ವಿಚಾರ ಸಂಕಿರಣಗಳಲ್ಲಿ ಭಿನ್ನ ನಿಲುವುಗಳ ಸಂಘರ್ಷ, ಕ್ಯಾಂಟೀನ್ ಚರ್ಚೆ, ಹಿರಿಯರ ಅನುಭವದ ಲಾಭ ಎಲ್ಲವೂ ಆ ಕಾಲದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಿತ್ತು. ಈಗ ಏನಾಗುತ್ತಿದೆ?

ಅದು ೧೯೬೯ ಫೆಬ್ರವರಿ; ಮಂಗಳೂರು ಪುರಭವನದಲ್ಲಿ ಅಖಿಲ ಕರ್ನಾಟಕ ಎರಡನೆಯ ಜಾನಪದ ಸಮ್ಮೇಳನ. ಮೂರು ದಿನಗಳ ಸಮ್ಮೇಳನಕ್ಕೆ ಸಿಂಪಿ ಲಿಂಗಣ್ಣ ಸಮ್ಮೇಳನಾಧ್ಯಕ್ಷರು. ಜಾನಪದ ಕ್ಷೇತ್ರದ ಹಿರಿ, ಕಿರಿಯರು ಅಲ್ಲಿದ್ದರು– ದೇಜಗೌ, ಹಾಮಾನಾ, ಜೀಶಂಪ, ಮತಿಘಟ್ಟ ಕೃಷ್ಣಮೂರ್ತಿ, ಎಲ್.ಆರ್.ಹೆಗಡೆ, ಗೊರುಚ, ಪಿ.ಆರ್.ತಿಪ್ಪೇಸ್ವಾಮಿ, ಅಮೃತ ಸೋಮೇಶ್ವರ ಆದಿಯಾಗಿ. ಮೈಸೂರು ವಿ.ವಿ.ಯಿಂದ ಆಸಕ್ತ ಕನ್ನಡ ವಿದ್ಯಾರ್ಥಿಗಳು ಬಂದಿದ್ದರು. ತೀ.ನಂ.ಶಂಕರನಾರಾಯಣ, ಡಿ.ಕೆ.ರಾಜೇಂದ್ರ, ಶ್ರೀಕೃಷ್ಣ ಆಲನಹಳ್ಳಿ, ಕೆ.ರಾಮದಾಸ್, ಭೈರವಮೂರ್ತಿ, ಕಾಳೇಗೌಡ ನಾಗವಾರ, ಎಚ್.ಎಲ್.ನಾಗೇಗೌಡ ಮತ್ತು ಏರ್ಯ ಲಕ್ಷ್ಮೀನಾರಾಯಣ ಆಳ್ವರ ಸಾರಥ್ಯ. ಕರ್ನಾಟಕ ವ್ಯಾಪ್ತಿಯ ಎಲ್ಲಾ ಜನಪದ ಕಲೆಗಳ ಪ್ರದರ್ಶನ. ಮೈಸೂರು ವಿ.ವಿ ಮಂಗಳೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ವಿ.ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ನಾವು ೧೬ ಮಂದಿ ಎಂ.ಎ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಂಭ್ರಮಿಸುತ್ತಿದ್ದೆವು. ಎಂಎ ವಿದ್ಯಾರ್ಥಿಯಾಗಿದ್ದ ನನಗೂ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಿದ್ದರು. ಅದು ನನ್ನ ಬದುಕಿನ ಮೊದಲನೆಯ ಸಾರ್ವಜನಿಕ ಪ್ರಬಂಧ ಮಂಡನೆ. ಜಾನಪದದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಾಗಿ ನಾವು ತುಂಬಿಕೊಂಡದ್ದು ಆ ಸಮ್ಮೇಳನದ ಮೂಲಕ.

೧೯೬೮ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಮೈಸೂರು ವಿವಿಯ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಎಸ್.ವಿ.ಪರಮೇಶ್ವರ ಭಟ್ಟರು ಮಂಗಳೂರಿನ ಕರಂಗಲಪಾಡಿಯ ಹಳೆಯ ಪೋರ್ಟಿಕೊ ಮನೆಯ ಕಟ್ಟಡದಲ್ಲಿ ಕನ್ನಡ ವಿಭಾಗವನ್ನು ಸಾಹಿತ್ಯದ ಅನುಭವ ಮಂಟಪವನ್ನಾಗಿ ಮಾಡಿದರು. ೧೯೭೦-೭೧ರ ಅವಧಿ: ಗೋಡೆ, ಬಾಗಿಲು, ಕಿಟಿಕಿ ಇಲ್ಲದ ಪೋರ್ಟಿಕೊ
ದಲ್ಲಿ ದ.ರಾ.ಬೇಂದ್ರೆಯವರ ಕವನವಾಚನ. ‘ಗಂಗಾವತರಣ’ ಕವನವನ್ನು ಬೇಂದ್ರೆ ಸಾಭಿನಯವಾಗಿ ವಾಚಿಸುತ್ತಿದ್ದಾರೆ. ನಾವು ಅಧ್ಯಾಪಕರು, ವಿದ್ಯಾರ್ಥಿಗಳು ಯಾವ ಅಂತರವೂ ಇಲ್ಲದೆ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ’ಇಳಿದು ಬಾ ತಾಯಿ’ ಮಾರ್ದನಿಗೊಳ್ಳುವಾಗ ನಮಗೆಲ್ಲ ರೋಮಾಂಚನ. ಅದೇ ಅವಧಿಯಲ್ಲಿ ಅದೇ ಸ್ಥಳದಲ್ಲಿ ಮತ್ತೊಮ್ಮೆ ಗೋಪಾಲಕೃಷ್ಣ ಅಡಿಗರ ಉಪನ್ಯಾಸ: ’ಕಾವ್ಯದಲ್ಲಿ ಅರ್ಥ’. ಅಡಿಗರನ್ನು ಕಂಡದ್ದು ಮತ್ತು ಅವರ ಮಾತುಗಳನ್ನು ನಾನು ಕೇಳಿದ್ದು ಅದೇ ಮೊದಲು. ತುಂಡು ತುಂಡು ವಾಕ್ಯಗಳು, ಸ್ಪಷ್ಟವಾದ ನುಡಿಗಟ್ಟು, ಸ್ವಲ್ಪ ಯಕ್ಷಗಾನ ಶೈಲಿಯ ದೈಹಿಕ ಚಲನೆ ಅವತ್ತು ಅಡಿಗರದ್ದು. ಐವತ್ತು ವರ್ಷಗಳ ಬಳಿಕವೂ ಬೇಂದ್ರೆ ಮತ್ತು ಅಡಿಗರ ಚಿತ್ರಗಳು ನನ್ನ ನೆನಪಿನ ಅಂಗಳದಲ್ಲಿ ಅಲೆದಾಡುತ್ತಿರುತ್ತವೆ.

ಮಂಗಳೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಅಧ್ಯಾಪಕನಾಗಿ ನಾನು ಸೇರಿದ್ದು ೧೯೭೦ರಲ್ಲಿ. ೧೯೮೦ರಲ್ಲಿ ಮಂಗಳೂರು ವಿ.ವಿ ಸ್ಥಾಪನೆ ಆಗುವವರೆಗೆ ನಮ್ಮ ವಿಭಾಗದಲ್ಲಿ ಕನ್ನಡ ಎಂಎ ಕಲಿಯಲು ಮೈಸೂರು, ಮಂಡ್ಯ , ಹಾಸನ , ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮುಂತಾದ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಬಹುಸಂಸ್ಕೃತಿಯ ವಿದ್ಯಾರ್ಥಿಗಳ ಸಂಪರ್ಕದಿಂದ ತರುಣ ಅಧ್ಯಾಪಕನಾದ ನಾನು ರಾಜ್ಯದ ಅಂಚಿನಲ್ಲಿರುವ ಮಂಗಳೂರಿನಲ್ಲಿ ಇದ್ದುಕೊಂಡೇ ಕರ್ನಾಟಕವನ್ನು ನನ್ನೊಳಗೆ ಸೇರಿಸಿಕೊಳ್ಳಲು ಸಾಧ್ಯವಾಯಿತು. ’ಕನ್ನಡಂಗಳ್’ ಎನ್ನುವ ನುಡಿಗಟ್ಟಿನ ಅರ್ಥವಂತಿಕೆ ನನ್ನ ಭಾಷೆ ಮತ್ತು ಚಿಂತನೆಯಲ್ಲಿ ಒಡಮೂಡಿತು.

೧೯೭೦ರ ದಶಕ ಕನ್ನಡ ನವ್ಯಸಾಹಿತ್ಯದ ಉಚ್ಚ್ರಾಯದ ಕಾಲ. ಆ ಕಾಲಘಟ್ಟದಲ್ಲಿ ನವೋದಯ ಮತ್ತು ನವ್ಯ ಸಾಹಿತ್ಯದ ನಡುವಿನ ಸಂಘರ್ಷರೂಪದ ಚರ್ಚೆಗಳು ಬಿರುಸಾಗಿದ್ದವು. ಅಡಿಗರ ’ಸಾಕ್ಷಿ’ ಸಾಹಿತ್ಯ ತ್ರೈಮಾಸಿಕ ನವ್ಯಸಾಹಿತ್ಯದ ಮುಖವಾಣಿಯಾಗಿತ್ತು. ಲಂಕೇಶರು ಸಂಪಾದಿಸಿದ ನವ್ಯಕವನಗಳ ಸಂಕಲನ ’ಅಕ್ಷರ ಹೊಸಕಾವ್ಯ’( ೧೯೭೦) ಪ್ರಕಟವಾಗಿ, ಪತ್ರಿಕೆಗಳಲ್ಲಿ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದುವು. ಇಂತಹ ಸನ್ನಿವೇಶದಲ್ಲಿ ನಮ್ಮ ಕನ್ನಡ ವಿಭಾಗದಲ್ಲಿ ಶೈಕ್ಷಣಿಕ ಭಾಗವಾಗಿದ್ದ ವಿದ್ಯಾರ್ಥಿಗಳ ತರಗತಿ ವಿಚಾರಗೋಷ್ಟಿಗಳು ಅಧ್ಯಾಪಕರಾದ ನಮಗೆ ಕಲಿಯುವಿಕೆಯ ಅನುಭವ ಮಂಟಪಗಳಾದುವು. ತರಗತಿ ಸೆಮಿನಾರ್ಗೆ ಪ್ರಬಂಧದ ವಿಷಯಗಳ ಆಯ್ಕೆಗೆ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಇತ್ತು.

