ನೃತ್ಯ, ಸಂಗೀತ, ನಾಟಕ – ಹೀಗೆ ಯಾವುದೇ ಕಲಾಪ್ರಕಾರಗಳಿರಲಿ ಅವುಗಳ ಸುಂದರ ಅಭಿವ್ಯಕ್ತಿ ಸಹಜವಾಗಿಯೇ ಸಹೃದಯರ ಮನಸ್ಸು ತಟ್ಟುತ್ತದೆ. ಹಾಗೆ ನನ್ನನ್ನು ಬಾಲ್ಯದಲ್ಲೇ ತಟ್ಟಿರುವುದು ಭರತನಾಟ್ಯ ನೃತ್ಯಪ್ರಕಾರ.

ಅಲ್ಲಿಯೇ ಹೆಜ್ಜೆ ಬಲಗೊಳಿಸುತ್ತ ಭಾವ ಅರಳಿಸುತ್ತಿದ್ದ ನನ್ನ ಜೊತೆಯಾಗಿದ್ದು ಆಧುನಿಕ ರಂಗಭೂಮಿ. ಇವೆರಡರ ಸಮ್ಮಿಲನ ನಾನಾಗಬೇಕು ಎನ್ನುವುದು ನನ್ನೊಡಲ ತುಡಿತ. ಹೀಗೆ ಹೊಸತನದ ಹುಡುಕಾಟದಲ್ಲಿ, ಸ್ತ್ರೀಪರ ಕಾಳಜಿಯ ಚಿಂತನೆಯೊಂದಿಗೇ ಸಾಗಿ ಬಂದ ನನಗೆ ಮೊದಲು ಎದುರಾದಾಕೆ ‘ಯಶೋಧರೆ’. ಬುದ್ಧನ ಮಡದಿ. ಬುದ್ಧನು ಸಂಸಾರ ಸುಖವನ್ನು ತ್ಯಜಿಸಿ ಹೊರಟುನಿಂತಾಗ ಈ ಹೆಣ್ಣಿನ ಮನದ ತಳಮಳಗಳೇನಿರಬಹುದು ಎಂಬುದರ ಯೋಚನೆಯೇ ಈ ಪ್ರಸ್ತುತಿ ‘ಯಶೋಧರಾ’. ಇದು ರಂಗಭಾಷ್ಯಾ ನೃತ್ಯರೂಪಕ. ಹೌದಲ್ವಾ? ನಾವು ಹೆಣ್ಣುಮಕ್ಕಳೇ ಹಾಗೇ ಸಣ್ಣ ಸಣ್ಣ ಖುಷಿಗಳನ್ನೇ ವಿಜೃಂಭಿಸುತ್ತೇವೆ. ಆದರೆ ನಮ್ಮ ಮನದ ಖಾಲಿತನವನ್ನು ತುಂಬುವುದು ಹೇಗೆ? ವೈರಾಗ್ಯ ಎನ್ನುವುದು ಯಾರನ್ನೂ ಬಾಧಿಸಬಹುದಲ್ವೇ? ಆದರೆ ಯಶೋಧರೆಯ ಮೂಲಕ ಶತಶತಮಾನಗಳಿಂದ ಸಮಾಜದ ವ್ಯವಸ್ಥೆಗಳಲ್ಲಿ ನಲುಗಿ ಹೋಗುತ್ತಿರುವ ಹೆಣ್ಣುಮಕ್ಕಳ ಆರ್ತನಾದವನ್ನು ಹುಡುಕುವ ಪ್ರಯತ್ನ ಇದಾಗಿತ್ತು. ಇದರಿಂದ ಉತ್ತರ ಸಿಕ್ಕಿತೇ, ಸಮಾಜ ಸರಿಹೋದೀತೇ ಎಂಬುದಕ್ಕಿಂತಲೂ ಹೆಣ್ಣಿನ ಖುಷಿ, ನೋವು, ಸಂಕಟ, ವಿಷಾದ ಜೊತೆಗೆ ವಾಸ್ತವತೆಯ ಅರಿವನ್ನು ಪ್ರಕಟಿಸಿದ ಖುಷಿ ನನ್ನದಾಗಿತ್ತು.

