ಫಿಟ್ನೆಸ್ ಕುರಿತು ಇಂದಿನ ಯುವತಿಯರು ಹೆಚ್ಚಿನ ಒಲವು ಬೆಳೆಸಿಕೊಂಡಿದ್ದಾರೆ. ನಿತ್ಯ ಜಿಮ್ಗೆ ಹೋಗುವವರ ಸಂಖ್ಯೆಯೂ ಸಾಕಷ್ಟಿದೆ. ಹಾಗೆಯೇ ಬೆಳಿಗ್ಗೆ ಅಥವಾ ಸಂಜೆ ಜಾಗಿಂಗ್ ಎಂದು ಬೆವರು ಸುರಿಸುವವರೂ ಬಹಳಷ್ಟು ಮಂದಿ. ಆದರೆ ಮುಟ್ಟಿನ ಆ ಮೂರು ದಿನಗಳಲ್ಲಿ ವ್ಯಾಯಾಮ ಮಾಡಬಹುದೇ ಎಂಬ ಪ್ರಶ್ನೆ ಹಲವು ಯುವತಿಯರನ್ನು ಕಾಡುವುದು ಸಹಜ. ಆ ದಿನಗಳಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ಆಗುವಂತಹ ಕಿರಿಕಿರಿ, ಹೊಟ್ಟೆ ನೋವು, ಕಾಲು ಸೆಳೆತ ಮೊದಲಾದವು ಇದಕ್ಕೆ ಕಾರಣವಿರಬಹುದು. ವ್ಯಾಯಾಮ, ವೇಗದ ನಡಿಗೆ ಅಥವಾ ಓಟ, ಯೋಗಾಸನಗಳನ್ನು ಮಾಡಿದಾಗ ಸ್ರಾವ ಜಾಸ್ತಿಯಾದರೆ ಎಂಬ ಭಯವೂ ಕೆಲವರಲ್ಲಿದೆ. ಆದರೆ ಈ ರೀತಿ ಭಯಪಡುವ ಕಾರಣವಿಲ್ಲ ಎನ್ನುತ್ತಾರೆ ವೈದ್ಯರು.

‘ಹೆಣ್ಣಿನ ದೈನಂದಿನಲ್ಲಿ ಮುಟ್ಟು ಎನ್ನುವುದು ಒಂದು ಸಹಜ ಪ್ರಕ್ರಿಯೆ. ನಿತ್ಯವೂ ನಾವು ತಿನ್ನುತ್ತೇವೆ, ನೀರು ಕುಡಿಯುತ್ತೇವೆ. ಮೂತ್ರ ಮಾಡುತ್ತೇವೆ; ಶೌಚ ಮಾಡುತ್ತೇವೆ. ಇವು ಎಷ್ಟು ಸಹಜವೋ ಮುಟ್ಟು ಸಹ ಅಷ್ಟೇ ಸಹಜವಾದುದು. ಬೇರೆ ಎಲ್ಲಾ ದಿನಗಳಲ್ಲೂ ನಿಮ್ಮ ದೈನಂದಿನ ಚಟುವಟಿಕೆ ಏನು ಇರುತ್ತದೋ, ಮುಟ್ಟಿನ ದಿನಗಳಲ್ಲೂ ಅದನ್ನು ಮಾಡಬಹುದು. ಅದರಿಂದ ದೇಹಕ್ಕೆ ಯಾವ ಹಾನಿಯೂ ಇಲ್ಲ’ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ. ಮೇಖಲಾ.

ವ್ಯಾಯಾಮ ಮಾಡಿ

ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ತೋಟದ ಕೆಲಸ, ಗದ್ದೆ ಕೆಲಸ ಎಲ್ಲವನ್ನೂ ಮಾಡುತ್ತಾರೆ. ಪೇಟೆ– ಪಟ್ಟಣಗಳಲ್ಲಿ ಮಹಿಳೆಯರು ಮನೆಗೆಲಸ ಮಾಡಿಕೊಂಡು, ಕಚೇರಿ ಕೆಲಸವನ್ನೂ ಮಾಡಿಕೊಂಡು, ಮಕ್ಕಳನ್ನೂ ನೋಡಿಕೊಳ್ಳುತ್ತಾರೆ. ಆದ್ದರಿಂದ, ಮುಟ್ಟಿನ ದಿನಗಳಲ್ಲಿ ಖಂಡಿತವಾಗಿಯೂ ವ್ಯಾಯಾಮ ಮಾಡಬಹುದು ಎನ್ನುವುದು ತಜ್ಞರ ಅಭಿಮತ. ಹಾಗಾದರೆ, ಮುಟ್ಟಿನ ದಿನಗಳಲ್ಲಿ ಯಾವ ರೀತಿ ವ್ಯಾಯಾಮ ಮಾಡಬಹುದು?

