ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಸಾಹಿತ್ಯವನ್ನು ಕುರಿತು ಮೈಸೂರಿನಲ್ಲಿ ಇದೇ 19–20ರಂದು ಸಾಹಿತ್ಯೋತ್ಸವವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಎಸ್. ಎಲ್. ಭೈರಪ್ಪ – ಎಂದ ಕೂಡಲೇ ಓದುಗರಲ್ಲಿ ಕುತೂಹಲವೊಂದು ಮೂಡುತ್ತದೆ– ‘ಭೈರಪ್ಪನವರ ಮುಂದಿನ ಕೃತಿ ಯಾವುದು’– ಎಂದು. ಸಂದರ್ಶನವನ್ನು ಅಲ್ಲಿಂದಲೇ ಆರಂಭಿಸಬಹುದು. ಈಗೇನಾದರೂ ಹೊಸ ಕಾದಂಬರಿಯ ಬರವಣಿಗೆ ಅಥವಾ ಯೋಜನೆ ನಡೆದಿದೆಯೆ?

- ಏನೇನೋ ಬರುತ್ತೆ; ಹಾಗೆಯೇ ಮರೆಯಾಗುತ್ತೆ. ನಾನು ಮೂಲತಃ ಕಲ್ಪನಶೀಲ. ನನ್ನ ಓದು ಕೂಡ ಆ ಕಡೆಗೇ ಪ್ರಚೋದನೆ ಕೊಡುತ್ತೆ. ಎಷ್ಟೋ ಕಲ್ಪನೆಗಳು ಬಂದಿವೆ. ಆದರೆ ಅದು ಯಾವುದು ಕೂಡ ಸದ್ಯದಲ್ಲಿ ಕಾದಂಬರಿಯಾಗುವಷ್ಟು ರೂಪ – ಫಿಸಿಕ್ಸ್‌ನಲ್ಲಿ ಮಾಸ್ ಅಂತಾರಲ್ಲ– ಅಂಥದ್ದು ಆಗಿಲ್ಲ.

* ಆದರೆ ಬರೆಯಬೇಕು ಎನ್ನುವ ತುಡಿತ ಅಂತೂ ಇದೆ?

ಥೀಮೇ ಇಲ್ಲ ಅಂದ ಮೇಲೆ ತುಡಿತ ಎಲ್ಲಿಂದ ಬರುತ್ತೆ? (ನಗು)

* ಒಂದು ಕಾಲದಲ್ಲಿ ಭೈರಪ್ಪನವರನ್ನು ಸಾಹಿತ್ಯವಲಯ ಅಷ್ಟಾಗಿ ಗಮನಿಸುತ್ತಿಲ್ಲ ಎನ್ನುವಂಥ ವಾತಾವರಣ ಇತ್ತು. ಆದರೆ ಈಗ ಭೈರಪ್ಪನವರ ಹೆಸರು ಸಾಹಿತ್ಯದ ವಲಯಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ; ಭೈರಪ್ಪನವರ ಸಾಹಿತ್ಯದ ಬಗ್ಗೆ ವಿಚಾರಗೋಷ್ಠಿಗಳು, ಸಂವಾದಗಳೂ ನಡೆಯುತ್ತಿವೆ. ನೀವು ಹೆಚ್ಚೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೀರಿ. ಈಗ ವಿವಾದದ ಕಾರಣದಿಂದಲೂ, ಸಾಹಿತ್ಯದ ಒಲವಿನಿಂದಲೂ ನಿಮ್ಮ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿರುತ್ತವೆ. ಈ ಬದಲಾವಣೆಯ ಬಗ್ಗೆ ನಿಮಗೆ ಏನನಿಸುತ್ತಿದೆ?

