ಬದುಕು ಎಂಬುದು ಒಂದು ಸಹಜ, ಸುಂದರ ಸವಾಲು. ಅದನ್ನು ಹೇಗೆ ಸಮತೂಗಿಸಿಕೊಂಡು ಹೋಗುತ್ತೇವೆ ಎನ್ನುವುದರ ಮೇಲೆ ನಮ್ಮ ಜೀವನದ ಕ್ರಮಗಳು ನಿಂತಿರುತ್ತವೆ. ಪ್ರತಿಯೊಬ್ಬರದ್ದೂ ಒಂದೊಂದು ತೆರನಾದ ಜೀವನಕ್ರಮ. ಕಲಾವಿದೆಯಾಗಿ ನಾನು ಕಂಡುಕೊಳ್ಳುವ ಬಗೆಯೇ ಬೇರೆ ತೆರನಾಗಿದೆ. ಬದುಕೂ ಒಂದು ಕಲೆಯೇ ಅಲ್ವೇ? ಕಲೆಯ ಪ್ರಸ್ತುತಿಯು ಸುಂದರವಾಗಿರಲಿ ಎಂಬ ಆಶಯ ಎಲ್ಲರದ್ದೂ. ಮನೆ ಎಂಬ ಚೌಕಟ್ಟು ಮುಕ್ತವಾದ, ನಿರಾಳವಾದ ವಾತಾವರಣವನ್ನು ಒದಗಿಸಿದಾಗ ಎಲ್ಲವೂ ತನ್ನಿಂದ ತಾನಾಗಿಯೇ ಸುಧಾರಿಸುತ್ತದೆ ಎಂಬುವುದು ಸುಳ್ಳಲ್ಲ. ನಾನು ಕಂಡುಕೊಂಡಂತೆ ಕಲಾವಿದೆಗೆ ತಾಲೀಮಿನ ಅವಧಿಯನ್ನು ಹೊಂದಿಸಿಕೊಳ್ಳುವುದೇ ದೊಡ್ಡ ಸವಾಲು. ಅದಕ್ಕೆ ಸರಿ ಸಮಯ ಸಿಕ್ಕಿದರೆ ಆಕೆ ಶಕ್ತಕಲಾವಿದೆಯಾಗಿ ನೆಲೆ ಕಂಡುಕೊಳ್ಳುತ್ತಾಳೆ. ಮನೆ, ಮಕ್ಕಳು ಅನ್ನುವ ಕುಟುಂಬದೊಳಗಿನ ಹೊಣೆಗಾರಿಕೆಯೆಲ್ಲ ಒಂದು ಧಾವಂತ. ಹೆಂಡತಿಯ ಕಲೆಯ ವೃತ್ತಿ ಮೆಚ್ಚಿಕೊಳ್ಳುವ ಗಂಡನ ಸಹಕಾರವಿದ್ದರೆ ಅದು ಹೇಗೋ ನಿಭಾಯಿಸಬಹುದು. ಅಂಥ ಔದಾರ್ಯದ ಮನಸ್ಸಿದ್ದ ಪತಿರಾಯರಿಂದ ಅದೆಷ್ಟೋ ಕಲಾವಿದೆಯರು ನಿರಂತರತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಪತ್ನಿಯ ಕಲಾಬದುಕಿನ ಗುರಿ, ಧ್ಯೇಯ ಅರ್ಥಮಾಡಿಕೊಳ್ಳದೆ ಅದರ ಬಗ್ಗೆಯೇ ರೇಗತೊಡಗಿದರೆ ರೇಜಿಗೆಯಾಗದಿರದು. ಕಲೆಗಿಂತ ತನ್ನ ಕಡೆ ಗಮನ ಕೊಡು ಅಂತ ಹಟ ಹಿಡಿವ ಹೊಟ್ಟೆಯುರಿ ಮನಸ್ಸಿನವರ ನಡುವಿನ ಕಲಾವಿದೆಯದು ಅಡಕತ್ತರಿಯ ಬದುಕು. ಇವನ ಲಾಲಸೆಗೆ ಒಡ್ಡಿಕೊಳ್ಳುತ್ತ ಮಕ್ಕಳ ಲಾಲನೆ–ಪಾಲನೆಗಳನ್ನೆಲ್ಲ ಮುದ್ದು ಮುದ್ದಾಗಿಯೇ ಮಾಡುತ್ತ ಪರೀಕ್ಷೆ ಬಂದಾಗ ತನಗೇ ಪರೀಕ್ಷೆಯೆಂಬಂತೆ ತಯಾರಾಗುವ ಅಮ್ಮ ಆಗಲೇಬೇಕು. ಮಕ್ಕಳು ಗಂಡನಿಗೆ ಸಮಯ ಮೀಸಲಿಡುವ ಗರತಿಯಾಗುವುದು ಇಷ್ಟವೇ. ಆದರೆ ತನ್ನದೇ ಮುಷ್ಟಿಯೊಳಗೆ ಸಿಲುಕಿಸಲು ಹೊರಟಾಗ ಉಸಿರುಕಟ್ಟಿಸಿದಂತಾಗಿಸಿ ಬಿಡುತ್ತದೆ. ಆದರೆ ಕುಟುಂಬವೂ ಬೇಕು, ಕಲೆಯೂ ಬೇಕು. ಎರಡೂ ಆಕೆಗೆ ಎರಡು ಕಣ್ಣುಗಳಂತೆ. ಯಾವುದನ್ನೂ ನಿರ್ಲಕ್ಷಿಸಲಾರಳು. ತಮ್ಮ ಕನಸುಗಳನ್ನು ನನಸಾಗಿಸುವ ಸ್ವಲ್ಪವೇ ಸ್ಪೇಸ್‌ನ ಅಗತ್ಯ ಹೆಣ್ಣಿಗಿದೆ.

ಹಿರಿಯ ಜೀವಗಳು ಜೊತೆಗಿದ್ದಾಗ ಅವರ ಜವಾಬ್ದಾರಿಯನ್ನೂ ನೋಡಿಕೊಳ್ಳುವುದು ಒಂದು ದಿನಚರಿಯ ಭಾಗವಾಗಿರುತ್ತದೆ. ಮಗಳು ಚಂದದ ಬದುಕು ಕಾಣಬೇಕೆನ್ನುವ ತುಡಿತ ಹಿರಿಯರಿಗೆ. ಕಲೆಯಲ್ಲಿ ಅವಳ ಸಾಧನೆ ಅವಳ ಬಯಕೆಯೂ ಹೌದು. ಆದರೆ ವಯೋಸಹಜ ಗೊಂದಲಗಳ ನಡುವೆ ಮಗಳ ಕಲಾವೃತ್ತಿಯ ಅನಿವಾರ್ಯತೆ ಅಲ್ಲಿ ಅವಳ ಸಮಯ ಹೊಂದಾಣಿಕೆ ಮರೆತೇ ಹೋಗುತ್ತದೆ ಅಭದ್ರತಾಭಾವ ಮುದ್ರೆಯೊತ್ತುತ್ತದೆ. ಅವಳ ಸಾಕು ದಣಿವು ಗೊತ್ತಿದ್ದರೂ ಅವಳು ಕಾಲಿಟ್ಟಾಗ ಅದು ನೆನಪಾಗುವುದಿಲ್ಲ. ತನ್ನದೇ ಸಮಸ್ಯೆಗಳ ಸಾಲು ಸಾಲು ಪ್ರವರ. ಇಡೀ ದೇಹವೇ ತಾಲೀಮು, ಪಾಠ ಹೇಳಿ ನಲುಗಿ ಹೋಗಿರುವಾಗ ಮನೆಯೊಳಕ್ಕೆ ಕಾಲಿಟ್ಟಾಗಿನ ಅಮ್ಮನ ನೂರಾರು ಸಮಸ್ಯೆಗಳ ಸರಮಾಲೆ ಕಿವಿಗೆ ಬಿದ್ದಾಗ ಅಮ್ಮನಿಗೆ ನನ್ನ ಕಷ್ಟ ಅರ್ಥವೇ ಆಗೋದಿಲ್ವಾ – ಅನ್ನುವ ಮನುಷ್ಯಸಹಜ ಸಿಟ್ಟು ಬಂದರೂ ಕಲಾವಿದೆಯೊಳಗಿನ ಸಂವೇದನೆ ಜಾಗೃತಗೊಳ್ಳುತ್ತದೆ; ಅಮ್ಮ, ಅಪ್ಪನೂ ಹೃದಯವೇ ತನ್ನ ವೃತ್ತಿಯೂ ಉಸಿರೇ... ಅವರಿಬ್ಬರಿಗೂ ಅಮ್ಮನಾಗಲೇಬೇಕು ಅನ್ನುವ ಎಚ್ಚರ ತನ್ನ ಆಯಾಸವನ್ನು ಮರೆಸುತ್ತದೆ.

