ಇತಿಹಾಸ ಗತವನ್ನು ಮಾತ್ರವಲ್ಲ, ವರ್ತಮಾನವನ್ನೂ ಒಳಗೊಳ್ಳುತ್ತದೆ. ಲಕ್ಷ್ಮೀಶ್ ತೋಳ್ಪಾಡಿಯವರ ಲೇಖನವನ್ನೋದುವಾಗ, ಗಕ್ಕನೇ ಹಿಡಿದು ನಿಲ್ಲಿಸಿದ್ದು ಈ ಸಾಲು. ಹಾಗೆ ನೋಡಿದರೆ ನಾನವಳನ್ನು ಮರೆತಿರಲಿಲ್ಲ. ಇತಿಹಾಸದಲ್ಲಿ ಮುಳುಗಿಹೋಗಿರುವ ಒಂದು ಕಥೆಯನ್ನು ಅವಳು ವರ್ತಮಾನದಲ್ಲಿ ತೊಯ್ದ ಕೈಯಲ್ಲೆತ್ತಿ, ಆರ್ದ್ರವಾಗಿ ಪಿಸುಗುಡುತ್ತಾ ಬಿತ್ತರಿಸಿದ್ದು ನನ್ನ ಗತಗಾಲದ ಪುಟ ಸೇರಿ ದಶಕಗಳೇ ಕಳೆದು ಹೋಗಿದ್ದರೂ, ಅದು ನೆನಪಿನಿಂದ ಮಾಸಿರಲಿಲ್ಲ. ‘ಷ್ಕೂಲ್ ತೀಚರ್?’ ಎಂದು ನಿಬ್ಬೆರಗಾಗಿ ಕೇಳಿ, ‘ಯೂ ಹೆಲ್ಪ್ ಮಿ ಮಿಷ್?’ ಎಂದು ಗ್ರಾಮರ್ರೇಯಿಲ್ಲದ ಒಂದು ಇಂಗ್ಲಿಷ್‌ನಲ್ಲಿ, ಆ ಕ್ಷಣಕ್ಕೆ ಅಸಂಬದ್ಧವೆನ್ನಿಸಿದರೂ, ಎಷ್ಟೊಂದು ಮುಂದಾಲೋಚನೆಯಿದೆಯೆಂದು ಈಗ ಅನ್ನಿಸುವ ಒಂದು ವಿಲಕ್ಷಣ ಬೇಡಿಕೆಯನ್ನಿಟ್ಟಿದ್ದಳಲ್ಲಾ...

ಹಾಗೆ ನೋಡಿದರೆ ಯಾವುದೂ ಮರೆತಿರಲಿಲ್ಲ ಅವಳ ವಿಚಿತ್ರ ಹೆಸರೊಂದನ್ನು ಬಿಟ್ಟು. ಹಾಗೆಂದರೆ ತಿಳಿ ಗುಲಾಬಿಬಣ್ಣದ ರೋಜಾ ಹೂ - ಎಂದು ತನ್ನ ಹೆಸರಿನ ವಿವರಣೆ ಕೊಟ್ಟಿದ್ದಳು. ಗೂಗಲಿಸಿದಾಗ ಸಿಕ್ಕಿದ್ದು ‘Huong’ ಎಂಬ ಒಂದು ಹೆಸರು. ಅವಳು ಅದನ್ನೇ ಹೇಳಿದ್ದಳೇ ಎಂದು ನನ್ನ ನೆನಪನ್ನು ನಾನು ಕೆದಕಿಕೊಳ್ಳುತ್ತಲೇ ಇದ್ದೇನೆ...