ನಾನು ಬರೆಯುವ ಹೊತ್ತಿಗೆ ನವ್ಯರು ಹುಟ್ಟಿಕೊಂಡರು. ಪದ್ಯ ಬರೆಯುವವರು ಆ ಮೊದಲೇ ಹುಟ್ಟಿಕೊಂಡಿದ್ದರು. ನವ್ಯರಲ್ಲಿ ಗುಂಪುಗಾರಿಕೆ ಇತ್ತು. ಆ ವಲಯದವರ ಕೃತಿಗಳನ್ನೇ ಪ್ರಚಾರ ಮಾಡುತ್ತಿದ್ದರು. ಸ್ವತಃ ಸೃಜನಶೀಲ ಲೇಖಕ ವಿಮರ್ಶಕ ಮತ್ತು ಪ್ರಾಪಗಾಂಡಿಸ್ಟ್ ಆಗಿರುತ್ತಿದ್ದ. ನನ್ನ ಮೊದಲ ಮುಖ್ಯ ಕಾದಂಬರಿ ಎಂದರೆ ‘ವಂಶವೃಕ್ಷ’. ಅದಕ್ಕೆ ದೊಡ್ಡ ಪ್ರಶಂಸೆ ಸಿಕ್ಕಿತು; ಗಮನ ಸೆಳೆಯಿತು. ಅದೇ ಕಾಲಕ್ಕೆ ಸೇರಿದ್ದು ‘ಸಂಸ್ಕಾರ’ ಕಾದಂಬರಿ. ವಂಶವೃಕ್ಷ ಮತ್ತು ಸಂಸ್ಕಾರ ಪರಸ್ಪರ ಪೈಪೋಟಿಯ ಕೃತಿಗಳು ಎಂಬಂತೆ ನವ್ಯರು ಬಿಂಬಿಸಿಬಿಟ್ಟರು. ನನಗೆ ಯಾವತ್ತೂ ಇಂಥ ಕಾಂಪಿಟೇಷನ್‌ಗಳಲ್ಲಿ ಭಾಗವಹಿಸಿ ಗೊತ್ತಿಲ್ಲ. ಇದೆಲ್ಲ ನಡೆಯುವಾಗ ನಾನು ಇಲ್ಲಿ ಇರಲೂ ಇಲ್ಲ; ಉತ್ತರ ಭಾರತದಲ್ಲಿದ್ದೆ. ಆಮೇಲೆ ನನ್ನದು ‘ದಾಟು’ ಬಂತು; ಆಗ ‘ಭಾರತೀಪುರ’ವೂ ಬಂತು. ಭಾರತೀಪುರದಲ್ಲಿ ಬೌದ್ಧಿಕತೆ ಇದೆಯೇ ವಿನಾ ದಾಟುವಿನಂತೆ ಜೀವನಾನುಭವ ಇಲ್ಲ. ಭಾರತದ ಇನ್ನಾವುದೇ ಭಾಷೆಯಲ್ಲೂ ‘ದಾಟು’ವಿನಂಥ ಇನ್ನೊಂದು ಕೃತಿ ಇದುವರೆಗೂ ಸೃಷ್ಟಿಯಾಗಿಲ್ಲ. ಭಾರತದ ಬಹುತೇಕ ಭಾಷೆಗಳಿಗೂ ಅದು ಅನುವಾದವಾಗಿದೆ. ಈ ಕೃತಿಯನ್ನೂ ಅವರು ಕಾಂಪಿಟೇಷನ್ ಅಂತಲೇ ತೆಗೆದುಕೊಂಡರು. ಆಗ ನಾನು ದೆಹಲಿಯಲ್ಲಿದ್ದೆ. ನಾನು ಹಳೆಯ ಸಂಪ್ರದಾಯವನ್ನು ಎತ್ತಿಹಿಡಿಯೋನು ಎಂದು ಶುರುಮಾಡಿದರು. ಇದನ್ನು ಶುರು ಮಾಡಿದವರೂ ನವ್ಯರೇ. ನವ್ಯರು ಕಮ್ಯುನಿಸ್ಟರ ಮೂಲಕ, ಬಂಡಾಯದವರ ಮೂಲಕ, ಸ್ತ್ರೀವಾದದ ಮೂಲಕ ನುಸುಳುತ್ತಿದ್ದರು. ನಾನು ಅದೂ ಅಲ್ಲ, ಇದೂ ಅಲ್ಲ; ಇವನಲ್ಲಿ ಸೋಷಿಯಲ್ ಜಸ್ಟಿಸ್ ಇಲ್ಲ ಎಂದೆಲ್ಲ ಪ್ರಚಾರ ಮಾಡತೊಡಗಿದರು. ಆದರೆ ನಾನಿದನ್ನು ಯಾವುದೂ ತಲೆಗೆ ಹಚ್ಚಿಕೊಳ್ಳಲಿಲ್ಲ. ನಾನು ಈ ಎಲ್ಲರಿಗಿಂತಲೂ ಕಮ್ಯೂನಿಸಮ್, ಸೋಷಿಯಲಿಸಂ ಇಂಥ ಹಲವು ವಿಷಯಗಳಲ್ಲಿ ಗಟ್ಟಿಯಾದ ಅಧ್ಯಯನ ಮಾಡಿರುವೆ. ಅದೇ ನನ್ನ ಶಕ್ತಿ. ಇವರಾರೂ ವಿಷಯಾಧಾರಿತವಾಗಿ ನನ್ನನ್ನು ಎದುರಿಸಲಾಗದೆ ಟೀಕೆಗಳನ್ನು ಮಾಡುತ್ತಿದ್ದರು. ಆದರೆ ಓದುಗರು ನನ್ನನ್ನು ಮೆಚ್ಚುತ್ತಲೇ ಬಂದರು.