೧೯೭೦ರ ದಶಕದಲ್ಲಿ ನಮ್ಮ ವಿದ್ಯಾರ್ಥಿಗಳು ಹಿರಿಯ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಪುತಿನ, ಮಾಸ್ತಿ, ಕಾರಂತ, ಗೊರೂರು, ಭೈರಪ್ಪನವರ ಕೃತಿಗಳ ಹಾಗೆಯೇ ನವ್ಯಪಂಥದ ಅಡಿಗ, ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಕಂಬಾರ, ಕಾರ್ನಾಡ್, ರಾಮಚಂದ್ರ ಶರ್ಮ, ಚೊಕ್ಕಾಡಿ, ತಿರುಮಲೇಶ್, ಮೊಗಸಾಲೆ ಮುಂತಾದವರ ಸಾಹಿತ್ಯದ ಬಗ್ಗೆಯೂ ಪ್ರಬಂಧಗಳನ್ನು ಬರೆದು ಮಂಡಿಸಿದರು. ಈ ತರಗತಿ ಸೆಮಿನಾರ್ಗಳಲ್ಲಿ ವಿದ್ಯಾರ್ಥಿಗಳ ನಡುವೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದುವು. ಇದರಿಂದಾಗಿ ಸೆಮಿನಾರ್ಗಳಲ್ಲಿ ಮೌಲ್ಯಮಾಪಕನಾಗಿ ಕುಳಿತಿರುತ್ತಿದ್ದ ನನಗೆ ಈ ಎಲ್ಲಾ ಕೃತಿಗಳನ್ನು ಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಲು ಅವಕಾಶವಾಯಿತು. ಸುಮಾರು ೧೯೮೪ರವರೆಗೆ ನಾನು ವಿದ್ಯಾರ್ಥಿ ಸೆಮಿನಾರ್ಗಳಿಗೆ ಹೋಗುತ್ತಿದ್ದೆ. ದಲಿತ ಬಂಡಾಯದ ಆರಂಭದ ಹೆಚ್ಚಿನ ಕೃತಿಗಳನ್ನು ನಾನು ಓದಿದ್ದು ವಿದ್ಯಾರ್ಥಿ ಸೆಮಿನಾರ್ಗಳ ಸಿದ್ಧತೆಗಾಗಿ. ದೇವನೂರು, ಸಿದ್ಧಲಿಂಗಯ್ಯ, ಆಲನಹಳ್ಳಿ ಕೃಷ್ಣ, ಬೆಸಗರಹಳ್ಳಿ ರಾಮಣ್ಣ, ಕೆ.ಟಿ.ಗಟ್ಟಿ, ಬರಗೂರು, ಬೊಳುವಾರು, ಕಟ್ಪಾಡಿ, ವಿಜಯಾ ದಬ್ಬೆ, ವೈದೇಹಿ, ಕುಂವೀ, ವಾಲೀಕಾರ, ಸಾರಾ ಅಬೂಬಕ್ಕರ್, ಪ್ರತಿಭಾ ನಂದಕುಮಾರ್- ಹೀಗೆ ಮುಂದೆ ಪ್ರಸಿದ್ಧರಾದ ಅನೇಕ ಸಾಹಿತಿಗಳ ಮೊದಲ ಕೃತಿಗಳನ್ನು ಓದಿ ನವ್ಯದ ಗುಂಗಿನಿಂದ ಹೊರಗೆ ಬರಲು ಸಾಧ್ಯವಾಯಿತು.