ಈ ಪ್ರದರ್ಶನ ಕಲೆಗಳೇ ಹಾಗೆ ಒಂದು ಸಲ ನಾವೇನಾದರೂ ಪ್ರಯೋಗ ಮಾಡಹೊರಟೆವೋ, ಪ್ರದರ್ಶನ ಕಂಡುಕೊಂಡ ಕೂಡಲೆ ‘ಅಯ್ಯೋ ಮಾಡಿದ್ದೇನು? ಸರೀನೇ ಆಗಿಲ್ಲ, ಇನ್ನೊಂದಿಷ್ಟು ಏನೋ ಹೇಳ್ಬಹುದಿತ್ತು, ಅದನ್ನು ಹಾಗೆ ಮಾಡ್ಬಹುದಿತ್ತು, ಇದನ್ನು ಸ್ವಲ್ಪ ಬೇರೆ ಥರ ನಿರೂಪಿಸಬಹುದಿತ್ತು’ ಅಂತೆಲ್ಲಾ ಅನ್ನಿಸುವುದಕ್ಕೆ ಶುರುಆಗಿಬಿಡುತ್ತವೆ. ಆದರೆ ನಾನಂತೂ ನಗರದಿಂದ ದೂರ ಇರುವುದರಿಂದ ನನಗೆ ಸಾವಿರ ಅಡೆತಡೆಗಳು. ಪ್ರಯೋಗ ತಯಾರಾಗಿದೆ, ಪ್ರದರ್ಶನ ಹೇಗೆ – ಎಂಬ ಪ್ರಶ್ನೆ. ಕಾರ್ಪೋರೇಟ್ ಕಾರ್ಯಕ್ರಮಗಳಂತೂ ನಮಗೆ ದೂರದ ಮಾತು. ಹೊಸತನದ ಪ್ರಯೋಗಗಳನ್ನು ಸಂಘಟಕರಿಗೆ ತಲುಪಿಸುವಲ್ಲೇ ನಾವು ಸೋತು ಸುಸ್ತಾಗಿರುತ್ತೇವೆ. ಅಲ್ಲದೆ ಒಂದು ‘ಪ್ರೊಫೆಶನಲ್ ಟೀಮ್’ ಅನ್ನು ಸಣ್ಣ ಊರುಗಳಲ್ಲಿ ಕಟ್ಟುವುದು ನಗರಪ್ರದೇಶದಂತೆ ಸಲೀಸಲ್ಲ. ನೃತ್ಯವಿದ್ಯಾರ್ಥಿಗಳನ್ನೇ ತಂಡದ ಸದಸ್ಯರಾಗಿಟ್ಟುಕೊಂಡು ಪ್ರದರ್ಶನ ತಯಾರಿಗೊಳಿಸಬೇಕು, ಅಭ್ಯಾಸಕ್ಕೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಮುಖ್ಯವಾಗಿ ವಿಚಾರವನ್ನು ಮನದಟ್ಟು ಮಾಡುವುದೇ ಹರಸಾಹಸ. ಎಲ್ಲರ ಮನಃಸ್ಥಿತಿ ಒಂದೇ ತೆರನಾಗಿರುವುದಿಲ್ಲ ಎಂಬುವುದು ಅಕ್ಷರಶಃ ನಿಜವೇ. ಒಂದು ಭಾವಾಭಿವ್ಯಕ್ತಿಗೆ ಜೀವನಾನುಭವದ ಸಾರವೂ ಒಂದು ಕಾರಣವಾಗಿರುತ್ತದೆ ಎನ್ನುತ್ತಾರೆ ಅನುಭವೀ ಹಿರಿಯ ಕಲಾವಿದರು. ಇದನ್ನು ತಂಡದ ಎಲ್ಲಾ ಕಲಾವಿದರಿಂದ ನಿರೀಕ್ಷೆ ಮಾಡುವುದೂ ಸಾಧ್ಯವಿಲ್ಲ. ಇಂತಹುದೇ ಯೋಚನೆಗಳಲ್ಲಿ ನನ್ನ ಎಂದಿನ ಕಾಯಕಗಳಲ್ಲಿ ತೊಡಗಿದ್ದೆ.

