ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯು ಅಕ್ಷರ ಲೋಕಕ್ಕೆ ಮರೆಯಲಾಗದ ಅನೇಕ ಸಂಚಿಕೆಗಳನ್ನು ನೀಡಿದೆ. ಈಗ ನೂರನೇ ಸಂಚಿಕೆ ರೂಪುಗೊಂಡಿರುವ ಹೊತ್ತಿನಲ್ಲಿ ಈ ಪತ್ರಿಕೆ ನಡೆದುಬಂದ ದಾರಿಯ ಮೇಲೆ ಬೆಳಕು ಚೆಲ್ಲುವ ಲೇಖನವಿದು.

ಕನ್ನಡ ಸಾಹಿತ್ಯ ಪರಿಷತ್ತು 1915ರ 5ರಂದು ಆರಂಭವಾಯಿತು. ಇದಕ್ಕೆ ಕಾರಣವಾದ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 1915ರ ಮೇ 3ರಿಂದ 5ರವರೆಗೆ ಬೆಂಗಳೂರು ಗೌರ್ನಮೆಂಟ್ ಹೈಸ್ಕೂಲಿನ ವಿಶಾಲ ಹಜಾರದಲ್ಲಿ 1915ರ ಮೇ 3ರಿಂದ 6ರ ವರೆಗೆ ನಡೆಯಿತು. ಅಲ್ಲಿ ಕೈಗೊಂಡ ನಿರ್ಧಾರಗಳಲ್ಲಿ ಕನ್ನಡಕ್ಕಾಗಿಯೇ ಒಂದು ವಿದ್ವತ್ ಪತ್ರಿಕೆ ಆರಂಭಿಸುವುದೂ ಕೂಡ ಒಂದಾಗಿತ್ತು. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾದ ಎಚ್.ವಿ.ನಂಜುಂಡಯ್ಯನವರು ಕಾರ್ಯನಿರ್ವಾಹಕ ಮಂಡಳಿ ಸ್ಥಾಪಿಸಿದರು. ಇದರಲ್ಲಿ ಆರ್.ರಘುನಾಥರಾಯರು, ಎಂ.ಲಕ್ಷ್ಮೀನಾರಾಯಣಪ್ಪ, ಎಚ್.ಚೆನ್ನಕೇಶವಯ್ಯಂಗಾರ್ಯರು ಇದ್ದರು. ಆದಷ್ಟು ಬೇಗ ಮೊದಲ ಸಂಚಿಕೆ ತರುವ ಉದ್ದೇಶವಿದ್ದರೂ ಲಕ್ಷ್ಮೀನಾರಾಯಣಪ್ಪನವರ ನಿಧನ, ಮಹಾಯುದ್ಧದ ಕಾರಣ ಕಾಗದದ ಅಭಾವ, ದ್ರವ್ಯದ ಸಮಸ್ಯೆ. ಹೀಗೆ ಹಲವಾರು ತೊಂದರೆಗಳಿಂದ ಸಂಚಿಕೆ ವಿಳಂಬವಾಗಿ ಪ್ರಥಮ ಸಂಚಿಕೆ ನಳ ಸಂವತ್ಸರದ ಚೈತ್ರಮಾಸದಲ್ಲಿ (ಏಪ್ರಿಲ್ 1916ರಲ್ಲಿ) ಉದಯಿಸಿತು.

ಮೊದಲ ಸಂಚಿಕೆಯಲ್ಲಿಯೇ ಹದಿನಾರು ಅಂಶಗಳಲ್ಲಿ ಪತ್ರಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಲಾಗಿದೆ. ಪರಂಪರೆಯ ಪರಾಮರ್ಶೆ, ಪ್ರಾಚೀನ ಕಾವ್ಯಗಳ ಸಾರಾಂಶವನ್ನು ಸಾಮಾನ್ಯರಿಗೂ ತಿಳಿಸುವುದು, ಭಾಷೆಯಲ್ಲಿನ ಪ್ರಬೇಧಗಳ ಏಕತೆ ಮತ್ತು ತಾರತಮ್ಯ, ಆಗಾಗ ನಡೆಯುವ ಉಪನ್ಯಾಸಗಳ ಪರಿಚಯ, ಕೃತಿ ಪರಿಚಯ ಇವುಗಳಲ್ಲಿ ಮುಖ್ಯವಾದುದು. ಮುಂದೆ ಕನ್ನಡ ಸಾಹಿತ್ಯ ಪರಿಷತ್ತು ಇದೇ ದಾರಿಯಲ್ಲಿ ನಡೆದಿದ್ದರಿಂದ ಒಂದು ರೀತಿಯಲ್ಲಿ ಈ ಮೊದಲ ಸಂಚಿಕೆ ಮಾರ್ಗಸೂಚಿ ಕೂಡ ಆಗಿದೆ.

