ಪಬ್ಲಿಕ್ ಸ್ಥಳಗಳಲ್ಲಿ ಲೇಡೀಸ್ ಕಾರ್ನರ್ಗಳಿರುವುದು ಸಾಮಾನ್ಯ. ಶಾಪಿಂಗ್ ಮಾಲ್ಗಳಲ್ಲಿ ಬಳೆ ಅಂಗಡಿಗಳು, ಲಿಪ್ಸ್ಟಿಕ್, ಕಾಜಲ, ಒಳಉಡುಪುಗಳ ಸಂತೆಯನ್ನೇ ಲೇಡೀಸ್ ಕಾರ್ನರ್ ಎಂದು ಕರೆಯುವುದು. ಅಲ್ಲಿರುವ ತರಾವರಿ ಜಗತ್ತು ಹೆಂಗಸರಿಗಾಗಿ ಹೆಂಗಸರಿಗೋಸ್ಕರವೇ ಇರುವಂತಹ ಮಾಲುಗಳನ್ನು ಹರವಿರುತ್ತದೆ. ಇಲ್ಲಿನ ಗ್ರಾಹಕರು ಹೆಣ್ಣುಗಳು ಮಾತ್ರವೇ. ಅವರ ಖಾಸ್ಬಾತ್ಗಳಲ್ಲಿ ಕೂಡ ಇಂತಹ ಅನೇಕ ಸಂತೆಗಳ ಪ್ರಸ್ತಾಪ ಆಗುತ್ತಲೇ ಇರುತ್ತವೆ. ಎಲ್ಲಿ ಒಳ್ಳೆಯ ವಸ್ತು ಸಿಗಬಹುದು? ಎಲ್ಲಿ ಲೇಡೀಸ್ ಗ್ರಾಹಕರನ್ನು ಚೆನ್ನಾಗಿ ಉಪಚರಿಸುತ್ತಾರೆ? ಎಂಬ ಬಗ್ಗೆ ಪ್ರಾಸಂಗಿಕವಾಗಿಯಾದರೂ ಮಾತನಾಡಿಕೊಂಡಿರಲಾಗುತ್ತದೆ. ಇದೀಗ ನಾನು ಗಮನ ಸೆಳೆಯಬೇಕೆಂದಿರುವುದು ಈ ರೀತಿಯ ಕಾರ್ನರ್ ಪಾಲಿಟಿಕ್ಸ್ ಬಗ್ಗೆಯೇ.

ಹೆಣ್ಣು-ಕಾರ್ನರ್ಗಳನ್ನು ಹೊಂದಿದ ಕಾಸ್ಮೆಟಿಕ್ಸ್ ಪ್ರಪಂಚದಲ್ಲಷ್ಟೇ ಅಲ್ಲ, ಜ್ಞಾನವಲಯಗಳಲ್ಲೂ ಇದರ ಗುರುತುಗಳು ದಟ್ಟವಾಗಿಯೇ ಇವೆ. ಓದು–ಬರಹ ಎನ್ನುವುದನ್ನು ಹೆಣ್ಣಿನಿಂದ ದೂರವಿಡುತ್ತ ಬಂದ ಚರಿತ್ರೆಯ ಹೆಜ್ಜೆಗತಿಗಳಂತಿರಲಿ, ಇಂದಿಗೂ ಪರಿಸ್ಥಿತಿ ಬದಲಾಗಿದೆ ಎಂದೆನಿಸುವುದಿಲ್ಲ. ಪತ್ರಿಕೆಗಳು, ಸಮೂಹ ಮಾಧ್ಯಮಗಳು ಇತ್ಯಾದಿಗಳಲ್ಲಿ ದಿನನಿತ್ಯ ನಾವು ಕಾಣುವ ಲೇಡೀಸ್ ಕಾರ್ನರ್ ವಿಶೇಷ ಏನೆಂದರೆ ಅವರನ್ನು ಅಡುಗೆ, ಫ್ಯಾಶನ್, ಸಂಬಂಧ ಸುಧಾರಣೆ ಮುಂತಾದ ಕೆಲವೇ ಕೆಲವು ವಿಷಯಗಳಿಗೆ ಸೀಮಿತಗೊಳಿಸಿ ಅವರ ಪುಟಗಳನ್ನಾಗಿಸುವುದು; ಕೌಟುಂಬಿಕ ಸಂಗತಿಗಳ ಘರ್ಷಣೆಗಳನ್ನು ವಿಜೃಂಭಿಸಿ ಧಾರಾವಾಹಿಗಳನ್ನು ಲೇಡೀಸ್ ಕಾರ್ನರ್ ಆಗಿ ಸೃಷ್ಟಿಸುವುದರಿಂದ ಹೆಣ್ಣನ್ನು ಒಂದು ಬುದ್ಧಿವಂತಿಕೆಯ, ಸಾಧನೆಯ ಜಗತ್ತಿನಿಂದ ಹೊರಗುಳಿಸುವ ಜಾಣ ನಡೆ ಕಾಣುತ್ತಿದೆಯೇ ಎನ್ನುವುದರ ಬಗ್ಗೆ ಆಲೋಚಿಸಬೇಕಿದೆ.

