ಮೈ ಅಮ್ಮಾ ಕೊ ಖುಷ್ ರಖನೆ ಪೈದಾ ಹುವಿ ಹೂಂ (ನಾ ಅಮ್ಮಗ ಖುಷಿಯಿಂದಿರಿಸಾಕ ಹುಟ್ಟೇನಿ) ಹಿಂಗ ಅರ್ನಿ ನನ್ನ ಸಲ್ಯಾಗ ಮೂರು ವರ್ಷಗಳ ಹಿಂದ ಹಾಡು ಕಟ್ಟಿ ಹಾಡಿದ್ಲು. ಭೂಮಿ, ನಾ ಹಾಡೂದಿಲ್ಲ. ಆದ್ರ ಖುಷಿಯಾಗಿಟ್ಟಿರ್ತೀನಿ ಅಂದಿದ್ಲು. ಭೂಮಿ ಹುಟ್ಟಿದಾಗಲೇ ನನ್ನೊಳಗೂ ಒಬ್ಬ ಅಮ್ಮ ಹುಟ್ಟಿದ್ಲು.

ಅಲ್ಲೀತನಾನೂ ಅಮ್ಮ, ಮೊಮ್ಮಾ, ದೊಡ್ಡಮ್ಮ, ಚಿಕ್ಕಮ್ಮ ಈ ನಾಲ್ಕು ಜನರ ಅಂತಃಕರುಣೆ ಉಂಡು ಬೆಳದಿದ್ದು ನನಗ ನೋಡಾಕ ಸಿಕ್ಕ ಭಾವಗಳು ಹಲವು. ಅಮ್ಮನ ಕಾಳಜಿ, ಮೊಮ್ಮಾನ ವಾತ್ಸಲ್ಯ, ದೊಡ್ಡಮ್ಮನಿಂದ ಸಂಸ್ಕಾರ, ಚಿಕ್ಕಮ್ಮನಿಂದ ಅಂತಃಕರುಣೆ.

ನಮ್ಮೆಲ್ಲಾರ ಬದುಕಿನಾಗೂ ಹಿಂಗ ಜೈವಿಕ ಅಮ್ಮ ಬಿಟ್ರ, ಭೌತಿಕ, ಬೌದ್ಧಿಕ, ಆಧ್ಯಾತ್ಮಿಕವಾಗಿ ಹಲವಾರು ತಾಯಂದಿರು ಇದ್ದೇ ಇರ್ತಾರ. ನಮ್ಮ ವಿಭಿನ್ನ ವ್ಯಕ್ತಿತ್ವವನ್ನು ಹುಟ್ಟುಹಾಕಿರ್ತಾರ. ಆದ್ರ ಇವರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು ಹಂಗ ಕೃತಜ್ಞರದೀವಿ ಅನ್ನೂದನ್ನು ಅಭಿವ್ಯಕ್ತಿ ಪಡಿಸಬೇಕು. ಅವರೊಳಗೊಂದು ಆನಂದದ ಲಹರಿ ಹುಟ್ಟಿ, ಅದು ಮಾನಸ ಸರೋವರದಿಂದ ಒಂದೆರಡು ಕಂಬನಿಯ ಪಸೆ ಕಣ್ತುಂಬುವಂತೆ ಮಾಡಬೇಕು. ಆ ಕಣ್ಣಪಸೆಗೆ ಮುಗುಳ್ನಗೆಯ ಮೆರುಗೂ ಮೂಡಿಸಿರಬೇಕು.

ತಾಯ್ತನದ ಯಾನ ಒಂಬತ್ತು ತಿಂಗಳದ್ದು. ಆದ್ರ ತಾಯ್ತನ ಹೊತ್ತು ಹೆತ್ತವರ ಸ್ವತ್ತು ಮಾತ್ರ ಅಲ್ಲ. ಗರ್ಭಿಣಿಯಾದಾಗ ತಾಯ್ತನದ ಒತ್ತಡ ಶುರುವಾಗಿರ್ತದ. ಮೊದಲು ನಮ್ಮ ವ್ಯಕ್ತಿತ್ವದೊಳಗ ಗೊಂದಲಗಳು ಹುಟ್ತಾವ. ಕಿರಿಕಿರಿಯಾಗ್ತಿರ್ತದ. ದೇಹದ ಆಕಾರ, ಗಾತ್ರ, ತೂಕ ಎಲ್ಲಾ ಬದಲಾಗ್ತಿರ್ತದ. ಅಲ್ಲೀತನಾನೂ ನಮ್ಮ ಗುರುತಾಗಿದ್ದ ಕೃಷಾಂಗಿ, ಸಿಂಹಕಟಿ, ಕೃಷ್ಣವೇಣಿ, ಎಲ್ಲವೂ ಬದಲಾವಣೆ ಜಗದ ನಿಯಮ ಅನ್ನೂಹಂಗ ಬದಲಾಗ್ತಿರ್ತಾವ.

