗೆ ಕಟ್ಟುವ ಟೇಪನ್ನು ಮಾತ್ರ ನೆಲಕ್ಕೆ ಬಿದ್ದು ಹೊರಳಾಡಿ ಅತ್ತರೂ ಕೊಡಿಸಿರಲಿಲ್ಲ. ಲಂಗದ ಮಡಿಲಲ್ಲಿದ್ದ ಕಂಬಾರಕಟ್ಟು, ಬಾಂಬೆ ಮಿಟಾಯಿ, ಬತ್ತಾಸು ಸುಣ್ಣಕಲ್ಲುಗಳೆಲ್ಲ ಸಿಗದೇ ಹೋದ ಆ ಟೇಪಿನ ಮುಂದೆ ಅವಳಿಗೆ ಸಪ್ಪೆ ಸಪ್ಪೆ ಅನಿಸಿದ್ದವು.

ಮನೆಯಲ್ಲಿ ಜೀತಕ್ಕಿದ್ದ ಅವನು ಜಾತ್ರೆಗೆ ಹೊರಟಾಗ ಇವಳಪ್ಪ ನೀನೂ ಏನಾದರೂ ತಗೋ ಎಂದು ಕೊಟ್ಟ ತಿಂಗಳ ಸಂಬಳ ಹತ್ತು ಪೈಸೆಗೆ ಅವನು ಕೊಂಡಿದ್ದು ಮಾತ್ರ ಒಂದು ಜೊತೆ ಬಿಳೀ ಟೇಪು!

ಸದಾ ನೆರಳಿನಂತೆ ಇವಳ ದೇಕರೇಖಿ ನೋಡಿಕೊಳ್ಳುತ್ತಿದ್ದ ಅವನು ಪಕ್ಕದೂರಿನ ಜಮೀನ್ದಾರ ಕುಳಕ್ಕೆ ಇವಳನ್ನು ಕೊಟ್ಟ ದಿನ ಜಗತ್ತಿನಿಂದಲೇ ಕಾಣೆಯಾಗಿದ್ದ! ಅವಳ ಗಂಡನಾದರೂ ಎಂತವನು? ಮೂವತ್ತು ಎಕರೆ ಮಲ್ಲಿಗೆ ತೋಟವಿದ್ದವನು! ಒಂದು ಸಂಜೆಯಾದರೂ ಇವಳ ಮುಡಿಗೆ ಒಂದು ಮೊಳ ಮಲ್ಲಿಗೆ ಮುಡಿಸುವುದ ಮರೆತವನು. ವಿಶೇಷವೆಂದರೆ ಇವನ ತೋಟದ ಮಲ್ಲಿಗೆ ಊರಾಚೆ ಹಂದಿ ಕಡಿವ ಗಂಗಿಯ ಮುಡಿಯಲ್ಲಿ ಘಮ್ಮೆನ್ನುತ್ತಿದ್ದವು. ಇಷ್ಟಕ್ಕೇ! ಗಂಡನ ಬಿಡಲು ಹೊರಟ ಇವಳ ಗುಂಡಿಗೆ ಬಗೆಯಲು ಜನ ಸುತ್ತುವರೆದಾಗ ಅದೆಲ್ಲಿದ್ದನೋ ಅವನು ಇವಳ ಮಗ್ಗುಲಲ್ಲಿ ಭೀಮನಂತೆ ಎದೆಸೆಟಸಿ ನಿಂತುಬಿಟ್ಟಿದ್ದ!

ಆತನ ತೋಟದಲ್ಲಿ ಅರಳುವ ಏಳುಸುತ್ತಿನ ಮಲ್ಲಿಗೆ ಅವನ ಪಾಲಿಗೆ ಮತ್ತೇರಿಸುವ ಘಮವಾಗಿರಲಿಲ್ಲ. ಘಮವನ್ನು ಮಾರುತ್ತಿದ್ದ, ಅದಕ್ಕಾಗಿ ಬೆಳೆಯುತ್ತಿದ್ದ. ಇಷ್ಟಪಡುವರನ್ನು ಸೆಳೆಯಲಿಕ್ಕಾಗಿ ಒಂದಷ್ಟು ಮಲ್ಲಿಗೆಯ ಮಡಿಲಿಗೆ ಸುರಿಯುತ್ತಿದ್ದ.