ಕಳೆದ ಎರಡು ದಶಕಗಳಿಂದ ನಮ್ಮಲ್ಲಿ ಇನ್‌ಫಾರ್ಮೇಶನ್ ಟೆಕ್ನಾಲಜಿ, ಬಯೋಟೆಕ್ನಾಲಜಿ ಚೆನ್ನಾಗಿ ಬೆಳೆಯಿತು. ಅವರಿಗೆ ಲೋಕಜ್ಞಾನ ಜಾಸ್ತಿ. ಅವರು ನನ್ನ ಪುಸ್ತಕಗಳನ್ನು ಹೆಚ್ಚೆಚ್ಚು ಓದತೊಡಗಿದರು. ನಾನು ಯಾವತ್ತೂ ಪತ್ರಕರ್ತರ ಹಿಂದೆ ಹೋದವನೂ ಅಲ್ಲ. ನನ್ನ ಕೃತಿಗಳೂ ಅನುವಾದವಾಗತೊಡಗಿದವು; ಒಂದಾದ ಮೇಲೆ ಒಂದು ಕೃತಿಗಳೂ ಬರತೊಡಗಿದವು. ವಂಶವೃಕ್ಷ ಆದಮೇಲೆ ‘ತಬ್ಬಲಿಯು ನೀನಾದೆ ಮಗನೆ’ ಬಂತು. ಇಂಥ ಇನ್ನೊಂದು ಕೃತಿ ಇದುವರೆಗೂ ಬಂದಿಲ್ಲ. ‘ಪರ್ವ’ ಬಂತು; ಅದು ಒಂದು ರೆವಲ್ಯೂಷನ್ ಮಾಡಿತು. ‘ಮಂದ್ರ’ದಂಥ ಸಂಗೀತದ ವಸ್ತುವನ್ನು ಇರಿಸಿಕೊಂಡಿರುವ ಇನ್ನೊಂದು ಕೃತಿ ಭಾರತೀಯ ಭಾಷೆಯಲ್ಲಿ ಮಾತ್ರವೇ ಅಲ್ಲ, ಜಗತ್ತಿನ ಯಾವುದೇ ಭಾಷೆಯಲ್ಲೂ ಬಂದಿಲ್ಲ. ರೋಮಾ ರೋಲಾ ಅವರ ಜಾನ್ ಕ್ರಿಸ್ಟೋಫಿಯನ್ನು ನಾನು ಓದಿರುವೆ. ಮಂದ್ರ ಬರೆಯುವ ಮೊದಲು ಇನ್ನೂ ಒಮ್ಮೆ ಓದಿದೆ. ಸಾಕ್ಷಿ, ಸಾರ್ಥ, ತಂತು – ಹೀಗೆ ಬಂದವು. ನನ್ನ ಶಕ್ತಿ ಎಂದರೆ ಹೊಸ ಹೊಸ ಥೀಮ್‌ಗಳು; ನಾನು ಯಾವುದನ್ನೂ ರಿಪೀಟ್ ಮಾಡಿಲ್ಲ. ಹೀಗಾಗಿ ಜನರು ನನ್ನನ್ನು ಮೆಚ್ಚುತ್ತಹೋದರು. ಶತಾವಧಾನಿ ಆರ್. ಗಣೇಶ್ ಅವರು ನನ್ನ ಕೃತಿಗಳ ಬಗ್ಗೆ ಉಪನ್ಯಾಸಗಳ ಸರಣಿಯನ್ನೇ ಮಾಡಿದ್ದಾರೆ. ನಾನು ಯಾವತ್ತೂ ಗುಂಪುಗಾರಿಕೆ ಮಾಡಿದವನಲ್ಲ.

