ನಾಲ್ಕು ತಿಂಗಳಾಯ್ತು ಪರಿಹಾರ ಕೇಂದ್ರ ಸೇರಿ. ಇಲ್ಲಿಂದಲೇ ನಿತ್ಯವೂ ಇಬ್ಬರು ಮಕ್ಕಳು 25 ಕಿ.ಮೀ ದೂರದ ಮದೆನಾಡು ಶಾಲೆಗೆ ಹೋಗಿ ಬರುತ್ತಾರೆ. ಉಚಿತ ಬಸ್ಪಾಸ್ ಕೊಡ್ತೀವಿ ಅಂದವರೂ ಈಗ ನಾಪತ್ತೆ. ನಮಗೇ ಕೆಲಸವಿಲ್ಲ; ಮಕ್ಕಳಿಗೆ ನಿತ್ಯ ಬಸ್ಗೆ ಎಲ್ಲಿಂದ ಹಣ ಕೊಡೋದು. ಮೊದಲು ಸೂರು ಕೊಡ್ಲಿ. ನಾವು ಹೇಗಾದರೂ ಜೀವನ ಮಾಡ್ತೇವೆ’ – ಮಡಿಕೇರಿಯ ‘ಮೈತ್ರಿ’ ಪರಿಹಾರ ಕೇಂದ್ರದಲ್ಲಿರುವ 2ನೇ ಮೊಣ್ಣಂಗೇರಿ ಗ್ರಾಮದ ಸಂತ್ರಸ್ತ ಕೆ.ಎಂ.ದೇವು ನೋವು ನುಂಗಿಕೊಳ್ಳುತ್ತಲೇ ದುಃಖ ಹಂಚಿಕೊಂಡರು.

‘ಅಂದು ಸಂತ್ರಸ್ತ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ; ಉಚಿತ ಊಟ, ವಸತಿ ಕೊಡ್ತೀವಿ’ ಎಂದು ಹೇಳಿದ ಖಾಸಗಿ ಶಾಲೆಯವರು, ಈಗ ‘ನಿಮಗೆ ಪರಿಹಾರ ಬಂದಿದೆ. ಶುಲ್ಕ ತುಂಬಿ’ ಎಂದು ಒತ್ತಾಯಿಸುತ್ತಿದ್ದಾರೆ’ ಎನ್ನುತ್ತಾ ಮಹಿಳೆಯೊಬ್ಬರು ತಮ್ಮೊಳಗಿದ್ದ ನೋವು ಹೊರ ಹಾಕಿದರು.

‘ಆರಂಭದಲ್ಲಿ ಎಲ್ಲರೂ ಜೊತೆಗಿದ್ದರು. ಧೈರ್ಯ ತುಂಬಿದ್ದರು; ಭವಿಷ್ಯ ರೂಪಿಸುವ ಮಾತು ಕೊಟ್ಟಿದ್ದರು. ಈಗ ಯಾರೂ ಇಲ್ಲ. ಸರ್ಕಾರವೂ ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದು ಮಕ್ಕಂದೂರಿನ ರಾಜೇಶ್ ಕಣ್ಣೀರು ಹಾಕಿದರು.

ಕೊಡಗಿನಲ್ಲಿ ಭೂಕುಸಿತ, ಪ್ರವಾಹ ಸಂಭವಿಸಿ ನಾಲ್ಕು ತಿಂಗಳು ಕಳೆದಿದೆ. ಇನ್ನೂ 500 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿಯೇ ಇದ್ದಾರೆ. ಅಂಥ ಪರಿಹಾರ ಕೇಂದ್ರದೊಳಗಿಂದ ಇಂಥ ನೋವಿನ ದನಿಗಳು ಕೇಳಿಬರುತ್ತಿವೆ. ಅಂದಿನ ಅವಘಡದಿಂದ ಸಂತ್ರಸ್ತರ ಮನಸ್ಸು ಕುಸಿದಿದೆ. ಕೆಲವರಲ್ಲಿ ಈಗಲೂ ಜೀವಬಿಟ್ಟರೆ ಬೇರೇನೂ ಉಳಿದಿಲ್ಲ. ಇನ್ನೂ ಅನೇಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಪ್ರಕೃತಿ ವಿಕೋಪದಿಂದ ಕಳೆದು ಹೋದ ಹಳ್ಳಿಗಳಲ್ಲಿ ಸುತ್ತಾಡಿದರೆ, ಈಗಲೂ ಕಣ್ಣೀರಿನ ಕಥೆಗಳೇ ಕಂಡವು. ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದಾಗ, ‘ಇಲ್ಲಿ ವಸತಿ, ಊಟ ಕೊಡ್ತಿದ್ದಾರೆ. ಆದರೆ ಭವಿಷ್ಯದ ದಾರಿಗಳು ಮುಚ್ಚಿವೆ. ತಿಂಗಳಿಗೆ ₹ 10 ಸಾವಿರ ಕೊಡ್ತೀವಿ. ಬಾಡಿಗೆ ಮನೆಗಳಿಗೆ ಹೋಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಮನೆ ಮಾಲೀಕರು ಹತ್ತುಪಟ್ಟು ಅಡ್ವಾನ್ಸ್ ಹಣ ಕೇಳುತ್ತಿದ್ದಾರೆ. ಆ ಹಣ ಹೇಗೆ ಹೊಂದಿಸುವುದು? ಬಾಡಿಗೆ ಮನೆಗೆ ತೆರಳಿದರೆ ಸರ್ಕಾರ ನಮ್ಮನ್ನು ಮರೆತೇ ಬಿಡಲಿದೆ’ ಎಂದು ಬೆಟ್ಟಗೇರಿಯ ಸಂತ್ರಸ್ತ ಮಹಿಳೆ ಸರೋಜಾ ಅಲವತ್ತುಕೊಂಡರು.