ಕೆ ಜೆ ಲೆಕ್ಕದಲ್ಲಿ ಮಾರುವ ಮಲ್ಲಿಗೆಯನ್ನು ಅವನು ಒಂದು ಮೊಳ ಪ್ರೇಮವಾಗಿಸುವುದನ್ನು ಕಲಿಯಲಿಲ್ಲ...
ಅವಳೂ ಸಹ ನನ್ನದೇ ತೋಟದ ಮಲ್ಲಿಗೆ ಘಮ ಮೊಳವಾಗಿ ಆಚೆ ಗಂಗಿಯ ಜಡೆಯಲ್ಲಿ ಘಮವಾಗುವುದನ್ನು ತಡೆಯಲಿಲ್ಲ.

ಗಂಗೀ ಸಹ ಅದೆಲ್ಲಿಯದೋ ಕೆಂಪುಮಣ್ಣಿನ ಬೇರಿಂದ ಬಂದ ಘಮವನ್ನು ಮುಡಿಗೇರಿಸಿದಳು.
ಇಲ್ಲಿ ಪ್ರೇಮ ಅಂದರೆ ಎಲ್ಲಿ ಸ್ಥಾಯಿಯಾಗಿದೆ...? ಎಲ್ಲಿ ಚಲನೆಯಾಗಿದೆ ಅಂತ ನಿರ್ಧಾರ ಮಾಡುವುದು ಕಷ್ಟ ಮಾತ್ರವಲ್ಲ... ಮಾಡಬಾರದ ಕೆಲಸ.

ಪ್ರೇಮ ಮಲ್ಲಿಗೆಯಂತೆ. ಬಾಡಿದ ನಂತರವೂ ಖುಷಿಗಾಗಿ ಗೌರವದಿಂದ ನೋಡಬಹುದು.
ಜೀತವಿಮುಕ್ತನಾದ ಅವನು, ಅವನ ಬಿಟ್ಟ ನಾನು, ಮಲ್ಲಿಗೆ ತೋಟದ ಅವನು, ಘಮವ ಮುಡಿಗೇರಿಸಿದ ಗಂಗೀ, ತೋಟ ದಾಟಿ ಆಚೆ ಹೊರಟ ಮೊಳ ಮಲ್ಲಿಗೆಯ ಅಸಹಾಯಕಳಾಗಿ ನೋಡುವ ಅವಳೂ...
ಒಟ್ಟಾರೆ... ನಿನ್ನ ಪ್ರೇಮದ ಪರಿಯ ನಾನರಿಯೇ...

ದಯಾ ಗಂಗನಘಟ್ಟ

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..

‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ಎಂದು ಕಾಲವಳಿಸದ ಚೆಲುವಿನ ಪ್ರೇಮಕವಿ ಕೆಎಸ್.ನರಸಿಂಹಸ್ವಾಮಿಗಳು ಬರೆದರು. ಅಷ್ಟು ಸುಲಭವೆ ಪ್ರೇಮದ ಪರಿಯನ್ನು ಅರಿಯುವುದು. ಪ್ರೇಮ ಒಂದು ಭಾವ, ಅದು ಮೈದಾಳಬೇಕಾದರೆ ಅದಕ್ಕೊಂದು ಜೀವ ಬೇಕು. ಅಷ್ಟೇ ಸತ್ಯ ಎಂದರೆ ಪ್ರತಿ ಜೀವದ ಬೆನ್ನ ಮೇಲೆಯೂ ನಿನ್ನೆಯ ಅಗೋಚರ ಹೊರೆ ಇದ್ದೇ ಇರುತ್ತದೆ. ಆ ಹೊರೆ ಮತ್ತು ಆ ಜೀವದ ನಾಳಿನ ನಿರೀಕ್ಷೆಗಳು ಪ್ರೇಮಕ್ಕೆ ಕಣ್ಣು, ಮೂಗು, ಕಿವಿಗಳನ್ನು ರೂಪಿಸುತ್ತವೆ.

