ಮಾತು ಕಲಿಯುವುದು ಕಷ್ಟ; ಕಲಿತ ಮೇಲೆ ನಿಲ್ಲಿಸುವುದು ಕಷ್ಟ!

ಈ ಮಾತನ್ನು ಒಬ್ಬ ಶಿಕ್ಷಕನಾಗಿ ನಾನು ಹೇಳುವಾಗ ಬಹಳ ಹಿಂಜರಿಕೆಯಾಗುತ್ತದೆ. ಮಗುವಿಗೆ ಸರಿಯಾದ ವಯಸ್ಸಿಗೆ ಮಾತು ಬಾರದಿದ್ದಾಗ ಆತಂಕಕ್ಕೊಳಗಾಗುವ ತಂದೆ–ತಾಯಂದಿರೇ ಮುಂದೆ, ‘ಸರ್, ಇವನು ತುಂಬ ಮಾತಾಡ್ತಾನಂತೆ. ಇವರ ಮಿಸ್ಸು ದಿನಾ ಡೈರೀಲಿ ಬರೆದು ಕಳಿಸ್ತಾರೆ’ ಎಂದು ಹೇಳುತ್ತಾರೆ. ತರಗತಿಯಲ್ಲಿ ಹೆಚ್ಚಿಗೆ ಮಾತನಾಡುವ ಹಕ್ಕು ಕೇವಲ ಶಿಕ್ಷಕರಿಗೆ ಮಾತ್ರವೆ? ಮನೆಯಲ್ಲಿ ಮಕ್ಕಳ ಮಾತು ಕೇಳುವ ತಾಳ್ಮೆ ಹಿರಿಯರಿಗಿದೆಯೆ? ಇತ್ಯಾದಿ ಪ್ರಶ್ನೆಗಳು ಅಲೆಯಂತೆ ಎದ್ದು ನಾನು ಮಗುವಿನತ್ತ ಒಂದು ನಗೆ ಬೀರಿ, ಅಪ್ಪ–ಅಮ್ಮನಿಗೆ ಸಮಾಧಾನ ಹೇಳುತ್ತೇನೆ. ಪ್ರಸ್ತುತ ಶಿಕ್ಷಣದಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ ಎಂಬುದು ಸಮಾಧಾನದ ಅಂಶ. ಮನುಷ್ಯಕುಲವೊಂದೇ ತನ್ನ ಸಂವಹನದ ಸಂಕೇತವನ್ನು ಬಹಳ ಅಚ್ಚುಕಟ್ಟಾಗಿ ರೂಪಿಸಿಕೊಂಡು ಅದನ್ನು ತನ್ನ ಸಂತಾನಕ್ಕೆ ವರ್ಗಾಯಿಸಿಕೊಂಡು ಬರುತ್ತಿದೆ. ಶಬ್ದ(ಪದ) ವಿನ್ಯಾಸವನ್ನಾಗಲೀ ಅಕ್ಷರ ಸಂಕೇತವನ್ನಾಗಲೀ ವಿಶಿಷ್ಟವಾಗಿ ರೂಪಿಸಿಕೊಂಡಿರುವ ಮನುಷ್ಯ ಅದರಲ್ಲಿಯೂ ತನ್ನ ವೈವಿಧ್ಯವನ್ನು ಕಾಪಾಡಿಕೊಂಡು ಬಂದಿದ್ದಾನೆ. ಅಸ್ಪಷ್ಟ ಉಗ್ಗು, ತೊದಲು ನುಡಿಯಿಂದ ಪ್ರಾರಂಭವಾಗುವ ಮಾತಿನ ಕಲಿಕೆ ಆ ಬಳಿಕ ನಿರರ್ಗಳ ವಾಗ್ಝರಿಯಾಗಿ ಪರಿವರ್ತಿತವಾಗುವುದೇ ಒಂದು ಅಚ್ಚರಿ. ಇದೊಂದು ಸಂತಸದ ವಿಚಾರ.