* ಒಬ್ಬ ವ್ಯಕ್ತಿಗೆ ಸೃಷ್ಟಿಶೀಲನಾಗಬೇಕು, ಅಕ್ಷರದ ಮೂಲಕ ಅದನ್ನು ಅಭಿವ್ಯಕ್ತಿ ಮಾಡಬೇಕು ಎಂದು ಅನಿಸಲು ನಿಮ್ಮ ಪ್ರಕಾರ ಕಾರಣಗಳು ಏನು?

ಕಲ್ಪನಶೀಲರಿಗೆ ಇದು ಸಹಜಸ್ವಭಾವ. ಹುಟ್ಟಿನಿಂದಲೇ ಈ ಗುಣ ಇರಬೇಕು. ನಾನು ಹೈಸ್ಕೂಲ್‌ನಲ್ಲಿರುವಾಗಲೇ ‘ಗತಜನ್ಮ’ ಎಂಬ ಕಥೆಯನ್ನು ಬರೆದಿದ್ದೆ. ಆಗ ನನಗೆ ಸಾಹಿತ್ಯದಲ್ಲಿ ಯಾವುದೇ ಶಿಕ್ಷಣ ಇರಲಿಲ್ಲ. ವಂಶವೃಕ್ಷ ಬರೆಯುವ ಕಾಲಕ್ಕೂ ನಾನು ಸಾಹಿತ್ಯಪ್ರಕಾರಗಳ ಬಗ್ಗೆ ವ್ಯವಸ್ಥಿತವಾದ ಅಧ್ಯಯನ ಮಾಡಿರಲಿಲ್ಲ. ಆದರೆ ವಸ್ತುವಿನ ಕಾರಣದಿಂದಾಗಿಯೇ ಅದು ಕಾದಂಬರಿಯಾಗಿ ಬೆಳೆಯಿತು.

ಅನಂತರದಲ್ಲಿಯೇ ನಾನು ಸಾಹಿತ್ಯಪ್ರಕಾರದ ತಂತ್ರಗಳನ್ನು– ಟೆಕ್ನಿಕ್‌ಗಳ ಮಾರ್ಗದರ್ಶನವನ್ನು ಪಡೆದೆ. ಮೊದಲಿಗೆ ನಿಮಗೆ ಕಲ್ಪನಶಕ್ತಿ ಇರಬೇಕು. ಆಮೇಲೆ ಹಲವು ವಿಷಯಗಳಲ್ಲಿ ಅಧ್ಯಯನವನ್ನು ರೂಢಿಸಿಕೊಳ್ಳಬೇಕು. ಅನುಭವವನ್ನು ಸಂಪಾದಿಸಬೇಕು. ನನಗೆ ಸಾಕಷ್ಟು ಜೀವನಾನುಭವವೂ ಸಿಕ್ಕಿದೆ. ಸಂಚಾರವೂ ಗ್ರಂಥಗಳ ಅಧ್ಯಯನದಷ್ಟೇ ನನಗೆ ಮಹತ್ವದ್ದು. ನನ್ನದು ಆಲೋಚನಪ್ರಧಾನ ಮನಸ್ಸು. ಹೀಗಾಗಿ ನಾನು ಗದ್ಯದ ಬರಹಗಾರನಾದೆ ಎನಿಸುತ್ತದೆ.

* ನಿಮಗೆ ಯಾವ ಲೇಖಕನಾದರೂ ಆದರ್ಶ ಎನಿಸಿದ್ದುಂಟೆ? ಬರೆದರೆ ಅವರಂತೆ ಬರೆಯಬೇಕು – ಎಂಬ ಭಾವ ಎಂದಾದರೂ ಬಂದದ್ದಿದೆಯೆ?