ಅಲ್ಲಿ ಕಳೆದವರ್ಷಗಳ ಲೆಕ್ಕ ಮಾತ್ರವಲ್ಲ, ವರ್ಷ, ಗ್ರೀಷ್ಮ, ವಸಂತ, ಋತುಗಳ ಒದ್ದೆ, ಒಣಗು, ಬೆರಗುಗಳೂ ಇರುತ್ತವೆ. ಪ್ರೀತಿಯನ್ನು ಬಿಗಿದುಹಿಡಿ ಎಂದು ಒಂದು ಜೀವ ಎಂದರೆ, ಬೇಡ ಮುಕ್ತವಾಗಿ ಬಿಡು ಎಂದು ಇನ್ನೊಂದು ಉಸುರುತ್ತದೆ. ಅನ್ನಿಸಿದೆಲ್ಲವನ್ನೂ ಹೇಳಿಬಿಡು, ಪ್ರೀತಿಯನ್ನು ಸುರಿದುಬಿಡು ಎಂದು ಒಂದು ಹಸ್ತ ಬೆನ್ನ ಮೇಲೆ ಕೈ ಇಟ್ಟರೆ, ತಾಳುತಾಳು ಹಾಗೆ ನಿನ್ನನ್ನು ಬಯಲಾಗಿಸಬೇಡ ಎಂದು ಇನ್ನೊಂದು ಕೈ ತಡೆಯುತ್ತದೆ.

ಅಂದಹಾಗೆ ವಯಸ್ಸು ಕಲಿಸಿದ ಇನ್ನೊಂದು ಸತ್ಯ, ಎಲ್ಲಾ ಪ್ರೀತಿಗಳೂ ಕೇವಲ ‘ಐ ಲವ್ ಯೂ’ ಮೂಲಕವೇ ಅಭಿವ್ಯಕ್ತಗೊಳ್ಳಬೇಕಿಲ್ಲ. ಕೆಲವು, ‘ಮಾತ್ರೆ ತಗೊಂಡು ಅರ್ಧಗಂಟೆಯಾಯಿತು, ಊಟಮಾಡಬಾರದೆ?’, ‘ತಲುಪಿದೆಯಾ?’, ‘ಮೊಣಕಾಲ ನೋವು ಹೇಗಿದೆ?’, ‘ಇನ್ನೂ ನಿದ್ದೆ ಮಾಡಿಲ್ಲವೆ?’ ಎಂದು ಸಹ ಕೇಳಿಸಬಹುದು.
ಫೆಬ್ರವರಿ ತಿಂಗಳಲ್ಲಿ ಪ್ರೀತಿಯ ಬಗ್ಗೆ ಬರೆಯುವ ವಯಸ್ಸು ಮೀರಿಲ್ಲವೆ ಎಂದು ಒಮ್ಮೆ ಅನಿಸಿದರೂ, ಹಿಂದೆಯೇ ಬಹುಶಃ ಅದನ್ನು ಬರೆಯುವ ಸಾವಧಾನ ಈಗ ಬಂದಿರುತ್ತದೆ ಅಂತಲೂ ಅನ್ನಿಸಿತು. ಏಕೆಂದರೆ ಚಿಟ್ಟೆಯ ಉಸಿರುಗಟ್ಟಿಸದೆ ಅಂಗೈಯಲ್ಲಿ ಹಿಡಿಯುವ ತಾಳ್ಮೆ ಮತ್ತು ಚಿಟ್ಟೆ ಹಾರಿಹೋಗದಂತೆ ಹಿಡಿಯುವ ಜಾಣ್ಮೆ ಎರಡನ್ನೂ ವಯಸ್ಸು ತಂದಿರಬಹುದು ....Hopefully!