ಮನುಷ್ಯ ಹುಟ್ಟಿನಿಂದ ಮೂಕ, ಮೌನಿ. ಭಾಷೆ – ಮಾತು – ಅವನು ಅನುಕರಣೆಯಿಂದ ಕಲಿತ ಸಂಕೇತ. ಮಾತಿನ ಮೂಲಕವೇ ಅವನು ಮತ್ತೆ ಮೌನದ ಮಹಾಮನೆಯನ್ನು ತಲುಪಬೇಕು, ತಲುಪುತ್ತಾನೆ. ಖಲೀಲ್ ಗಿಬ್ರಾನ್ ಮಾತನ್ನು ಕುರಿತು ಬಹಳ ಸೊಗಸಾಗಿ ಹೇಳುತ್ತಾನೆ:

‘ನಿಮ್ಮ ಆಲೋಚನೆಗಳೊಂದಿಗೆ ನೀವು ಶಾಂತಿಯನ್ನು ಸಾಧಿಸಲಾಗದಾಗ ನೀವು ಮಾತನಾಡುತ್ತೀರಿ. ನಿಮ್ಮ ಹೃದಯದ ಏಕಾಂತತೆ ಅಸಹನೀಯವಾದಾಗ ನೀವು ತುಟಿಗಳಿಂದ ಬದುಕಹೊರಡುತ್ತೀರಿ; ಶಬ್ದವು ನಿಮ್ಮ ಗಮನ ಬದಲಿಸುವಿಕೆ ಹಾಗೂ ಕಾಲಕ್ಷೇಪ. ಅಲ್ಲದೆ, ನಿಮ್ಮ ಮಾತುಗಳ ಮೂಲಕ ನಿಮ್ಮ ಆಲೋಚನೆಗಳನ್ನು ಅರೆಜೀವ ಮಾಡಿರುತ್ತೀರಿ. ಏಕೆಂದರೆ ಆಲೋಚನೆ ಎಂಬುದು ಆಕಾಶದ ಹಕ್ಕಿ. ಅದು ಪದಗಳ ಪಂಜರದಲ್ಲಿ ಗರಿ ಬಿಚ್ಚಿ ಹಾರಲಾಗದು.’

ಬಹಳ ಪರಿಣಾಮಕಾರಿಯಾದ ರೂಪಕದ ಮೂಲಕ ಅವನು ಮಾತಿನ ಮಿತಿಯನ್ನು ತಿಳಿಸಿಬಿಡುತ್ತಾನೆ.

ಜಲಾಲುದ್ದೀನ್ ರೂಮಿ ಇದನ್ನು ಇನ್ನಷ್ಟು ಚಂದವಾಗಿ ಹೇಳುತ್ತಾನೆ: ‘ತುಟಿಗಳು ಮೌನವಹಿಸಿದಾಗ, ಹೃದಯವು ನೂರು ನಾಲಗೆಯಾಗುತ್ತದೆ.’ ಮತ್ತೆ ಹೇಳುತ್ತಾನೆ, ‘ಕೇಳಿ, ನಿಮ್ಮ ಬಾಯಿ ಭದ್ರಪಡಿಸಿ ಮತ್ತು ಸಿಂಪಿಯಂತೆ ಮೌನವಾಗಿರಿ. ಏಕೆಂದರೆ, ಮಿತ್ರ, ನಿನ್ನ ಆ ನಾಲಗೆಯೇ ನಿನ್ನ ಆತ್ಮದ ಶತ್ರು.’