ಕೈಯಲ್ಲಿ ಪುಸ್ತಕ ಹಿಡಿಯುವುದು ಎಂದರೆ ಅದು ಸಾಂಪ್ರದಾಯಿಕವಾಗಿ ಒಗ್ಗದ ಚಿತ್ರ. ಪುನರುಜ್ಜೀವನ ಕಾಲದ ಇಂಗ್ಲೆಂಡಿನಲ್ಲಿ ಹೆಂಗಸರು ಪುಸ್ತಕದ ವ್ಯವಹಾರಗಳನ್ನೆಲ್ಲ ನಿಭಾಯಿಸುತ್ತಿದ್ದರಂತೆ. ಆದರೆ ಅದೇ ಆಧುನಿಕತೆ ಅಡಿಯಿಡುತ್ತಿದ್ದ ಇಂಗ್ಲೆಂಡಿನಲ್ಲಿ ಹೆಣ್ಣು ಕವಿಯಾಗುವುದು ಎಂದರೆ ವ್ಯಭಿಚಾರಿಣಿಯಾಗುವುದು ಎಂಬ ಅರ್ಥ ಇತ್ತೆಂದು ಹೇಳಲಾಗುತ್ತದೆ. ಇದಲ್ಲವೆ ವೈರುಧ್ಯ?

ಓದು–ಬರಹ ಎನ್ನುವುದು ಯಾವಾಗಲೂ ಹೆಣ್ಣಿಗೆ ನಿಷೇಧಿತ ಕ್ಷೇತ್ರವೇ ಎನ್ನುವುದನ್ನು ಚರಿತ್ರೆ ಹೆಜ್ಜೆ ಹೆಜ್ಜೆಗೂ ನಿರೂಪಿಸುತ್ತದೆ. ಹೆಣ್ಣಿಗ್ಯಾಕೆ ಓದು ಬರಹ? – ಎನ್ನುವ ಪ್ರಶ್ನೆ ಸದಾಕಾಲ ಕೇಳಿಕೊಳ್ಳುವಂಥದ್ದೇ. ತಲತಲಾಂತರದಿಂದ ಹೆಣ್ಣು ಓದುತ್ತಾಳೆಂದರೆ ಗಂಡಸಿಗೆ ಭಯ, ಆತಂಕಗಳಿರುವಂತಿದೆ. ಅವಳು ಎಷ್ಟು ಓದಬೇಕು? ಏನನ್ನು ಓದಬೇಕು? ಎನ್ನುವ ಸಂಗತಿಗಳನ್ನೆಲ್ಲ ಗಂಡಸರು ತುಂಬ ಆತಂಕಗಳಿಂದಲೇ ನಿರ್ವಹಿಸುತ್ತಾರೆ ಎನಿಸುತ್ತದೆ.