ಎನ್.ಸಂಧ್ಯಾರಾಣಿ

ಪ್ರೇಮವೇನು ಹಗುರವೆ?

ಆಕೆಯನ್ನ ಎಲ್ಲಿಬೇಕಂದರಲ್ಲಿ ಮುಟ್ಟದಿದ್ದರೆ ಯಾವಾಗ ಬೇಕಾದಾಗ ಮುಟ್ಟದಿದ್ದರೆ ಅದು ಪ್ರೀತಿಯೇನು? ಒಂದೇಟು ಹೊಡೆಯದಿದ್ದರೇ ಅದ್ಯಾವ ಪ್ರೀತಿ. ಟಿವಿಯಲ್ಲಿ ಕುಳಿತ ನಿರ್ದೇಶಕನೊಬ್ಬ ಹೇಳುತ್ತಿದ್ದರೆ ಹದಿನಾರರ ಹುಡುಗರು ಹೋ ಎಂದು ಶಿಳ್ಳೆಹೊಡೆಯುತ್ತಾರೆ.

ಪ್ರೀತಿಯೆಂದರೆ ಹೀಗೆ ಅಬ್ಬರಿಸಿ ಬೊಬ್ಬಿರಿಯುವುದು ಆಕೆಯನ್ನ ಅಥವಾ ಆತನನ್ನು ಸ್ವತ್ತು ಎಂದು ಭಾವಿಸುವುದು ಬೇಕಾದಾಗ ಬೇಕೆಂದ ತಕ್ಷಣವೇ ದೊರಕುವ ಸುಖವೇ ಪ್ರೀತಿಯೆಂಬುದನ್ನು ಮತ್ತಷ್ಟು ತಲೆಗೆ ತುಂಬುತ್ತಿರುವಂತಹ ವಾತಾವರಣದಲ್ಲಿ ಪ್ರೀತಿಯ ನವಿರುತನವನ್ನಾಗಲಿ ಗೌರವ ಘನತೆಯನ್ನು ಉಳಿಸಿಕೊಳ್ಳುವುದು ಸ್ಥಾಪಿಸುವುದು ಎಷ್ಟು ಸುಲಭವಾದಿತು.

ಅನುಮಾನವಿರದ ಅನುರಾಗವಿಲ್ಲ ಎಂಬ ಮಾತುಗಳನ್ನೇ ನಂಬಿಕೊಂಡು ಬಂದವರಿಗೆ ಉಸಿರುಗಟ್ಟಿಸುವ ತೀವ್ರ ಪ್ರತಿಪಾದನೆಯನ್ನೆ ನಿಜವಾದ ಪ್ರೀತಿಯೆಂದು ನಂಬಿಕೊಂಡು ಬಂದವರಿಗೆ ಪರಸ್ಪರರ ರುಚಿ ಅಭಿರುಚಿಯನ್ನು ಗೌರವಿಸೋಣ ಒಂಚೂರು ಸ್ಪೇಸ್ ಕೊಡೊಣ ಎಂಬ ಮಾತುಗಳು ಹುಸಿ ಅನಿಸ್ಯಾವು. ಮುನಿಸು ತಂದಾವು. ಆದರೆ ಆಕೆ ನಿನ್ನ ಸಂಗಾತಿ ಆಗುವ ಮೊದಲು ಆಕೆಗೆ ಈ ಸಂಬಂಧದ ಹೊರತಾಗಿಯೂ ಒಂದು ವ್ಯಕ್ತಿತ್ವ ಇದೆ ಎಂಬುದುನ್ನ ಹೇಳುವರಾರು?