ಮೊದಲಿಗೆ ದಾಸ್ತೋವಸ್ಕಿ; ಅನಂತರ ಟಾಲ್‌ಸ್ಟಾಯ್. ಅವರಂತೆ ಬರೆಯಬೇಕು ಎಂದು ಅಂದುಕೊಳ್ಳಲಿಲ್ಲ; ಆದರೆ ತುಂಬ ಮೆಚ್ಚಿಕೊಂಡೆ. ದಾಸ್ತೋವಸ್ಕಿಯ ಸಂಸ್ಕೃತಿಯ ಹಿನ್ನೆಲೆಯೇ ಬೇರೆ, ನನ್ನ ಹಿನ್ನೆಲೆಯೇ ಬೇರೆ. ಹೀಗಾಗಿ ಅವರಂತೆ ನಾನು ಬರೆಯಬೇಕು ಎಂದು ಅನಿಸಲಿಲ್ಲ; ಆದರೆ ಮೆಚ್ಚಿದೆ. ನಾವು ಬರೆಯುವಂಥದ್ದು ನಮ್ಮ ಸಂಸ್ಕೃತಿ– ಇತಿಹಾಸಗಳನ್ನು ಪ್ರತಿನಿಧಿಸುವಂತಿರಬೇಕು.

* ಇತ್ತೀಚೆಗೆ ಓದಿ ಮೆಚ್ಚಿದ ಕೃತಿ ಯಾವುದಾದರೂ ಇದೆಯೆ?

ಡಿವಿಜಿಯವರ ಜೀವನಧರ್ಮಯೋಗವನ್ನು ಮೆಚ್ಚಿದ್ದೇನೆ. ಅವರು ಕನ್ನಡವನ್ನು ಬಳಸುವ ರೀತಿ ಇಷ್ಟವಾಗುತ್ತದೆ. ಎಂ.ಹಿರಿಯಣ್ಣನವರ ಕೃತಿಗಳನ್ನು ಮತ್ತೆ ಓದಲು ಶುರುಮಾಡಿರುವೆ.

* ಭೈರಪ್ಪನರಿಗೆ ಹಾಸ್ಯಪ್ರಜ್ಞೆ ಕಡಿಮೆ, ಯಾವಾಗಲೂ ಅವರು ಗಂಭೀರವಾಗಿರುತ್ತಾರೆ; ಅವರ ಕಾದಂಬರಿಯ ಪಾತ್ರಗಳೂ ಗಂಭೀರವಾಗಿರುತ್ತವೆ ಎನ್ನುತ್ತಾರೆ. ಇದಕ್ಕೆ ಏನಾದರೂ ಕಾರಣಗಳಿವೆಯೆ? ತತ್ತ್ವಶಾಸ್ತ್ರದ ಓದಿಗೂ ಈ ಗಾಂಭೀರ್ಯಕ್ಕೂ ಸಂಬಂಧವಿದೆಯೆ?

ನನ್ನ ಬಾಲ್ಯದ ಅನುಭಗಳು ಕಾರಣ ಇರಬಹುದು. ಮೊದಲಿಗೆ ನಾನು ಬಾಲ್ಯದ ಸಾಕಷ್ಟು ಆಟಗಳನ್ನು ಆಡುತ್ತಿದ್ದೆ. ಆದರೆ ನನ್ನ ಮಾವ ಕೊಡುತ್ತಿದ್ದ ಶಿಕ್ಷೆಗಳ ಕಾರಣದಿಂದ ಆಟಗಳ ಕಡೆಗೆ ಮನಸ್ಸು ಕೊಡುವಂಥ ಅವಕಾಶವೇ ಸಿಗಲಿಲ್ಲ. ನನಗೆ ಈಗಲೂ ಕ್ರಿಕೆಟ್ ಅರ್ಥವಾಗೋಲ್ಲ. ಹೀಗಾಗಿ ನನ್ನ ಕಾದಂಬರಿಗಳಲ್ಲಿ ಎಲ್ಲೂ ಕ್ರಿಕೆಟ್ ಬಂದಿಲ್ಲ. (ನಗು) ಹಾಸ್ಯಕ್ಕೆ ಲಘು ಮನೋಧರ್ಮ ಬೇಕಾಗುತ್ತದೆ. ನನ್ನ ಪಾತ್ರಗಳಲ್ಲಿ ಎಲ್ಲೋ ಒಂದೊಂದು ಕಡೆ ಹಾಸ್ಯ ಬಂದಿರುತ್ತದೆ. ಅದೇನೂ ನಾನು ಬಲವಂತವಾಗಿ ಸೃಷ್ಟಿಸಿರುವುದಲ್ಲ; ಪಾತ್ರಕ್ಕೆ ಸಹಜವಾಗಿ ಅದು ಬಂದಿರುತ್ತದೆ. ಹಾಸ್ಯವನ್ನು ತರಲೇ ಬೇಕು ಎಂದೇನಿಲ್ಲ. ನಮ್ಮಲ್ಲಿ ಅಷ್ಟಾದಶವರ್ಣನೆಗಳ ಲೆಕ್ಕ ಇದೆ. ನನಗೆ ಅಂಥದ್ದರಲ್ಲಿ ನಂಬಿಕೆ ಇಲ್ಲ. ನಾನು ಬರೆಯುವ ಥೀಮ್‌ನಲ್ಲಿ ಹಾಸ್ಯ ಬಂದರೂ ಅದು ಆಭಾಸ ಆಗುತ್ತೆ.