ಮನುಷ್ಯ ಸಂಘಜೀವಿ ಎನ್ನುವುದು ಸಾರ್ವಕಾಲಿಕ ಸತ್ಯ. ಅದರಲ್ಲೂ ಹೆಣ್ಣು ಎಲ್ಲ ಬಂಧಗಳಿಂದಲೂ ಬಂಧಿತಳಾಗಿರುವವಳು. ಆದರೂ ಎಲ್ಲೋ ಒಂದು ಸಂಬಂಧದ ಅಗಲಿಕೆ ಆಕೆಯನ್ನು ತೀವ್ರವಾಗಿ ಕಾಡುತ್ತಿರುತ್ತವೆ. ಇಂತಹ ಒಂದು ತೀವ್ರತೆ ಇಂದು ನಿನ್ನೆಯದ್ದಲ್ಲ. ಮನದೊಳಗಿನ ತೊಳಲಾಟವು ಕಾಲದಿಂದ ಕಾಲಕ್ಕೆ ಬದಲಾಗುವುದೇ ಇಲ್ಲವೇನೋ ಎಂದೆನಿಸುವುದು ಸಹಜವೇ. ಪರಿಸ್ಥಿತಿ, ಸಂದರ್ಭಗಳು ಮಾತ್ರ ಬೇರೆಯದ್ದಾಗಿರುತ್ತದೆ. ಹೆಣ್ಣಿನ ಮನದಾಳವನ್ನು, ವೇದನೆಯನ್ನು ಹೇಳಲು ನಾನು ಆರಿಸಿಕೊಂಡಿದ್ದು ‘ಊರ್ಮಿಳೆ’ ಎಂಬ ಏಕವ್ಯಕ್ತಿ ಪ್ರಯೋಗದ ಮೂಲಕ.

ಏಕವ್ಯಕ್ತಿ ಪ್ರಯೋಗವೇ ಒಂದು ಸವಾಲು. ಆದರೂ ತಂಡವನ್ನು ನಿಭಾಯಿಸುವ ಸಂಕಟ ಒಂದೆಡೆಯಾದರೆ, ನನ್ನತನ ಎಂಬುವುದೊಂದನ್ನು ಪ್ರದರ್ಶಿಸುವ ತುಡಿತವೇನೋ ಈ ಏಕವ್ಯಕ್ತಿ ಪ್ರದರ್ಶನ ಹುಟ್ಟು. ‘ಗಂಡಿನ ಹಂಗು ಇಲ್ಲದೆ ಹೆಣ್ಣು ಗೃಹಸ್ಥ ಧರ್ಮ ನಡೆಸಬಹುದು, ಸಾರ್ಥಕ ಬದುಕು ನಡೆಸಬಹುದು’ ಇದು ಊರ್ಮಿಳಾ ರಂಗಪ್ರಯೋಗದ ಸಾಲುಗಳು. ಖಂಡಿತ ಇದು ಪುರುಷರಿಗೆ ಸವಾಲೆಸೆಯುವುದಲ್ಲ, ಹೆಣ್ಣು ಬದುಕನ್ನು ಕಟ್ಟಿಕೊಳ್ಳಲು ಯಾರ ಹಂಗೂ ಬೇಕಾಗಿಲ್ಲ, ನೋವುಗಳ ಸಂಘರ್ಷದಿಂದ ಗಟ್ಟಿಗೊಂಡ ಆಕೆಯ ಮನೋಸ್ಥೈರ್ಯವೇ ಸಾಕು. ಇಲ್ಲಿ ಲಕ್ಷ್ಮಣನು ಊರ್ಮಿಳೆಯನ್ನು ಏಕಾಂಗಿಯಾಗಿ ಬಿಟ್ಟು ಹೋದಾಗ ಆಕೆ ಒಂಟಿಯಾಗಿದ್ದಾಳೆ ಎಂಬುವುದಕ್ಕಿಂತ ಹೆಚ್ಚು ಕಾಡುವುದು ಆಕೆಯ ಮಾತಿಗೆ ಯಾರೂ ಕಿವಿಯಾಗಲಿಲ್ಲ ಎನ್ನುವುದು. ಈ ‘ಕಾಡುವಿಕೆ’ ನನ್ನನ್ನು ಹೆಚ್ಚು ಎಚ್ಚರಗೊಳಿಸುತ್ತದೆ, ಹೊಸ ವಿಚಾರಗಳನ್ನು ಮತ್ತೆ ಮತ್ತೆ ಹುಡುಕಬೇಕು ಎಂದು ಪ್ರೇರೇಪಿಸುತ್ತದೆ ಕೂಡ.