ಮಂಗಳೂರು ವಿ.ವಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥನಾಗಿ ೧೯೮೪ರ ದಶಂಬರದಲ್ಲಿ ನಾನು ನಡೆಸಿದ ಮೊದಲ ವಿಚಾರ ಸಂಕಿರಣ ‘ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು’. ಉದ್ಘಾಟನೆ ಮಾಡಿದ ಶಿವರಾಮ ಕಾರಂತರು, ಸಮಾರೋಪ ಭಾಷಣ ಮಾಡಿದ ಎಸ್. ಅನಂತ ನಾರಾಯಣ, ಪ್ರಬಂಧ ಮಂಡಿಸಿದ ಶ್ರೀನಿವಾಸ ಹಾವನೂರ, ಜೀ.ಶಂ.ಪರಮಶಿವಯ್ಯ, ಬಿ.ದಾಮೋದರ ರಾವ್, ಡಿ.ಆರ್.ನಾಗರಾಜ್, ಬೈಕಾಡಿ ವೆಂಕಟಕೃಷ್ಣರಾಯರು ಇಂದು ನಮ್ಮೊಂದಿಗೆ ಇಲ್ಲ. ಜಿ.ಎಚ್.ನಾಯಕ, ಸಿ.ಎನ್.ರಾಮಚಂದ್ರನ್, ಕೆ.ವಿ.ನಾರಾಯಣ, ಶ್ರೀಕಂಠ ಕೂಡಿಗೆ ಇಂದಿಗೂ ಬರಹ ಮತ್ತು ಚಿಂತನೆಯಲ್ಲಿ ಕ್ರಿಯಾಶೀಲರಾಗಿ ಇದ್ದಾರೆ. ಈ ಸಂಕಿರಣದಲ್ಲಿ ಪಾಲುಗೊಂಡ ನಮಗೆಲ್ಲ ಕನ್ನಡ ಕಾದಂಬರಿಗಳ ಸ್ವರೂಪ ಮತ್ತು ವೈವಿಧ್ಯದ ಬಗ್ಗೆ ಪುಸ್ತಕಗಳಲ್ಲಿ ದೊರೆಯದ ಹೊಸ ವಿಚಾರಗಳ ಹೊಳಹು ದೊರೆಯಿತು; ಜೊತೆಗೆ ವಿಷಯಗಳ ಮಥನ ಮಾಡುವ ವಿನ್ಯಾಸಗಳ ಪರಿಚಯವಾಯಿತು. ನನಗೆ ಈಗಲೂ ನೆನಪಿದೆ: ಜಿ.ಎಚ್.ನಾಯಕ್, ಕೆ.ವಿ.ನಾರಾಯಣ ಮತ್ತು ಡಿ.ಆರ್.ನಾಗರಾಜ್- ಒಬ್ಬರಿಗೆ ಇನ್ನೊಬ್ಬರು ಗುರುಶಿಷ್ಯ ಪರಂಪರೆಯವರು.ಆದರೆ ಅವರೆಲ್ಲರೂ ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಭಿನ್ನವಾಗಿಯೇ ಪ್ರಕಟಿಸಿದರು; ಉತ್ಸಾಹದಿಂದಲೇ ಚರ್ಚೆಯಲ್ಲಿ ಭಾಗವಹಿಸಿದರು. ಸಿ.ಎನ್.ರಾಮಚಂದ್ರನ್ ಅವರೇ ಕೆಲವೊಮ್ಮೆ ಹೇಳಿಕೊಂಡಂತೆ, ಕನ್ನಡ ವಿಮರ್ಶಕರಾಗಿ ಅವರು ಮಂಡಿಸಿದ ಮೊದಲ ಪ್ರಬಂಧ ಈ ಸೆಮಿನಾರ್ನಲ್ಲಿ.
ಕನ್ನಡ ವಿಭಾಗದಲ್ಲಿ ನಾವು ನಡೆಸಿದ ಇನ್ನೊಂದು ಮಹತ್ವದ ವಿಚಾರ ಸಂಕಿರಣ ‘ಕನ್ನಡ ಸಾಹಿತ್ಯ ಮತ್ತು ಸಮೂಹ ಮಾಧ್ಯಮಗಳು’. ೧೯೮೬ ಜನವರಿಯಲ್ಲಿ ಎರಡು ದಿನ ನಡೆಯಿತು. ಚದುರಂಗರ ಉದ್ಘಾಟನಾ ಭಾಷಣ, ಅನಂತಮೂರ್ತಿಯವರ ಪ್ರಾಸ್ತಾವಿಕ ಭಾಷಣ, ಪೂರ್ಣಚಂದ್ರ ತೇಜಸ್ವಿಯವರ ಸಮಾರೋಪ ಭಾಷಣ. ಕೆ.ವಿ.ಸುಬ್ಬಣ್ಣ, ವಡ್ಡರ್ಸೆ ರಘುರಾಮ ಶೆಟ್ಟಿ, ಕೆ.ರಾಘವೇಂದ್ರ ರಾವ್, ಸಂತೊಷಕುಮಾರ್ ಗುಲ್ವಾಡಿ, ಆಕಾಶವಾಣಿ ನಿರ್ದೇಶಕ ಚಲಪತಿ ರಾವ್ ವಿವಿಧ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿನ ಆ ಕಾಲದ ತರುಣ ಚಿಂತಕರಾದ ಪ್ರಸನ್ನ, ಡಿ.ಎಸ್.ನಾಗಭೂಷಣ, ಲಿಂಗದೇವರು ಹಳೆಮನೆ, ಜಿ.ಪಿ.ಬಸವರಾಜು, ಗಂಗಾಧರ ಮೊದಲಿಯಾರ್, ಶ್ರೀನಿವಾಸ ಪ್ರಭು, ವಿ.ಎನ್.ಲಕ್ಷ್ಮೀನಾರಾಯಣ, ಆನಂದರಾಮ ಉಪಾಧ್ಯ - ತಮ್ಮ ಅನುಭವ ಹಾಗೂ ಚಿಂತನೆಗಳನ್ನು ಹಂಚಿಕೊಂಡರು. ನಮಗೆ, ವಿಭಾಗದ ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮತ್ತು ಮಾಧ್ಯಮಗಳ ಆಳ ಅಗಲಗಳನ್ನು ಅರಿಯಲು ಹೆಬ್ಬಾಗಿಲು ತೆರೆದದ್ದು ಆ ಸಂಕಿರಣ.

ಕಾರಂತರ ಖಾರ
ಶಿವರಾಮ ಕಾರಂತರು ನಮ್ಮ ಕನ್ನಡ ವಿಭಾಗದ ಜೊತೆಗೆ ನಿರಂತರ ಸಂಬಂಧವನ್ನು ಇಟ್ಟುಕೊಂಡಿದ್ದರು. ೧೯೮೭ರಲ್ಲಿ ಕಾರಂತರನ್ನು ನಮ್ಮ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಕರೆದಾಗ, ಅವರು ಬಂದು ಪ್ರತೀ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಎಂ.ಎ ವಿದ್ಯಾರ್ಥಿಗಳಿಗೆ ಸಾಹಿತ್ಯ, ಕಲೆ ಮತ್ತು ರಂಗಭೂಮಿ ಕುರಿತು ಉಪನ್ಯಾಸಗಳನ್ನು ಕೊಡುತ್ತಿದ್ದರು. ವಿವಿಯಲ್ಲಿ ಅತಿಥಿಗೃಹ ಇಲ್ಲದ ಆ ಕಾಲದಲ್ಲಿ, ಮಧ್ಯಾಹ್ನದ ಹೊತ್ತು ನನ್ನ ಸಣ್ಣ ಕೊಠಡಿಯಲ್ಲಿ ಊಟ ಮಾಡಿ, ಹದಿನೈದು ನಿಮಿಷ ಕುರ್ಚಿಯಲ್ಲೇ ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಂಡು, ಮತ್ತೆ ಉಪನ್ಯಾಸಕ್ಕೆ ಸಿದ್ಧರಾಗುತ್ತಿದ್ದರು. ಹಾಗೆಯೇ ನಮ್ಮ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಸಮೀಪದಿಂದ ನೋಡಲು ಮಾತಾಡಲು ಸಿಗುತ್ತಿದ್ದರು.