* ಎಂ. ಎಸ್. ಕೆ. ಪ್ರಭು ಅವರ ನಿಧನಾನಂತರ ಭೈರಪ್ಪನವರ ಕೃತಿಗಳಲ್ಲಿ ಶಕ್ತಿ ಕಡಿಮೆಯಾಯಿತು ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದು ನಿಜವೇ?

ಇದೇನೂ ನಿಜವಲ್ಲ. ಅವರು ನನ್ನ ಹಸ್ತಪತ್ರಿಕೆಯನ್ನು ಓದುತ್ತಿದ್ದರು. ಪ್ರಭು ಬೇಸಿಕಲಿ ಗ್ರೇಟ್ ಹ್ಯೂಮನ್ ಬೀಯಿಂಗ್; ಕ್ರಿಯೇಟಿವ್ ವ್ಯಕ್ತಿ. ಅವರು ನನ್ನ ಕೃತಿಯಲ್ಲಿಯ ಟೆಕ್ನಿಕಲ್ ಅಂಶಗಳನ್ನು ಚರ್ಚಿಸುತ್ತಿದ್ದರು. ಒಂದೇ ಸಲ ಅಲ್ಲ, ಅವರು ಪದೇ ಪದೇ ಅದನ್ನು ಚರ್ಚಿಸುತ್ತಿದ್ದರು. ಮಂದ್ರವನ್ನು ಅರ್ಧ ಬರೆಯುವಷ್ಟರಲ್ಲಿಯೇ ಅವರು ತೀರಿಹೋದರು. ಸುಮಾರು ಎರಡು ತಿಂಗಳು ನನಗೆ ಅದನ್ನು ಮತ್ತೆ ಮುಂದುವರೆಸಲು ಆಗಲೇ ಇಲ್ಲ. ಅವರ ಸ್ನೇಹ ಪ್ರಾಮಾಣಿಕವಾದುದು; ಅವರಲ್ಲಿ ನೀವು ಏನನ್ನು ಮಾತನಾಡಿದರೂ ಇನ್ನೊಬ್ಬರಲ್ಲಿ ಅದನ್ನು ಹೇಳುವಂಥ ಸ್ವಭಾವ ಅವರದ್ದಲ್ಲ. ಇಂಥ ವಿಶ್ವಾಸ ಸ್ನೇಹದಲ್ಲಿ ಬೇಕು. ಪ್ರಭು ತೀರಿಕೊಂಡ ಮೇಲೆ ನಾನು ‘ಆವರಣ’ವನ್ನು ಬರೆದೆ. ಅದು ನನ್ನ ಮೇಜರ್ ಕಾದಂಬರಿಗಳಲ್ಲಿ ಒಂದು. ಬಿಫೋರ್ ಪ್ರಭು, ಆಫ್ಟರ್ ಪ್ರಭು – ಎಂಬ ವಿಮರ್ಶಕರ ಸಂಶೋಧನೆಗಳೆಲ್ಲ ನಾನ್‌ಸೆನ್ಸ್.

* ಸಾಹಿತ್ಯ, ಸಂಸ್ಕೃತಿಯ ಉದ್ಧಾರಕ್ಕಾಗಿ ಎಂದು ಮಾಡಿರುವ ಗ್ರಂಥಾಲಯದ ಯೋಜನೆಗಳಲ್ಲಿ ಅವ್ಯವಹಾರಗಳು ನಡೆಯುತ್ತಿರುವುದು ಗುಟ್ಟಾಗಿಲ್ಲ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?

