ಬೇಸಿಗೆ ಬಂತೆಂದರೆ ಐಸ್ ಕ್ರೀಂ ಅಂಗಡಿ, ಜ್ಯೂಸ್ ಅಂಗಡಿಗಳ ಮುಂದೆ ಜನವೋ ಜನ. ಬೇಸಿಗೆಯ ಬಾಯಾರಿಕೆ ನೀಗಲು ಇದೇ ಸುಲಭೋಪಾಯ ಎಂಬ ನಂಬಿಕೆ ಸಾಮಾನ್ಯ. ಆದರೆ ಹೆಚ್ಚಿನ ಜನರು ‘ಬಾಯಾರಿಕೆ ಆಗ್ತಾ ಇತ್ತು , ಸೆಖೆ ಆಗ್ತಾ ಆತ್ತು ಅದಕ್ಕೆ ಐಸ್ ಕ್ರೀಂ ತಿಂದೆ ಆಮೇಲೆ ಗಂಟಲುನೋವು ಬಂತು, ಮತ್ತೆ ಕೆಮ್ಮು ಶುರು ಆಯ್ತು ಅದು ಕಡಿಮೆನೇ ಆಗ್ತಾ ಇಲ್ಲಾ’ ಎಂದು ಹೇಳುತ್ತಾರೆ. ಬಗೆಬಗೆ ತಂಪಾದ ಸೋಡಾ, ತಂಪುಪಾನೀಯಗಳ ಹೆಸರಿನಲ್ಲಿ ಬರುವ ರಸಾಯನಿಕಗಳಿಂದ ತಯಾರಿಸಿದ ಪಾನೀಯಗಳು, ಇವುಗಳನ್ನು ಸೇವಿಸಿ ಹಲವು ಬಗೆಯಲ್ಲಿ ದೇಹವನ್ನು ತಂಪಾಗಿಸಲು ಪ್ರಯತ್ನಿಸುವವರು ಹಲವರು. ಆದರೆ ಇವಾವುವೂ ಬಾಯಾರಿಕೆಯನ್ನು ನೀಗಲು ಸುಲಭ ಉಪಾಯಗಳೇನಲ್ಲ.

ಬಿಸಿಲು ಮತ್ತು ಶ್ರಮಗಳಿಂದ ದೇಹದಲ್ಲಿ ದ್ರವಾಂಶ ಕಡಿಮೆಯಾಗಿದೆ ಎಂದು ದೇಹ ಕೊಡುವ ಸೂಚನೆಯೇ ಬಾಯಾರಿಕೆ. ದೇಹದಲ್ಲಿ ನೀರು ಕಡಿಮೆಯಾದಂತೆಲ್ಲಾ ದೇಹದ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ. ಇದನ್ನು ಸರಿಪಡಿಸಲು ಇರುವ ಉಪಾಯ ವಿಧವಿಧವಾದ ತಂಪಾದ ದ್ರವ ಪದಾರ್ಥಗಳ ಸೇವನೆ. ಇಲ್ಲಿ ಗಮನಿಸಬೇಕಾದ್ದು – ಯಾವುದು ದೇಹವನ್ನು ಆಭ್ಯಂತರವಾಗಿ ತಂಪಾಗಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತದೋ ಆದು ತಂಪು; ಸ್ಪರ್ಶದಿಂದ ತಂಪಾಗಿರುವ ಆಹಾರಗಳೆಲ್ಲವೂ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ನೀರುಮಜ್ಜಿಗೆ, ಹೆಸರುಕಾಳು, ರಸಭರಿತವಾದ ಹಣ್ಣುಗಳು, ಪಾನಕಗಳು, ಎಳೆನೀರು, ಸೌತೇಕಾಯಿ, ಕೋಕಮ್ ಅಥವಾ ಮುರುಗಲ ಹುಳಿಯ ಪಾನಕ, ಸೊಗದೇ ಬೇರಿನ ಶರಬತ್ತು – ಇಂತಹ ಪದಾರ್ಥಗಳನ್ನು ಬೇಸಗೆಯಲ್ಲಿ ಉಪಯೋಗಿಸಬೇಕು. ಇದೇ ರೀತಿ ಕಲ್ಲಂಗಡಿ, ಕರಬೂಜ ಒಟ್ಟಿಗೆ ಸಾಕಷ್ಟು ನೀರಿನ ಸೇವನೆಯೂ ಆರೋಗ್ಯಕಾರಕವೇ.