ಇಂಗ್ಲಿಷಿನ ಮಹತ್ವದ ಕವಿ ಮಿಲ್ಟನ್ ತನ್ನ ಮಗಳು ಇಂಗ್ಲಿಷ್ ಬಿಟ್ಟು ಬೇರೊಂದು ಭಾಷೆ ಕಲಿಯುವ ಅಗತ್ಯವಿಲ್ಲ (one tongue is enough for any woman) ಎಂದು ಟಂಗ್ ಎನ್ನುವ ಪದದ ಮೇಲೆ ಆಟವಾಡಿ ತಮಾಷೆ ಮಾಡಿದ. ವಸಾಹತುಶಾಹಿ ಕಾಲದಲ್ಲಿ ಸ್ತ್ರೀಶಿಕ್ಷಣ ಮೊಳೆಯುತ್ತಿದ್ದ ಸಂದರ್ಭದಲ್ಲೂ ಹೆಣ್ಣು ಓದಿ ಏನು ಮಣೆಗಾರಿಕೆ ಮಾಡಬೇಕಿದೆಯಾ? ಓದಿ ಕಲೆಕ್ಟರ್ ಆಗಬೇಕಿದೆಯಾ? ಎಂಬ ಮಾತುಗಳು ಸಮಾಜದಲ್ಲಿ ಹರಿದಾಡುತ್ತಿದ್ದವಂತೆ. ಈ ತರದ ನಿರುತ್ಸಾಹದ ಮಾತುಗಳು, ಅಡೆತಡೆಗಳು ಹೆಣ್ಣಿನ ಓದನ್ನು ಒಂದು ವಿಶೇಷ ವಲಯದಲ್ಲಿ ಇಟ್ಟುಬಿಟ್ಟಿವೆಯಲ್ಲವೆ?

ಓದು ಎಂದರೆ ವೈಧವ್ಯ – ಎಂದು ಹೆದರುತ್ತಿದ್ದ ಹತ್ತೊಂಬತ್ತನೇ ಶತಮಾನದಲ್ಲಿ ಬದುಕಿದ ಬಂಗಾಳದ ರಾಸುಂದರಿ ದೇವಿ ಎಂಬ ಹೆಣ್ಣು ತನ್ನ ಆತ್ಮಕಥನ, ಅಮರ್ ಜಿಬಾನ್(1865)ನಲ್ಲಿ ತನ್ನ ಓದಿನ ಕುರಿತು ವಿವರ ನೀಡುತ್ತಾಳೆ. ಪ್ರಾಥಮಿಕ ವಿದ್ಯಾಭ್ಯಾಸದ ಆರಂಭದ ದಿನಗಳಲ್ಲೇ ಅವಳಿಗೆ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಾಗಿ ಬಂದಿತು. ಅಲ್ಲಿಂದ ಓದು, ವಿದ್ಯೆ ಎಲ್ಲ ಮರೆವೆಗೆ ಸರಿದಂತಾಯಿತು. ಒಂದು ದಿನ, ಗಂಡ ಚೈತನ್ಯಭಾಗವತ ತಂದು ಮಗನಿಗೆ ಆ ಪುಸ್ತಕವನ್ನು ಜೋಪಾನ ಮಾಡುವಂತೆ ಹೇಳಿದ. ರಾಸುಂದರಿಗೆ ಅದನ್ನು ಓದುವ ಚಪಲ ಉಂಟಾಯಿತಂತೆ.

ಕಷ್ಟಪಟ್ಟು ಒಂದು, ಎರಡು ಅಕ್ಷರಗಳನ್ನು ಕೂಡಿಸಿಕೊಂಡು ಎರಡು ಪುಟ ಓದಿದ ನಂತರ ಓದಿನ ಹಸಿವು ಅವಳನ್ನು ಬಿಡಲಿಲ್ಲ; ಆವರಿಸಿಕೊಂಡು ಬಿಟ್ಟಿತು. ಅದನ್ನು ಪೂರ್ಣ ಮುಗಿಸುವ ತನಕ ಮನಸ್ಸು ಬಿಡಲು ತಯಾರಿರಲಿಲ್ಲ. ಹೀಗೆ ತಾನು ಓದುವುದನ್ನು ಆಕೆ ದೈವಸಂಕಲ್ಪ ಎನ್ನುತ್ತಾಳೆ. ಇಪ್ಪತ್ತೊಂದನೇ ಶತಮಾನದಲ್ಲಿ ಓದು ಎನ್ನುವುದು ಹೀಗೆ ದೈವಪ್ರೇರಿತವಾಗಬೇಕಿಲ್ಲ. ಆದರೆ ಇಂದಿಗೂ ಓದಿನ ಪ್ರಪಂಚದ ಚುಕ್ಕಾಣಿ ಹಿಡಿದು ನಡೆಸುವ ದೇವರುಗಳು ಬಂಡವಾಳಶಾಹಿ ವರ್ಗದ ಅಭಿರುಚಿ ನಿರ್ಮಾಪಕರು. ಇವರು ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಓದುಗರನ್ನು ರೂಪಿಸುವ ಹೊಣೆಹೊತ್ತ ದೈವೀಕರು.