ಇನ್ನು ಸಹೋದರಿಯರ ಕಲಾಕ್ಷೇತ್ರದ ಬಗ್ಗೆ ವಾತ್ಸಲ್ಯವಿದ್ದ ಪರಿವಾರವಿದ್ದರೆ ಎಲ್ಲವೂ ಸಲೀಸೇ, ಅಣ್ಣ ತಮ್ಮಂದಿರು, ನೆಂಟರಿಷ್ಟರು ಹೀಗೆ. ಇಲ್ಲದಿದ್ದರೆ ಅವಳ ಶ್ರಮ ಅರ್ಥವಾಗುವುದೇ ಇಲ್ಲ. ಕಣ್ಮುಂದೆ ನಿಲ್ಲುವುದು ಅವಳಿಗೆ ಕಾರ್ಯಕ್ರಮ ಸಿಕ್ಕಿದ ಖುಷಿಯಲ್ಲ ಎಷ್ಟು ದುಡ್ಡು ಸಿಕ್ಕಿರಬಹುದೆನ್ನುವ ಲೆಕ್ಕಾಚಾರ. ಅವಳಿಗೇನು ಒಂದು ಪ್ರೋಗ್ರಾಂ ಕೊಟ್ರೆ ಅಷ್ಟ್ ದುಡ್ಡು ಬರ್ತದೆ ಅನ್ನುವ ಭಾವ. ಈ ಭಾವದ ನಡುವೆ ಒಮ್ಮೆಯೂ ಇಡೀ ತಂಡ ಕಟ್ಟುವ ಪರಿಶ್ರಮ ಗೈಮೆ ಹಣ ಸುರಿಯುವ ಬಗ್ಗೆ ಒಂದು ಸಣ್ಣ ಆಲೋಚನೆ ಹಾದು ಹೋಗುವುದಿಲ್ಲ. ಇವಳಿಗೇನಾದರೂ ನಮ್ಮ ಸಹಾಯ ಬೇಕಿತ್ತಾ ಅನ್ನುವ ಭಾವ ಒಮ್ಮೆಯೂ ಸುಳಿಯುವುದಿಲ್ಲ. ಆದರೆ ಅವರೂ ಸಂಬಂಧದ ನಂಟು ತಾನೇ? ಹಾಗಂತ ಕಲಾಹಾದಿಗೆ ತೊಡರಾದಾಗ ಅವರನ್ನೆಲ್ಲ ಪಕ್ಕಕ್ಕಿಟ್ಟು ಮುಂದೆ ಹೋಗುವುದೇ ತಾನಾಗಿ ಒದಗಿ ಬರುವ ರಾಜಮಾರ್ಗ ಅನ್ನುವ ಸತ್ಯಕ್ಕೂ ತೆರೆದುಕೊಳ್ಳಬೇಕಾಗುತ್ತದೆ.