ಅದಿನ್ನೂ ಮದರಾಸಿಗೆ ಹೋದ ಹೊಸತು. ತಮಿಳಿನ ಗಂಧಗಾಳಿ ಗೊತ್ತಿಲ್ಲದ, ರಾಜಕೀಯ ವಿದ್ಯಮಾನಗಳಲ್ಲಿ ಆಸಕ್ತಿಯಲ್ಲದ ನಾನು ಮೊಟ್ಟಮೊದಲು ತಮಿಳುನೆಲೆಗೆ ಕಾಲಿಟ್ಟಾಗ, 1989ರ ಚುನಾವಣೆಯಲ್ಲಿ ಗೆದ್ದು, ಡಿಎಂಕೆ ಪಕ್ಷ ಅಧಿಕಾರದ ಸೂತ್ರ ಹಿಡಿದು ರಾಜಕೀಯ ವಲಯದಲ್ಲಿನ್ನೂ ಪ್ರಬಲವಾಗಿದ್ದ ಕಾಲ. ಜಯಲಲಿತಾ ತಮಿಳುನಾಡಿನ ಸಮಸ್ತ ನಾಗರಿಕರ ಅಮ್ಮನಾಗುವುದಿರಲಿ, ಇನ್ನೂ ಒಮ್ಮೆಯೂ ಮಖ್ಯಮಂತ್ರಿಯಾಗಿರಲಿಲ್ಲ. 1996ರ ಚುನಾವಣೆಯಲ್ಲಿ, ಎಐಎಡಿಎಂಕೆ ತನ್ನ ಅಟ್ರಾಸಿಟಿಯಿಂದ ಸ್ಥಾನ ಕಳೆದುಕೊಂಡು ಡಿಎಂಕೆ ಮತ್ತೆ ರಾಜ್ಯಭಾರ ವಹಿಸುವಷ್ಟೊತ್ತಿಗೆ ಕೊಂಚ ತಮಿಳು, ಅಲ್ಲಿನ ಜನಜೀವನ, ಸಿನಿಮಾಜಗತ್ತು, ರಾಜಕೀಯ ವಿದ್ಯಮಾನಗಳು ಅರ್ಥವಾಗುವ ಮಟ್ಟಿಗೆ ನಾನು ಬಂದಿದ್ದೆ.

ಡಿಎಂಕೆ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಮಿಳುನಾಡಿನಲ್ಲಿರುವ ಎಲ್ಲ ಅನ್ಯ ಭಾಷಿಕರೂ ತಮಿಳನ್ನು ಕಡ್ಡಾಯ ಕಲಿಯಬೇಕೆಂದೂ, ಪ್ರತಿ ಶಾಲಾ ಕಾಲೇಜಿನಲ್ಲೂ ತಮಿಳನ್ನು ಸೆಕೆಂಡ್ ಲಾಂಗ್ವೇಜಾಗಿ ಕಡ್ಡಾಯವಾಗಿ ಓದಲೇಬೇಕೆಂಬ ಶೈಕ್ಷಣಿಕ ಪದ್ಧತಿ ಜಾರಿಗೊಳಿಸುವರೆಂಬ ವದಂತಿ ಎಲ್ಲೆಲ್ಲೂ ಹರಡತೊಡಗಿತ್ತು. ಇದು ಹೊಟ್ಟೆ ಪಾಡಿಗಾಗಿ ತಮಿಳುನಾಡಿನಲ್ಲಿ ನೆಲೆಸಿದ್ದ ಪ್ರತಿ ಹೊರನಾಡಿಗರೂ ಹೊರಗೆ ಅಭಿವ್ಯಕ್ತಿಸಲಾಗದ ಆತಂಕವಾಗಿತ್ತು. ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನನಗೂ. ಇಂತಹ ಸಂದರ್ಭದಲ್ಲೇ ಭೇಟಿಯಾದವಳು ಅವಳು.

1997ರ ಸಮಯವಿರಬೇಕು. ಯಾವುದೋ ಕಾರ್ಯಕ್ರಮಕ್ಕಾಗಿ ಮದರಾಸಿನ ಬಿಸಿಲಿಗೆ ಕಪ್ಪೆತ್ತೆ ಹೋದ ಮುಖವನ್ನು ಫೇಶಿಯಲ್ ಮಾಡಿಸಿಕೊಳ್ಳಲು ಆ ಪಾರ್ಲರ್‌ಗೆ ಹೋಗಿದ್ದೆ. ಕರೆಂಟ್ ಕೈಕೊಟ್ಟ ಹೊತ್ತು. ಗಲ್ಲದಲ್ಲಿ ಕುಳಿತಿದ್ದ ತಮಿಳು–ಒಡತಿ, ಕತ್ತಲಲ್ಲಿ ಮುಳುಗಿ ಹೋದ ಒಂದು ಕೋಣೆ ತೋರಿದಳು. ನೋಡಿದರೆ ಐದಡಿಯೂ ಇರದ ಪುಟ್ಟ ಹುಡುಗಿಯೊಬ್ಬಳು ಕತ್ತಲಕೂಪದಲ್ಲಿ ಬೆವರುತ್ತಾ ನಿಂತಿದ್ದಳು. ನನ್ನನ್ನು ಒಳ ಮಾಡಿಕೊಂಡು, ‘ಹ್ವಾ’ ಅಥವಾ ‘ಹಾಂಗ್’ ಅಂತೇನೋ ತನ್ನ ಪರಿಚಯ ನೀಡಿ, ತಾನು ವಿಯಟ್ನಾಂನಿಂದ ಬಂದವಳೆಂದು ಹೇಳಿದಳು.