ಪರಿಷತ್ ಪತ್ರಿಕೆಯ ಮೊದಲ ಹೆಸರು ‘ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ’. ಆಗ ‘ಕರ್ಣಾಟಕ’ ಮತ್ತು ‘ಕರ್ನಾಟಕ’ ಎರಡೂ ಪ್ರಯೋಗಗಳಿದ್ದವು. ಮೈಸೂರು ಭಾಗದಲ್ಲಿ ‘ಕರ್ಣಾಟಕ’ ಎಂಬ ಪ್ರಯೋಗವಿದ್ದರೆ, ಬೊಂಬಾಯಿ ಪ್ರಾಂತ್ಯದಲ್ಲಿ ‘ಕರ್ನಾಟಕ’ ಎನ್ನುವ ಪ್ರಯೋಗವಿತ್ತು. ಕನ್ನಡ ಸಾಹಿತ್ಯ ಪರಿಷತ್ತನ್ನು ಕೂಡ ಆಗ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂದೇ ಕರೆಯಲಾಗುತ್ತಿತ್ತು. ಇದು ಆರಂಭದಿಂದಲೂ ವಾದ-ಪ್ರತಿವಾದಕ್ಕೆ ವಸ್ತುವಾಗಿತ್ತು. ಪರಿಷತ್ಪತ್ರಿಕೆಯ 23ನೆಯ ಸಂಪುಟದ ಮೊದಲ ಸಂಚಿಕೆಯನ್ನು (ಏಪ್ರಿಲ್ 1938ರ ಸಂಚಿಕೆ) ‘ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ’ ಎಂದು ಕರೆಯಲಾಯಿತು. ಇದಕ್ಕೆ ಆಗಿನ ಸಂಪಾದಕ ಮಂಡಳಿಯ ಅಧ್ಯಕ್ಷರಾಗಿದ್ದ ಬಿ.ಎಂ.ಶ್ರೀಕಂಠಯ್ಯನವರು ಅನುಮತಿ ನೀಡಿದ್ದರು. ಇದೂ ದೊಡ್ಡ ವಿವಾದಕ್ಕೆ ಕಾರಣವಾಯಿತು. ಕೊನೆಗೆ 1938ನೆಯ ಡಿಸೆಂಬರ್ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ನಡೆದ ಸಕಲ ಸದಸ್ಯರ ಸಭೆಯಲ್ಲಿ ಎರಡೂ ವಾದವನ್ನು ಬಿಟ್ಟು ‘ಕನ್ನಡ ಸಾಹಿತ್ಯ ಪರಿಷತ್’ ಎಂಬ ಹೆಸರನ್ನು ಅಂಗೀಕರಿಸಲಾಯಿತು. ಅದರಂತೆ ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಎಂದು ಪತ್ರಿಕೆಯ ಹೆಸರನ್ನೂ ಕೂಡ ಬದಲಾಯಿಸಲಾಯಿತು.