ಮಾತನಾಡದೇ ಇರುವುದು ಮಹಾದರ್ಶವೇನೋ ಸರಿ. ಆದರೆ ಆಡದಿದ್ದರೆ ಜಗದ ವ್ಯವಹಾರ ಹೇಗೆ? ಅದಕ್ಕೆ ಕಗ್ಗದ ತಿಮ್ಮಗುರು ಎನ್ನುತ್ತಾರೆ: ‘ಆಳವನು ನೋಡಿ ಬಗೆದಾಡುವ ಮಾತಿಂಗೆ ರೂಢಿಯರ್ಥವದೊಂದು ಗೂಢಾರ್ಥವೊಂದು, ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು ಕೋಲು ಹುಟ್ಟೊಂದು ಬಲ.’ ಆಡುವ ಪದದ ರೂಢಾರ್ಥ ಮತ್ತು ಗೂಢಾರ್ಥ ತಿಳಿದಿರಬೇಕು. ಏಕೆಂದರೆ ನೀರನ್ನು ದಾಟುವ ದೋಣಿ, ಹಡಗುಗಳಿಗೆ ಹಾಯಿಪಟವೂ ಬೇಕು ಮತ್ತು ನೀರನ್ನು ಹಿಂದೆ ತಳ್ಳುವ ಉಪಕರಣ, ಕೋಲು; ಎರಡೂ ಬೇಕು. ಅಂದರೆ ಮಾತಿನ ಅರ್ಥದ ಆಳ, ಎತ್ತರ, ವಿಸ್ತಾರ ಮತ್ತು ಪ್ರಯೋಜನವನ್ನು ಬಳಸುವವರೂ ಅದನ್ನು ಬಳಸಿಕೊಳ್ಳುವವರೂ ಸರಿಯಾಗಿ ಅರಿತಿರಬೇಕು ಎಂಬುದು ಕಗ್ಗದ ಕವಿಯ ಆಶಯ.

ಮಾತನಾಡುವುದು ಚಂದವೇನೋ ಸರಿ. ಆದರೆ ಯಾವ ಬಗೆಯ ಮಾತು ಅದಾಗಿರಬೇಕು? ಮಾತು ಭಾವವನ್ನು ಹೊರಸೂಸುತ್ತದೆ. ಇಲ್ಲಿ ಪದಗಳ ಆಯ್ಕೆ ಬಹಳ ಮುಖ್ಯಪಾತ್ರವನ್ನು ವಹಿಸುತ್ತದೆ. ಯಾರಿಗೆ ಪದಶ್ರೀಮಂತಿಕೆಯಿದೆಯೋ ಅವರು ಮಾತಿನ ಮಹಾರಾಜರು. ಏಕೆಂದರೆ ಎದೆಯ ಭಾವವನ್ನು ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕಾದರೆ ಅದಕ್ಕೆ ಲಗತ್ತಾದ ಪದ ಅಂಟಿಸಬೇಕು. ಅಂಚೆಯ ಪತ್ರ ತಲುಪಬೇಕಾದರೆ ಅದರ ತೂಕಕ್ಕೆ ತಕ್ಕಂತಹ ನಿಗದಿತ ಮೌಲ್ಯದ ಅಂಚೆಚೀಟಿಯನ್ನು ಲಗತ್ತಿಸುವಂತೆ ಇದು. ಸಂದರ್ಭ, ಭಾವ, ರಾಗದ ಛಾಯೆ ಇವೆಲ್ಲ ಪದದಲ್ಲಿ ಪ್ರತಿಫಲಿಸಬೇಕು. ಇಲ್ಲವಾದರೆ ಸಂವಹನಶಿಲ್ಪದಲ್ಲಿ ಆ ಪದ ಒಡಕು ಇಟ್ಟಿಗೆ ಇಟ್ಟಂತಾಗುತ್ತದೆ.