ಹಾಗೆಂದು ಸ್ತ್ರೀಪರಕಾಳಜಿಯ ವಸ್ತುವಿನ ಪ್ರಯೋಗ ನಡೆಸಲು ಹೊರಟಾಗ ಅನೇಕ ಪ್ರಶ್ನೆಗಳು ಎದುರಾಗದೇ ಇಲ್ಲ. ಅದು ‘ಯಾಕೆ ನೀವು ಸ್ತ್ರೀಕೇಂದ್ರೀಕೃತ ಪಠ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತೀರಿ’ ಅನ್ನುವುದಲ್ಲದೆ, ವಸ್ತುವಿಷಯವನ್ನು ಖಾಸಗಿ ಬದುಕಿಗೂ ಸಮೀಕರಿಸಿದ ಪ್ರಶ್ನೆಗಳೂ ಎದುರಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕಲಾವಿದೆಯಾಗಿ ವಿಚಾರವನ್ನು ದಾಟಿಸುವ ನನ್ನ ಮಾಧ್ಯಮ ನಾಟ್ಯ, ರಂಗ. ಈ ಮೂಲಕ ನನ್ನನ್ನು ನಾನು ಕಂಡುಕೊಳ್ಳುವ ಪ್ರಯತ್ನ ಅಥವಾ ಹೆಣ್ಣನ್ನು ಅರಿಯುವ ಪ್ರಯತ್ನ ಅಷ್ಟೇ ನನ್ನದು.

ನಮಗೆಲ್ಲಾ ಗೊತ್ತಿರುವ ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ವಿಸ್ತಾರಗೊಳಿಸಿಕೊಂಡಿದ್ದೇವೆ. ಪ್ರಕೃತಿಯಲ್ಲಿ ಏನಿದೆ, ಏನಿಲ್ಲ ಎಂದು ಹೇಳುವ ಹಾಗೇ ಇಲ್ಲ. ಹೆಣ್ಣು ಅನ್ನಿಸಿಕೊಂಡಿರುವ ನಾವು ಹೆಣ್ಣಾಗಿರುವುದಕ್ಕೆ ಅಭಿಮಾನಪಡುತ್ತೇವೆ. ಆದರೂ ಪ್ರತಿಯೊಬ್ಬ ಹೆಣ್ಣು ಒಂದಲ್ಲ ಒಂದು ಕಾರಣದಿಂದ ಒಂಟಿತನವನ್ನು ಅನುಭವಿಸುತ್ತಿರುತ್ತಾಳೆ. ಅದರೊಳಗಿನ ಭಾವ ನೋವಿರಬಹುದು, ನಲಿವಿರಬಹುದು. ಏಕಾಂಗಿ ಬದುಕನ್ನು ಎದುರಿಸಿ ಘನತೆಯ ಬದುಕು ಕಟ್ಟಿಕೊಳ್ಳಬಲ್ಲಳು ಎನ್ನುವುದಕ್ಕೆ ಇನ್ನೊಂದು ಉದಾಹರಣೆಯಾಗಿ ನನ್ನ ಪ್ರಯತ್ನ ಮುಂದುವರೆದಿದ್ದು ‘ರಾಧಾ’ ಪ್ರಯೋಗದ ಮೂಲಕ.

