ಲಿಂಗಾಧಾರಿತ ದೌರ್ಜನ್ಯವನ್ನು ವಿರೋಧಿಸುವ ದಿನಾಚರಣೆಯನ್ನು ನವೆಂಬರ್ 25ರಂದು 'ಅಂತರ ರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ'ವನ್ನಾಗಿ ಆಚರಿಸಲಾಗುತ್ತಿದೆ. ಡಿಸೆಂಬರ್ ಹತ್ತರಂದು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುವವರೆಗೂ ಲಿಂಗಾಧಾರಿತ ದೌರ್ಜನ್ಯ ವಿರೋಧಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಇಡೀ ಜಗತ್ತೇ ಕಾರ್ಯೋನ್ಮುಖವಾಗಿರುತ್ತದೆ. ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯೂ ಈ ದಿನಗಳಲ್ಲೇ ಸೇರ್ಪಡೆಯಾಗಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಹಕ್ಕುಗಳಿಗೆ ಒತ್ತುಕೊಡುವ ನಿಟ್ಟಿನಲ್ಲಿ ಶ್ರಮಿಸುವುದು ಈ ದಿನಾಚರಣೆಯ ಮುಖ್ಯ ಧ್ಯೇಯ.

ಹೆಣ್ಣು ವಿದ್ಯಾವಂತಳಾಗಿ, ಆರ್ಥಿಕವಾಗಿ ಸಬಲೆಯಾದರೂ ಭಾವನಾತ್ಮಕವಾಗಿ ಆಕೆಯ ಸ್ಪಂದಿಸುವಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವುದೇ ಹೆಚ್ಚು. ಅಪರಿಚಿತರಿಗಿಂತಲೂ ಹೆತ್ತವರಿಂದ, ಒಡಹುಟ್ಟಿದವರಿಂದ, ಕಟ್ಟಿಕೊಂಡವನಿಂದ, ಆಪ್ತರಿಂದ ಕಡೆಗೆ ಮಕ್ಕಳಿಂದಲೂ ಆಕೆ ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುವುದು ಸಾಮಾನ್ಯ. ಮಹಿಳೆಯ ಮೇಲಿನ ಈ ದೌರ್ಜನ್ಯಕ್ಕೆ ಮಾನದಂಡವಿಲ್ಲ.

ಸಾಮಾನ್ಯವಾಗಿ ಅವಿದ್ಯಾವಂತರಲ್ಲಿ, ಬಡವರಲ್ಲಿ, ಕೆಳ ಕಾರ್ಮಿಕ ವರ್ಗಗಳಲ್ಲಿ ಬೈಗುಳದ ಜೊತೆಗೆ ಹೊಡೆತ ಬಡಿತದಂತಹ ದೈಹಿಕ ದೌರ್ಜನ್ಯ ಹೆಚ್ಚು. ಕುಡಿತದ ಚಟವಿರುವ ಮನೆಗಳಲ್ಲಂತೂ ಬಲಿಪಶುಗಳು ಸದಾ ಹೆಂಗಸರೇ. ಆದರೆ, ಶಾರೀರಿಕವಾಗಿ ಹಿಂಸಿಸುವ ದೌರ್ಜನ್ಯಗಳಿಗಿಂತಲೂ ಭಾವನಾತ್ಮಕ ದೌರ್ಜನ್ಯದ ತೀವ್ರತೆ ಮಹಿಳೆಯನ್ನು ಜರ್ಜರಿತಳನ್ನಾಗಿಸಿ ಮಾನಸಿಕವಾಗಿ ಕುಗ್ಗಿಸಿ ಖಿನ್ನತೆ, ಆತಂಕ, ಭಯಗಳೆಡೆಗೆ ನೂಕಿ ಮೂಕವಾಗಿಸುತ್ತವೆ. ಈ ದೌರ್ಜನ್ಯ ವಿದ್ಯಾವಂತರೆನ್ನಿಸಿಕೊಂಡ ಸುಸಂಸ್ಕೃತರಲ್ಲಿ, ಮಧ್ಯಮ ಹಾಗೂ ಮೇಲ್ವರ್ಗದವರಲ್ಲಿಯೇ ಹೆಚ್ಚು. ವಿದ್ಯಾವಂತ ಹೆಣ್ಣು ಸ್ವಭಾವತಃ ಸೂಕ್ಷ್ಮ ಸಂವೇದಿಯಾದ ಕಾರಣ ಮರ್ಯಾದೆಗೆ ಅಂಜಿ, ಅವುಡುಗಚ್ಚಿ ಸಹಿಸಿಕೊಳ್ಳಲೇಬೇಕಾದ ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳುತ್ತಾಳೆ.