ಮಗು ಒಳಮೂಡುವ, ಹೊರುವ ಸುಖವನ್ನು ವಿಜೃಂಭಿಸಿರುವಷ್ಟೇ ಕಕ್ಕುಲಾತಿಯಿಂದ ಆ ದಿನಗಳ ಗೊಂದಲ, ಒತ್ತಡಗಳನ್ನು ಯಾರೂ ಹೇಳುವುದಿಲ್ಲ. ಆದು ಹೊಸ ತಾಯಂದಿರ ಅನುಭವದ ಬುತ್ತಿಯೇ ಆಗಿರುತ್ತದೆ. ಇನ್ನು ಹೆತ್ತ ಮೇಲಿನ ಒತ್ತಡಗಳಂತೂ ಬ್ಯಾರೇನ ಇರ್ತಾವ. ಕೆಲಸ ಮಾಡುವ ತಾಯಂದಿರಾಗಿದ್ರಂತೂ ಇಡೀ ಕುಟುಂಬನೆ ಬೆಂಬಲಕ್ಕ ನಿಲ್ಲಬೇಕು. ಇಲ್ಲಾಂದ್ರ ಮಗುವಿನ ತ್ಯಾಗ, ಅಮ್ಮನ ಬಲಿದಾನ ಇವೆರಡರ ಸಂಘರ್ಷದೊಳಗ ಅಮ್ಮನೊಳಗೊಂದು ಅಪರಾಧಿ ಭಾವ ಸ್ಥಾಯಿ ಆಗ್ತದ.

ಅಮ್ಮ ಅಂದ್ಕೂಡಲೆ ನಾವು ಹೇಳುದು, ಮಮತೆಯ ಮಡಿಲು, ಕಡಲು, ಕ್ಷಮಯಾಧರಿತ್ರಿ, ಪ್ರೀತಿಯ ಅಕ್ಷಯ ಪಾತ್ರಿ.. ಹಿಂಗ ಏನೆಲ್ಲ ಹೇಳ್ಕೊಂತ, ಬಾರಾಖೂನ್ ಮಾಫ್ ಮಾಡುವ ಒತ್ತಡ ಸೃಷ್ಟಿಸಿಯೇ ಬಿಡ್ತೀವಿ. ಅದರೊಳಗೂ ನಮ್ಮ ಗಾದೆಮಾತುಗಳೂ ಹಂಗೆನೆ, ಅಂಗಾಲಿಗೆ ಹೇಸಿಗಿ ಇಲ್ಲ, ಕರುಳಿಗೆ ನಾಚಿಕಿ ಇಲ್ಲ.. ಅಂತೆಲ್ಲ ಹೇಳ್ತಾವ. ಸದ್ಯಕ್ಕ ನಾವು ನಮ್ಮಮ್ಮನ್ನ, ನಮ್ಮನ್ನ ಇಂಥ ಚೌಕಟ್ಟಿನಿಂದಾಚೆ ತರಬೇಕಾಗೇದ. ಅಮ್ಮ ಅಂದ್ರ ದೇವತೆಯಲ್ಲ, ನಮ್ಹಂಗ ಒಂದು ಜೀವ. ಕಷ್ಟ ಸುಖ ಉಂಡು, ಸುಖವನ್ನೇ ತೋರಿದ ಜೀವ. ಮುನಿಸು ನುಂಗಿ, ಮುಗುಳು ತೋರಿದ ಜೀವ. ಅದಕ್ಕ ಹಿಂಗ ವರ್ಷಕ್ಕ ಒಮ್ಮೆ ಒಂದಷ್ಟು ಹೂ, ಒಂದಷ್ಟು ಉಡುಗೊರೆ ಕೊಟ್ರ ನಮ್ಮ ಋಣ ತೀರಿಸಿದ್ಹಂಗ ಆಯ್ತೇನು?