ಸರ್ಕಾರ ಏನು ಒಳ್ಳೆಯ ಯೋಜನೆ ತಂದರೂ ಅಪ್ರಾಮಾಣಿಕರು ಅಲ್ಲಿ ಭ್ರಷ್ಟಾಚಾರವನ್ನು ತರುತ್ತಾರೆ. ಇಂದಿನ ಲೈಬ್ರರಿಗಳಲ್ಲಿ ಒಳ್ಳೆಯ ಪುಸ್ತಕಗಳಿಗೆ ಅವಕಾಶವೇ ಇಲ್ಲ ಎನ್ನುವಂತಾಗಿದೆ. ಜನರಲ್ಲಿ ಗಟ್ಟಿಯಾದ ಸಾಹಿತ್ಯವನ್ನು ಗುರುತಿಸುವಂಥ, ಆಸ್ವಾದಿಸುವಂಥ ಶಕ್ತಿ ಇನ್ನೂ ಇದೆ. ಪ್ರಕಾಶಕರೂ ಒಳ್ಳೆಯ ಸಾಹಿತ್ಯವನ್ನೇ ತಂದರೆ ಜನರೂ ಅದನ್ನು ಸ್ವೀಕರಿಸುತ್ತಾರೆ. ಪ್ರಕಾಶಕರೂ ಒಳ್ಳೆಯ ಜೀವನವನ್ನು ನಡೆಸುವಷ್ಟು ಖಂಡಿತ ವ್ಯಾಪಾರವಾಗುತ್ತದೆ.

* ನಿಮ್ಮ ಕಾದಂಬರಿಗಳಲ್ಲಿ ಯಾವುದಾದರೂ ಕಾದಂಬರಿಯ ಬಗ್ಗೆ ‘ನಾನು ಈ ಕಾದಂಬರಿಯನ್ನು ಬರೆಯಬಾರದಿತ್ತು’, ‘ಅಥವಾ ಇನ್ನೂ ಅದನ್ನು ಚೆನ್ನಾಗಿ ಬರೆಯಬಾರದಿತ್ತು’ ಎಂದು ಅನಿಸಿದೆಯೆ?

‘ಗ್ರಹಣ’ದ ಬಗ್ಗೆ ಹಾಗೆ ಅನಿಸಿದೆ. ಅದನ್ನು ಮೊದಲು ನಾಟಕದ ರೂಪದಲ್ಲಿ ಬರೆದೆ. ಹೀಗಾಗಿ ಅದು ಕಾದಂಬರಿಯಾದ ಮೇಲೂ ನಾಟಕದ ಹಿಡಿತದಿಂದ ತಪ್ಪಿಸಿಕೊಳ್ಳಲೇ ಇಲ್ಲ!

* ಭೈರಪ್ಪನವರ ಸಾಹಿತ್ಯೋತ್ಸವದ ಬಗ್ಗೆ ಏನಾದರೂ ಹೇಳುವುದಿದೆಯೆ?

ಈ ಐ.ಟಿ ಬಿ.ಟಿಯಲ್ಲಿರುವವರು ಭೈರಪ್ಪ ಅಭಿಮಾನಿಗಳ ಕೂಟವನ್ನು ಮಾಡಿಕೊಂಡಿದ್ದಾರೆ. ಈ ಸಂಘದ ಸದಸ್ಯರ ಸಂಖ್ಯೆ ಈಗ ಇಪ್ಪತ್ತು ಸಾವಿರವನ್ನು ಮೀರಿದೆ. ಇವರೆಲ್ಲರೂ ಸಾಹಿತ್ಯಾಭಿಮಾನಿಗಳಷ್ಟೆ ಅಲ್ಲ, ಬುದ್ಧಿವಂತರು ಕೂಡ. ಅವರೆಲ್ಲ ಸೇರಿ ಈ ಕಾರ್ಯಕ್ರಮವನ್ನು ಮಾಡ್ತಾ ಇದ್ದಾರೆ. ಈಗಾಗಲೇ ಅಂಥ ಹಲವು ಕಾರ್ಯಕ್ರಮಗಳನ್ನು ಅವರು ಮಾಡಿದ್ದಾರೆ. ಅಂಥದ್ದರಲ್ಲಿ ಇದೂ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.