ಅಷ್ಟೇ ಅಲ್ಲ, ಮಗಳಾಗಿ ಸಹೋದರಿಯಾಗಿ ಅತ್ತಿಗೆ, ನಾದಿನಿಯಾಗಿ ಆಕೆ ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿಸಲೇಬೇಕಾಗ್ತದೆ. ಅವಿವಾಹಿತೆ, ವಿಚ್ಛೇದಿತೆ, ಪತಿವಿಯೋಗಿನಿಯರ ಕಥೆ ಅದು ಇನ್ನೊಂದು ತೆರನಾದದ್ದು. ಅಮ್ಮನ ಮೇಲಿನ ಗಮನ, ಅಪ್ಪನ ದೇಖರೇಕಿಗಳ ನಡುವೆ ಒಂದಷ್ಟು ಹೊತ್ತು ರಿಹರ್ಸಲ್‌ಗೆ ಸಮಯ ಸಿಕ್ಕರೆ ಪುಣ್ಯ. ಕಲಾಶಿಕ್ಷಕಿಗೆ ಇವೆಲ್ಲ ಹೊಣೆಗಾರಿಕೆ ನಡುವೆ ಶಿಷ್ಯಂದಿರ ಬದುಕು ರೂಪಿಸುವ ತುಡಿತ ಹೆಚ್ಚೇ ಇರುತ್ತದೆ. ತನ್ನದೆಲ್ಲ ಒತ್ತಡಗಳನ್ನು ಒಪ್ಪವಾಗಿ ನಿಭಾಯಿಸುತ್ತ ಕಲೆಯ ಪಾಠ ಹೇಳಿ ಅವರ ಹೆಜ್ಜೆಗಳ ಲಾಲಿತ್ಯ–ದೃಢತೆ ಕಂಡಾಗ ಎಲ್ಲ ಸವಾಲುಗಳನ್ನೂ ದಾಟಿ ದಾಟಿ ಅದೇನನ್ನೋ ಸಾಧಿಸಿದ ಹೆಮ್ಮೆ ಅಭಿಮಾನ. ಹೊಸ ಯೋಚನೆ, ಯೋಜನೆಗಳನ್ನು ರೂಪಿಸಿ ಮಕ್ಕಳ ಮೂಲಕ ಅವನ್ನು ಹೊರಗಿಟ್ಟಾಗ ಎಲ್ಲ ಕಷ್ಟಗಳು ಮಾಯ. ಮನೆಯ ವಾತಾವರಣವೇ ಬೇರೆ, ಕೆಲಸಮಾಡುವ ವಾತಾವರಣವೇ ಬೇರೆ. ಅಲ್ಲಿಯದ್ದನ್ನು ಇಲ್ಲಿಗೆ, ಇಲ್ಲಿಯದ್ದನ್ನು ಅಲ್ಲಿಗೆ ಕೊಂಡುಹೋಗುವ ಹಾಗೆ ಇಲ್ಲ, ಕೊಂಡುಹೋಗಲೂ ಬಾರದು. ಶಿಕ್ಷಣ ಅಥವಾ ಪಾಠ ಮಾಡುವುದು ಎಂದಾಗ ನಾವು ಒಳ್ಳೆಯದನ್ನೇ ಮುಂದಿನ ಪೀಳಿಗೆಗೆ ದಾಟಿಸಬೇಕು ಎಂಬ ಅಗತ್ಯತೆಯ ಬಗ್ಗೆ ಅರಿವೂ ನಮ್ಮೊಳಗಿರುತ್ತದೆ. ಅದನ್ನು ಮಾಡುವಾಗ ಮನಸ್ಸು ಪ್ರಶಾಂತವಾಗಿರಬೇಕಾಗಿರುವುದು ಕೂಡ ಅನಿವಾರ್ಯ. ಅಂತಹ ಮನಃಸ್ಥಿತಿಯನ್ನು ತರಾತುರಿಯ ಮಧ್ಯೆ ಸ್ಥಾಯಿಯಾಗಿರಿಸಿಕೊಳ್ಳಬೇಕು.