ನನಗೋ ಕುತೂಹಲ. ನಮ್ಮ ಪಕ್ಕದ್ದೇ ರಾಜ್ಯವಾದ ಮದರಾಸಿನಲ್ಲಿ ಬದುಕುವುದಕ್ಕೆ ನನ್ನಂಥವರು ದುಃಸಾಹಸಪಡುತ್ತಿರುವಾಗ, ಪ್ರಪಂಚದ ಯಾವುದೋ ಮೂಲೆಯಿಂದ ಈ ಹೆಣ್ಣು ಇಂತಹ ಅಜ್ಞಾತವಾಸದಲ್ಲಿ ಹೇಗೆ ಬದುಕುತ್ತಿದ್ದಾಳೆ? ಆಶ್ಚರ್ಯದಿಂದ ಕೇಳಿದಾಗ, ದೆಷ್ತಿನಿ!( Destiny) ಎಂದು ನಿಟ್ಟುಸಿರನ್ನೆಳೆದ ಅವಳು ನನ್ನ ಮುಖವನ್ನು ಕುರ್ಚಿಯ ಹತ್ತಿರವಿದ್ದ ಒಂದೇ ಒಂದು ದೀಪದ ಬೆಳಕಿಗೆ ಸನಿಹ ಎಳೆದುಕೊಳ್ಳುತ್ತಾ, ಒಂದೂವರೆ ಗಂಟೆ ಮಸಾಜ್ ಮಾಡಿ ಹರ್ಬಲ್ ಫೇಶಿಯಲ್ ಮಾಸ್ಕ್ ಹಾಕಿ ನನ್ನ ಮುಖವನ್ನು ಥಳಥಳ ಹೊಳೆಯಿಸುವಷ್ಟರಲ್ಲಿ ತನ್ನ ಕಳಾಹೀನ ಬದುಕಿನ ಪದರು ಪದರನ್ನೂ ಬಿಚ್ಚಿಟ್ಟಿದ್ದಳು. ಟಕಾರ, ಡಕಾರ, ಶಕಾರಗಳನ್ನು ವಿಚಿತ್ರವಾಗಿ ಉಚ್ಛರಿಸುತ್ತಾ, ವರ್ಬ್‌ಗಳ ಗೊಡವೆಯಿಲ್ಲದ ಒಂದು ಇಂಗ್ಲಿಷ್‌ನಲ್ಲಿ ತನ್ನೊಡಲನ್ನು ಬಸಿದು ಪಿಸುಗುಟ್ಟುತ್ತಾ ಅವಳು ಹೊರ ಹಾಕುತ್ತಾ ಹೋದಂತೆ ನಾನು ನಿಟ್ಟಿಸುರಿಡುತ್ತಾ ಆಲೈಸುತ್ತಾ ಹೋದೆ.

ನನ್ನದು ವಿಯಟ್ನಾಂಯೆಂಬ ಪುಟ್ಟ ದೇಶ, ಮಿಷ್. ಪ್ರಾಯಶಃ ಪ್ರಪಂಚದ ಮತ್ತುಳಿದ ಜನಕ್ಕೆ ಅದು ನಕಾಶೆಯಲ್ಲಿ ಎಲ್ಲಿದೆಯೆಂಬ ಅರಿವೂ ಇರಲಿಕ್ಕಿಲ್ಲ. ತಿಳಿದುಕೊಂಡು ಆಗಬೇಕಾಗಿದ್ದಾದರೂ ಏನು ಮಿಷ್? ಬದುಕು ನೆಮ್ಮದಿಯಾಗಿರುವಾಗ ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಅಲ್ಲವೇ? ನಾ ಹುಟ್ಟುವಾಗಲೇ ಗೆರಿಲ್ಲಾಯುದ್ಧ ಶುರುವಾಗಿದ್ದರೂ, ಅಪ್ಪ, ಅಮ್ಮ, ಅಣ್ಣ, ಇಬ್ಬರು ಅಕ್ಕಂದಿರೊಡನಿದ್ದ ನಂಗೆ ಯುದ್ಧವೆಂದರೇನೆಂದು ಅರ್ಥವಾಗುತ್ತಿರಲಿಲ್ಲವಾದ್ದರಿಂದ ಪ್ರಾಯಶಃ ನಾನು ಸಂತೋಷವಾಗಿದ್ದ ಕಾಲವೆಂದರೆ ಅದೇಯೇನೋಂತಾ ಈಗ ಅನ್ನಿಸುತ್ತಿದೆ...

ಯುದ್ಧ ಶುರುವಾಗಿ ವರ್ಷಗಳೇ ಕಳೆದಿದ್ದರೂ ಯುದ್ಧದ ಬಿಸಿ ನಮಗೆ ಮುಟ್ಟಿದ್ದು ತಡವಾಗಿ ಮಿಷ್. 1978–79ರಲ್ಲಿ ‘Fall of Saigon’ ನಂತರ, ಸುಮಾರು ವರ್ಷ ನಮ್ಮ ದೇಶವನ್ನು ಸಂಪೂರ್ಣ ಛಿದ್ರಗೊಳಿಸಿ ಅಮೆರಿಕವೇನೋ ತನ್ನ ಸೈನ್ಯವನ್ನು ವಾಪಾಸು ಕರೆಸಿಕೊಂಡಿತು. ಆದರೆ ದಕ್ಷಿಣ ವಿಯಟ್ನಾಂನಿಂದ ಬಂದ ನಾವೆಲ್ಲಾ ಮನೆ–ಮಠ ಕಳೆದುಕೊಂಡು ಬೀದಿ ಪಾಲಾಗಿದ್ದೆವು. ಆಗ ನನಗಿನ್ನೂ ಹನ್ನೆರಡು ವರುಷ.

ಯಾವುದೂ ಇನ್ನೂ ಸರಿಯಾಗಿ ಅರ್ಥವಾಗದ ವಯಸ್ಸು. ಒಂದು ರಾತ್ರೋರಾತ್ರಿ ಮನೆಯವರೆಲ್ಲಾ ನೆರೆಹೊರೆಯರೊಂದಿಗೆ ವಲಸೆ ಹೋಗಲು ನಿರ್ಧರಿಸಿ, ಮಧ್ಯ ರಾತ್ರಿ ಗುಟ್ಟಾಗಿ ದೋಣಿ ಹತ್ತಿದರು. ಸುಮಾರು ಎಪ್ಪತ್ತೆಂಬತ್ತು ಜನರಿದ್ದ ಆ ದೋಣಿಯಲ್ಲಿ ಕೂರಲೂ ಜಾಗವಿರಲಿಲ್ಲ. ಅಪ್ಪ, ಅಮ್ಮ, ಅಣ್ಣ, ಇಬ್ಬರು ಅಕ್ಕಂದಿರೊಂದಿಗೆ ನಾನೂ ದೋಣಿ ಏರಿದೆ. ಅದು ಎತ್ತ ಹೊರಟಿದೆಯೆಂಬ ಅರಿವು ಯಾರಿಗೂ ಇರಲಿಲ್ಲ. ಹೇಗಾದರೂ ಬದುಕು ಕಟ್ಟಿಕೊಳ್ಳಲು ನಮ್ಮ ದೇಶಕ್ಕಿಂತ ಉತ್ತಮವಾದ ಮತ್ತೊಂದು ಜಾಗವನ್ನಷ್ಟೇ ಬಯಸಿ ಎಲ್ಲರೂ ದೋಣಿಯೇರಿದ್ದರು.

ಮಧ್ಯದಲ್ಲಿ ಎರಡು ಸಲ ಕಡಲ್ಗಳ್ಳರು ನಮ್ಮ ದೋಣಿ ಮೇಲೆ ದಾಳಿ ಮಾಡಿದರು. ನೋಡಲು ಸುಂದರವಾಗಿದ್ದ ನನ್ನಿಬ್ಬರು ಅಕ್ಕಂದಿರನ್ನು ಅವರು ರೇಪ್ ಮಾಡಿ ತಮ್ಮೊಂದಿಗೆ ಕರೆದುಕೊಂಡು ಹೋದರು. ಅದನ್ನು ಪ್ರತಿಭಟಿಸುವ ಶಕ್ತಿ ಯಾರಿಗೂ ಇರಲಿಲ್ಲ. ಈ ಮಧ್ಯೆ ನನ್ನ ತಾಯಿ ಎಲ್ಲಿ ಕಳೆದುಹೋದರೋ ಗೊತ್ತಾಗಲಿಲ್ಲ. ಮಲೇಶಿಯಾದ ದಡ ಸೇರಿದಾಗ ಉಳಿದಿದ್ದು ಕೇವಲ ಮೂವತ್ತಾರು ಜನರು.

ದಾರಿಯಲ್ಲಿ ನನ್ನಣ್ಣನಿಗೆ ವಾಂತಿ ಶುರುವಾಗಿ ಅದು ನಿಲ್ಲದೇ, ಅವನೂ ತೀರಿಕೊಂಡ. ರೆಫ್ಯುಜಿ ಕ್ಯಾಂಪ್ ಸೇರಿಕೊಂಡ ನಂತರ ನನ್ನ ತಂದೆ ಬುದ್ಧಿಭ್ರಮಣೆಗೆ ಒಳಗಾದರು. ಆದರೂ ಅವರಿಗೆ ನನ್ನ ನೆನಪು ಸರಿಯಾಗಿತ್ತು. ನಾನು ಸ್ವಲ್ಪ ಅವರ ಕಣ್ಣಿಂದ ಆಚೀಚೆಯಾದರೂ ಹುಚ್ಚರಂತೆ ಕಿರಿಚಿಕೊಳ್ಳುತ್ತಿದ್ದರು. ಒಂದು ವರ್ಷವಾಗುವಷ್ಟರಲ್ಲಿ ತಂದೆಯವರನ್ನೂ ಕಳೆದುಕೊಂಡೆ...

ನಾನು ಹೆಚ್ಚು ಓದಲಿಲ್ಲ ಮಿಷ್. ರೆಫ್ಯುಜಿ ಕ್ಯಾಂಪ್‌ನಲ್ಲಿದ್ದ ಬೇರೆಯವರ ಯಾರ ಪರಿಚಯವೂ ಅಷ್ಟಾಗಿ ನನಗಿರಲಿಲ್ಲ. ಆದರೆ ನಾವೆಲ್ಲರೂ ಒಂದೇ ಇತಿಹಾಸವನ್ನು ಹಂಚಿಕೊಂಡವರಾದ್ದರಿಂದ ಮತ್ತು ನನ್ನಂತಹದ್ದೇ ವಿಧಿಯಾಟಕ್ಕೆ ಅವರೂ ಬಲಿಯಾಗಿದ್ದರಿಂದ ನನ್ನನ್ನು ಅವರು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು...

ಕೆಲ ವರುಷ ಕಳೆದ ಮೇಲೆ ನಮ್ಮ ರೆಫ್ಯುಜಿ ಕ್ಯಾಂಪ್‌ನಲ್ಲಿದ್ದ ಬಹಳಷ್ಟು ಜನರು ತಾಯ್ನಾಡಿಗೆ ವಾಪಾಸಾದರು. ಒಂದು ದಿನ ಅಂಗಡಿಯಲ್ಲಿ ಒಬ್ಬ ಶ್ರೀಲಂಕಾಹುಡುಗನ ಪರಿಚಯವಾಯಿತು. ತಮಿಳು ಶ್ರೀಲಂಕನ್. ಪರಿಚಯ ಪ್ರೀತಿಗೆ ತಿರುಗಿತು. ಮದುವೆ ಮಾಡಿಕೊಳ್ಳೋಣ ಎಂದ. ನನಗೂ ಯಾರಿರಲಿಲ್ಲ. ತಾಯ್ನಾಡಿಗೆ ವಾಪಾಸಾಗಿ ಆಗಬೇಕಿದ್ದೇನೂ ಇರಲಿಲ್ಲ, ಮಿಷ್. ಮದುವೆ ಮಾಡಿಕೊಂಡು ಶ್ರೀಲಂಕಾಗೆ ಬಂದೆ. ಒಂದು ಮಗು ಹುಟ್ಟಿದ ನಂತರ ಶ್ರೀಲಂಕಾದಲ್ಲಿ ತಮಿಳರ ಸ್ಥಿತಿ ಬಿಗಡಾಯಿಸಿದ್ದರಿಂದ ಮತ್ತೆ ರಾತ್ರೋರಾತ್ರಿ ನಾವು ಗಂಟುಮೂಟೆ ಕಟ್ಟಿಕೊಂಡು ದೋಣಿಯಲ್ಲಿ ರಾಮೇಶ್ವರಕ್ಕೆ ಬಂದೆವು. ನನ್ನನ್ನು ಅವನ ದೂರದ ಸಂಬಂಧಿಕರ ಮನೆಯಲ್ಲಿಟ್ಟು ಅವನು ಮತ್ತೆ ಶ್ರೀಲಂಕಾಗೆ ಹೋದ. ಯಾಕೆ ಮರಳಿ ಹೋದನೆನ್ನುವುದು ಇವತ್ತಿನವರೆಗೂ ಗೊತ್ತಿಲ್ಲ ಮಿಷ್. ಅವನಿಗಾಗಿ ಒಂದು ವರ್ಷ, ಎರಡು ವರ್ಷ, ಸುಮಾರು ನಾಲ್ಕು ವರ್ಷ ಕಾದರೂ ಅವನ ಸುಳಿವಿಲ್ಲ..

ಮಗು ದೊಡ್ಡದಾಗುತ್ತಿತ್ತು. ಸಂಬಂಧಿಕರು ಅವನೆಲ್ಲೋ ಎಲ್‌ಟಿಟಿಇಯವರ ಕೈಗೆ ಸಿಕ್ಕು ಸತ್ತಿರಬೇಕು, ನಿನ್ನ ಜೀವನ ನೀನು ನೋಡಿಕೋ ಅಂದರು. ಮದರಾಸ್ ದೊಡ್ಡ ಸಿಟಿ, ಅಲ್ಲಿಗೆ ಹೋಗೆಂದು ಸ್ವಲ್ಪ ದುಡ್ಡು ಕೊಟ್ಟು ಕಳುಹಿಸಿದರು. ಬಹಳ ಕಷ್ಟಪಟ್ಟ ಮೇಲೆ ಇಲ್ಲಿಗೆ ಬಂದು ಸೇರಿಕೊಂಡೆ, ಮಿಷ್..
ಈಗ ಮದರಾಸಿಗೆ ಬಂದು ಆರು ವರುಷವಾಯಿತು. ಮಗನಿಗೆ ಹತ್ತು ವರುಷ. ದೊಡ್ಡ ಕಾನ್ವೆಂಟ್‌ನಲ್ಲಿ ಇಂಗ್ಲೀಷ್ ಮೀಡಿಯಂ, ಸಿಬಿಎಸ್‌ಸಿ ಸಿಲಬಸ್ ಸ್ಕೂಲಿನಲ್ಲಿ ಓದುತ್ತಿದ್ದಾನೆ. ನೀವು ಸ್ಕೂಲ್ ಟೀಚರ್ ಅಂದ್ರಲ್ಲಾ ಮಿಷ್, ಒಂದು ಸಹಾಯ ಮಾಡಬೇಕು ಮಿಷ್!

ನಿರ್ಭಾವುಕಳಾಗಿ ಅವಳು ತನ್ನ ಕಥೆ ಹೇಳಿ, ನನ್ನ ಸಹಾಯ ಯಾಚಿಸಿದಾಗ ನಾನು ಆಶ್ಚರ್ಯದಿಂದ ಏನು ಸಹಾಯವೆಂಬಂತೆ ಅವಳನ್ನು ನೋಡಿದೆ.
ಮಿಷ್, ಈ ಸಲದ ಎಲೆಕ್ಷನ್‌ನಲ್ಲಿ ಎಐಎಡಿಎಂಕೆಗೆ ಓಟು ಹಾಕಿ. ಡಿಎಂಕೆ ಬಂದರೆ ಶಾಲೆಗಳಲ್ಲಿ ತಮಿಳು ಕಂಪಲ್ಸರಿ ಮಾಡುತ್ತಾರೆ. ನನ್ನ ಮಗ ಸ್ಕೂಲಿನಲ್ಲಿ ಚೆನ್ನಾಗಿ ಓದುತ್ತಿದ್ದಾನೆ ಮಿಷ್. ನಂಗೆ ಈ ಪಾರ್ಲರ್‌ನಿಂದ ಬರೋದು ನಾಲ್ಕು ಸಾವಿರವಷ್ಟೇ. ಬ್ರೈಡಲ್ ಮೇಕ್‌ಅಪ್ ಅದೂ ಇದೂಂತಾ ಮೇಲೊಂದು ಮೂರನಾಲ್ಕು ಸಾವಿರ ಬರುತ್ತೆ. ಅದರೊಳಗೇ ಮನೆಬಾಡಿಗೆ, ಎಲಕ್ಟ್ರಿಸಿಟಿ, ಸ್ಕೂಲ್ ಫೀಸೆಲ್ಲಾ ಆಗಬೇಕು. ಟ್ಯೂಷನ್‌ಗೆ ಹಾಕೋಕೆ ದುಡ್ಡಿಲ್ಲ. ಎಐಎಡಿಎಂಕೆ ಬಂದರೆ ಶಾಲಾ ಕಾಲೇಜಿನಲ್ಲಿ ತಮಿಳು ಕಂಪಲ್ಸರಿ ಮಾಡಲ್ಲಾಂತಾ ಹೇಳ್ತಿದ್ರು. ಈ ಸಲ ಎಲೆಕ್ಷನ್‌ನಲ್ಲಿ ಅಮ್ಮಾಗೆ ಓಟ್ ಹಾಕಿ, ಮಿಷ್..
ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ?

ನಾನಿನ್ನೂ ಅವಳು ಮಗುಚಿದ ಇತಿಹಾಸದ ಪುಟಗಳಲ್ಲಿ ಕಳೆದುಹೋಗಿದ್ದೆ. ಇತಿಹಾಸದ ಪುಟ ಪುಟಗಳಲ್ಲೂ ದಾಖಲಾಗಿ ಮಲಗಿ ನಿದ್ರಿಸುತ್ತಿರುವ ಪ್ರತಿ ಚರಿತ್ರೆಯ ಹಿಂದೆಯೂ ದಾಖಲಾಗದ ಹೀಗೊಂದು ವಾಸ್ತವದ ತುಣುಕುಗಳಿರಬಹುದೇ ಎಂಬ ವಿಭ್ರಾಂತಿಯಲ್ಲಿ ಆ ರಕ್ತಸಿಕ್ತ ಪುರಾತನ ಕಥೆಯಲ್ಲಿ ಪುಟಿದ ಭಾವನಾತ್ಮಕ ಸಂಬಂಧ ಬೆಸೆಯುತ್ತಿರುವ ಸಂದರ್ಭದಲ್ಲೇ ಅದಕ್ಕೊಂದು ಅನಿರೀಕ್ಷಿತ ತಿರುವನ್ನು ಅವಳು ನೀಡಿದ್ದಳು.

ಆದರೂ ಈ ಘಟನೆ ನನ್ನ ಮನಸ್ಸಿನಿಂದ ಮಾಸಿಲ್ಲ. ಚಿಲಿಯ ಕತೆಗಾರ್ತಿ ಇಸಬೆಲ್ಲಾ ಅಯೆಂದೆಯ ‘ಪೌಲಾ’ ಹಾಗೂ ಆಫ್ಘಾನಿಸ್ತಾನದ ಸುರೈಯಾ ಸಾದೀದ್‌ರ ‘ಫರ್‌ಬಿಡನ್ ಲೆಸೆನ್ಸ್ ಇನ್ ಕಾಬೂಲ್ ಗೆಸ್ಟ್ ಹೌಸ್’ ಓದುವಾಗ, ಯಾವ ಯಾವುದೋ ರಾಜಕೀಯ ಹಿನ್ನೆಲೆಯಲ್ಲಿ ತಮ್ಮ ದೇಶವನ್ನು ಬಿಟ್ಟು ವಲಸೆ ಹೋಗುವವರ ಮಾನಸಿಕ ಸ್ಥಿತಿ, ಛಿದ್ರಗೊಳ್ಳುವ ಅವರ ವೈಯಕ್ತಿಕ ಬದುಕುಗಳನ್ನೆಲ್ಲಾ ನೆನೆವಾಗ ಮತ್ತೆ ಕಣ್ಣ ಮುಂದೆ ಅದೇ ಹೆಣ್ಣು! ಟರ್ಕಿ ಸಮುದ್ರ ಕಿನಾರೆಯಲ್ಲಿ ಮಕಾಡೆ ಮಲಗಿದ ಸಿರಿಯಾದ ಐದು ವರುಷದ ಎಳೇ ಮಗು ಅಲನ್ ಕುರ್ದಿಯ ಅನಾಥ ನಿಶ್ಚೇಷ್ಟದೇಹ ನೋಡುವಾಗಲೂ ಮತ್ತವಳದ್ದೇ ಮುಖ! ಒಂದು ಗಾಜಿನ ವಸ್ತು ಒಡೆದು ಚೂರು ಚೂರಾಗುವ ಹಾಗೆ ಒಂದು ಅಖಂಡ ರಾಷ್ಟ್ರವೇ ಛಿದ್ರವಾಗುವುದೆಂದರೆ !

ಚಿಲಿ ಬಿಟ್ಟು ವೆನೆಜೂಲಾಕ್ಕೆ ವಲಸೆ ಹೋದ ಇಸೆಬೆಲ್ಲಾ ಅಯೆಂದೆ, ಇವೆಲ್ಲಾ ವಿಧಿಯ ಕೈವಾಡ! No one can change the history! ಒಂದು ನೆಲೆಯಲ್ಲಿ ಭದ್ರವಾಗಿ ನೆಲೆ ನಿಂತಿರುವವರೆಗೂ ನಮ್ಮೊಳಗಿನ ಶಕ್ತಿ ನಮಗೇ ಗೊತ್ತಿರುವುದಿಲ್ಲ. ಎಲ್ಲ ಕಳೆದುಕೊಂಡ ಮೇಲೂ ಬದುಕುವ ಛಲ ಮತ್ತು ಹೋರಾಡುವ ಮನೋಬಲ ನಮ್ಮಲ್ಲಿ ಮೊಳೆತಾಗಲೇ ನಮಗದರ ಅರಿವಾಗುವುದು ಎಂದಿದ್ದಾಳೆ.

ತನ್ನ ಮಗನ ಹಿತಕ್ಕಾಗಿ ತನಗರಿವಿಲ್ಲದೆ ಅವಳು 2001ರ ಚುನಾವಣೆಗೆ ಮಾಡಿದ ಪ್ರಚಾರವೇ ಇದು? ಜಗತ್ತಿನ ಯಾವ ಯಾವುದೋ ಮೂಲೆಗಳಲ್ಲಿ ಅಲೆಯುತ್ತಾ ಸಾಗುತ್ತಿರುವ ಅವಳಿಗೆ ಮತ್ತು ಅವಳಂಥವರಿಗೆ ಜಲ, ನೆಲ, ಭಾಷೆಯನ್ನೂ ಮೀರಿ ಕೇವಲ ಬದುಕನ್ನಷ್ಟೇ ಹೆಕ್ಕುವ ಅನಿವಾರ್ಯ ಸ್ಥಿತಿಯೆ? ಎಐಎಡಿಎಂಕೆ ಬಂದರೆ ತಮಿಳು ಕಡ್ಡಾಯವಾಗುವುದಿಲ್ಲವೆಂದು ಅವಳಿಗೆ ಹೇಳಿದವರಾದರೂ ಯಾರು?

ಇದಾದ ನಂತರ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ತಮಿಳುನಾಡು ಸೇರಿದೆ. ತಮಿಳುನಾಡಿನ ಮೊದಲ್ ಅಮೈಚ್ಚರ್ ಮತ್ತೊಮ್ಮೆ, ಮಗದೊಮ್ಮೆ ಗೆದ್ದು ಬಂದಿದ್ದಾರೆ. ಸುಪ್ರೀಂ ಕೋರ್ಟ್, ಪ್ರಾಂತೀಯ ಭಾಷೆ ಕಡ್ಡಾಯವಲ್ಲ, ಅವರವರ ಆಯ್ಕೆಯ ಭಾಷೆಯಲ್ಲಿ ಓದುವ ಹಕ್ಕು ಎಲ್ಲರಿಗೂ ಇದೆಯೆಂಬ ಆಜ್ಞೆಯನ್ನು ಹೊರ ತಂದೂ ಅನೇಕ ವರುಷಗಳುರುಳಿವೆ. ಆಕೆಯ ಮಗ ಇಷ್ಟರಲ್ಲಾಗಲೇ ಓದು ಮುಗಿಸಿ, ಒಳ್ಳೆ ಕೆಲಸ ಹಿಡಿದು, ಕಡೆಗಾಲದಲ್ಲಾದರೂ ತನ್ನ ತಾಯಿಗೆ ನೆಮ್ಮದಿಯ ಬದುಕನ್ನು ಕೊಟ್ಟಿರಬಹುದೆಂದು ಭಾವಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.