ಡಿ.ವಿ.ಗುಂಡಪ್ಪನವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಕಾಲದಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಪ್ರಯತ್ನಗಳು ನಡೆದವು. ಆಗ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಾ ಇದ್ದಿದ್ದು ‘ಪರಿಷತ್ಪತ್ರಿಕೆ’ಯನ್ನು ಮಾತ್ರ. ಅದು ವಿದ್ವತ್ ಪತ್ರಿಕೆಯಾಗಿತ್ತು. ಜನಸಾಮಾನ್ಯರು ಮತ್ತು ಪರಿಷತ್ತಿನ ನಡುವೆ ಸಂಪರ್ಕ ಇಟ್ಟುಕೊಳ್ಳಲು ಪ್ರತ್ಯೇಕ ಪತ್ರಿಕೆಯ ಅಗತ್ಯ ಬಿದ್ದಿತು. ಇದಕ್ಕಾಗಿ ‘ಪರಿಷತ್ ಪತ್ರಿಕೆಯ ಸಂಗ್ರಹ ಪತ್ರಿಕೆ’ ಎನ್ನುವುದನ್ನು ಆರಂಭಿಸಲಾಯಿತು. ಆರು ರೂಪಾಯಿ ಚಂದಾ ಕೊಡುವವರಿಗೆ ಪರಿಷತ್ ಪತ್ರಿಕೆ, ಮೂರು ರೂಪಾಯಿ ಕೊಟ್ಟವರಿಗೆ ಸಂಗ್ರಹ ಪತ್ರಿಕೆಯನ್ನು ಕಳುಹಿಸಲಾಗುತ್ತಿತ್ತು. ಇದನ್ನು ವಿಸ್ತರಿಸುವ ಉದ್ದೇಶದಿಂದ ‘ಸಂಗ್ರಹ ಪತ್ರಿಕೆ’ಯನ್ನು ‘ಕನ್ನಡ ನುಡಿ’ ಎಂದು ಬದಲಾಯಿಸಲಾಯಿತು. 1938ರ ಅಕ್ಟೋಬರ್ 4ನೆಯ ತಾರೀಖು ವಿಜಯದಶಮಿಯಂದು ‘ಕನ್ನಡ ನುಡಿ’ಯ ಪ್ರಕಟಣೆ ಆರಂಭವಾಯಿತು. ಅ.ನ.ಕೃಷ್ಣರಾಯರು ಇದರ ಮೊದಲ ಸಂಪಾದಕರಾದರು.

ಇಲ್ಲಿಂದ ಮುಂದೆ ಪ್ರೊ.ಎ.ಆರ್.ಕೃಷ್ಣಶಾಸ್ತ್ರಿಗಳು ‘ಪರಿಷತ್ಪತ್ರಿಕೆ’ಯ ಸಂಪಾದಕರಾದರು.ಆಗ ಕನ್ನಡ ಭಾಷೆ, ಸಾಹಿತ್ಯ ಚರಿತ್ರೆ, ಸಂಸ್ಕೃತಿ, ಕಾವ್ಯಮೀಮಾಂಸೆಗೆ ಮಹತ್ವ ದೊರಕಿತು. ಮುಂದೆ ಪತ್ರಿಕೆಯ ಕಾಲಾವಧಿ ಆಗಾಗ ಬದಲಾದರೂ ಹೂರಣದಲ್ಲಿ ಹೆಚ್ಚಿನ ಬದಲಾವಣೆಯಾಗದೆ ವಿದ್ವತ್ ಪರಂಪರೆ ಮುಂದುವರೆಯಿತು. ಇದು ಕನ್ನಡ ಸಾಹಿತ್ಯ ಕಂಡ ಎಲ್ಲಾ ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಎ.ಆರ್.ಕೃಷ್ಣಶಾಸ್ತ್ರಿಗಳ ಅವಧಿಯಲ್ಲಿ ಆದ ಬಹಳ ಮುಖ್ಯ ಬದಲಾವಣೆ ಎಂದರೆ ಇದಕ್ಕೆ ದೊರಕಿದ ಅಖಿಲ ಕರ್ನಾಟಕ ವ್ಯಾಪ್ತಿ. ನಾಡಿನ ವಿವಿಧೆಡೆಯಲ್ಲಿ ಹಂಚಿಹೋಗಿದ್ದ ವಿದ್ವಾಂಸರನ್ನು ಕನ್ನಡದ ಕಾರಣಕ್ಕೆ ಒಂದುಗೂಡಿಸಿದ ಹೆಗ್ಗಳಿಕೆ ಪರಿಷತ್ತಿನ ಪತ್ರಿಕೆಗೆ ಸಲ್ಲುತ್ತದೆ. ವಿಶೇಷವೆಂದರೆ ಪತ್ರಿಕೆಯು ಇಂಗ್ಲೆಂಡ್, ಜರ್ಮನಿ, ಅಮೆರಿಕ ಮೊದಲಾದ ದೇಶಗಳಲ್ಲಿದ್ದ ವಿದ್ವತ್ ಪತ್ರಿಕೆಗಳಿಗೂ ಮತ್ತು ಅಲ್ಲಿನ ವಿದ್ವತ್ ಸಂಸ್ಥೆಗಳಿಗೂ ಹೋಗುತ್ತಿತ್ತು. ಅಲ್ಲಿನವರನ್ನು ತಲುಪುವ ಕಾರಣದಿಂದಲೇ ಇಂಗ್ಲಿಷ್‌ನಲ್ಲಿ ವಿಷಯ ಸಂಗ್ರಹವನ್ನೂ ನೀಡಲಾಗುತ್ತಿತ್ತು. ಈ ಎಲ್ಲಾ ಅಂಶಗಳೂ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ಸಾರಸ್ವತ ಪರಂಪರೆಯಲ್ಲಿ ಎಷ್ಟು ಮುಖ್ಯವಾದ ಪಾತ್ರವನ್ನು ವಹಿಸಿತ್ತು ಮತ್ತು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಎಷ್ಟು ಮಹತ್ವದ ಪಾತ್ರವನ್ನು ವಹಿಸಿತ್ತು ಎನ್ನುವುದನ್ನು ಸೂಚಿಸುತ್ತದೆ.