ಮೊಳಕೆ ಬಂದ ಹೆಸರುಕಾಳನ್ನು ಉಪಯೋಗಿಸುವುದು, ಸೌತೇಕಾಯಿಯನ್ನು ಸೇರಿಸಿ ಕೋಸಂಬರಿಮಾಡಿ ಸೇವಿಸುವುದು ಕೂಡ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹೆಸರುಕಾಳನ್ನು ನೆನೆಸಿ ರುಬ್ಬಿ ಅದನ್ನು ಬಟ್ಟೆಯಲ್ಲಿ ಹಿಂಡಿ ರಸ ತೆಗೆದು ಅದಕ್ಕೆ ಬೆಲ್ಲ ಸೇರಿಸಿ, ಏಲಕ್ಕಿಯನ್ನು ಉದುರಿಸಿ ಪಾನಕ ಮಾಡಿ ಸೇವಿಸುವುದು ಬೇಸಿಗೆಯಲ್ಲಿ ಅತ್ಯಂತ ಉತ್ಕೃಷ್ಟ ಪಾನೀಯವಾಗಿದೆ. ದೇಹದ ದ್ರವಾಂಶವನ್ನು ಸರಿ ಪಡಿಸುವುದರ ಜೊತೆಗೆ ಪಿತ್ತವನ್ನು ಕಡಿಮೆ ಮಾಡಿ ಬೇಸಿಗೆಯಲ್ಲಿ ಉಂಟಾಗುವ ಅಮ್ಲಪಿತ್ತ, ಮೂಗು, ವಸಡು, ಮೂತ್ರ, ಗುದದ್ವಾರದಿಂದ ರಕ್ತ ಹೋಗುವ ಪ್ರಕ್ರಿಯೆಯನ್ನು ಇದು ತಡೆಗಟ್ಟುತ್ತದೆ. ದಾಳಿಂಬೆ, ದ್ರಾಕ್ಷಿ – ಅದರಲ್ಲೂ ಬೀಜವಿರುವ ಕಪ್ಪುದ್ರಾಕ್ಷಿಯನ್ನು ಬೀಜದ ಸಮೇತ ರುಬ್ಬಿ ಸ್ವಲ್ಪ ನೀರು ಸೇರಿಸಿ ಕುದಿಸಿ ತಣ್ಣಗಾದ ಮೇಲೆ ಸೇವಿಸುವುದು ಬಾಯಾರಿಕೆ ತಣಿಸುವುದರ ಜೊತೆಗೆ ದೇಹಬಲವನ್ನು ಹೆಚ್ಚಿಸಿ, ಮೈಯುರಿಯನ್ನು ಕಡಿಮೆ ಮಾಡುತ್ತದೆ. ಒಣದ್ರಾಕ್ಷಿ, ಅಂಜೂರ, ಖರ್ಜೂರ ಇವುಗಳನ್ನು ನೀರಿನಲ್ಲಿ ನೆನೆಸಿ, ಪುಡಿ ಮಾಡಿದ ಭತ್ತದ, ಜೋಳದ ಅಥವಾ ತಾವರೆ ಬೀಜದ ಅರಳು(ಮಕಾನ)ಗಳೊಡನೆ ಕಡೆದು ಅಥವಾ ರುಬ್ಬಿ, ಸಕ್ಕರೆ, ಏಲಕ್ಕಿ ಬೆರೆಸಿ ಪಾನಕದಂತೆ ಮಾಡಿ ಸೇವಿಸುವುದು ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ; ಅಲ್ಲದೆ ಕೆಮ್ಮು, ತುರಿಕೆ, ನೆಗಡಿ ಇತ್ಯಾದಿ ಅಲರ್ಜಿಯಂತಹ ಸನ್ನಿವೇಶವನ್ನೂ ಕಡಿಮೆ ಮಾಡುತ್ತದೆ.

