ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏನಾದ್ರೂ ಕೇಳ್ಬೋದು ಅಂಕಣ: ಮಹಿಳೆಯರು ‘ಒಳ್ಳೆಯ’ ಸ್ವಾರ್ಥಿಗಳಾಗಬೇಕು!

Published : 29 ಡಿಸೆಂಬರ್ 2023, 22:55 IST
Last Updated : 29 ಡಿಸೆಂಬರ್ 2023, 22:55 IST
ಫಾಲೋ ಮಾಡಿ
Comments
ಪ್ರ

ನಾನೊಬ್ಬ ಗೃಹಿಣಿ. ಗಂಡ, ಮನೆ, ಅತ್ತೆ ಮಾವ, ಅಕ್ಕ ಭಾವ, ಅಪ್ಪ ಅಮ್ಮ ಎಂದು ನಮ್ಮವರಿಗಾಗಿಯೇ ದುಡಿದ ಗೃಹಿಣಿ. ಎಲ್ಲರೂ ನಮ್ಮವರೇ ಎಂದುಕೊಂಡು ಮೋಸ ಹೋಗಿದ್ದೇನೆ. ನನ್ನಿಂದ ಲಾಭ ಪಡೆದವರೆಲ್ಲ ಹಿಂದಿನಿಂದ ಆಡಿಕೊಂಡು ನಗುವ ಮಾರಿಗಳು ಎನಿಸಿವೆ. ಸ್ವಲ್ಪವಾದರೂ ಸ್ವಾರ್ಥ ಬೆಳೆಸಿಕೊಳ್ಳಬೇಕು ಎಂದರೂ ಆಗುತ್ತಿಲ್ಲ. ಸ್ವಾರ್ಥ ಬೆಳೆಸಿಕೊಳ್ಳುವುದು ಹೇಗೆ ಎಂದು ಹೇಳುವಿರಾ ಸರ್?

ADVERTISEMENT

ನಿಮ್ಮ ಪ್ರಶ್ನೆ ಮೇಲುನೋಟಕ್ಕೆ ಹಾಸ್ಯಸ್ಪದ ಎನ್ನಿಸಿದರೂ ಬಹಳ ಅರ್ಥವತ್ತಾಗಿದೆ. ಪತ್ರದಲ್ಲಿ ನಿಮ್ಮ ವ್ಯಕ್ತಿತ್ವ ಸ್ವಂತಿಕೆಯನ್ನು ಕಳೆದುಕೊಂಡು ಮೋಸಹೋದ ನೋವಿದೆ. ‘ಮಾರಿಗಳು’ ಎಂದು ಕರೆಯುವಾಗ ಸುತ್ತಲಿನವರ ಕುರಿತು ಆಕ್ರೋಶವೂ ಇದೆ. ಬಹಳ ಒಳ್ಳೆಯವರು ಎಂದು ಎಲ್ಲರೂ ಹೊಗಳುವ ಸಾಕಷ್ಟು ಜನರ ನೋವು, ಆಕ್ರೋಶಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಹಳಷ್ಟು ಮಹಿಳೆಯರ ಮನದಾಳದ ಬಯಕೆ ನಿಮ್ಮ ಪತ್ರದಲ್ಲಿದೆ.

ನಿಮ್ಮ ನೋವು ಆಕ್ರೋಶಗಳ ಮೂಲ ಎಲ್ಲಿರಬಹುದು? ಪ್ರಕೃತಿ ನಿಯಮದಂತೆ ಎಲ್ಲಾ ಸಂಬಂಧಗಳ ನಡುವೆ ಗಡಿರೇಖೆಗಳಿರಲೇಬೇಕು. ಆತ್ಮೀಯ ಸಂಬಂಧಗಳಲ್ಲಿಯೂ ಇವುಗಳು ಅತ್ಯಗತ್ಯ. ನಮ್ಮ ವ್ಯಕ್ತಿತ್ವದ ಗಡಿಯೊಳಗೆ ಎಲ್ಲರೂ ನುಸುಳಿ ನಮ್ಮ ಇಚ್ಚೆಗೆ ವಿರುದ್ಧವಾಗಿ ತಮಗೆ ಬೇಕಾಗಿರುವುದನ್ನು ಪಡೆಯಲು ಸಾಧ್ಯವಾದಾಗ ನಮಗೆ ಸ್ವಂತಿಕೆ ಕಳೆದುಕೊಂಡ ಅನುಭವವಾಗುತ್ತದೆ. ಎಲ್ಲರೂ ನಮ್ಮನ್ನು ಬಳಸಿ ಬಿಸಾಕುತ್ತಿದ್ದಾರೆ ಎನ್ನಿಸಿದಾಗ ನೋವು ಕೋಪಗಳು ಸಹಜ. ನಮ್ಮ ದೇಹ ಮನಸ್ಸುಗಳನ್ನು ತೊಡಗಿಸಲಾಗದ ಸಂಬಂಧಗಳು ಅರ್ಥಹೀನ ಎನ್ನಿಸುತ್ತದೆ.