ಈ ದೌರ್ಜನ್ಯಗಳನ್ನು ಶಾರೀರಿಕ, ಲೈಂಗಿಕ, ಮಾನಸಿಕ, ಭಾವನಾತ್ಮಕ, ಸಾಂಪ್ರದಾಯಿಕ ದೌರ್ಜನ್ಯಗಳಾಗಿ ವಿಂಗಡಿಸಬಹುದು. ಹೆಣ್ಣಿನ ಇಷ್ಟಾನಿಷ್ಟಗಳಿಗೆ ಬೆಲೆಕೊಡದೇ ಆಕೆಯ ಮೇಲೆ ಕಟ್ಟುಪಾಡುಗಳನ್ನು ಹೇರುವುದು; ಸಂಶಯಿಸುವುದು; ಕಟುವಾಗಿ ಟೀಕಿಸುವುದು; ಅವಹೇಳನ ಮಾಡುತ್ತಾ ಹೀಗಳೆಯುವುದು; ಅಶ್ಲೀಲ ಪದ ಬಳಕೆ; ಅಸಹ್ಯ ಹಾವಭಾವ; ಕಿರಿಕಿರಿಗೊಳಿಸುವ ಮೆಸೇಜುಗಳ ಮೂಲಕ ಲೈಂಗಿಕವಾಗಿ ಶೋಷಿಸುವುದು; ಆಕೆಯ ಅವಶ್ಯಕತೆಗಳನ್ನು ಕಡೆಗಣಿಸಿ ಆರ್ಥಿಕವಾಗಿಯೂ ಆಕೆಯನ್ನು ಅತಿಯಾಗಿ ಮಿತಿಗೊಳಿಸುವುದು; ಅಭಿಪ್ರಾಯಗಳನ್ನು ಆಕೆಯ ಮೇಲೆ ಬಲವಂತವಾಗಿ ಹೇರುವುದು; ಕೆಲಸಕ್ಕೆ ಸೇರುವ ಅಥವಾ ಹೋಗುವ ಅವಕಾಶಕ್ಕೆ ವಿರೋಧ ತೋರುವುದು; ಆಕೆಯ ಆಪ್ತರು, ಕುಟುಂಬವರ್ಗದವರೊಡನೆ ಬೆರೆಯದಂತೆ ನಿರ್ಬಂಧಿಸುವುದು; ಹೊಡೆತ-ಬಡಿತ- ಜರೆತದಿಂದಲೋ ಅಥವಾ ಇವ್ಯಾವುದೂ ಇಲ್ಲದೇ ಆಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮೌನವಹಿಸಿ ಕಡೆಗಣಿಸುವುದೂ ಕೂಡ ಭಾವನಾತ್ಮಕ ದೌರ್ಜನ್ಯದ ಒಂದು ಮುಖವೆನ್ನಬಹುದು. ಉಡುಗೆ ತೊಡುಗೆ, ನಿಲುವು, ಬಣ್ಣ, ಹಾವಭಾವ ಮುಂತಾದರ ಕುರಿತು ಬಾಡಿ ಶೇಮಿಂಗ್ ಮಾಡುತ್ತಾ ಸದಾ ಟೀಕಿಸುತ್ತಿದ್ದರೆ ಆತ್ಮವಿಶ್ವಾಸವೇ ಕುಗ್ಗಿ ಕೀಳರಿಮೆಯಿಂದ ನರಳುವುದರ ಜೊತೆಗೆ ಸ್ವಂತಿಕೆಯ ವ್ಯಕ್ತಿತ್ವ ಖಂಡಿತವಾಗಿಯೂ ಧಕ್ಕೆಗೊಳ್ಳುತ್ತದೆ.