ಇಷ್ಟಕ್ಕೂ ಈ ಋಣ ಸಂದಾಯದ ಹಿಂದ ಒಂದು ಕೊಳ್ಳುಬಾಕುತನ ಬೆಳೆಸುವ ಹುನ್ನಾರನೇ ಐತಿ. ಬಂಗಾರ ತೊಗೊರಿ, ವಜ್ರ ಕೊಡ್ರಿ, ಪ್ರಯಾಣಕ್ಕ ಕರಕೊಂಡು ಹೋಗ್ರಿ, ಉಡುಸ್ರಿ, ತೊಡಸ್ರಿ, ಚಂದಗಾಣಸ್ರಿ, ಉಣಸ್ರಿ, ಕೆಲಸಕ್ಕ ಅನುವು ಆಗುಹಂಗ ವಾಷಿಂಗ್ ಮಷಿನ್ ಕೊಡಸ್ರಿ, ಕೆಲಸ ಮುಗಿಸಿ ಹೈರಾಣಾಗಿದ್ರ ಮಲಗಾಕ ಒಂದು ಮೆತ್ತನೆಯ ಗಾದಿ ಕೊಡಸ್ರಿ.. ಹಿಂಗ ಕೊಡಸ್ರಿ... ಕೊಡಸ್ರಿ... ಕೊಡಸ್ರಿ.. ಒಟ್ನಾಗ ಖರ್ಚು ಮಾಡ್ರಿ ಅಂತ ಜಾಹೀರಾತು ಹೇಳ್ತಾವ. ಪ್ರೀತಿ ಜಾಹೀರು ಮಾಡಾಕ ಹಿಂಗ ಕೊಡು ಕೊಳ್ಳುವಿಕೆ ಇರಬೇಕು. ಖರೆ, ಇವೆಲ್ಲ ಕೊಡಸೂದ್ರಿಂದ ಅಮ್ಮನ ಋಣ ಸಂದಾಯ ಸಾಧ್ಯ ಆಗ್ತದೇನು? ಮತ್ತ ಏನು ಮಾಡ್ಬೇಕು?

ಅಮ್ಮನ ಇಷ್ಟಾನಿಷ್ಟಗಳನ್ನು ಅರಿಯೂದು ಅದ ಅಲ್ಲ, ಅದೊಂದು ಅದ್ಭುತ ಯಾನ. ಯಾವಾಗ ಅಕಿನ್ನ ಕಣ್ಣಾಗ ಮಿಂಚು ಮೂಡ್ತದ, ಮಳಿ ಬರ್ತದ ಅನ್ನೂದು ಗೊತ್ತಿರಬೇಕು. ನಮ್ಮನ್ನ ನಾವು ಸಮಾಧಾನದಾಗ ಇರಿಸಿಕೊಂಡು, ಸಂತೋಷದಿಂದ ಬದುಕೂದು ಕಲೀಬೇಕು. ಅವಾಗ ತಾಯಿ ಹೊಟ್ಟಿ ತಣ್ಣಗ ಇರ್ತದ. ಅಷ್ಟೇ ಅಲ್ಲ, ಹಂಗೇ ಅವರೂ ಸಮಾಧಾನದಿಂದ ಇರೂಹಂಗ, ಬದುಕು ಆನಂದಿಸುವಂಥ ವಾತಾವರಣ ಸೃಷ್ಟಿಸಬೇಕು.

ಮಾತು ಬರುವ ಮೊದಲು, ನಮ್ಮ ನಗಿ, ನಮ್ಮ ಅಳು, ನಮ್ಮ ಹಸಿವು, ನಮ್ಮ ಹೊಲಸು ಎಲ್ಲವೂ ಆಪ್ತ ಆಗಿರ್ತದ. ದೊಡ್ಡವರಾದ್ಹಂಗ ಆದಂಗ, ಅವರಿಗೆ ನಮ್ಮಿಂದ ನಿರೀಕ್ಷೆಗಳೇ ಬದಲಾಗ್ತಿರ್ತಾವ. ಕೆಲವೊಮ್ಮೆ ನಮ್ಮನ್ನ ನೇಪಥ್ಯಕ್ಕ ತಳ್ಳಿ ತಮ್ಮ ನಿರೀಕ್ಷೆಗಳನ್ನೇ ಪ್ರೀತಿಸುವಷ್ಟು ಅತಿರೇಕನೂ ಕಾಣ್ತದ. ಅದಕ್ಕೇ ಅವರನ್ನು ಅರ್ಥ ಮಾಡಿಕೊಳ್ಳುವ ಯಾನದೊಳಗ ನಾವು ತೊಡಗಿಸಿಕೊಳ್ಳಬೇಕು. ಅಮ್ಮ ಮತ್ತು ಮಕ್ಕಳ ನಡುವೆ ಯಾವಾಗಲೂ ಒಂದು ತಲೆಮಾರಿನ ಅಂತರ ಇರ್ತದ. ತಾನು ಖರೆ ಅನ್ನೂದು ಅವ್ವನ ವಾದ ಆದ್ರ, ತಾನೇ ಖರೆ ಅನ್ನೂದು ಮಕ್ಕಳ ಮಾತಾಗಿರ್ತದ. ಇವೆರಡರ ನಡುವಿನ ಸಂಘರ್ಷ ಕಡಿಮಿಯಾಗಿಸೂದು, ಅವರೊಂದಿಗೆ ಸಮಯ ಕಳಿಯೂದು, ಕರೆಮಾಡಿ ಮಾತಾಡೂದು, ವಿಡಿಯೊ ಕಾಲ್ನಾಗ ಪರಸ್ಪರ ನೋಡೂದು, ಏನರೆ ಹೇಳೂಮುಂದ ಸಂಯಮದಿಂದ ಕೇಳೂದು.. ಇವೆಲ್ಲ ಬಹುಶಃ ನಾವು ಕೊಡಿಸುವ ಬಂಗಾರ, ವಜ್ರಕ್ಕಿಂತಲೂ ಹೆಚ್ಚಿನ ಸಂತೋಷ ನೀಡ್ತಾವ. ಆದ್ರ ಅವು ಬ್ಯಾಡಂತಲ್ಲ. ಅವೂ ಬೇಕು. ಅಮ್ಮನ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಇವೆಲ್ಲ ಇಂಥ ಉಡುಗೊರೆ ಕೊಡಾಕಂತ ಇರುವ ಸಂದರ್ಭಗಳು.

ಜಗತ್ತಿನ ಎಲ್ಲ ಸಂಪತ್ತಿರುವಾಗಲೂ ಮಕ್ಕಳು ಸಣ್ಣೋರಿದ್ದಾಗ, ಚಿತ್ರ ಬರೆದು, ಕ್ರೆಯಾನ್ಸ್ನಿಂದ ಬಣ್ಣ ತುಂಬಿ ಮಾಡಿ ಕೊಡುವ ಕಾರ್ಡ್ನಿಂದ, ನಾವು ಅವರ ಮಡಿಲಿಗೆ ಇಡುವ ಪುಟ್ಟ ಮಕ್ಕಳವರೆಗೂ ಎಲ್ಲವನ್ನೂ ಆನಂದಿಸುವ ಸ್ಥಿತಿ, ಅವರೊಳಗ ಚಿರಸ್ಥಾಯಿ ಆಗಿರ್ತದ. ಇದು ಉಡುಗೊರೆ ಕೊಡುವ ದಿನ. ಉಡುಗೊರೆಯಾಗಿ, ಅಮ್ಮಾಗ ಖುಷಿಯಿಂದಿರಿಸಾಕ ನಮ್ಮ ಹುಟ್ಟು ಅನ್ನೂದು ಇಡೀ ಜೀವನಯಾನ ಆಗಬೇಕು. ಅದಕ್ಕ, ಅಮ್ಮನ ಹಿಂದಿರುವ ಒಂದು ಜೀವದ ಇಷ್ಟಾನಿಷ್ಟಗಳನ್ನೂ ಗೌರವಿಸುವ, ಗಮನಿಸುವ ಅಂತಃಕರುಣೆಯನ್ನು, ಅದೇ ತಾಯ್ತನವನ್ನ ನಾವೂ ಬೆಳಸ್ಕೊಬೇಕು. ಅದೇ ಅವರಿಗೆ ಕೊಡುವ ಉಡುಗೊರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.