ಪ್ರೀತಿಗೆ ಒಲಿದ ಹುಡುಗಿಯೋ, ಕಟ್ಟಿಕೊಂಡು ಬಂದ ಹೆಂಡತಿಯೋ ಆಕೆಯನ್ನು ಮುಟ್ಟುವುದು ತಮ್ಮ ಜನ್ಮ ಸಿದ್ಧ ಅಧಿಕಾರ ಅನ್ನೋದು ನಮ್ಮ ಸ್ಪರ್ಶ ಹೀನ ಅಥವಾ ಟಚ್ ಡಿಪ್ರೈವಡ್ಸ್ ಸಮಾಜದ ಧೋರಣೆ.

ಮುಟ್ಟುವುದೆಂದರೆ ಅದೊಂದು ಜವಾಬ್ದಾರಿ, ಪರಸ್ಪರ ಒಪ್ಪಿತ ಒಲವಿನ ಅಭಿವ್ಯಕ್ತಿ. ಮದುವೆಯನ್ನೂ ಸೇರಿದಂತೆ ಯಾವುದೇ ಒಪ್ಪಿತ ಸಂಬಂಧದಲ್ಲಿ ಮನವನ್ನು ತನುವನ್ನು ಜೀವನವನ್ನು ಹಂಚಿಕೊಳ್ಳುತ್ತೇವೆ ಎಂಬುದೊಂದು ಜವಾಬ್ದಾರಿಯುತವಾಗಿ ಮಾಡಿದ ಪ್ರಮಾಣವೇ ಹೊರತು ಹಕ್ಕು ಚಲಾಯಿಸುವ ಸ್ವತ್ತು ಅಲ್ಲ.

ಕೋಪದ ತೀವ್ರತೆಯೋ ಕಾಮದ ಉತ್ಕಟತೆಯೋ ಹಿಂಸೆಯ ರೂಪಕ್ಕಿಳಿದಾಗ ಅದು ಪರಸ್ಪರ ಪ್ರೇಮದಲ್ಲಿರುತ್ತೇವೆಯೆಂಬ ಒಪ್ಪಂದವನ್ನು ಮೀರಿದಂತೆ. ಪ್ರೀತಿಯಲ್ಲಿ ಸಲುಗೆ, ಆಪ್ತತೆ, ನನ್ನವರೆಂಬ ಖಾಸಾತನವನೋ ಸರಿ ಆದರೆ ಆ ಖಾಸಾತನ ಒಂದು ಆಪ್ತ ಭಾವವಾಗಿರಬೇಕೆ ಹೊರತು ಸಂಗಾತಿಯ ದೇಹದ ಮನಸಿನ ಮೇಲೆ ಬೇಕೆಂದಹಾಗೆ ಬೇಕಾದಾಗಲೆಲ್ಲ ಹಕ್ಕು ಚಲಾಯಿಸುವ ಪರವಾನಿಗೆ ಆಗಬಾರದು. ಆತ ಅಥವಾ ಆಕೆ ನಮ್ಮ ಪ್ರೇಮಿಯೇನೋ ಹೌದು ಆದರೆ ಎಲ್ಲದಿಕ್ಕಿಂತ ಮುಖ್ಯವಾಗಿ ಆಕೆಯೊಬ್ಬಳು ಘನತೆಯುಳ್ಳ ವ್ಯಕ್ತಿ ಎಂಬ ಅರಿವು ಮರೆವಾಗದಂತೆ ಇರುವುದು ಪ್ರೇಮ. ಯಾವುದೇ ಕ್ಷಣದಲ್ಲೂ ಆ ಘನತೆಯನ್ನು ಕಳೆದಂತೆ ಕಾಪಾಡಿಕೊಳ್ಳುವುದು ಪ್ರೇಮ. ಘನತೆಯನ್ನು ಕಾಪಿಟ್ಟುಕೊಳ್ಳುವ ಪ್ರತಿದಿನವೂ ಪ್ರೇಮಿಗಳ ದಿನವೇ..

ಮೇಘಾ ಯಲಿಗಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.