ಪ್ರತಿ ವರ್ಷ ಇಷ್ಟು ಹೊತ್ತಿಗೆ ಮಂಜಿನ ನಗರಿ ಮಡಿಕೇರಿ ರಂಗೇರಲು ಸಜ್ಜಾಗುತ್ತಿತ್ತು. ಕ್ರಿಸ್ಮಸ್, ವರ್ಷಾಂತ್ಯದ ಸಂಭ್ರಮದಲ್ಲಿ ತೇಲಬೇಕಿತ್ತು. ಆದರೆ, ಈಗ ಸೊರಗಿ ಮಲಗಿದೆ. ನಾಲ್ಕು ತಿಂಗಳ ನಂತರ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ‘ಎಲ್ಲರಲ್ಲೂ, ಎಲ್ಲವುದರಲ್ಲೂ ಭವಿಷ್ಯದ್ದೇ ಚಿಂತೆ’ಯೇ ಕಾಣುತ್ತಿದೆ.

ಆಗಿದ್ದ ಉತ್ಸಾಹ ಈಗಿಲ್ಲ..: ಘಟನೆ ಸಂಭವಿಸಿದ ವೇಳೆಯಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ತೋರಿಸಿದ್ದ ಉತ್ಸಾಹ ಈಗಿಲ್ಲ. ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರದ ರೂಪದಲ್ಲಿ ಅಲ್ಪಸ್ವಲ್ಪ ಹಣ ಸಿಕ್ಕಿದೆ. ಕೆಲವು ಸಂತ್ರಸ್ತ ಕುಟುಂಬಕ್ಕೆ ಅದೂ ಕೈಸೇರಿಲ್ಲ ಎಂಬ ಆರೋಪವಿದೆ. ಶಾಶ್ವತ ಪುನರ್ವಸತಿ ಕೆಲಸಗಳು ವಿಳಂಬವಾಗುತ್ತಿವೆ. ನೆಪಕ್ಕೆ ಸರ್ಕಾರ ‘ಕೊಡಗು ಮರು ನಿರ್ಮಾಣ ಪ್ರಾಧಿಕಾರ’ ರಚಿಸಿದೆ ಎಂದು ಸಂತ್ರಸ್ತರು ದೂರುತ್ತಿದ್ದಾರೆ.

ಇನ್ನು ನಾಲ್ಕೇ ತಿಂಗಳು!: ಜಿಲ್ಲಾಡಳಿತವು 840 ಮಂದಿ ಸಂತ್ರಸ್ತ ಕುಟುಂಬವನ್ನು ಗುರುತಿಸಿದ್ದು, ಆ ಕುಟುಂಬಗಳಿಗೆ ಮನೆ ನಿರ್ಮಿಸಲು ಉದ್ದೇಶಿಸಿದೆ. ಸೋಮವಾರಪೇಟೆಯ ಜಂಬೂರು ಗ್ರಾಮದಲ್ಲಿ ಡಿಸೆಂಬರ್ 7ರಂದು ಮನೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಪ್ರತಿ ತಿಂಗಳು 50 ಮನೆ ನಿರ್ಮಿಸುತ್ತೇವೆಂದು ವಸತಿ ಸಚಿವರು ಭರ
ವಸೆ ನೀಡಿದ್ದಾರೆ. ಆದರೆ, ಕಾಮಗಾರಿ ನಿಧಾನವಾಗಿ ಸಾಗುತ್ತಿದೆ. ಮನೆ ನಿರ್ಮಾಣ ಸಾಮಗ್ರಿಗಳು ಇನ್ನೂ ಪೂರೈಕೆ ಆಗಿಲ್ಲ.