‘ಮುಟ್ಟಿನ ಮೊದಲ ಎರಡು ದಿನಗಳಲ್ಲಿ ಸೊಂಟ ನೋವು, ಕಾಲು ನೋವು, ಹೆಚ್ಚಿಗೆ ರಕ್ತಸ್ರಾವ ಆಗುತ್ತದೆ. ಇದರಿಂದ ಕಿರಿಕಿರಿ ಎನ್ನಿಸಬಹುದು. ಇಂಥ ಸಮಯದಲ್ಲಿ ನಿತ್ಯಕ್ಕಿಂತ ಕಡಿಮೆ ಪ್ರಮಾಣದ ವ್ಯಾಯಾಮ ಮಾಡುವುದು ಒಳಿತು. ಮುಟ್ಟಾದ ದಿನಗಳಲ್ಲಿ ಯೋಗ ಮಾಡಬಾರದು ಎನ್ನುವ ನಂಬಿಕೆ ಸಹ ತಪ್ಪು’ ಎನ್ನುವುದು ಡಾ. ಮೇಖಲಾ ಅವರ ಅಭಿಪ್ರಾಯ.

‘ತಿಂಗಳಿಗೆ ಸರಿಯಾಗಿ ಮುಟ್ಟಾಗದ ಸಮಸ್ಯೆ ಇರಬಹುದು, ಋತುಬಂಧ ಸಮೀಪಿಸಿದಾಗ ಅನಿಯಮಿತವಾಗಿ ಮುಟ್ಟಿನ ತೊಂದರೆ ಇರಬಹುದು. ಈ ಎಲ್ಲಾ ಸಂದರ್ಭದಲ್ಲೂ ಸ್ವಲ್ಪ ಜಾಗರೂಕರಾಗಿ ಕಡಿಮೆ ವ್ಯಾಯಾಮ ಮಾಡುವುದು ಒಳ್ಳೆಯದು. ಮುಟ್ಟಿನ ದಿನಗಳಲ್ಲಿ ವ್ಯಾಯಾಮ ಮಾಡಿದರೆ ತಲೆ ಸುತ್ತುತ್ತದೆ, ದೇಹ ತುಂಬಾ ದುರ್ಬಲ ಆಗುತ್ತದೆ, ಮನೆಯಲ್ಲೇ ಪೂರ್ತಿ ಆರಾಮ ಮಾಡಬೇಕು ಎಂದುಕೊಳ್ಳುವುದು ಸರಿಯಲ್ಲ. ಒಬ್ಬೊಬ್ಬರ ದೇಹ ರಚನೆ ಒಂದು ರೀತಿಯದು. ಈ ರೀತಿಯ ಲಕ್ಷಣ ಕಂಡರೆ ವೈದ್ಯರನ್ನು ಸಂಪರ್ಕಿಸಿ’ ಎಂದು ಡಾ. ಮೇಖಲಾ ಅವರು ಸಲಹೆ ನೀಡುತ್ತಾರೆ.

ಲಾಭಗಳು

ಋತುಸ್ರಾವವಿದ್ದಾಗ ವ್ಯಾಯಾಮ ಮಾಡಿದರೆ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಉದಾಹರಣೆಗೆ ಕಿಬ್ಬೊಟ್ಟೆ ನೋವು, ಸೆಳೆತ, ಖಿನ್ನತೆ, ಭಾವನೆಗಳ ಏರುಪೇರು, ಸುಸ್ತು ಮೊದಲಾದವುಗಳು ಕಡಿಮೆಯಾಗುತ್ತವೆ. ವ್ಯಾಯಾಮದಿಂದ ‘ಫೀಲ್ ಗುಡ್ ಹಾರ್ಮೋನ್’ ಉತ್ಪಾದನೆ ಜಾಸ್ತಿಯಾಗಿ ಖಿನ್ನತೆ ಕಡಿಮೆಯಾಗುತ್ತದೆ. ಹಾಗೆಯೇ ಮುಟ್ಟಿಗೆ ಮುನ್ನದ ಮಾನಸಿಕ ಕಿರಿಕಿರಿ (ಪಿಎಂಎಸ್) ಕೂಡ ಮಾಯವಾಗುತ್ತದೆ. ಕೆಲವು ಬಗೆಯ ಯೋಗಾಸನಗಳಿಂದ ಹೊಟ್ಟೆನೋವು, ಸೆಳೆತ ಕಮ್ಮಿಯಾಗುತ್ತದೆ. ವ್ಯಾಯಾಮದ ನಂತರ ಸ್ನಾನ ಮಾಡುವುದರಿಂದ ದೇಹ, ಮನಸ್ಸಿಗೆ ಉಲ್ಲಾಸವೆನಿಸುತ್ತದೆ.

ಯಾರು ಏನೇ ಹೇಳಿದರೂ, ಕೇಳಿದರೂ ಎಲ್ಲದಕ್ಕಿಂತ ಮುಖ್ಯವಾಗಿದ್ದು ನಿಮ್ಮ ದೇಹ. ನಿಮ್ಮ ದೇಹಕ್ಕೆ ವ್ಯಾಯಾಮ ಬೇಕು ಎನಿಸಿದರೆ ನೀವು ಖಂಡಿತ ಮಾಡಬಹುದು. ಇಲ್ಲ ನೋವಿದೆ, ಕಿರಿಕಿರಿ ಇದೆ, ಇಂದು ವ್ಯಾಯಾಮ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಿಸಿದರೆ ಖಂಡಿತ ಮಾಡಬೇಡಿ. ಮುಟ್ಟಿನ ದಿನಗಳಲ್ಲೂ ಸಹ ನೀವು ಸಹಜ ಜೀವನ ನಡೆಸಬಹುದು. ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬಹುದು.

ಡಾ. ಮೇಖಲಾ, ಪ್ರಸೂತಿ ತಜ್ಞೆ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.