ನಮ್ಮ ವ್ಯಕ್ತಿತ್ವದ ಗಡಿರೇಖೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ಮೊದಲು ಕಲಿಯಬೇಕಾಗಿರುವುದು ‘ಇಲ್ಲ’ ಎಂದು ಹೇಳುವುದನ್ನು. ನಮಗೆ ಆಸಕ್ತಿಯಿರದ, ಹಿತವೆನ್ನಿಸಿದ ಎಲ್ಲಾ ಮಾತು ಕ್ರಿಯೆಗಳಿಗೆ ‘ಇಲ್ಲ’ ಎಂದು ಹೇಳಿ ತಡೆಯೊಡ್ಡುವುದನ್ನು ಅಭ್ಯಾಸಮಾಡಬೇಕು. ಅನಿವಾರ್ಯದ ಪ್ರಸಂಗಗಳಲ್ಲಿ ಕೆಲವೊಮ್ಮೆ ಮಾಡಲೇಬೇಕಾಗಿದ್ದರೂ ನಮ್ಮ ಪ್ರತಿಭಟನೆಯನ್ನು ವಿನಯದಿಂದ ಆದರೆ ಸ್ಪಷ್ಟವಾಗಿ ಹೇಳಲೇಬೇಕು. ಉದಾಹರಣೆಗೆ ನಿಮಗೆ ಮಾಡಲು ಇಷ್ಟವಿರದ ಕೆಲಸಗಳಿಗೆ ಬೇಡಿಕೆ ಬಂದಾಗ, ‘ಕ್ಷಮಿಸಿ ನನ್ನ ಈಗಿನ ಪರಿಸ್ಥಿತಿಯಲ್ಲಿ ಇದನ್ನು ನಾನು ಮಾಡಲಾರೆ’ ಎಂದು ಧೃಡವಾಗಿ ಹೇಳಬೇಕು. ಹೀಗೆ ಹೇಳಲು ಸಿಟ್ಟು, ದೂಷಣೆ, ಕೆಟ್ಟ ಮಾತು ಅಥವಾ ವರ್ತನೆಗಳನ್ನು ಬಳಸದಂತೆ ಎಚ್ಚರವಹಿಸಬೇಕು.

ಇದರ ಇನ್ನೊಂದು ಮುಖವೇನೆಂದರೆ ನಮ್ಮ ಅಗತ್ಯಗಳನ್ನು ಬೇರೆಯವರೆದುರು ಸ್ಪಷ್ಟವಾಗಿ ವ್ಯಕ್ತಪಡಿಸಲು ಹಿಂಜರಿಯಬಾರದು. ಹೀಗೆ ‘ಇಲ್ಲ ಮತ್ತು ಬೇಡ’ ಹಾಗೂ ‘ಹೌದು ಮತ್ತು ಬೇಕು’ ಎರಡನ್ನು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ವ್ಯಕ್ತಪಡಿಸುವುದನ್ನು ಕಲಿಯಬೇಕು. ಇದರಿಂದ ತಾತ್ಕಾಲಿಕವಾಗಿ ಸಂಬಂಧಗಳು ಬಿರುಕು ಬಿಡಬಹುದು. ಆದರೆ ನಿಮ್ಮ ಧೃಢತೆ ಮತ್ತು ಘನತೆಯನ್ನು ನಿಧಾನವಾಗಿ ಇತರರು ಗುರುತಿಸಲೇಬೇಕಾಗುತ್ತದೆ. ಅಲ್ಲಿಯವರೆಗೆ ಸಹನೆ ಕಳೆದುಕೊಂಡು ಮಾತು ವರ್ತನೆಗಳ ಹಿಡಿತ ಕಳೆದುಕೊಳ್ಳಬಾರದು.

ಪುರುಷಪ್ರಧಾನ ವ್ಯವಸ್ಥೆಯ ಕಲಿಕೆಗಳಿಂದಾಗಿ ಮಹಿಳೆಯರಿಗೆ ತಮ್ಮ ಬೇಕು ಬೇಡಗಳನ್ನು ವ್ಯಕ್ತಪಡಿಸುವುದು ಹೆಚ್ಚು ಕಷ್ಟವಾಗುತ್ತದೆ. ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ತಗ್ಗಿಬಗ್ಗಿ ನಡೆಯುವುದರ ಮತ್ತು ಹೊಂದಿಕೊಂಡು ಹೋಗುವುದರ ವಿಶೇಷ ತರಬೇತಿ ನೀಡಲಾಗುತ್ತದೆ. ಹಾಗಾಗಿ ಅವರು ತಮ್ಮ ಅಗತ್ಯಗಳನ್ನು ಗುರುತಿಸುವುದನ್ನು ಮತ್ತು ಅವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದನ್ನು ಕಲಿತಿರುವುದೇ ಇಲ್ಲ. ಎಲ್ಲರಿಗೂ ಹೊಂದಿಕೊಂಡು ಹೋಗುವುದೇ ಅವರಿಗೆ ಜೀವನ ಮೌಲ್ಯವಾಗುತ್ತದೆ. ನಿಧಾನವಾಗಿ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡ ನೋವು ಅವರನ್ನು ಆವರಿಸಿಕೊಳ್ಳುತ್ತದೆ.

ನೀವು ‘ಒಳ್ಳೆಯ ಸ್ವಾರ್ಥಿ’ ಗಳಾಗಲು ನಿಧಾನವಾಗಿ ಪ್ರಯತ್ನಿಸಿ. ಈ ಸ್ವಾರ್ಥದಲ್ಲಿ ಬೇರೆಯವರನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶವಿರುವುದಿಲ್ಲ. ಬದಲಾಗಿ ನಿಮ್ಮ ವ್ಯಕ್ತಿತ್ವದ ಘನತೆಯನ್ನು ರಕ್ಷಿಸಿಕೊಳ್ಳುವ ಮತ್ತು ನಿಮ್ಮ ಸಂತೋಷ ಸಮಾಧಾನಗಳನ್ನು ಕಂಡುಕೊಳ್ಳುವ ಉದ್ದೇಶವಿರಬೇಕು. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ. ಶುಭವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT