`ಈ ವಿಶ್ವ ಹೇಗೆ ಸೃಷ್ಟಿಯಾಯಿತು? ನಾನು, ನೀನು ಈ ಭೂಮಿಗೆ ಬಂದಿದ್ದು ಹೇಗೆ? ಗಿಡಮರಗಳಿಗೆಲ್ಲ ಹಸಿರು, ಹೂಗಳಿಕೇಗೆ ನಾನಾ ಬಣ್ಣ?~
ಅಪ್ಪನ ಹೆಗಲೇರಿ ಕೂಸುಮರಿಯಾಗಿ ಬೆಟ್ಟ ಗುಡ್ಡ ಅಲೆಯುತ್ತಿದ್ದಾಗ ಆ ಪುಟ್ಟ ಪೋರಿಯ ಕಣ್ಣುಗಳಲ್ಲಿ ಇಂಥವೇ ಬೆರಗು! ಮಗಳು ನೂರಾರು ಪ್ರಶ್ನೆಗಳನ್ನು ಕೇಳುವಾಗ ಅಪ್ಪನ ಸಹನೆಯ ಪರೀಕ್ಷೆ.

ನಿಸರ್ಗ, ಸುತ್ತಲಿನ ಪರಿಸರದ ಬಗ್ಗೆ ಅಗಾಧ ಕುತೂಹಲ ಇಟ್ಟುಕೊಂಡು ಬೆಳೆದ ಮಗಳು ಮುಂದೆ ತತ್ವಶಾಸ್ತ್ರದಲ್ಲಿಯೂ ಆಸಕ್ತಿ ತೋರಿದಾಗ ಅಪ್ಪನಿಗೆ ಅಭಿಮಾನ. ಹದಿಹರೆಯದಲ್ಲಿ ಕಲೆ, ಸಾಹಿತ್ಯ, ಸಂಗೀತದ ಗುಂಗು. ವಿಜ್ಞಾನದ ಗಂಧ ಗಾಳಿಯೂ ತಿಳಿಯದ ಹುಡುಗಿ ಕೊನೆಗೆ ಆ ಕ್ಷೇತ್ರದಲ್ಲಿಯೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದು ಮಾತ್ರ ಪವಾಡ!
ಹೀಗೆ, ಕಣಭೌತ ವಿಜ್ಞಾನಿ ಫ್ಯಾಬಿಯೋಲಾ ಜಿಯಾನಟಿ ಅವರ ಬಗ್ಗೆ ಹೇಳುತ್ತಾ ಹೋದರೆ ಅಚ್ಚರಿಯ ಸಂಗತಿಗಳಿಗೆ ಲೆಕ್ಕವಿಲ್ಲ.

ಬ್ರಹ್ಮಾಂಡದ ಅಸ್ತಿತ್ವಕ್ಕೆ ಮೂಲ ಕಾರಣ ಎನ್ನಲಾಗುವ `ದೇವ ಕಣ~ (ಗಾಡ್ ಪಾರ್ಟಿಕಲ್) ಪತ್ತೆ ಮಾಡಿರುವುದಾಗಿ ಕೆಲ ತಿಂಗಳ ಹಿಂದೆ ವಿಜ್ಞಾನಿಗಳು ಘೋಷಿಸಿದ್ದು ನೆನಪಿರಬೇಕಲ್ಲ? ಇಂಥ ಮಹತ್ವದ ಅನ್ವೇಷಣೆಯಲ್ಲಿ ಮುಳುಗಿರುವ ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದ (ಸಿಇಆರ್ಎನ್- ಸರ್ನ್) ವಿಜ್ಞಾನಿಗಳ ತಂಡದಲ್ಲಿ ಫ್ಯಾಬಿಯೋಲಾ ಕೂಡ ಇದ್ದಾರೆ.

ಫ್ರಾನ್ಸ್ ಹಾಗೂ ಸ್ವಿಡ್ಜರ್ಲೆಂಡ್ ಗಡಿಯಲ್ಲಿ 100 ಮೀಟರ್ ಆಳದಲ್ಲಿ `ಸರ್ನ್~ ನಿರ್ಮಿಸಿರುವ ಸುರಂಗ ಪ್ರಯೋಗಾಲಯವು ಆಧುನಿಕ ಭೌತಶಾಸ್ತ್ರ ಸಂಶೋಧನೆಯ ಹೃದಯ ಬಡಿತ. ಇಲ್ಲಿ ಸುಮಾರು 18 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಫ್ಯಾಬಿಯೋಲಾ ಅವರದ್ದು. ನಂತರದಲ್ಲಿ ಹೆಗಲೇರಿದ್ದು ಈ ಪ್ರಯೋಗಾಲಯದಲ್ಲಿ ಅಟ್ಲಾಸ್ ಯೋಜನೆಯ ಸಂಚಾಲಕಿ ಹಾಗೂ ವಕ್ತಾರೆಯ ಜವಾಬ್ದಾರಿ.

ಫ್ಯಾಬಿಯೋಲಾ ಹುಟ್ಟಿದ್ದು 1962ರಲ್ಲಿ, ಇಟಲಿಯ ಮಿಲಾನ್ನಲ್ಲಿ. ಪ್ರೌಢಶಾಲಾ ಹಂತದಲ್ಲಿ ಕಲಾ ಇತಿಹಾಸ, ಸಾಹಿತ್ಯ ಹಾಗೂ ಪ್ರಾಚೀನ ಭಾಷೆಗಳ ಅಧ್ಯಯನ ಮಾಡಿದ್ದ ಅವರಿಗೆ ಗಣಿತವಾಗಲಿ, ಭೌತಶಾಸ್ತ್ರವಾಗಲಿ ಆಸಕ್ತಿಯ ವಿಷಯಗಳೇ ಆಗಿರಲಿಲ್ಲ. ಮುಂದೆ ಕಣ ಭೌತವಿಜ್ಞಾನಿಯಾಗಬಹುದೆಂದು ಅವರು ಎಣಿಸಿರಲಿಲ್ಲ. ಹಾಗಾದರೆ ಫ್ಯಾಬಿಯೋಲಾ ಭೌತಶಾಸ್ತ್ರಕ್ಕೆ ಒಲಿದದ್ದು ಹೇಗೆ?

`ತತ್ವಶಾಸ್ತ್ರದಂತೆಯೇ ಭೌತವಿಜ್ಞಾನ ಕೂಡ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದೆ. ಅಂತಿಮ ಉತ್ತರ ದೊರೆಯದೇ ಇರಬಹುದು. ಆದರೆ ಆ ನಿಟ್ಟಿನಲ್ಲಿ ಪುಟ್ಟ ಹೆಜ್ಜೆ ಇಟ್ಟಿರುವುದಂತೂ ಸತ್ಯ. ನಾನು ಈ ಕ್ಷೇತ್ರವನ್ನು ಆರಿಸಿಕೊಂಡಿರುವುದು ಇದೇ ಕಾರಣಕ್ಕೆ~- ಹೀಗೆ ಹೇಳುತ್ತಲೇ ಅವರು ಕಲೆ ಮತ್ತು ಭೌತಶಾಸ್ತ್ರಕ್ಕಿರುವ ಸಾಮ್ಯತೆಯನ್ನೂ ಗ್ರಹಿಸಬಲ್ಲರು.

1989ರಲ್ಲಿ ಮಿಲಾನ್ ವಿಶ್ವವಿದ್ಯಾಲಯದಿಂದ ಪರಮಾಣು ಭೌತಶಾಸ್ತ್ರದಲ್ಲಿ ಪಿಎಚ್.ಡಿ ಪದವಿ. 1994ರಿಂದ `ಸರ್ನ್~ನಲ್ಲಿ ಹಿರಿಯ ಸಂಶೋಧನಾ ಭೌತವಿಜ್ಞಾನಿಯಾಗಿ ಕೆಲಸ. ಯುಎ2, ಅಲೆಫ್, ಅಟ್ಲಾಸ್ನಂಥ ಮಹತ್ವದ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದ ಹೆಗ್ಗಳಿಕೆ. ಕಣಭೌತ ವಿಜ್ಞಾನದಲ್ಲಿ ಮಾಡಿರುವ ಅನನ್ಯ ಸಾಧನೆಗಾಗಿ 2009ರಲ್ಲಿ ಇಟಲಿ ಅಧ್ಯಕ್ಷರಿಂದ `ಕಮೆಂಡೇಟರ್~ ಪ್ರಶಸ್ತಿ ಪ್ರದಾನ. 2011ರಲ್ಲಿ `ದಿ ಗಾರ್ಡಿಯನ್~ ಪತ್ರಿಕೆಯ `ನೂರು ಪ್ರಭಾವಿ ಮಹಿಳೆಯರು~ ಪಟ್ಟಿಗೆ ಸೇರ್ಪಡೆ.

ಗಟ್ಟಿ ಗುಂಡಿಗೆಯ ಛಲಗಾತಿ
`ಇಲ್ಲಿ ಚಾರ್ಮ್ ಇಲ್ಲ; ಸಂವೇದನೆಗಳಿಲ್ಲ ಎಂದು ಹೇಳಿದ್ದು ಯಾರು? ಇದನ್ನು ನಾನು ಒಪ್ಪಲಾರೆ. ನನ್ನ ಪ್ರಕಾರ ಭೌತಶಾಸ್ತ್ರದಲ್ಲಿ ಕಲೆ, ಸೌಂದರ್ಯ, ಸಾಮರಸ್ಯ ಮಿಳಿತವಾಗಿದೆ. ಮಹಿಳೆಯರಿಗೆ ಈ ಕ್ಷೇತ್ರ ಒಗ್ಗುವುದಿಲ್ಲ ಎನ್ನುವುದಕ್ಕೆ ಬೇರೆಯದೇ ಆದ ಸಾಮಾಜಿಕ ಕಾರಣಗಳಿವೆ. ಸಂಶೋಧನೆಯಲ್ಲಿ ತೊಡಗಿದಾಗ ಬದುಕು ಹೀಗೇ ಇರಬೇಕು ಎಂದು ಎಣಿಸುತ್ತಾ ಕೂರಲು ಸಾಧ್ಯವಿಲ್ಲ.

ಮಹಿಳೆಗೆ ಕುಟುಂಬ ಹಾಗೂ ವೃತ್ತಿಯನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಇರುತ್ತದೆ ನಿಜ. ಆದರೆ ಇವೆಲ್ಲವನ್ನು ಮೀರಿಯೂ ಏನಾದರೂ ಸಾಧಿಸಬಹುದಲ್ಲವೇ?~- ಹೀಗೆ ಸವಾಲು ಹಾಕುತ್ತಲೇ ಜವಾಬು ನೀಡುವ ಫ್ಯಾಬಿಯೋಲಾ ಅವರಿಗೆ ಮಹಿಳೆಯಾಗಿ ತಾವು ಇಂಥದ್ದೊಂದು ಮಹಾನ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ ಎನಿಸುವುದಿಲ್ಲವಂತೆ.

ಜಗತ್ತಿನಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಕಡಿಮೆ ಇರುವಂಥ ಸಂದರ್ಭದಲ್ಲಿ ಫ್ಯಾಬಿಯೋಲಾ ಅವರ ಸಾಧನೆ ಅಪರೂಪದ್ದು. ಯೂರೋಪಿಯನ್ ಕಮಿಷನ್ ಹಾಗೂ ಯುನೆಸ್ಕೊ ವರದಿಗಳ ಪ್ರಕಾರ ಐರೋಪ್ಯ ಸಂಶೋಧಕರಲ್ಲಿ ಮಹಿಳೆಯರ ಕೊಡುಗೆ ಶೇ 30ರಷ್ಟು ಮಾತ್ರ. `ಗಣಿತದಲ್ಲಿ ಉತ್ತಮ ಸಾಧನೆ ತೋರುವ ಹೆಣ್ಣು ಮಕ್ಕಳು ಕೂಡ ವಿಜ್ಞಾನದಲ್ಲಿ ಅಷ್ಟೇನೂ ಆಸಕ್ತಿ ತೋರಿಸುವುದಿಲ್ಲ~ ಎನ್ನುತ್ತದೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ವರದಿ.

ನಿಜ, ಎಲ್ಲರೂ ಫ್ಯಾಬಿಯೋಲಾ ಆಗುವುದಕ್ಕೆ ಸಾಧ್ಯವಿಲ್ಲ. ನಿಸರ್ಗ ಕಂಡು ಬೆರಗಾಗುತ್ತಾ, ಸಂಗೀತಕ್ಕೆ ತಲೆದೂಗುತ್ತಾ, ಪಿಯಾನೊ ನುಡಿಸುತ್ತಾ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ಹುಡುಗಿ, ಇಂದು `ಸರ್ನ್~ನಂಥ ಸಂಸ್ಥೆಯಲ್ಲಿ ಐತಿಹಾಸಿಕ ಮಹತ್ವದ ಯೋಜನೆಯಲ್ಲಿ ತೊಡಗಿಕೊಳ್ಳಬೇಕೆಂದರೆ ಅದು ತಮಾಷೆಯ ಮಾತಲ್ಲ. `ವೃತ್ತಿ ಬದುಕಿನಲ್ಲಿ ಔನತ್ಯ ಸಾಧಿಸಬೇಕಾದರೆ ಬದುಕಿನ ಸಣ್ಣ ಪುಟ್ಟ ಖುಷಿಗಳನ್ನು ತ್ಯಾಗ ಮಾಡಬೇಕಾಗುತ್ತದೆ~ ಎಂಬ ಅವರ ಮಾತುಗಳಿಗೆ ಇನ್ನಷ್ಟು ಯುವತಿಯರಲ್ಲಿ ಉತ್ಸಾಹ ತುಂಬುವ ಶಕ್ತಿಯಂತೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.