ಸವಾಲಿನ ಹಸಿವು – ಎನ್ನುವುದಿದೆಯಲ್ಲವೆ, ಅದು ಏನೇನೆಲ್ಲವನ್ನೂ ತಿನ್ನಿಸುತ್ತದೆ. ನೃತ್ಯವೂ ಬೇಕು, ನಾಟಕವೂ ಬೇಕು ಎಂಬ ಇಬ್ಬದಿಯ ಪ್ರೀತಿಗೆ ಕೃಷ್ಣನ ಒಲವಿನ ರಾಧಾಳ ಬದುಕಿನ ಪ್ರೀತಿಯೂ ಸಾಥ್ ನೀಡಿತು. ಪ್ರಸ್ತುತ ಸಂದರ್ಭದ ಒಂದು ಹೆಣ್ಣನ್ನು ಪಾತ್ರವಾಗಿಸುವುದಕ್ಕಿಂತ ಪುರಾಣದ ಪಾತ್ರ ರಾಧೆಯ ಮೂಲಕ ಭಾವನೆಗಳನ್ನು, ಸಮಕಾಲೀನ ಚಿಂತನೆಗಳನ್ನು ದಾಟಿಸುವುದೇ ಹೆಚ್ಚು ಸೂಕ್ತವೆಂದೆನಿಸಿ ರಾಧಾ ರಂಗಕ್ಕೆ ಬಂದಳು. ಒಂದೊಳ್ಳೆಯ ಸ್ಕ್ರಿಪ್ಟ್ ಸಮರ್ಥ ನಿರ್ದೇಶಕರ ಮಾರ್ಗದರ್ಶನವು ಜೊತೆಗಿದ್ದದ್ದು ನನ್ನ ಯೋಚನೆಗಳು ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವಾಯಿತು. ಕೃಷ್ಣನ ಒಲವಿನ ಭಾವದೆಳೆಗಳ ನೆನಪಲ್ಲೇ ಬದುಕು ಸಾಗಿಸುವ ರಾಧಾ ನಮ್ಮೆಲ್ಲರ ಮಧ್ಯೆ ಸ್ತ್ರೀಯ ಅಸ್ಮಿತತೆಯ ಧ್ಯೋತಕವಾಗಿ ಕಾಣುತ್ತಾಳೆ. ಹೆಣ್ಣು ಒಂಟಿಯಾಗಿರುವುದನ್ನೇ ಒಂದು ಅಪರಾಧ ಎಂದು ನೋಡುವ ಇಂದಿನ ಸಮಾಜಕ್ಕೆ ನಾನು ಕಂಡುಕೊಂಡ ರಾಧಾ ತುಂಬಾ ಆಪ್ತವಾಗುತ್ತಾಳೆ. ಒಂದು ಪ್ರಯೋಗವನ್ನು ಪ್ರಯೋಗಿಸಲು ತೊಡಗಿಸಿಕೊಳ್ಳುತ್ತೇವೆ ಎಂದಾಗ ಅದು ಸಾಗುವ ಹಾದಿಯಲ್ಲಿ ಹಲವಾರು ಪ್ರಶ್ನೆಗಳು ಎದುರಾಗುತ್ತವೆ. ಉತ್ತರ ಕಂಡುಕೊಳ್ಳುವಲ್ಲಿ ನಮ್ಮ ಬದುಕಿನ ನಡೆಯೂ ಬದಲಾಗುತ್ತದೆ.

ಒಂದು ಪ್ರಯೋಗವನ್ನು ಮುಖ್ಯವಾಗಿ ನಮ್ಮ ಪ್ರೇಕ್ಷಕರು ಒಪ್ಪಬೇಕು. ಹಾಗಂತ ಹೇಳುವ ವಿಚಾರದಲ್ಲಿ ಬದ್ಧತೆಯಿದ್ದಲ್ಲಿ ಜನ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂಬುವುದು ರಾಧಾ ಪ್ರದರ್ಶನದ ನನ್ನ ಅನುಭವವೇ ಸಾಕ್ಷಿ. ಪ್ರೀತಿ ಯಾವುದನ್ನೂ ಜಯಿಸಬಲ್ಲದು. ಕೃಷ್ಣ ತನಗೆ ದಕ್ಕದಿದ್ದರೂ ರಾಧೆಯು ಜೀವನಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ. ಶ್ಯಾಮನ ಪ್ರೀತಿಯನ್ನು ಹಾಗೇ ಕಾಪಿಟ್ಟುಕೊಂಡು ಸುದೀರ್ಘ ಬದುಕು ಸವಿಯುವ ಆಕೆಯಿಂದ ನಾವು ಹೆಣ್ಣುಮಕ್ಕಳು ತುಂಬಾ ಕಲಿಯಬೇಕೆಂದೆನಿಸಿದ್ದು ಇದೆ ನನಗೆ. ನಾನು ಬರಿಯ ಕಲ್ಪನೆಯಲ್ಲಿ ಅಭಿನಯಿಸಬಹುದು. ಆದರೆ, ಆ ನಿಜಸತ್ಯದ ಬದುಕು ಸುಂದರವಾಗಿರಬಹುದು ಎಂಬ ಯೋಚನೆಯೇ ಪುಳಕಗೊಳ್ಳುವಂತೆ ಮಾಡುತ್ತವೆ. ಇಂತಹ ಪ್ರಯೋಗಗಳ ಹುಡುಕಾಟವೇ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ.

ಎಲ್ಲಾ ಸವಾಲುಗಳು, ಸಂಕಟಗಳ ನಡುವೆ ಪ್ರಯೋಗಗಳ ಹುಡುಕಾಟದ ಹಾದಿ ಸಾಗುತ್ತದೆ. ಎಲ್ಲಾ ಹೆಣ್ಣುಮಕ್ಕಳ ತಲ್ಲಣಗಳು ನಮ್ಮವೇ ಎನಿಸುತ್ತವೆ. ಆದ್ದರಿಂದಲೇ ಪ್ರಸ್ತುತಿಯಲ್ಲೂ ಅದನ್ನು ಪ್ರತಿಬಿಂಬಿಸುತ್ತೇನೆ. ಭಾವ ಜಗತ್ತನ್ನು ಚಿತ್ರಿಸುತ್ತ ಜನರ ಮನದಂಗಳ ತಲುಪುವುದರ ಜೊತೆಗೆ ನನ್ನನ್ನೂ ನಾನು ಗಟ್ಟಿಗಿತ್ತಿಯಾಗಿಸಿಕೊಳ್ಳುತ್ತಿದ್ದೇನೆ. ನೃತ್ಯವು ರಂಗಭೂಮಿಯ ಸಂಯೋಗ ಕಲೆ.

ಅದು ನನ್ನಲ್ಲೊಂದು ಹೊಸ ಆತ್ಮಸ್ಥೈರ್ಯವನ್ನು ಮೊಳಕೆಯೊಡೆಸಿ ಬಲಿಸಿದೆ. ನನ್ನನ್ನು ಬಲಗೊಳಿಸಿದ ಮಾಧ್ಯಮದ ಮೂಲಕವೇ ಅಂಥ ಆತ್ಮವಿಶ್ವಾಸವನ್ನು, ಮನೋಬಲವನ್ನು, ಛಲವನ್ನು ಸಾಧನೆಯ ಸಾಧ್ಯತೆಗಳನ್ನು ಸ್ತ್ರೀಸಮೂಹಕ್ಕೂ ದಾಟಿಸಿ ಅವರನ್ನೂ ಸಶಕ್ತತೆಯ ಕೇಂದ್ರಗಳನ್ನಾಗಿಸುವ ಕಿರು ಪ್ರಯತ್ನದಲ್ಲೇನೋ ಸುಖವಿದೆ. ಸ್ತ್ರೀಸಂವೇದನೆಯ ಇನ್ನೊಂದು ಪ್ರಸ್ತುತಿಯೊಂದಿಗೆ ಮತ್ತೆ ರಂಗದಲ್ಲಿ ಮುಖಾಮುಖಿಯಾಗಲಿದ್ದೇನೆ. ಹೊಸ ಸಾಧ್ಯತೆಯ ಪಯಣ ಮುಂದುವರಿಸುತ್ತೇನೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.