ಸುಗಂಧಭರಿತ ಬೇಲಿ, ಅಡಿಕೆ ದಬ್ಬೆ ಬೇಲಿ, ತರಕಾರಿ ಬೇಲಿ, ಔಷಧೀಯ ಬೇಲಿ, ಒತ್ತಾದ ಬೇಲಿ, ಅಗಲವಾದ ಬೇಲಿ, ಬಳ್ಳಿಗಳ ಬೇಲಿ, ಮುಳ್ಳು ಬೇಲಿ, ಕಹಿರುಚಿಯ ಬೇಲಿ, ಕಲ್ಲಿನ ಬೇಲಿ, ಸಿಮೆಂಟ್ ಬೇಲಿ... ಅಬ್ಬಬ್ಬಾ ಎಷ್ಟೊಂದು ಬಗೆಗಳು. ಹಾಗಿದ್ದರೆ ನಿಮ್ಮ ಬೇಲಿ
ಹೇಗಿರಬೇಕು...?

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನಾಣ್ಣುಡಿ ಎಲ್ಲರಿಗೂ ಪರಿಚಿತ. ರಕ್ಷಕರೇ ಭಕ್ಷಕರಾದ ಸಂದರ್ಭಗಳಲ್ಲಿ ಈ ಮಾತು ಹೇಳುವುದು ರೂಢಿ. ಆದರೆ ನಿಜವಾಗಿಯೂ ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಏನಾದೀತು...?

ಈ ಪ್ರಶ್ನೆಯನ್ನು ಹೊಲ, ತೋಟ, ಗದ್ದೆಗಳಿಗೆ ಬೇಲಿ ಕಟ್ಟುವ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಹೌದು. ಬೇಲಿ ಹಾಕುವುದು ಕೂಡ ಒಂದು ಕಲೆ. ನಿಮಗೆ ಗೊತ್ತೇ? ಎಷ್ಟೋ ಸಂದರ್ಭಗಳಲ್ಲಿ ನೀವು ಬೇಲಿಗಳಿಗೆ ಹಾಕುವ ಗಿಡ- ಮರಗಳು ನಿಮ್ಮ ತೋಟ, ಹೊಲದ ಸಾರವನ್ನೇ ಹೀರಿಬಿಡುತ್ತವೆ. ಇದು ಒಂದು ರೀತಿಯಲ್ಲಿ ಬೇಲಿ ಹೊಲವನ್ನು ಮೇಯ್ದಂತೆಯೇ ಸರಿ.

ಅದರ ಬದಲು ನಿಮ್ಮ ಬೇಲಿಯಿಂದ ತೋಟದಲ್ಲಿ ನೀರಿನ ಉಳಿತಾಯ ಮಾಡಬಹುದು. ಅದು ಜಾನುವಾರು ರಕ್ಷಕ, ಸೊಳ್ಳೆ– ನೊಣ ನಾಶಕ, ಹಕ್ಕಿಗಳಿಗೆ ಆಶ್ರಯದಾಯಕ, ರೋಗ, ಕೀಟಗಳಿಗೆ ಮಾರಕವೂ ಆಗಿರಬೇಕು. ಇದರ ಜೊತೆಗೆ ಔಷಧ ನೀಡುವ ಸಸ್ಯಗಳ ರಾಶಿಯೂ ಅಲ್ಲಿದ್ದರೆ ಚೆನ್ನ. ಇದರಿಂದ ಹೊಲ, ತೋಟ, ಗದ್ದೆಗಳು ಮಾತ್ರವಲ್ಲದೇ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಾಧ್ಯ.

ಇವು ಬೇಡ
ಬೇಲಿ ಯಾವ ರೀತಿ ಇರಬಾರದು ಎಂಬುದನ್ನು ಮೊದಲು ನೋಡೋಣ. ಇಲ್ಲಿ ಒಂದೇ ಜಾತಿಯ ಸಸ್ಯಗಳನ್ನು ಬೆಳೆಸಬೇಡಿ. ಮೇವಿನ ಸಸ್ಯಗಳಿದ್ದರೆ ಜಾನುವಾರು ಅವುಗಳನ್ನು ತಿನ್ನುವ ಕಾರಣ, ಅವುಗಳೂ ಬೇಲಿಗೆ ಸಲ್ಲ. ಪ್ರಾಣಿಗಳು ಸುಲಭದಲ್ಲಿ ನುಗ್ಗುವಂತಹ, ಮಂಗಗಳು ದಾಟಲು ಅನುಕೂಲ ಆಗುವ ಬೇಲಿಯಂತೂ ಬೇಡವೇ ಬೇಡ.