ಪರಿಷತ್ ಪತ್ರಿಕೆ ಕನ್ನಡದ ಅತ್ಯಂತ ಹಳೆಯ ವಿದ್ವತ್ ಪತ್ರಿಕೆಯಾಗಿದ್ದು, ನಾಡಿನ ಎಲ್ಲಾ ಹಿರಿಯ ಮತ್ತು ಕಿರಿಯ ಬರಹಗಾರರ ಲೇಖನಗಳು ಇದರಲ್ಲಿ ಪ್ರಕಟವಾಗಿವೆ. ಕಲೆ, ಸಾಹಿತ್ಯ, ವಿಜ್ಞಾನ, ಇತಿಹಾಸ, ಪುರಾತತ್ವ, ಕಾವ್ಯ ಸೇರಿ ಬಹುತೇಕ ಎಲ್ಲಾ ಜ್ಞಾನಶಿಸ್ತುಗಳ ಕುರಿತ ಲೇಖನಗಳು ಇಲ್ಲಿ ಪ್ರಕಟವಾಗಿವೆ. ಅಷ್ಟೇ ಅಲ್ಲ, ಎಷ್ಟೋ ಜ್ಞಾನಶಿಸ್ತುಗಳ ಆರಂಭಿಕ ಹೆಜ್ಜೆಗುರುತುಗಳನ್ನು ಕೂಡ ಇಲ್ಲಿ ನೋಡಬಹುದು. ಈ ಅರ್ಥದಲ್ಲಿ ಪತ್ರಿಕೆಗೆ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವಗಳಿವೆ. 1948-49ರಲ್ಲಿ ‘ಹರಿದಾಸ ಸಾಹಿತ್ಯ’ಕ್ಕೆ ಸಂಬಂಧಿಸಿದಂತೆ 254 ಪುಟಗಳ ಬೃಹತ್ ಸಂಚಿಕೆ ರೂಪುಗೊಂಡಿತ್ತು. ಅದೇ ಮಾದರಿಯಲ್ಲಿ ನೂರನೆಯ ಸಂಪುಟದ ಸಂಗ್ರಾಹ್ಯ ಸಂಚಿಕೆಯನ್ನು ಈಗ ರೂಪಿಸಲಾಗಿದ್ದು, ಐವತ್ತು ಸಂಪುಟಗಳಲ್ಲಿ ಹಿಂದೆ ಪ್ರಕಟವಾಗಿರುವ ಆಯ್ದ ಲೇಖನಗಳನ್ನು ಬಳಸಿಕೊಳ್ಳಲಾಗಿದೆ. ರಾ.ಹ.ದೇಶಪಾಂಡೆ, ಆಲೂರ ವೆಂಕಟರಾವ್, ಟಿ.ಎಸ್.ವೆಂಕಣ್ಣಯ್ಯ, ಎಂ.ಆರ್.ಶ್ರೀನಿವಾಸ ಮೂರ್ತಿ, ಮಾಸ್ತಿ, ತೀ.ನಂ.ಶ್ರೀ, ಕುವೆಂಪು, ಗೋವಿಂದ ಪೈ, ಬೇಂದ್ರೆ, ಅ.ನ.ಕೃ, ಪು.ತಿ.ನ, ಡಿ.ವಿ.ಜಿ, ಬಿ.ಎಂ.ಶ್ರೀ ಹೀಗೆ ಹಲವು ಸಾಹಿತ್ಯ ಲೋಕದ ದಿಗ್ಗಜರ ಲೇಖನಗಳು ಒಟ್ಟಾಗಿ ದೊರಕುತ್ತಿರುವುದು ಸಾಂಸ್ಕೃತಿಕ ಮಹತ್ವದ ಸಂಗತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.