ಓದು–ಬರಹಗಳೆನ್ನುವುದು ಆಧುನಿಕ ಕಾಲದ ಬಹುದೊಡ್ಡ ಚಟುವಟಿಕೆಯಾಗಿ ಬೆಳೆಯತೊಡಗಿದಂತೆ ಅವುಗಳ ಗ್ರಾಹಕರು ಯಾರು ಎನ್ನುವುದನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಗದ್ಯಬರಹಗಳಾದ ಕಾದಂಬರಿಗಳ ಬೆಳವಣಿಗೆಯ ಹಿಂದೆ ಮಧ್ಯಮವರ್ಗ ಮತ್ತು ಹೆಂಗಸರ ಕಾಣಿಕೆ ಇದೆ. ಅವರ ಓದುಗಳು ಕಾದಂಬರಿಗಳಿಗೆ ಮಾರುಕಟ್ಟೆ ಒದಗಿತು. ಮನೆ, ಕುಟುಂಬ, ಗಂಡು–ಹೆಣ್ಣಿನ ಸಂಬಂಧಗಳನ್ನು ಹೊಂದಿದ ಸೆಂಟಿಮೆಂಟಲ್ ಆದ ಕಥನಗಳು ತಮ್ಮದೇ ಆದ ಒಂದು ಅಭಿರುಚಿಯನ್ನು ನಿರ್ಮಾಣ ಮಾಡಿದವು.

ಇದರ ಹಿಂದೆ ನಿರೀಕ್ಷೆಯಿದ್ದುದು ಹೆಣ್ಣುಓದುಗರದ್ದೇ. ಅವರು ಸೃಷ್ಟಿಸುವ ಮತ್ತು ಓದುವ ಸಾಹಿತ್ಯ ಅಡುಗೆಮನೆಯದು ಎನ್ನುವ ಧೋರಣೆ ಹುಟ್ಟಿದ್ದು ಇಲ್ಲಿಂದಲೇ. ಓದುವಿಕೆಗೂ ವಿದ್ವತ್ತಿಗೂ ನಡುವೆ ಆಳವಾದ ಕಂದರ ಸೃಷ್ಟಿಯಾಗಿದ್ದೂ ಇಲ್ಲಿಯೇ. ಅಭಿರುಚಿ ನಿರ್ಮಾಣ ಮತ್ತು ವಿದ್ವತ್ತು ಎರಡೂ ವಿಭಿನ್ನವಾದ ಚಟುವಟಿಕೆಗಳಾಗಿ, ಓದು ಎನ್ನುವುದು ಶ್ರೇಷ್ಠತೆಯ ಸೊತ್ತಾಗಿ ಮೆರೆಯುವಂತಾಗಿದ್ದು ಇಲ್ಲಿಯೇ.

ಹಾಗೆ ನೋಡಿದರೆ ಕಾದಂಬರಿ ಎನ್ನುವುದು ಸ್ತ್ರೀಕೇಂದ್ರಿತವಾಗಿ ರೂಪುಗೊಂಡಿದ್ದು ಆಕಸ್ಮಿಕವೇನಲ್ಲ. ಅವರ ಜಗತ್ತುಗಳ ವಿವರಗಳಿಲ್ಲದೆ ಕಾದಂಬರಿ ಎನ್ನುವುದು ಸಾರ್ವತ್ರಿಕವಾದ ಚಹರೆಯನ್ನು ಪಡೆಯುವುದು ಬಹುಪಾಲು ಅಸಾಧ್ಯ. ಜಗತ್ತಿನ ಶ್ರೇಷ್ಠ ಕಾದಂಬರಿಗಳಾದ ಅನ್ನಾಕರೆನಿನಾ, ಮದಾಂ ಬಾವರಿ, ಮದರ್ ಮುಂತಾದ ಕಾದಂಬರಿಗಳು ಸ್ತ್ರೀಕೇಂದ್ರಿತವೇ ಆಗಿವೆ. ಕನ್ನಡದ ಮಟ್ಟಿಗೆ ಮೊದಲ ಸಾಲಿನ ಕಾದಂಬರಿಗಳಾದ ಇಂದಿರಾಬಾಯಿ, ವಾಗ್ದೇವಿ ಹಾಗು ಕಾನೂರು ಹೆಗ್ಗಡತಿ, ಒಡಲಾಳ ಮುಂತಾದವು ಸ್ತ್ರೀಕಥನಗಳಾಗಿ ಪಡೆದ ಅಪಾರ ಯಶಸ್ಸನ್ನು ನೋಡಬೇಕು.

ಸ್ತ್ರೀಯರ ಕಥನಗಳನ್ನೊಳಗೊಂಡ ಕಾದಂಬರಿ ಜಗತ್ತಿನ ಶ್ರೇಷ್ಠ ಕಥನಮೀಮಾಂಸೆಯನ್ನು ಹುಟ್ಟುಹಾಕುವಂತಾದರೆ ಅವರ ಓದಿನ ಗ್ರಹಿಕೆಯ ಬಗ್ಗೆ ಇರುವ ನಿರ್ಲಕ್ಷ್ಯದ ಧೋರಣೆ ಮಾತ್ರ ಕಸಿವಿಸಿ ಉಂಟು ಮಾಡುತ್ತದೆ. ಹೂವಯ್ಯನ ಎದುರು ಸೀತೆ ತನ್ನ ಚೆಲುವಿಕೆಯ ಹೊರತಾಗಿಯೂ ತಪ್ಪು ಉಚ್ಚಾರ, ಓದಿನ ಕಾರಣಕ್ಕಾಗಿ ಮಂಕಾಗಿ ಕಾಣುವಂತೆ ಹೆಣ್ಣುಓದುಗಳಾಗಿ ಮಂಕಾಗುತ್ತಾಳೆ. ಇಂಗ್ಲಿಷ್ ಮೊದಲ ಸಾಲಿನ ಕಾದಂಬರಿಕಾರ ರಿಚರ್ಡ್ಸ್ಸನ್ ತನ್ನ ಕಾದಂಬರಿಗಳನ್ನು ಹೆಣ್ಣುಓದುಗರಿಗೆ ಓದಿಸಿ, ಅವರ ಅಭಿಪ್ರಾಯ, ಭಾವನೆಗಳನ್ನು ಕೇಳಿ ಕೆಲವೊಮ್ಮೆ ಅವುಗಳಿಗೆ ತಕ್ಕನಾಗಿ ತನ್ನ ಕಥಾಹಂದರವನ್ನು ಬದಲಿಸುತ್ತಲೂ ಇದ್ದನಂತೆ! ಇದಕ್ಕಾಗಿ ಥ್ಯಾಕರೆ ಅವನನ್ನು ಮುಂದೆ ಮುದಿಹೆಂಗಸರಿಗಾಗಿ ಬರೆದ ಸೆಂಟಿಮೆಂಟಲ್ ಕಾದಂಬರಿಗಳ ಕಾದಂಬರಿಕಾರನೆಂದು ಹೀಗಳೆಯುತ್ತಾನೆ.

ವಿಕ್ಟೋರಿಯನ್ ಕಾಲದ ಅನೇಕ ಒಳ್ಳೆಯ ಕಾದಂಬರಿಕಾರರು ಸ್ತ್ರೀಕೇಂದ್ರಿತ ಕಾದಂಬರಿಗಳನ್ನು ಬರೆದವರೇ. ಆದರೆ ತಾವು ಬರೆಯುತ್ತಿರುವುದು ಕಲಾಕೃತಿ, ಹೆಂಗಸರ ಕಾರ್ನರ್ಗೆ ಸಲ್ಲುವಂತಹ ಕೀಳು ಕೃತಿಗಳಲ್ಲ ಎಂದು ಹುಂಬತನದಿಂದ ನಂಬಿಕೊಂಡಿದ್ದರು!

ಹೆಣ್ಣಿನ ಓದಿನಿಂದ ಹೆಣ್ಣಿನದೇ ಆದ ಅಭಿಪ್ರಾಯ ಅವಳದೇ ಆದ ದೃಷ್ಟಿಕೋನ ಆನುಷಂಗಿಕವಾಗಿ ಬೆಳೆಯತೊಡಗುತ್ತವೆ. ಈ ದೃಷ್ಟಿಯಿಂದ ಜಗತ್ತನ್ನು ನೋಡುವ ನೋಟಕ್ರಮವೊಂದು ರೂಪುಗೊಳ್ಳುತ್ತದೆ. ಸಾಹಿತ್ಯದಲ್ಲಿ ಸೃಷ್ಟಿಯಾದ ಹೆಣ್ಣಿನ ಇಮೇಜ್ಗಳನ್ನು ನೋಡಿ ಹೌಹಾರಿದ ಸ್ತ್ರೀವಾದಿಗಳು ಮತ್ತೆ ಮತ್ತೆ ಸಾಹಿತ್ಯ ಓದಿ ಹೆಣ್ಣಿನ ನಿಜವಾದ ಸ್ವರೂಪ ಯಾವುದೆಂದು ನಿರ್ಧರಿಸುವ ಒಳ್ಳೆಯ ಸಾಹಿತ್ಯದ ಹುಡುಕಾಟಕ್ಕೆ ತೊಡಗಿದ್ದು.

ಓದು ಎನ್ನುವುದು ಹೆಣ್ಣಿಗೆ ವಿದ್ರೋಹಾತ್ಮಕವಾದ ಚಟುವಟಿಕೆಯೇ ಸರಿ. ನಮ್ಮ ಸಮಕಾಲೀನರಲ್ಲಿ ಯಾರನ್ನು ಕೇಳಿದರೂ ತಾವು ಕದ್ದು ಕಾದಂಬರಿಗಳನ್ನು ಓದುತ್ತಿದ್ದ ನೆನಪುಗಳನ್ನು ಹೆಮ್ಮೆಯಿಂದ ಹಂಚಿಕೊಳ್ಳುತ್ತಾರೆ. ಓದು ಎನ್ನುವುದು ಹೀಗೆ ಮುಚ್ಚಿಟ್ಟುಕೊಂಡು ಮಾಡಬೇಕಾದ ಕ್ರಿಯೆ ಎನ್ನುವುದರ ಹಿಂದೆ ಮಹಿಳೆಯ ವಿರಾಮದ ಪ್ರಶ್ನೆಯಿದೆ. ವಿರಾಮದಲ್ಲಿ ಪುಸ್ತಕ ಬಿಡಿಸಿ ತನ್ನದೇ ಆದ ಲೋಕಗಳನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅದರಲ್ಲಿ ಮುಳುಗುವುದಕ್ಕೆ ಬೇಕಾದ ಏಕಾಂತವೇ ಇಲ್ಲದಿರುವುದೇ ಓದಿನ ಒಳಬಂಡಾಯಕ್ಕೆ ಕಾರಣ. ಓದು ಎನ್ನುವುದು ವಿರಾಮದ ತಂಗುದಾಣವೂ ಆಗಿದ್ದು ಅದನ್ನು ಪಡೆದುಕೊಳ್ಳುವ ಆಶೆ ಹೆಣ್ಣಿನಲ್ಲಿ ಸುಪ್ತವಾಗಿರುವ ಆಶೆಯೇ ಸರಿ.

ಓದು ಎನ್ನುವುದು ಹೇಗೆ ನಮ್ಮನ್ನು ಮುದಗೊಳಿಸುವ ಚಟುವಟಿಕೆಯೊ ಹಾಗೆಯೇ ರಾಜಕೀಕರಣಗೊಂಡ ಸಂಗತಿಯೂ ಹೌದು. ನಮ್ಮಿಷ್ಟದ ಓದು ಯಾರಿಂದಲೋ ಯಾಕಾಗಿಯೋ ನಿಯಂತ್ರಿಸಲ್ಟಡುವುದು ಒಂದು ಸಮುದಾಯವನ್ನು ಭ್ರೂಣದಲ್ಲಿಯೇ ನಮಗೆ ಬೇಕಾದಂತೆ ತಿದ್ದಿಕೊಂಡಂತೆ. ಓದಿನ ಸೆನ್ಸಾರ್ಶಿಪ್ ಎನ್ನುವುದು ಸ್ವಾರ್ಥದ ಸಂಗತಿಯಷ್ಟೇ ಅಲ್ಲ, ಅಮಾನುಷವಾದ ಸಂಗತಿಯೂ ಹೌದು. ಹೆಂಗಸು ಪುರಾಣ–ಪುಣ್ಯಕಥೆಗಳ ಪುಸ್ತಕ ಓದಬೇಕು, ರತಿವಿಜ್ಞಾನ ಓದಬಾರದು; ಕಲಾವಿಷಯಗಳನ್ನು ಶೈಕ್ಷಣಿಕ ಆಯ್ಕೆ ಮಾಡಿಕೊಳ್ಳಬೇಕು, ವಿಜ್ಞಾನವನ್ನು ಕೈಬಿಡಬೇಕು ಇತ್ಯಾದಿ ಸರಣಿ ಆಗ್ರಹಗಳೇ ಇಲ್ಲಿ ಮೇಲುಗೈಯಾಗುತ್ತಾ ಹಿಂಸಿಸುತ್ತವೆ.