ಹಾಗಿದ್ದರೆ ಬೇಲಿ ಹೇಗಿರಬೇಕು ಎನ್ನುವುದು ಮುಂದಿನ ಪ್ರಶ್ನೆ. ಬೇಲಿಗಳಿಗೆ ಹೆಬ್ಬೇವಿನ ಗಿಡ ನೆಟ್ಟರೆ ಉತ್ತಮ. ಇದು ಹಣವನ್ನೂ ನೀಡುತ್ತದೆ ಜೊತೆಗೆ ಬೇಲಿಯನ್ನು ಸದಾ ಹಸಿರಿನಿಂದ ಇರುವಂತೆ ಮಾಡುತ್ತದೆ. ಇದು ಬಲುಬೇಗನೇ ಬೆಳೆಯುವ ಕಾರಣ, ಮಳೆಗಾಲದಲ್ಲಿ ನೀರನ್ನು ಹೀರಿಕೊಂಡು ಬೇಸಿಗೆಯಲ್ಲಿ ತೇವಾಂಶ ಆರದಂತೆ ನೋಡಿಕೊಳ್ಳುತ್ತದೆ. ಹೊಲಕ್ಕೆ ನೆರಳು ಒದಗಿಸುತ್ತದೆ. ಗೊಬ್ಬರವನ್ನೂ ನೀಡುತ್ತದೆ. ಬೇವಿನ ಗಿಡ ಕೂಡ ಬೆಳೆಸಬಹುದು. ಬೇವಿನ ಬೀಜ ಗೊಬ್ಬರವಾಗಿಯೂ, ಕೀಟನಾಶಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಬೋರೆಮುಳ್ಳು, ಸೀಗೆಮುಳ್ಳು, ಜಾಲಿಮುಳ್ಳು ಇದರಂತಹ ಕಳ್ಳಿ ಗಿಡಗಳನ್ನು ನೆಡಬಹುದು. ಇದು ಬಲು ಗಟ್ಟಿ. ಅದರಂತೆ ಕತ್ತಾಳೆ ಬೇಲಿಯೂ ಒಳ್ಳೆಯದು. ಇದು ಪ್ರಾಣಿಗಳು ಒಳನುಗ್ಗದಂತೆ ತಡೆಯುತ್ತದೆ. ಕತ್ತಾಳೆಯ ಪುಟ್ಟ ಗಿಡಗಳನ್ನು ಗಡಿ ಬದುಗಳ ಮೇಲೆ ಎರಡು ಅಡಿಗಳಿಗೆ ಒಂದರಂತೆ ಮಳೆ ಬೀಳುವ ಮೊದಲು ನೆಟ್ಟರೆ ಸಾಕು. ಆಮೇಲೆ ಎಂದೂ ಅದಕ್ಕೆ ನೀರು ಬೇಕಿಲ್ಲ. ಗಿಡ ಬೆಳೆದು ದೊಡ್ಡದಾದಂತೆಲ್ಲ ಎಲೆಗಳೂ ಅಗಲವಾಗುತ್ತವೆ. ಎಲೆ ತುದಿಯು ಗರಗಸದಂತಿರುತ್ತದೆ. ಒತ್ತಾಗಿ ಬೆಳೆಯುತ್ತದೆ. ಗಿಡದಿಂದ ಗಿಡಕ್ಕೆ ಜಾಗವೇ ಇರದಂತೆ ಬೆಳೆಯುತ್ತದೆ.