ಮುಂದೆ, ನಮ್ಮ ಕನ್ನಡ ಎಂ.ಎ ಪಾಠಪಟ್ಟಿಯಲ್ಲಿ ಸೇರ್ಪಡೆಯಾದ ‘ವಿಶೇಷ ಸಾಹಿತಿ: ಕಾರಂತ’ರನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸಂದರ್ಭದಲ್ಲಿ ನಾನು ಕಾರಂತರನ್ನು ಕರೆಸಿ, ತರಗತಿಯ ಒಳಗೆ ವಿದ್ಯಾರ್ಥಿಗಳ ಜೊತೆಗೆ ಸಂವಾದ ಏರ್ಪಡಿಸುತ್ತಿದ್ದೆ. ಬಹಳ ಅನೌಪಚಾರಿಕವಾಗಿ ಆತ್ಮೀಯವಾಗಿ ವಿದ್ಯಾರ್ಥಿಗಳು ಕಾರಂತರೊಡನೆ ಸಂವಾದ ನಡೆಸುತ್ತಿದ್ದರು. ಅನೇಕ ಬಾರಿ ಕಾರಂತರ ಮೊನಚು ಮಾತುಗಳಿಂದ ಸಂವಾದಕ್ಕೆ ಲವಲವಿಕೆ ಪ್ರಾಪ್ತವಾಗುತ್ತಿತ್ತು. ಒಮ್ಮೆ ಒಬ್ಬ ವಿದ್ಯಾರ್ಥಿ ಕಾರಂತರಲ್ಲಿ ಒಂದು ಪ್ರಶ್ನೆ ಕೇಳಿದ: ‘ಚೋಮನದುಡಿಯಲ್ಲಿ ಕಾರಂತರು ಚೋಮನಿಗೆ ಭೂಮಿ ಕೊಡಿಸಲಿಲ್ಲ ಎನ್ನುವ ವಿಮರ್ಶೆ ಇದೆ. ಇದಕ್ಕೆ ನೀವು ಏನು ಹೇಳುತ್ತೀರಿ?’ ಅದಕ್ಕೆ ತತ್ಕ್ಷಣ ಕಾರಂತರ ಪ್ರತಿಕ್ರಿಯೆ: ‘ಕೊಡಿಸಲಿಕ್ಕೆ ನನ್ನಲ್ಲಿ ಭೂಮಿ ಇರಲಿಲ್ಲ!’ ವಿ.ವಿ.ಯಲ್ಲಿ ೧೯೯೪ರಲ್ಲಿ ಕಾರಂತಪೀಠ ಸ್ಥಾಪನೆಯಾಗಿ ನಾನು ಅದರ ನಿರ್ದೇಶಕನಾಗಿದ್ದಾಗ ಕಾರಂತರು ಸಾಕಷ್ಟು ಬಾರಿ ಬಂದು ನಮ್ಮೊಡನೆ ಬೆರೆತು ಲೋಕಾಭಿರಾಮ ಮಾತಾಡಿದ ಅನೇಕ ನೆನಪುಗಳು ಹಸುರಾಗಿವೆ.

ಕಳೆದ ಹತ್ತು ವರ್ಷಗಳಿಂದ ಜರ್ಮನಿಯ ವ್ಯೂರ್ತ್ಬುರ್ಗ್ ವಿ.ವಿ.ಯಲ್ಲಿ ಯೂರೋಪಿಯನ್ನರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಲಿಸುವಾಗ, ನನ್ನ ಭಾಷಾವಿಜ್ಞಾನದ ತಿಳಿವಳಿಕೆಯ ಮಿತಿ ನನಗೆ ಮನವರಿಕೆಯಾಗಿದೆ. ಪರಂಪರಾಗತ ವ್ಯಾಕರಣದಲ್ಲಿ ಉತ್ತರ ಸಿಗದ ಪ್ರಶ್ನೆಗಳನ್ನು ಅಲ್ಲಿಯ ವಿದ್ಯಾರ್ಥಿಗಳು ಕೇಳಿದಾಗ, ಅವುಗಳಿಗೆ ಉತ್ತರಿಸಲು ಅನೇಕ ಪುಸ್ತಕಗಳನ್ನು ತಡಕಾಡಬೇಕಾಗಿ ಬಂತು. ಅಲ್ಲಿ ನಾನು ವಾರ್ಷಿಕವಾಗಿ ನಡೆಸುತ್ತಿರುವ ‘ಕ್ಲಾಸಿಕಲ್ ಕನ್ನಡ ಬೇಸಗೆ ಶಿಬಿರ’ಗಳಲ್ಲಿ ಹಳೆಗನ್ನಡ ಕಾವ್ಯಗಳಾದ ‘ಪಂಪಭಾರತ’ ಮತ್ತು ಜನ್ನನ ‘ಯಶೋಧರ ಚರಿತ’ಗಳನ್ನು ಪಾಠ ಮಾಡುವಾಗ, ಮಂಗಳೂರು ವಿ.ವಿ.ಯಲ್ಲಿ ಅವುಗಳನ್ನು ನಾನು ಪಾಠ ಮಾಡಿದ ಅನುಭವ ಪೂರ್ಣಪ್ರಮಾಣದಲ್ಲಿ ಉಪಯೋಗಕ್ಕೆ ಬರಲಿಲ್ಲ. ಹಳೆಗನ್ನಡ ಪದ್ಯಗಳನ್ನು ಮೂಲಪಠ್ಯದ ಜೊತೆಗೆ ಇಂಗ್ಲಿಷ್ನಲ್ಲಿ ಬೋಧಿಸುವಾಗ, ಅವುಗಳ ಭಾಷಿಕ ರೂಪಗಳ ಎಳೆ ಎಳೆಗಳನ್ನು ವಿದ್ಯಾರ್ಥಿಗಳು ಪ್ರಶ್ನಿಸಿದಾಗ, ನನ್ನ ಅಧ್ಯಯನವನ್ನು ಮತ್ತೆ ಹೊಸದಾಗಿ ಮಾಡಬೇಕಾಗಿ ಬಂತು. ಹಳೆಗನ್ನಡ ಕಾವ್ಯಗಳ ಭಾಷಿಕ ಬಗೆಗಳನ್ನು ವಿವರಿಸಲು ಹಳೆಗನ್ನಡ ವ್ಯಾಕರಣ ಗ್ರಂಥ ಕೇಶಿರಾಜನ ‘ಶಬ್ದಮಣಿದರ್ಪಣ’ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ ಎನ್ನುವುದು ಸ್ಪಷ್ಟವಾಯಿತು. ಪಂಪನು ಬಳಸುವ ವಾಕ್ಯರಚನೆಯ ವಿನ್ಯಾಸ, ಸಾಂಪ್ರದಾಯಿಕ ವ್ಯಾಕರಣವನ್ನು ಮೀರುವ ಪ್ರಯೋಗಗಳು ಇತ್ಯಾದಿಗಳನ್ನು ವಿವರಿಸುವ ಅಧ್ಯಯನಗ್ರಂಥಗಳು ನಮ್ಮಲ್ಲಿ ಇಲ್ಲ. ಈ ದೃಷ್ಟಿಯಿಂದ ಡಿ.ಎನ್.ಶಂಕರ ಭಟ್ಟರ ಕೆಲವು ಗ್ರಂಥಗಳು ಸಹಕಾರಿ ಆಗಿವೆ.