ಇನ್ನು ಕೆಲ ದಿಟ್ಟ ಮಹಿಳೆಯರು ಬೇಡದ ಸಂಬಂಧಗಳಿಂದ ಹೊರಬಂದು ಸ್ವತಂತ್ರ ಜೀವನ ಕಟ್ಟಿಕೊಳ್ಳುವ ಯತ್ನದಲ್ಲಿದ್ದಾಗಲೋ ಅಥವಾ ನಂತರದ ಸ್ವಾವಲಂಬಿ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಯಾವುದೋ ಒಂದು ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುವುದು ಕಟುವಾಸ್ತವವೇ ಹೌದು. ಕಚೇರಿಗಳಲ್ಲಿ, ಸಮಾಜದಲ್ಲಿ, ಮನೆಯಲ್ಲಿ ಆಕೆಯ ಬುದ್ಧಿಮತ್ತೆಯನ್ನು; ತನಗಿಂತಲೂ ಮೇಲೇರುವಿಕೆಯನ್ನು ಸುಲಭದಲ್ಲಿ ಒಪ್ಪಿಕೊಳ್ಳದ ಪುರುಷ ಪ್ರಧಾನ ವ್ಯವಸ್ಥೆ, ಯಾವುದಾದರೂ ಒಂದು ನೆಪದಲ್ಲಿ ಆತ್ಮಸ್ಥೈರ್ಯ ಕುಗ್ಗಿಸುವ ಹೀನ ಕೃತ್ಯಗಳಲ್ಲಿ ತೊಡಗುವುದು ದೌರ್ಜನ್ಯದ ಪರಮಾವಧಿಯೇ ಸರಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಮಗಳನ್ನೋ, ಅಕ್ಕ ತಂಗಿಯರನ್ನೋ ನಯವಾಗಿ ವಂಚಿಸಿ ಹತ್ಯೆಗೈಯುವ ಹೀನಾತಿಹೀನ ದೌರ್ಜನ್ಯವೆಂದರೆ ಅದು ಮರ್ಯಾದೆಗೇಡು ಹತ್ಯೆ! ಜಾತಿ, ಧರ್ಮವೆಂದು ಬಡಿದಾಡುವ ಧರ್ಮಾಂಧರೇ ಈ ಭೀಭತ್ಸ ಕೃತ್ಯಕ್ಕೆ ಸೂತ್ರಧಾರಿ.
.ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ: ನಿಲ್ಲದ ದೌರ್ಜನ್ಯ.
ಹೆಣ್ಣು ತಾನು ದೌರ್ಜನ್ಯಕ್ಕೀಡಾದಾಗ ಅದರ ಪರಿಣಾಮವನ್ನು ಅಸಹಾಯಕ ಮಕ್ಕಳ ಮೇಲೆ ತೋರಿಸುವುದು; ನಂತರದಲ್ಲಿ ಅವೂ ಕೂಡ ಹಿಂಸಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಘಾತಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು... ಹೀಗೆ ದೌರ್ಜನ್ಯವೆಂಬ ವಿಷವರ್ತುಲದ ಸುಳಿ ಆಳವಾಗುತ್ತಲೇ ಹೋಗುತ್ತದೆ. ಮಹಿಳೆಯರು ಮೌನವಹಿಸಿ ಸಹಿಸಿಕೊಂಡು ಕಾಲಕ್ರಮೇಣ ದೌರ್ಜನ್ಯವೂ ನಿಲ್ಲುತ್ತದೆ ಎಂಬ ತಪ್ಪು ತಿಳಿವಳಿಕೆಯಿಂದ ಹೊರಬರಲೇಬೇಕಿದೆ ಮತ್ತು ದೌರ್ಜನ್ಯವನ್ನು ವಿರೋಧಿಸುವ ಮೂಲಕ ಎಚ್ಚೆತ್ತುಕೊಳ್ಳಬೇಕಿದೆ. ಹಾಗಲ್ಲದೇ ಮೌನವಾಗಿ ಸಹಿಸಿಕೊಂಡರೆ ದೌರ್ಜನ್ಯ ದೌರ್ಜನ್ಯವನ್ನೇ ಹುಟ್ಟು ಹಾಕುತ್ತದೆ.