ನಿಮ್ಮ ಬೇಲಿಯಲ್ಲಿ ಪಕ್ಷಿಗಳ ಕಲರವ ಕೇಳಬೇಕು ಎಂದಿದ್ದರೆ ಲಂಟಾನ ಹಾಗೂ ಚದುರಂಗಿಯ ಗಿಡ ನೆಡಿ. ಇವುಗಳಿಂದ ಕೂಡಿದ ಬೇಲಿಗಳು ಒತ್ತೊತ್ತಾಗಿ, ಮುಳ್ಳುಕಂಟಿಗಳಿಂದ ಕೂಡಿರುತ್ತವೆ. ಇದರ ಮಧ್ಯೆ ಹಕ್ಕಿಗಳು ಗೂಡು ಕಟ್ಟುತ್ತವೆ. ಇವಿಷ್ಟೇ ಅಲ್ಲದೇ ಲಂಟಾನ ಹಾಗೂ ಚದುರಂಗಿ ಸೊಪ್ಪು ಬಲುಬೇಗ ಕೊಳೆಯುತ್ತದೆ. ಉತ್ತಮ ಸಾರಜನಕ ನೀಡುತ್ತದೆ. ಇವುಗಳ ಗೊಬ್ಬರ, ಕಷಾಯಗಳು ಕೆಲವು ಜಾತಿಯ ನೊಣ ಮತ್ತು ಸೊಳ್ಳೆಗಳನ್ನು ನಾಶಮಾಡುತ್ತವೆ. ಇವುಗಳನ್ನು ಹೂವಾಗಲು ಮಾತ್ರ ಬಿಡಬಾರದು. ಬೀಜಗಳು ತೋಟದ ತುಂಬಾ ಹರಡಿ ಗಿಡಗಳೆದ್ದು ಮುಖ್ಯ ಬೆಳೆಯನ್ನೇ ಹಾಳು ಮಾಡುತ್ತವೆ. ಇವುಗಳ ನಿಯಂತ್ರಣ ಅಗತ್ಯ.

ಆಡುಸೋಗೆ, ಉಮ್ಮತ್ತಿನ ಗಿಡ, ಸರ್ಪಗಂಧಿ, ನೆಗ್ಗಿನಮುಳ್ಳು ಮುಂತಾದ ಔಷಧೀಯ ಗಿಡಗಳನ್ನು ಬೇಲಿಸಾಲಿನಲ್ಲಿಯೇ ಬೆಳೆಯಬಹುದು. ಇದನ್ನೆಲ್ಲಾ ದನಕರುಗಳು ತಿನ್ನುವುದಿಲ್ಲ. ಪೊದೆಗಳಂತೆ ಬೆಳೆಯುವ ಕಾರಣ ನುಗ್ಗಲೂ ಆಗದು. ಬೇಕಾದಾಗ ಕೆಲವು ರೋಗಗಳಿಗೆ, ಮನುಷ್ಯರಿಗೆ, ಜಾನುವಾರುಗಳಿಗೆ ಔಷಧಿಯೂ ಆಗುತ್ತದೆ.

ಬೇಲಿಯು ಕೇವಲ ತೋಟದೊಳಗಿನ ಆದಾಯವನ್ನು ಹೆಚ್ಚಿಸುವುದರೊಂದಿಗೆ ತಾನೇ ಸ್ವತಃ ಆದಾಯದ ಮೂಲವೂ ಆಗುತ್ತದೆ.

ಚಿಗುರು ಗೂಟದ ಬೇಲಿ
ಚಿಗುರು ಗೂಟದ ಬೇಲಿ ಮಲೆನಾಡಿನ ಕಡೆ ಸಾಮಾನ್ಯ. ಬೇಲಿ ದಾಸವಾಳ, ಗ್ಲಿರಿಸೀಡಿಯಾ ಸರ್ವೆ, ಬಕುಳ ಮುಂತಾದ ಗಿಡಗಳ ದಪ್ಪ ಕೊಂಬೆಗಳನ್ನು ಕಡಿದು ಬೇಲಿಯ ಗೂಟಗಳಾಗಿ ನೆಡುತ್ತಾರೆ. ಅದಕ್ಕೆ ತೆಂಗಿನಸಿಪ್ಪೆಯಿಂದ ನಾರು ತೆಗೆದು ಹಗ್ಗ ಮಾಡಿ ಕಟ್ಟುತ್ತಾರೆ. ಮಳೆಗಾಲ ಕಳೆಯುತ್ತಿದ್ದಂತೆ ನೆಟ್ಟ ಗೂಟಗಳೆಲ್ಲಾ ಚಿಗುರಿ ಬೇರೂರುತ್ತವೆ. ಇದರ ಇನ್ನೊಂದು ಪ್ರಯೋಜನ ಎಂದರೆ ಗ್ಲಿರಿಸೀಡಿಯಾ ಗೊಬ್ಬರದ ಗಿಡ. ಇವು ಬಲು ಬೇಗ ಕೊಳೆತು, ಕಳಿತು ಗೊಬ್ಬರವಾಗುತ್ತದೆ. ಇದರೊಂದಿಗೆ ಹಾಕಿದ ಯಾವುದೇ ತ್ಯಾಜ್ಯವಸ್ತುವೂ ಬಲುಬೇಗ ಕಳಿತುಹೋಗುತ್ತದೆ. ಈ ಬೇಲಿ ಹಾಕಿದರೆ ಇಲಿ, ಹಾವುಗಳ ಕಾಟ ಇರುವುದಿಲ್ಲ.