ಜರ್ಮನಿಯಲ್ಲಿ ಜೈನಾಲಜಿಯಲ್ಲಿ ವಿಶೇಷ ಪ್ರಾವೀಣ್ಯವುಳ್ಳ ವಿದ್ವಾಂಸರಿದ್ದಾರೆ. ಅವರೆಲ್ಲಾ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದು ಆ ಭಾಷೆಗಳಲ್ಲಿ ಇರುವ ಮೂಲ ಗ್ರಂಥಗಳನ್ನು ಅಧ್ಯಯನ ಮಾಡಿದವರಾಗಿದ್ದಾರೆ. ಅವರ ಜೊತೆಗೆ ವಿಚಾರವಿನಿಮಯ ಮಾಡಿಕೊಳ್ಳುವಾಗ ನನಗೆ ಪ್ರಾಕೃತ ಭಾಷೆಗಳ ತಿಳಿವಳಿಕೆ ಇಲ್ಲದಿರುವ ಕೊರತೆ ಬಹಳವಾಗಿ ಕಾಡಿತು. ಜನ್ನನ ‘ಯಶೋಧರ ಚರಿತ’ ಮತ್ತು ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ ಕಾವ್ಯಗಳ ಪ್ರಾಕೃತ ಮೂಲಗ್ರಂಥಗಳನ್ನು ನಾನು ಓದದಿರುವ ಕಾರಣ, ಈ ಕನ್ನಡ ಕಾವ್ಯಗಳ ಬಗ್ಗೆ ಅಲ್ಲಿನ ವಿದ್ವಾಂಸರು ವಿಚಾರಿಸಿದಾಗ, ತೌಲನಿಕವಾಗಿ ಸಮರ್ಪಕವಾಗಿ ವಿವರಿಸಲು ನನಗೆ ಸಾಧ್ಯವಾಗಲಿಲ್ಲ. ಕರ್ನಾಟಕದ ವಿ.ವಿ.ಗಳಲ್ಲಿ ಈಗ ಪಾಲಿ ಪ್ರಾಕೃತ ಭಾಷೆಗಳ ಅಧ್ಯಯನಕ್ಕೆ ಅವಕಾಶ ಇಲ್ಲ. ಪ್ರಾಚೀನ ಜೈನ ಕಾವ್ಯಗಳ ಅಧ್ಯಯನದ ದೃಷ್ಟಿಯಿಂದ ಪಾಕೃತ ಭಾಷೆಗಳ ಪ್ರಭುತ್ವ ಬಹಳ ಅಗತ್ಯ. (ಶ್ರವಣಬೆಳಗೊಳದಲ್ಲಿ ಚಾರುಕೀರ್ತಿ ಭಟ್ಟಾರಕರು ಪ್ರಾಕೃತಭಾಷೆಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದಾರೆ.)

ಉನ್ನತ ಶಿಕ್ಷಣದಲ್ಲಿ..
ಕಾಲೇಜು ಮತ್ತು ವಿ.ವಿ ಅಧ್ಯಾಪಕರಿಗಾಗಿ ಯುಜಿಸಿ ರೂಪಿಸಿದ ಪುನಶ್ಚೇತನ ಶಿಬಿರಗಳು ಸರಿಯಾಗಿ ನಿರ್ವಹಿಸಿದರೆ ಉನ್ನತ ಶಿಕ್ಷಣದಲ್ಲಿ ಬಹಳ ಉಪಯುಕ್ತ. ಮೂರು ವಾರಗಳ ಅವಧಿಯಲ್ಲಿ ಪಾಠಪಟ್ಟಿಗೆ ಪೂರಕವಾದ ಮತ್ತು ಹೊರತಾದ ಸಾಹಿತ್ಯಸಂಬಂಧಿ ಇತ್ತೀಚೆಗಿನ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಇದು ಸಹಕಾರಿ.