ದುರ್ಬಲ ಪದಗಳಿಂದ ಕಟ್ಟಿದ ಮಾತಿನ ಸೇತುವೆ ಭಾವದ ಸರಕನ್ನು ದಾಟಿಸುವಲ್ಲಿ ಸೋಲುತ್ತದೆ. ಮಾತು ಪರಿಣಾಮಕಾರಿಯಾಗಿ ಇರಬೇಕು ಎನ್ನುವಾಗ ಬೇಂದ್ರೆಯವರು ಕತ್ತಿ ಝಳಪಿಸಿದಂತೆ ಹೇಳುವುದು ಹೀಗೆ: ‘ಉಸಿರ ಹೆದೆಗೆ ಹೂಡಿದ ಗರಿಯ ಗುರಿಯ ನಿರಿಯಿಟ್ಟು ಬರುತಿದೆ ತೂರಿ ಲೀಲೆಯಲನಾಯಾಸ.’ ಇದನ್ನೇ ಬಹಳ ನವಿರಾಗಿ ಅಣ್ಣನವರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುತ್ತಾರೆ. ಈ ಹೊತ್ತು ಸಂವಹನಶಾಸ್ತ್ರವೇ ಒಂದು ಶಾಖೆಯಾಗಿ ಬೆಳೆದಿದೆ. ಆದರೂ ಜಗತ್ತಿನಲ್ಲಿ ತಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲವೆಂಬ ಕೊರಗು ಉಳಿದಿದೆ, ಹಾಗೇ ಇತರರು ಹೇಳಿದ್ದು ತಮಗೆ ಅರ್ಥವಾಗಲಿಲ್ಲ ಎನ್ನುವವರೂ ಇದ್ದಾರೆ. ಈ ನಿಟ್ಟಿನಲ್ಲಿ ಕೆ.ಎಸ್.ನ. ಅವರ ಮಾತು ನೆನಪಾಗುತ್ತದೆ: ‘ನನ್ನೆದೆಯು ನಿನ್ನೆದೆಯು ನಡುವೆ ಕ್ಷಾರೋದಧಿಯು, ಕಾಡಿನಲಿ ಅತ್ತಂತೆ ಎಲ್ಲ ಹಾಡು.’

ಈ ಉಪ್ಪಿನ ಸಮುದ್ರ ಹಾಲಿನ ಸಮುದ್ರವಾದಾಗಲೇ ಅಲ್ಲಿ ಸೊಗದ ಸಂವಹನ ಸಾಧ್ಯ. ಆದರೆ ಅದು ಸಾಧ್ಯವೇ? ಸಾಧ್ಯ! ಹಾಗಾದಾಗ ಮಾತು ನಿಂತುಹೋಗುತ್ತದೆ, ಮೌನವೇ ಮಾತಾಗುತ್ತದೆ. ರಮಣರ ಬಹುದೊಡ್ಡ ಉಪದೇಶ: ‘ಚುಮ್ಮ ಇರು’. ಪದಗಳು ತಲುಪಿಸಲಾಗದ್ದನ್ನು ಮೌನ ತಲುಪಿಸುತ್ತದೆ. ಮಾತನಾಡುವ ಮುನ್ನ ಮಾತನಾಡಲೇಬೇಕೇ ಎಂದು ಆಲೋಚಿಸಿ ಆಡತೊಡಗಿದರೆ ಮಾತು ಕಡಿಮೆಯಾಗುತ್ತ ಬರುತ್ತದೆ; ಕೊನೆಗೆ ಅದು ಮೌನದಲ್ಲಿ ನೆಲಗೊಳ್ಳುತ್ತದೆ. ಮಾತಿನ ನದಿ ಮೌನದ ಸಮುದ್ರ ಸೇರುವವರೆಗೂ ಅದರ ಗದ್ದಲ ಅನಿವಾರ್ಯ. ಒಮ್ಮೆ ಅದು ಸಮುದ್ರ ಸೇರಿದ ಮೇಲೆ ಮುಗಿಯಿತು. ಅಲ್ಲಿ ಮೌನವೇ ಮಾತು. ಇಂತಹ ಸ್ವಭಾವ ನಮ್ಮದಾದರೆ ಬದುಕು ಸುಂದರವಾಗುತ್ತದೆ.

(ಲೇಖಕ: ಶಿಕ್ಷಣತಜ್ಞ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.