ತನಗಾದ ಶೋಷಣೆ, ಅನ್ಯಾಯವನ್ನು ಮರೆಯಲು ಅಥವಾ ಎದುರಿಸಲು ಮಾದಕ ದ್ರವ್ಯ, ಧೂಮಪಾನ, ಮದಿರೆಯಂತಹ ವ್ಯಸನಗಳ ಮೊರೆಹೋಗುವುದು ಖಂಡಿತ ಸಲ್ಲದು. ಕಾನೂನನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು; ತನಗಾಗಿಯೇ ಸ್ವಲ್ಪ ಸಮಯವನ್ನು ಮೀಸಲಿಡಬೇಕು; ಇಷ್ಟವಾದ ಹವ್ಯಾಸದಲ್ಲಿ ತೊಡಗಿಕೊಂಡಲ್ಲಿ ಸಂಕೀರ್ಣ ಮನೋಭಾವದಿಂದ ಮುಕ್ತರಾಗಬಹುದು; ಆಸ್ಪದವಿದ್ದಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗುವುದು ಒಳ್ಳೆಯದು. ಸೂಕ್ಷ್ಮ ಸಂವೇದಿಯಾಗದೇ ‘ಇಲ್ಲ’ ‘ಬೇಡ’ ‘ಇಷ್ಟವಿಲ್ಲ’ ಎಂಬಂತಹ ಸರಳ ಪದಗಳ ಪ್ರಯೋಗವನ್ನು ಸಕಾಲಕ್ಕೆ ನಿಸ್ಸಂಕೋಚದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು. ಹಾಗೆಂದು ದೌರ್ಜನ್ಯದ ಹಣೆಪಟ್ಟಿ ಅಂಟಿಸಿ ಕಾನೂನಿನ ಸವಲತ್ತು, ಕಲಿತ ವಿದ್ಯೆ, ಹಣವನ್ನು ದುರುಪಯೋಗಪಡಿಸಿಕೊಂಡಲ್ಲಿ ನಷ್ಟ ಯಾರಿಗೆ? ನಾನು ಹೆಣ್ಣು, ನನಗೇನು ಮಾಡಿದರೂ ಅಂದರೂ ಅಪಾರ್ಥವನ್ನೇ ಕಲ್ಪಿಸಿಕೊಂಡು ದೌರ್ಜನ್ಯವೆಂದು ಬೊಬ್ಬಿಡುತ್ತಾ ಸಿಡಿದೆದ್ದಲ್ಲಿ ಸುಂದರ ಜೀವನವನ್ನು ಕೈಯಾರೇ ಹಾಳುಮಾಡಿಕೊಳ್ಳುವುದಲ್ಲದೇ ಅಪಹಾಸ್ಯಕ್ಕೀಡಾಗುವುದು ಖಂಡಿತ.

ಇನ್ನು ವಿಶ್ವಸಂಸ್ಥೆಯಿಂದ 1999ರ ನವೆಂಬರ್ 25ರಂದು ಪ್ರಾರಂಭಿಸಲಾದ ಈ ಆಚರಣೆ ಬರೀ ಒಂದು ದಿನದ ಘೋಷಣೆಗಳಿಗೆ ಮಾತ್ರ ಸೀಮಿತಗೊಳ್ಳದೆ ಹೆಣ್ಣಿನಲ್ಲಿ ಜಾಗೃತಿ ಮೂಡಿಸುವಂತಿರಬೇಕು.

ಶೋಷಣೆ, ದೌರ್ಜನ್ಯದ ಕುರಿತಾಗಿ ಅರಿವು ಮೂಡಿಸಿ ಸಂದರ್ಭ ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು, ಹೇಗೆ ನಿಭಾಯಿಸಬೇಕೆಂಬುದರ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶ್ರಮಿಸಿದಾಗ ಮಾತ್ರ ಅದಕ್ಕೊಂದು ಅರ್ಥ, ಆಚರಣೆಯೂ ಸಾರ್ಥಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.