ಮಂಗಳೂರು ವಿ.ವಿ ಕನ್ನಡ ವಿಭಾಗದಲ್ಲಿ ನಡೆಸಿದ ಪುನಶ್ಚೇತನ ಶಿಬಿರಗಳ ಪೂರ್ವಭಾವಿಯಾಗಿ ವಿಭಾಗದ ಅಧ್ಯಾಪಕರು ನಾವು ಸಾಕಷ್ಟು ಸಮಾಲೋಚನೆ ನಡೆಸಿ, ಪ್ರತೀ ಬಾರಿಯೂ ಹೊಸ ಪರಿಕಲ್ಪನೆಗಳನ್ನು ರೂಪಿಸುತ್ತಿದ್ದೆವು. ಮೂರು ವಾರಗಳ ಕಾಲ ಉಪನ್ಯಾಸಗಳು ನಡೆಯುತ್ತಿರುವಾಗ ನಾನು ಅಧ್ಯಾಪಕರ ಜೊತೆಗೆ ಹಿಂದಿನ ಸಾಲಿನಲ್ಲಿ ಬಹುಮಟ್ಟಿಗೆ ಎಲ್ಲ ತರಗತಿಗಳಿಗೂ ಹಾಜರಾಗುತ್ತಿದ್ದೆನು. ಗ್ರಂಥಗಳಿಂದ ಪಡೆಯಲಾಗದ ಅನೇಕ ಹೊಸ ಸಂಗತಿಗಳನ್ನು ತಿಳಿಯಲು ಅಲ್ಲಿ ಅವಕಾಶ ಆಗುತ್ತಿತ್ತು. ಅತಿಥಿ ಉಪನ್ಯಾಸಕರ ಗುಣಮಟ್ಟ ಗ್ರಹಿಸಲು ಕೂಡಾ ಇದರಿಂದ ಸಾಧ್ಯವಾಗುತ್ತಿತ್ತು.

೧೯೮೫-೯೫ರ ಅವಧಿಯಲ್ಲಿ ವಿ.ವಿ ಕ್ಯಾಂಪಸ್ ಕೊಣಾಜೆಯಲ್ಲಿ ನಾವು ಕೆಲವು ಪ್ರಾಧ್ಯಾಪಕರು ನಮ್ಮ ತರಗತಿಗಳ ನಡುವಿನ ಬಿಡುವಿನಲ್ಲಿ ಕ್ಯಾಂಟೀನ್ನಲ್ಲಿ ಸೇರುತ್ತಿದ್ದೆವು. ಇಂಗ್ಲಿಷ್ನ ಸಿ.ಎನ್.ರಾಮಚಂದ್ರನ್, ರಾಜ್ಯಶಾಸ್ತ್ರದ ಕೆ.ರಾಘವೇಂದ್ರ ರಾವ್, ಸಾಗರ ಭೂವಿಜ್ಞಾನದಕೆ.ಆರ್.ಸುಬ್ರಹ್ಮಣ್ಯ, ಇತಿಹಾಸದ ಸುರೇಂದ್ರ ರಾವ್ ಮತ್ತು ಕೇಶವನ್. ಈ ಸಂದರ್ಭದಲ್ಲಿ ಅನೇಕ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆವು. ನಾನು ಹೆಚ್ಚಾಗಿ ಕೇಳುಗನಾಗಿ ಜಾಗತಿಕ ಹಾಗೂ ಸಾಹಿತ್ಯಕ ಸಂಗತಿಗಳ ಅರಿವನ್ನು ಪಡೆಯುತ್ತಿದ್ದೆನು. ಇಂತಹ ಕಿರು ಅನುಭವ ಮಂಟಪಗಳು ನನ್ನ ಅಧ್ಯಾಪನಕ್ಕೆ ನೆರವಾಗುತ್ತಿದ್ದವು. ನಾನು ಎಂ.ಎ ತರಗತಿಗಳಿಗೆ ಪಾಠ ಮಾಡುತ್ತಿದ್ದ ಪಾಶ್ಚಿಮಾತ್ಯ ಸಾಹಿತ್ಯ ಸಿದ್ಧಾಂತಗಳ ಪರಿಕಲ್ಪನೆಗಳ ಸ್ಪಷ್ಟತೆಗೆ ಸಿ.ಎನ್.ರಾಮಚಂದ್ರನ್ ಜೊತೆಗಿನ ಸಮಾಲೋಚನೆ ನನಗೆ ಬಹಳ ನೆರವಾಗಿದೆ. ಉನ್ನತ ಶಿಕ್ಷಣದಲ್ಲಿ ವಿದ್ವತ್ ಸಮಾಲೋಚನೆಯ ಲಭ್ಯತೆಯ ಕೊರತೆ ಬಹಳ ದೊಡ್ಡ ನಷ್ಟ. ನಾವು ತಿಳಿದುಕೊಂಡದಷ್ಟನ್ನೇ ಸಮರ್ಪಕ, ಅಂತಿಮ ಎನ್ನುವ ದೃಷ್ಟಿಕೋನವು ಶಿಕ್ಷಣಕ್ಷೇತ್ರದಲ್ಲಿ ಅಪಕಲ್ಪನೆ ಹೆಚ್ಚಾಗಲು ಕಾರಣವಾಗುತ್ತದೆ.