ಇನ್ನು ಹೊರಗೆ ಅನುಭವಿಸುವ ಸಂಕಷ್ಟಗಳು ಕಲಾವಿದೆಯರದ್ದೇ ಸೊತ್ತು ಅನ್ನುವಷ್ಟು ಇರುತ್ತವೆ. ಅಲ್ಲಿ ವ್ಯಕ್ತಿಸ್ವಾತಂತ್ರ್ಯದ ಪ್ರಶ್ನೆಗಳ ಕಾಟ ಬಹಳ. ತನ್ನ ಗೌರವ ಕಾಪಾಡಿಕೊಳ್ಳುತ್ತ ಹೆಜ್ಜೆಯೂರುವ ಸವಾಲಿನ ನಡುವೆ ಅದನ್ನು ಕುಂದಿಸುವುದಕ್ಕೆ ಹೂಡುವ ತಂತ್ರಗಳಿಗೇನು ಲೆಕ್ಕ ಉಂಟಾ? ಅಬ್ಬಾ... ಅಸ್ಥಿರಗೊಳಿಸುವ ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಸಾಗುತ್ತಾರೆ. ಕಲಾವಿದೆಯ ಗಟ್ಟಿ ಹೆಜ್ಜೆಗಳೆಲ್ಲ ಒಂದೊಂದೇ ಮೈಲುಗಲ್ಲು ಸೃಷ್ಟಿಸಿದಾಗ ಆ ಅಸ್ತ್ರಗಳೆಲ್ಲ ಬಲಹೀನವಾಗಿ ನೆಲಕ್ಕೂರಿಬಿಡುತ್ತವೆ. ಅವಳು ತಲೆಯೆತ್ತಿ ಮುಂದೆ ದೃಷ್ಟಿಯಿಟ್ಟು ದೃಢತೆ ತೋರ್ಪಡಿಸುವುದೇ ಎಲ್ಲ ಮುಳ್ಳುಗಳಿಂದ ಮುಕ್ತಿ ಪಡೆಯುವುದಕ್ಕಿರುವ ಮಾರ್ಗ. ಈ ಮಾರ್ಗವೇ ಹೊಸ ಪಥವಾಗಿ ಮಾದರಿಯೂ ಆದದ್ದಾಗಿ ಬಾಳುತ್ತದೆ. ಹೊಸ ಪೀಳಿಗೆಯ ಕಲಾವಿದೆಯರ ಜಗತ್ತು ಸುಂದರವಾಗಿ ಅರಳುತ್ತದೆ. ಮನೆ, ಮನ ಎರಡರ ನೆಮ್ಮದಿಯನ್ನೂ ಕಾಯ್ದುಕೊಳ್ಳಬೇಕು, ಒಂದನ್ನು ಬಿಟ್ಟು ಒಂದಿಲ್ಲ. ಮನೆಕೆಲಸ ಎಂಬುದು ಹೊರೆಯಾಗದ ಹಾಗೆ ನಿಭಾಯಿಸಿಕೊಂಡು ಹೊರಪ್ರಪಂಚದ ಆಗುಹೋಗುಗಳೊಂದಿಗೆ ಸ್ಪಂದಿಸುತ್ತಾ ಜೀವಂತಿಕೆಯನ್ನು ಉಳಿಸಿಕೊಳ್ಳಬೇಕು. ಯಾವುದೋ ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡರೆ ಅದು ಪಲಾಯನವಾದವಾದೀತೇನೋ ಹೆಣ್ಣುಮಕ್ಕಳಿಗೆ! ಎಲ್ಲ ಸಂದರ್ಭದಲ್ಲೂ ನಮ್ಮತನವನ್ನು ಉಳಿಸಿಕೊಂಡು, ಸುಂದರಬದುಕು ನಿರ್ಮಿಸಿಕೊಳ್ಳುವುದು ಅಗತ್ಯವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.