ಕೊಡಗಿನಲ್ಲಿ ಮೇ ಅಂತ್ಯಕ್ಕೇ ಮಳೆ ಆರಂಭವಾಗಲಿದೆ. ಜುಲೈ, ಆಗಸ್ಟ್ನಲ್ಲಿ ಸಹಜವಾಗಿ ಜೋರು ಮಳೆ ಇರಲಿದೆ. ಈ ಆತಂಕ ಸಂತ್ರಸ್ತರನ್ನು ಕಾಡುತ್ತಿದೆ. ಕಡಿಮೆ ಅವಧಿಯಲ್ಲಿ 840 ಮನೆ ನಿರ್ಮಿಸಿ, ಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ ಸವಾಲು ಜಿಲ್ಲಾಡಳಿತದ ಎದುರಿಗಿದೆ.

ಇನ್ಫೋಸಿಸ್ಸೇರಿದಂತೆ, ಕೆಲವು ಮಠಗಳು ಹಾಗೂ ಸಂಘ ಸಂಸ್ಥೆಗಳು ಮನೆ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ್ದವು. ಆದರೆ, ‘ಸರ್ಕಾರವೇ ಮನೆ ನಿರ್ಮಿಸಲಿದೆ. ನೆರವು ನೀಡುವವರು ಬಡಾವಣೆಗಳಲ್ಲಿ ಅಂಗನವಾಡಿ, ಶಾಲೆ, ಚರಂಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಂತಹ ಸೌಲಭ್ಯ ಕಲ್ಪಿಸಬಹುದು’ ಎಂದು ಹೇಳಿ, ಸರ್ಕಾರ ಆಶ್ರಯ ಕಲ್ಪಿಸಲು ಬಂದವರನ್ನೂ ದೂರವಿಟ್ಟಿದೆ.

‘ಖಾಸಗಿ ಸಂಸ್ಥೆಗಳಿಗೆ ಮನೆ ನಿರ್ಮಾಣದ ಕೆಲಸವಹಿಸಿದ್ದರೆ ಈ ವೇಳೆಗೆ ನೂರಾರು ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳು
ತ್ತಿತ್ತು. ಸರ್ಕಾರವೇಕೆ ಈ ನಿರ್ಧಾರಕ್ಕೆ ಬಂದಿದೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಸಂತ್ರಸ್ತರೊಬ್ಬರು ಪ್ರಶ್ನಿಸುತ್ತಾರೆ.

‘ಪರಿಹಾರದ ಮೊತ್ತ ನಿರ್ಧಾರವಾಗಿಲ್ಲ’: 4,500 ಹೆಕ್ಟೇರ್ ಕಾಫಿ ತೋಟ ಭೂಕುಸಿತಕ್ಕೆ ಸಿಲುಕಿದೆ. ಅಲ್ಲಿ ಕನಿಷ್ಠ 8 ರಿಂದ 10 ವರ್ಷ ಬೆಳೆ ಬೆಳೆಯುವುದೇ ಅಸಾಧ್ಯ. 11 ಸಾವಿರ ಹೆಕ್ಟೇರ್ನಷ್ಟು ಭತ್ತದ ಗದ್ದೆಯಲ್ಲಿ ಕೆಸರು ಮಣ್ಣು ಬಂದು ನಿಂತಿದೆ. ಗದ್ದೆಯಲ್ಲಿ ಬಿದ್ದಿರುವ ಮಣ್ಣು, ಮರಗಳ ತೆರವು ಕೆಲಸ ಆರಂಭಗೊಂಡಿಲ್ಲ.