ಈ ಹೆಣ್ಣುಓದಿನ ಸಂಗತಿಯೊಂದಿಗೆ ಮೆತ್ತಿಕೊಂಡ ಒಂದು ನೆನಪನ್ನು ಇಲ್ಲಿ ಹಂಚಿಕೊಂಡು ಈ ಲೇಖನ ಮುಗಿಸುತ್ತೇನೆ. ಚಿಕ್ಕಂದಿನಲ್ಲಿ ನಾವು ಇಷ್ಟಪಟ್ಟು ಓದುತ್ತಿದ್ದ ’ಸುಧಾ’ ವಾರಪತ್ರಿಕೆ ನಮ್ಮ ಮನೆಗೆ ಬರುತ್ತಿತ್ತು. ಒಮ್ಮೆ ಆ ಪತ್ರಿಕೆಯು ಕ್ಯಾಬರೇ ನರ್ತಕಿಯರ ಬಗ್ಗೆ ವಿಶೇಷ ಮುಖಪುಟ ಲೇಖನ ಮಾಡಿತ್ತು. ಆ ಪತ್ರಿಕೆಯನ್ನು ಎಲ್ಲಿ ಮನೆಯ ಹೆಂಗಸರು/ಹುಡುಗಿಯರು ಓದಿಬಿಡುತ್ತಾರೋ ಎಂದು ನಮ್ಮ ಚಿಕ್ಕಪ್ಪ ಅದನ್ನು ಬಂದ ದಿನವೇ ತೆಗೆದಿರಿಸಿಬಿಟ್ಟಿದ್ದರು.

ಆನಂತರವೂ ಆ ಸಂಚಿಕೆ ನಮ್ಮ ಮನೆಯ ಹೆಂಗಸರಿಗೆ ಯಾರಿಗೂ ಸಿಗಲೇ ಇಲ್ಲ. ಇಂದು ನೆನಪಾದಾರೂ ಸಿಟ್ಟು ಬರುತ್ತದೆ. ಈ ಆತಂಕ, ಅಭದ್ರತೆಗಳು ವಾಸ್ತವವಾಗಿ ನಿರಾಧಾರ ಎಂದು ಚಿಕ್ಕಪ್ಪನಿಗೆ ಹೇಳಬೇಕೆನಿಸಿದೆ. ಆದರೆ ಅವರಿಂದು ಇಲ್ಲ. ಅವರ ಸಂತತಿಗಳಾಗಿ ಬೇರೆ ರೂಪದ ಚಿಕ್ಕಪ್ಪಂದಿರು ನನ್ನ ಮತ್ತು ನನ್ನ ಗೆಳತಿಯರ ಓದುಗಳನ್ನು ತಾವೇ ಸ್ವಯಂ ಆಲೋಚಿಸಿ ನಿರ್ಧರಿಸುತ್ತಾರೆ. ಇಂತಹ ಏಕಪಕ್ಷೀಯವಾದ ಗೋಡೆಯನ್ನು ಒಡೆದುಕೊಳ್ಳುವುದೇ ಸ್ವಾತಂತ್ರ್ಯದ ಸವಿ ಎಂದು ಓದುವುದರಲ್ಲಿ ಸವಿಕಂಡುಕೊಂಡ ನಾನು ಭಾವಿಸಿದ್ದೇನೆ. ಹಲವಾರು ಜಗತ್ತುಗಳನ್ನು ಪರಿಚಯಿಸಿದ ಓದು ನನ್ನ ರೆಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.