ಕರಾವಳಿಯಲ್ಲಿ ಸಾಂಪ್ರದಾಯಿಕ ಔತಣದ ವೇಳೆಗೆ ಅತಿಥಿಗಳು ಊಟಕ್ಕೆ ಕುಳಿತಲ್ಲಿಗೆ ಮನೆಯ ಯಜಮಾನರು ಬಂದು ಪ್ರತಿಯೊಬ್ಬರಿಗೂ ಕೈಮುಗಿದು ಸತ್ಕರಿಸುವಾಗ ‘ಸಂಕ್ಷೇಪ ಮಾಡಿದ್ದೇವೆ. ಸಾವಕಾಶವಾಗಿ ಊಟಮಾಡಿರಿ’ ಎಂದು ಉಪಚಾರದ ಮಾತನ್ನು ಹೇಳುವ ಸಂಪ್ರದಾಯ ಇದೆ. ಅವರು ‘ಸಂಕ್ಷೇಪ ಮಾಡಿದ್ದೇವೆ’ ಎಂದು ಔಪಚಾರಿಕವಾಗಿ ಹೇಳುತ್ತಾರೆ. ಆದರೆ ನಿಜವಾಗಿ ಎಲೆಯಲ್ಲಿ ವ್ಯಂಜನಗಳು ಭಕ್ಷ್ಯಗಳು ತುಂಬಿತುಳುಕುತ್ತಿರುತ್ತವೆ. ಈಗ ಉನ್ನತ ಶಿಕ್ಷಣದ ಎಲೆಯಲ್ಲಿ ಅದರ ವಿಲೋಮ ಪರಿಸ್ಥಿತಿ ಇದೆ. ಬಡಿಸಿದ ಎಲೆಯಲ್ಲಿ ‘ಸಂಕ್ಷೇಪ’ ಇದೆ. ಆದರೆ ಬಾಯುಪಚಾರದಲ್ಲಿ ‘ಹೊಟ್ಟೆ ತುಂಬಾ ಕೊಡುತ್ತಿದ್ದೇವೆ’ ಎನ್ನುವ ಧೋರಣೆ ಇದೆ. ಇದರ ಜೊತೆಗೆ ಬಡಿಸುವವರು ಕೆಲವರಷ್ಟೇ ಉಳಿದಿದ್ದಾರೆ. ಕೆಲಸ ಮಾಡಿಸಲು, ಬಡಿಸಲು ತಂದ ಅನೇಕರನ್ನು ಮನೆಗೆ ಕಳುಹಿಸಲಾಗಿದೆ. ಬಡಿಸುತ್ತಿರುವವರೇ ಬಹಳ ಮಂದಿ ಹೊಟ್ಟೆಗಿಲ್ಲದೆ ನರಳುತ್ತಿದ್ದಾರೆ. ಈಗ ನಾವು ಒಳ್ಳೆಯ ಊಟಕ್ಕಾಗಿ ಯಾರನ್ನು ಕೇಳಬೇಕು? ಬಡಿಸುವವರನ್ನೋ, ಅಡುಗೆ ಮಾಡುವವರನ್ನೋ, ಮನೆಯ ಯಜಮಾನರನ್ನೋ, ಊರಿನ ಧನಿಗಳನ್ನೋ, ನಾಡಿನ ಒಡೆಯರನ್ನೋ? ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಇದ್ದಾಗ ಮಾತ್ರ, ಶಿಕ್ಷಣಕ್ಕೆ ಎತ್ತರ ಆಳ ಅಗಲದ ಜೊತೆಗೆ ‘ಮುಸುಕು ಇಲ್ಲದ ಮಿದುಳು’ ಕೂಡಾ ಪ್ರಾಪ್ತವಾಗುತ್ತದೆ.

ವಿದ್ಯಾರ್ಥಿ ಸೆಮಿನಾರ್ಗಳಲ್ಲಿ ಮೌಲ್ಯಮಾಪಕನಾಗಿ ಕುಳಿತಿರುತ್ತಿದ್ದ ನನಗೆ ಹಲವು ಕೃತಿಗಳನ್ನು ಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಲು ಅವಕಾಶವಾಯಿತು...

ಒಮ್ಮೆ ಒಬ್ಬ ವಿದ್ಯಾರ್ಥಿ ಕಾರಂತರಲ್ಲಿ ಒಂದು ಪ್ರಶ್ನೆ ಕೇಳಿದ: ‘ಚೋಮನದುಡಿಯಲ್ಲಿ ಕಾರಂತರು ಚೋಮನಿಗೆ ಭೂಮಿ ಕೊಡಿಸಲಿಲ್ಲ ಎನ್ನುವ ವಿಮರ್ಶೆ ಇದೆ. ಇದಕ್ಕೆ ನೀವು ಏನು ಹೇಳುತ್ತೀರಿ?’ ಅದಕ್ಕೆ ತತ್ಕ್ಷಣ ಕಾರಂತರ ಪ್ರತಿಕ್ರಿಯೆ: ‘ಕೊಡಿಸಲಿಕ್ಕೆ ನನ್ನಲ್ಲಿ ಭೂಮಿ ಇರಲಿಲ್ಲ!’

ಉನ್ನತ ಶಿಕ್ಷಣದಲ್ಲಿ ವಿದ್ವತ್ ಸಮಾಲೋಚನೆಯ ಲಭ್ಯತೆಯ ಕೊರತೆ ಬಹಳ ದೊಡ್ಡ ನಷ್ಟ. ನಾವು ತಿಳಿದುಕೊಂಡದಷ್ಟನ್ನೇ ಸಮರ್ಪಕ, ಅಂತಿಮ ಎನ್ನುವ ದೃಷ್ಟಿಕೋನವು ಶಿಕ್ಷಣಕ್ಷೇತ್ರದಲ್ಲಿ ಅಪಕಲ್ಪನೆ ಹೆಚ್ಚಾಗಲು ಕಾರಣವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.