ಮಕ್ಕಂದೂರು, ಗರ್ವಾಲೆ, ಮಾದಾಪುರ, ಗಾಳಿಬೀಡು, ಕಾಲೂರು, ಶಾಂತಳ್ಳಿ, ಸಂಪಾಜೆ, ಕೆ.ನಿಡುಗಣೆ, ಎಮ್ಮೆತ್ತಾಳ, ಮೇಘತ್ತಾಳ, ಹಟ್ಟಿಹೊಳೆ ಸೇರಿ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ 38 ಗ್ರಾಮಗಳ ನೂರಾರು ರೈತ ಕುಟುಂಬಗಳ ಬದುಕಿನ ದಾರಿಗಳು ಮುಚ್ಚಿವೆ. ‘ಬರೀ ಮನೆ ನಿರ್ಮಿಸಿಕೊಟ್ಟರೆ ಸಾಲದು. ಬಿತ್ತಿ ಬೆಳೆಯಬೇಕಾದ ಜಮೀನಿನಲ್ಲಿ ಬಿದ್ದಿರುವ ಮಣ್ಣು, ಮರ, ಕಲ್ಲು ತೆರವು ಮಾಡಿದರೆ ಭವಿಷ್ಯದ ರೂಪಿಸಿಕೊಳ್ಳಲು ಸಾಧ್ಯ’ ಎನ್ನುವುದು ರೈತರ ಅಭಿಪ್ರಾಯ. ಜಿಲ್ಲಾಡಳಿತ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿಲ್ಲ.

ಕೊಡಗಿನಲ್ಲಿ ಒಂದು ಎಕರೆ ಕಾಫಿ ತೋಟದ ಬೆಲೆ ಕನಿಷ್ಠ ₹ 20 ಲಕ್ಷ. ಭತ್ತದ ಗದ್ದೆಗಳ ಬೆಲೆ ₹ 8ರಿಂದ ₹ 10 ಲಕ್ಷ. ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಿಂದ ಭೂಕುಸಿತವಾದ ಕಾಫಿ ತೋಟಕ್ಕೆ ₹ 37 ಸಾವಿರ (ಒಂದು ಹೆಕ್ಟೇರ್ಗೆ) ಹಾಗೂ ಗದ್ದೆಯಲ್ಲಿ ಸಂಪೂರ್ಣ ಹೂಳು ತುಂಬಿದ್ದರೆ ಹೆಕ್ಟೇರ್ಗೆ ₹ 12,200 ಪರಿಹಾರ ಲಭಿಸಲಿದೆ. ಈ ಪರಿಹಾರ ಸಾಲದೆಂದು ರೈತರು ಹೋರಾಟಕ್ಕೆ ಇಳಿದಿದ್ದಾರೆ. ‘ಪ್ರಾಕೃತಿಕ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ’ಯೂ ಅಸ್ತಿತ್ವಕ್ಕೆ ಬಂದಿದೆ.

ಎನ್ಡಿಆರ್ಎಫ್ ನಿಯಮಾವಳಿ ಬದಿಗಿಟ್ಟು ಸೂಕ್ತ ಪರಿಹಾರ ಘೋಷಿಸುತ್ತೇನೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು ಅದೂ ಕೈಗೂಡಿಲ್ಲ. ರೈತರು ಮಾತ್ರ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾದಿದ್ದಾರೆ.

ಭೂಕುಸಿತವಾಗಿ 30 ದಿನಗಳಲ್ಲಿಯೇ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ, ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಮಡಿಕೇರಿ–ಸಂಪಾಜೆ (ರಾಷ್ಟ್ರೀಯ ಹೆದ್ದಾರಿ 275), ಮಡಿಕೇರಿ – ಹಟ್ಟಿಹೊಳೆ– ಸೋಮವಾರಪೇಟೆ ಮಾರ್ಗದಲ್ಲಿ ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಮರಳು ತುಂಬಿದ ಚೀಲಗಳು ಮತ್ತೆ ಕುಸಿಯುವ ಹಂತದಲ್ಲಿವೆ. ಕಾಫಿ ತೋಟ, ಕಾಫಿ ಕಣ, ಮನೆಗಳಿಗೆ ತೆರಳುವ ಕಾಲು ದಾರಿಗಳ ದುರಸ್ತಿ ಆಗಿಲ್ಲ.

ಹೂಳು; ಗೋಳು: ಬೆಟ್ಟಗಳು ಕುಸಿದು ಅದರ ಮಣ್ಣು ಹಟ್ಟಿಹೊಳೆ, ಮಾದಾಪುರದ ಹೊಳೆಗಳಲ್ಲಿ ಶೇಖರಣೆಗೊಂಡಿದೆ. ಹೂಳು ತೆಗೆಯುವ ಕಾರ್ಯ ಆರಂಭಿಸಿಲ್ಲ. ಹಾರಂಗಿ ಜಲಾಶಯದಲ್ಲೂ ಹೂಳು ತುಂಬಿದ್ದು ನೀರು ಸಂಗ್ರಹ ಸಾಮರ್ಥ್ಯ ಕುಸಿದಿದೆ. ನದಿ, ಹೊಳೆಯಲ್ಲಿನ ಹೂಳು ತೆಗೆಯದಿದ್ದರೆ ಮುಂದಿನ ಮಳೆಗಾಲದಲ್ಲಿ ಮತ್ತೆ ಪ್ರವಾಹ ಸ್ಥಿತಿ ತಲೆದೋರಲಿದೆ ಎಂದು ಹೇಳುತ್ತಾರೆ ಬೆಳೆಗಾರರು.