ಮಾವಿನ ಹಣ್ಣಿನೊಡನೆ ಹಸುವಿನ ಹಾಲನ್ನು ಸೇವಿಸುವುದು ವಾಡಿಕೆ. ಆದರೆ ಹಸುವಿನ ಹಾಲು ಮತ್ತು ಹಣ್ಣನ್ನು ಒಟ್ಟಿಗೆ ಸೇವಿಸುವುದು ಅನಾರೋಗ್ಯಕರ. ಮಾವಿನ ಹಣ್ಣಿನೊಡನೆ ತೆಂಗಿನಕಾಯಿಹಾಲನ್ನು ಬಳಸಬಹುದು. ತೆಂಗಿನ ತುರಿಯನ್ನು ರುಬ್ಬಿ ಹಿಂಡಿ ತೆಗೆದ ಹಾಲು ಮಾವಿನ ಹಣ್ಣಿನಿಂದ ಉತ್ಪನ್ನವಾಗುವ ಪಿತ್ತವನ್ನು ಕಡಿಮೆ ಮಾಡುತ್ತದೆ. ಯಾವುದೇ ಹಣ್ಣಿನ ರಸ ಅಥವಾ ಹಣ್ಣುಗಳ ಮಿಶ್ರಣದೊಡನೆ ತೆಂಗಿಕಾಯಿಹಾಲನ್ನು ಬೆರೆಸುವುದು ಉತ್ತಮ. ಬೇಸಿಗೆಯಲ್ಲಿ ಹಸಿ ತರಕಾರಿಗಳ ಸೇವನೆಯು ದೇಹದ ಬಲವನ್ನು ಕಾಪಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ.

ಬೇಸಗೆಯಲ್ಲಿ ಅತಿಸಾರ ಅಥವಾ ಭೇದಿಯನ್ನು ತಡೆಗಟ್ಟಲು ಮತ್ತು ಭೇದಿಯ ಸಂದರ್ಭದಲ್ಲಿ ದ್ರವಾಂಶವನ್ನು ಕಾಪಾಡಲು ಹಾಲು ಒಡೆದ ನೀರು ಆಹಾರರೂಪದಲ್ಲಿರುವ ಉತ್ತಮ ಔಷಧವಾಗಿದೆ. ಅಲ್ಲದೆ ಕಾದಾರಿದ ನೀರಿಗೆ ಅಲ್ಪಪ್ರಮಾಣದಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದು ಒಳ್ಳೆಯದು. ಮಜ್ಜಿಗೆ/ಮೊಸರಿಗೆ ಸಕ್ಕರೆ ಸೇರಿಸಿ (ಲಸ್ಸಿ) ಸೇವಿಸುವುದರಿಂದಲು ಬೇಸಿಗೆಯಲ್ಲಿ ಉಂಟಾಗುವ ವಾಂತಿ–ಭೇದಿಗಳನ್ನು ತಡೆಗಟ್ಟಬಹುದು.

ರಸಾಯನಿಕಗಳಿಂದ ತಯಾರಿಸಿದ, ಆರೋಗ್ಯವನ್ನು ಹಾಳುಮಾಡುವ ಪಾನೀಯಗಳನ್ನು ಸೇವಿಸದೆ ದೇಶೀಪಾನೀಯಗಳನ್ನು ಸೇವಿಸಿ ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.