ನಿಮ್ಮ ತೋಟ ಸೊಳ್ಳೆ ಮುಕ್ತವಾಗಿರಬೇಕು ಎಂದರೆ ನೆಕ್ಕಿ ಗಿಡ ನೆಡಿ. ಇದರಂತೆ ಶಂಖಪುಷ್ಪ, ಕರವೀರ ಹೀಗೆ ಕಹಿ ಎಲೆಯ, ಕೀಟನಾಶಕಗಳಾಗುವ ಅನೇಕ ರೀತಿಯ ಗಿಡಗಳು ಬೇಲಿ ಸಾಲಿನಲ್ಲಿಯೇ ಚೆನ್ನಾಗಿ ಬೆಳೆಯುತ್ತವೆ. ಮುಳ್ಳಿಲ್ಲದ ಬೇಲಿಗಿಡಗಳ ಪಕ್ಕ ನಿಂಬೆ, ಗಜನಿಂಬೆ, ಮಾದಲ, ಇಳಿ, ಕಂಚಿ, ಚಕ್ಕೋತ, ದೊಡ್ಲಿ ಹೀಗೆ ಮುಳ್ಳಿನ ಗಿಡಗಳನ್ನು ಬೆಳೆಸಬಹುದು. ಇವುಗಳ ಜೊತೆ ಮುಳ್ಳಿನ ಗಿಡಗಳ ಬೇಲಿಯೂ ಇದೆ. ಕವಳಿ ಮುಳ್ಳು, ಪರಿಗೆ ಮುಳ್ಳು, ಜಾಲಿ ಮುಳ್ಳು, ಕುಡ್ತೆ ಮುಳ್ಳು, ಹಲಗೆ ಮುಳ್ಳು ಹೀಗೆ ವಿವಿಧ ರೀತಿಯ ಮುಳ್ಳಿನ ಪೊದೆಗಳು ಬೇಲಿಗೆ ಉತ್ತಮ. ಮುಳ್ಳುಬೇಲಿಯ ಒಳಭಾಗದಲ್ಲಿ ಹಲಸು, ತೇಗ, ಬಕುಳ, ದೇವಧಾರಿ, ಅಮಟೆ, ಬಿಂಬುಳಿ, ಕರಿಮಾದಲ, ಸಾಲುಧೂಪ, ನುಗ್ಗೆ, ಮಾವು, ತೆಂಗು, ಪೇರಲ, ದೊಡ್ಡಗೌರಿ ಮುಂತಾದ ಗಿಡಗಳನ್ನು ಬೆಳೆಸಬಹುದು. ಇವುಗಳನ್ನು ಬೇಲಿಯಿಂದ ಒಂದು ಅಡಿ ಅಂತರ ಬಿಟ್ಟು ನೆಡಬಹುದು. ಗಿಡಗಳು ಮೇಲೇರುವವರೆಗೆ ಆರೈಕೆ ಮಾಡಬೇಕು. ಮುಂದೆ ದೊಡ್ಡದಾದ ಮೇಲೆ ಮಲೆನಾಡಿನ ವಿಪರೀತ ಗಾಳಿ ಮಳೆಯನ್ನು ತಡೆಯುತ್ತವೆ. ಬಿಸಿಲಿನ ತಾಪ ಕಡಿಮೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.