ಭೂಕುಸಿತದಿಂದ ಸಾವಿರಾರು ಮರಗಳು ಉರುಳಿದ್ದವು. ಇದರಿಂದ ಕಾಫಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು. ಬಿದ್ದಿರುವ ಮರಗಳ ಮಾರಾಟಕ್ಕೆ ಅರಣ್ಯ ಇಲಾಖೆ ಇದುವರೆಗೂ ಅನುಮತಿ ನೀಡಿಲ್ಲ.

ಜನವರಿಯಲ್ಲಿ ‘ಪ್ರವಾಸಿ ಉತ್ಸವ’ಕ್ಕೆ ಸಿದ್ಧತೆ
ಭೂಕುಸಿತದ ಬಳಿಕ ಕೊಡಗಿನಲ್ಲಿ ಪ್ರವಾಸೋದ್ಯಮ ಸೊರಗಿದೆ. ಪ್ರವಾಸಿಗರು ಜಿಲ್ಲೆಯತ್ತ ಸುಳಿಯುತ್ತಿಲ್ಲ. ಹೋಂಸ್ಟೇ, ರೆಸಾರ್ಟ್ ಮಾಲೀಕರು, ಪ್ರವಾಸೋದ್ಯಮ ಅವಲಂಬಿತರೂ ನಾಲ್ಕು ತಿಂಗಳಿಂದ ನಷ್ಟದಲ್ಲಿದ್ದಾರೆ ಎಂಬ ಕೊರಗು ಕಾಡುತ್ತಿದೆ.

‘ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ. ಕೊಡಗಿಗೆ ಬಂದರೆ ಯಾವ ತೊಂದರೆಯೂ ಇಲ್ಲ’ ಎಂದು ರೆಸಾರ್ಟ್ ಮಾಲೀಕರು ಪ್ರಚಾರಾಂದೋಲನ ಆರಂಭಿಸಿದ್ದಾರೆ.

ಪ್ರವಾಸಿ ತಾಣಗಳ ಕಿರುಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡಿಲ್ಲ. ಉದ್ದಿಮೆದಾರರ ‘ಕಾರ್ಯತಂತ್ರ’ಗಳೂ ಫಲಿಸುತ್ತಿಲ್ಲ. ಮಡಿಕೇರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದವರು ವಾಪಸ್ ಆಗಿದ್ದಾರೆ. ವಾರಾಂತ್ಯ ಹೊರತು ಪಡಿಸಿ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಭಣಗುಡುತ್ತಿವೆ. ಇದರಿಂದ ಕಾರ್ಮಿಕರಿಗೆ ಕೆಲಸ ಇಲ್ಲ. ಹಾಲು, ಮಾಂಸ ಪೂರೈಕೆ ಮಾಡುತ್ತಿದ್ದವರೂ ಈಗ ಕಂಗಾಲು. ಬಾಡಿಗೆ ಜೀಪು, ಕಾರು, ಆಟೊ ಚಾಲಕರ ಜೇಬೂ ತುಂಬುತ್ತಿಲ್ಲ. ವಾಹನ ಸಾಲ ಕಟ್ಟಲೂ ಪರದಾಡುವ ಸ್ಥಿತಿಯಿದೆ.

ಈಗ ಎಚ್ಚೆತ್ತಿರುವ ಜಿಲ್ಲಾಡಳಿತವು ಪ್ರವಾಸಿಗರ ಸೆಳೆಯಲು ‘ಪ್ರವಾಸಿ ಉತ್ಸವ’ ಆಯೋಜಿಸಲು ಮುಂದಾಗಿದೆ. ಜನವರಿಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್, ಆಹಾರ ಮೇಳ, ರಾಜಾಸೀಟ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.

ಸಂತ್ರಸ್ತರಿಗೆ ಒಂದು ಮನೆಯೂ ನಿರ್ಮಾಣವಾಗಿಲ್ಲ. ಪುನರ್ವಸತಿ ಕೆಲಸಗಳು ನಿಧಾನವಾಗುತ್ತಿವೆ. ಜಮೀನು ಕಳೆದುಕೊಂಡವರಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ.
– ಎಂ.ಬಿ. ದೇವಯ್ಯ, ಅಧ್ಯಕ್ಷ, ‘ಪ್ರಾಕೃತಿಕ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.